Advertisement

ಅಜ್ಜಿಯ ಕ್ರಿಕೆಟ್‌ ಜೋಶ್‌ಗೆ ಎಲ್ಲರೂ ಬೌಲ್ಡ್‌ !

01:14 AM Jul 04, 2019 | Team Udayavani |

ಬರ್ಮಿಂಗ್‌ಹ್ಯಾಮ್‌: ಭಾರತ- ಬಾಂಗ್ಲಾ ನಡುವಿನ ವಿಶ್ವಕಪ್‌ ಪಂದ್ಯ ವಿಶೇಷ ಆಕರ್ಷಣೆಯೊಂದಿಗೆ ಸುದ್ದಿಯಾಯಿತು. ಇದಕ್ಕೆ ಕಾರಣರಾದವರು 87ರ ವಯಸ್ಸಿನ ಕ್ರಿಕೆಟ್‌ ಅಭಿಮಾನಿ ಚಾರುಲತಾ ಪಟೇಲ್‌!

Advertisement

ಸ್ಟೇಡಿಯಂನಲ್ಲಿ ಯುವ ಅಭಿಮಾನಿಗಳು ಜೋಶ್‌ ತೋರುವುದು ಮಾಮೂಲು. ಆದರೆ ಇಳಿ ವಯಸ್ಸಿನವರೊಬ್ಬರು ಗಾಲಿ ಕುರ್ಚಿಯಲ್ಲಿ ಕುಳಿತು, ಆಗಾಗ ಎದ್ದು ನಿಂತು, ಗಾಳಿಯಲ್ಲಿ ಕೈಬೀಸುತ್ತ, ವಾದ್ಯ ಊದುತ್ತ, ಅತಿಯಾದ ಸಂಭ್ರಮದೊಂದಿಗೆ ಭಾರತವನ್ನು ಹುರಿದುಂಬಿಸುತ್ತಿದ್ದ ದೃಶ್ಯ ನಿಜಕ್ಕೂ ಅಪರೂಪದ್ದಾಗಿತ್ತು. ಕೊಹ್ಲಿಯಿಂದ ಹಿಡಿದು ಹರ್ಷ ಭೋಗ್ಲೆ ತನಕ ಎಲ್ಲರೂ ಇವರ ಕ್ರಿಕೆಟ್‌ ಪ್ರೀತಿಗೆ ಬೌಲ್ಡ್‌ ಆಗಿದ್ದರು!


ಆಶೀರ್ವಾದ ಪಡೆದ ಕೊಹ್ಲಿ
ಯುವ ವೀಕ್ಷಕರನ್ನೂ ನಾಚಿಸುತ್ತಿದ್ದ ಈ ಅಜ್ಜಿ ನಿಜವಾದ ಮ್ಯಾಚ್‌ ವಿನ್ನರ್‌ ಆಗಿದ್ದರು. ಕ್ಯಾಮರಾಗಳೆಲ್ಲ ಆಗಾಗ ಇವರತ್ತಲೇ ಫೋಕಸ್‌ ಆಗುತ್ತಿದ್ದಾಗ ಈ ಅಜ್ಜಿ “ಸ್ಟಾರ್‌ ಸ್ಪೆಕ್ಟೇಟರ್‌’ ಆಗಿ ಗೋಚರಿಸಿದರು. ಇವರ ಬಗ್ಗೆ ಎಲ್ಲರಿಗೂತೀವ್ರ ಕುತೂಹಲ ಮೂಡಿತು. ಎಷ್ಟರ ಮಟ್ಟಿ ಗೆಂದರೆ, ಪಂದ್ಯ ಮುಗಿದ ಬಳಿಕ ಕೊಹ್ಲಿ, ರೋಹಿತ್‌ ಸ್ವತಃ ಈ ಅಜ್ಜಿಯ ಬಳಿ ತೆರಳಿ ಆಶೀರ್ವಾದ ಪಡೆಯುವಷ್ಟರ ಮಟ್ಟಿಗೆ!”ನಾನು ಭಾರತೀಯ ಕ್ರಿಕೆಟನ್ನು ಈ ತಂಡ ವನ್ನು ಬಹಳ ಪ್ರೀತಿಸುತ್ತೇನೆ. ಈ ತಂಡದ ಎಲ್ಲ ಆಟಗಾರರೂ ನನ್ನ ಮಕ್ಕಳಿದ್ದಂತೆ. ಇವರು ವಿಶ್ವಕಪ್‌ ಗೆಲ್ಲುವುದನ್ನು ನಾನು ಕಾಣ ಬಯಸುತ್ತೇನೆ’ ಎಂದು ಚಾರುಲತಾ ಪಟೇಲ್‌ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

“ಕಳೆದ ಅನೇಕ ದಶಕಗಳಿಂದ ಕ್ರಿಕೆಟ್‌ ಪಂದ್ಯಗಳನ್ನು ವೀಕ್ಷಿಸುತ್ತಲೇ ಬಂದಿದ್ದೇನೆ. ಮೊದಲು ಆಫ್ರಿಕಾದಲ್ಲಿದ್ದಾಗಲೂ ಕ್ರಿಕೆಟ್‌ ನೋಡುತ್ತಿದ್ದೆ. ಕೆಲಸದ ದಿನಗಳಲ್ಲಿ ಟೀವಿಯಲ್ಲಿ ನೋಡುತ್ತಿದ್ದೆ, ನಿವೃತ್ತಿ ಹೊಂದಿದ ಬಳಿಕ ಸ್ಟೇಡಿಯಂಗೆ ಬರುತ್ತಿದ್ದೇನೆ’ ಎಂದಿದ್ದಾರೆ.

“ಮುಂದಿನ ಪಂದ್ಯಗಳಿಗೂ ಬನ್ನಿ’
ಪಂದ್ಯದ ಬಳಿಕ ವಿರಾಟ್‌ ಕೊಹ್ಲಿ ಅಜ್ಜಿಯ ಬಳಿ ಬಂದು ಆಶೀರ್ವಾದ ಪಡೆದು ಸಂತಸ ವ್ಯಕ್ತಪಡಿಸಿದ್ದಾರೆ. “ನೀವು ಭಾರತದ ಮುಂದಿನ ಪಂದ್ಯಗಳ ವೇಳೆಯೂ ಆಗಮಿಸಿ ನಮ್ಮನ್ನು ಹುರಿದುಂಬಿಸಬೇಕು’ ಎಂದು ಕೋರಿದ್ದಾರೆ.

Advertisement

ಆಗ, “ಇಲ್ಲ. ಮುಂದಿನ ಪಂದ್ಯಗಳಿಗೆ ನನ್ನ ಬಳಿ ಟಿಕೆಟ್‌ ಇಲ್ಲ’ ಎಂದು ಚಾರುಲತಾ ಪಟೇಲ್‌ ಅಸಹಾಯಕತೆ ವ್ಯಕ್ತಪಡಿಸಿದರು. “ಇದಕ್ಕೆ ಚಿಂತಿಸುವ ಅಗತ್ಯವಿಲ್ಲ, ಟಿಕೆಟ್‌ ನಾನು ಕೊಡಿಸುತ್ತೇನೆ’ ಎಂದು ದೊಡ್ಡತನ ಮೆರೆದಿದ್ದಾರೆ ವಿರಾಟ್‌ ಕೊಹ್ಲಿ. ಇದರೊಂದಿಗೆ ಚಾರುಲತಾ ಪಟೇಲ್‌ ಅವರ ಕ್ರಿಕೆಟ್‌ ಜೋಶ್‌ ಮುಂದಿನ ಪಂದ್ಯಗಳಲ್ಲೂ ಕಂಡು ಬರುವುದರಲ್ಲಿ ಅನುಮಾನವಿಲ್ಲ!

ಇದೇ ವೇಳೆ ಮಹೀಂದ್ರ ಗ್ರೂಪ್‌ನ ಚೇರ್ಮನ್‌ ಆನಂದ್‌ ಮಹೀಂದ್ರ ಕೂಡ ಈ ಅಜ್ಜಿಯ ಕ್ರಿಕೆಟ್‌ ಪ್ರೀತಿಗೆ ದಂಗಾಗಿ, ಭಾರತದ ಮುಂದಿನ ಪಂದ್ಯಗಳಿಗಾಗಿ ತಾನು ಅವರಿಗೆ ಟಿಕೆಟ್‌ ಮೊತ್ತ ನೀಡುವುದಾಗಿ ಹೇಳಿದ್ದಾರೆ.

ಕಪಿಲ್‌ ಪಡೆ ಕಪ್‌ ಗೆದ್ದಾಗಲೂ ಇದ್ದೆ!
“1983ರಲ್ಲಿ ಕಪಿಲ್‌ದೇವ್‌ ಸಾರಥ್ಯದ ಭಾರತ ತಂಡ ವಿಶ್ವಕಪ್‌ ಗೆದ್ದಾಗಲೂ ನಾನು ಲಾರ್ಡ್ಸ್‌ ಸ್ಟೇಡಿಯಂನಲ್ಲಿದ್ದೆ’ ಎನ್ನುವಾಗ ಚಾರು ಲತಾ ಕಣ್ಣಲ್ಲಿ ಎಲ್ಲಿಲ್ಲದ ಹೊಳಪು! “ಭಾರತ ತಂಡ ಇಂಗ್ಲೆಂಡಿಗೆ ಪ್ರವಾಸ ಬಂದಾಗಲೆಲ್ಲ ನಾನು ಅವರ ಯಶಸ್ಸಿ ಗಾಗಿ ಪ್ರಾರ್ಥಿಸುತ್ತೇನೆ. ನನಗೆ ದೇವ ರಲ್ಲಿ, ಅದರಲ್ಲೂ ಗಣಪತಿ ಮೇಲೆ ಭಾರೀ ನಂಬಿಕೆ. ಭಾರತ ತಂಡಕ್ಕೆ ನನ್ನ ಶುಭ ಹಾರೈಕೆಗಳು. ಅವರು ಜವಾ ಬ್ದಾರಿಯುತವಾಗಿ ಆಡಿ ಕಪ್‌ ಗೆದ್ದು ತರುತ್ತಾರೆಂದು ನಾನು ಭಾವಿಸಿದ್ದೇನೆ. ಎಲ್ಲರಿಗೂ ನನ್ನ ಆಶೀರ್ವಾದಗಳು…’ ಎಂದಿದ್ದಾರೆ ಗುಜರಾತ್‌ ಮೂಲದ ಚಾರುಲತಾ ಪಟೇಲ್‌.

ಪ್ರೀತಿ ಮತ್ತು ಬೆಂಬಲ ಸೂಚಿಸಿದ ನಮ್ಮೆಲ್ಲ ಅಭಿಮಾನಿಗಳಿಗೆ, ಅದರಲ್ಲೂ ಮುಖ್ಯವಾಗಿ ಚಾರುಲತಾ ಪಟೇಲ್‌ಜಿ ಅವರಿಗೆ ಕೃತಜ್ಞತೆಗಳು. ಅವರು, ನಾನು ಕಂಡ ವಿಪರೀತ ಕ್ರಿಕೆಟ್‌ ಪ್ರೀತಿಯ ಹಾಗೂ ಬದ್ಧತೆಯ ಅಭಿಮಾನಿ
-ವಿರಾಟ್‌ ಕೊಹ್ಲಿ

Advertisement

Udayavani is now on Telegram. Click here to join our channel and stay updated with the latest news.

Next