Advertisement

4ಜಿ ದುನಿಯಾದಲ್ಲಿ  ಅಜ್ಜಿ ಮೇನಿಯಾ

07:00 AM Apr 06, 2018 | |

ಇನ್ನೇನು ಬೇಸಿಗೆ ರಜೆ ಶುರುವಾಗೋ ಸಮಯ. ಮಕ್ಕಳಿಗೆ ನವೋಲ್ಲಾಸ ತರುವ ದಿನವೂ ದೂರದಲ್ಲಿಲ್ಲ. ರಜೆಗಾಗಿ ಈಗಿಂದಲೇ ಯೋಜನೆ ಹಾಕಿಕೊಂಡಿರುವ ಪಾಲಕರು ಮಕ್ಕಳ ಬೇಸಿಗೆ ರಜೆಯ ಸದುಪಯೋಗತೆಗಾಗಿ ಹಾತೊರೆಯುತ್ತಿರುತ್ತಾರೆ. ಸಮ್ಮರ್‌ ಕ್ಯಾಂಪ್‌, ಸಂಗೀತ-ನೃತ್ಯ ತರಗತಿ, ಶಾಲಾ ಪಾಠ ಚಟುವಟಿಕೆ ಹೀಗೆ ಪಟ್ಟಿ ಮುಂದುವರಿದಿರುತ್ತದೆ.

Advertisement

ಎಲ್ಲೋ ಒಂದು ಮೂಲೆಯಲ್ಲಿ ಅಜ್ಜಿ-ತಾತನ ನೋಡುವ, ಊರಿಗೆ ತೆರಳುವ ಶೆಡ್ನೂಲ್‌ ಸಿದ್ಧವಾಗಿರುತ್ತದಷ್ಟೆ. ನಮಗೆಲ್ಲ ಅಜ್ಜೀಮನೆಗೆ ತೆರಳ್ಳೋದಂದ್ರೆ ಅಮಿತಾನಂದ ! ಅದೂ ಅಜ್ಜಿಮನೆ ಬಹಳಷ್ಟು ದೂರದಲ್ಲಿ ಇದ್ದರಂತೂ ನಮ್ಮ ಪ್ರಯಾಣಕ್ಕೆ ಮತ್ತಷ್ಟು ಹುರುಪು- ಉತ್ಸಾಹ ತಂದಿರುತ್ತದೆ. ಸುದೀರ್ಘ‌ ಬಸ್‌ ಪರ್ಯಟನೆಯಲ್ಲಿ ಸಿಗೋ ಹತ್ತಾರು ಊರುಗಳು, ಹಸಿರೈಸಿರಿ, ಎಲ್ಲವೂ ತನ್ಮಯತೆಯ ಧನ್ಯತಾಭಾವ ಮೂಡಿಸುತ್ತಿತ್ತು. ಬೇಸಿಗೆ ರಜೆ ಬಂತೆಂದರೆ ನಮ್ಮ ಮೊದಲ ಆಯ್ಕೆ ಅಜ್ಜಿಮನೆಯೇ ಆಗಿತ್ತು. ಅದಕ್ಕಾಗಿ ಮನೆಯಲ್ಲಿ ವಸ್ತು-ವಸ್ತ್ರಾದಿಗಳ ಜೋಡಿಸಿ ಒಂದು ಪ್ಲಾಸ್ಟಿಕ್‌ ಚೀಲ ಉಬ್ಬುವಷ್ಟು ಸರಂಜಾಮು ತುಂಬಿ ಊರಿಗೆ ಒಂದು ತಿಂಗಳ ಮಟ್ಟಿಗೆ ಟಾಟಾ ಹೇಳುತ್ತಿದ್ದೆವು. ದಾರಿಯಲ್ಲಿ  ರಾಜಗಾಂಭೀರ್ಯದಿಂದ ಹೋಗೋವಾಗ ಅಕ್ಕಪಕ್ಕದ ಮನೆಯವರಿಗೂ ಗೊತ್ತಾಗಿಬಿಡುತ್ತಿತ್ತು.

ಅಜ್ಜಿ ಎನ್ನುವ ಸಕಲ ತಜ್ಞೆ
ತುಳುವಿನಲ್ಲಿ ಒಂದು ಗಾದೆ ಇದೆ.  “ಇಲ್ಲಗೊಂಜಿ ಅಜ್ಜಿ, ತೆಲ್ಲವುಗೊಂಜಿ ಬಜ್ಜಿ’ (ಮನೆಗೊಂದು ಅಜ್ಜಿ, ದೋಸೆಗೊಂದು ಚಟ್ನಿ) ಅಂತ. ಅಜ್ಜಿಯ ಮುಗ್ಧತೆ, ಅಪಾರ ಅನುಭವದ ಜ್ಞಾನ, ಪದೇಪದೇ ಕಾಡೋ ಮರೆವು, ಮೊಮ್ಮಕ್ಕಳ ಮೇಲಿರೋ ಅದಮ್ಯ ವಾತ್ಸಲ್ಯ ಅಜ್ಜಿಯ ಪ್ರಾಮುಖ್ಯ ಏರಿಸಿಬಿಟ್ಟಿರುತ್ತದೆ. ತಿಂಗಳ ಪುಟ್ಟ ಮಗುವನ್ನು ಕೂಡ ನಾಜೂಕಾಗಿ ಎತ್ತಿಕೊಂಡು, ಸ್ನಾನ-ಪಾನ ಮಾಡಿಸಿ, ಜೋಕಾಲಿಯಲ್ಲಿ ಜೋಗುಳ ಹಾಡಿಸುವ ಅಪೂರ್ವ ಚೈತನ್ಯ ಅಜ್ಜಿಗೆ ಕರತಲಾಮಲಕ ಎಂದರೆ ತಪ್ಪಾಗದು. ತಾಯಿ ಎಷ್ಟೇ ಶಾಸ್ತ್ರೀಯ ಧಾಟಿಯಲ್ಲಿ ಜೋಗುಳ ಹಾಡಿದರೂ ಮಲಗದ ಮಗು ಅಜ್ಜಿಯ ಬರೀ, “ಜೋಯಿ -ಜೋಯಿ’ ಎನ್ನುವ ಆಲಾಪನೆಗೆ ಪವಡಿಸೋದು ಅಚ್ಚರಿಯೇ. ಅಜ್ಜಿಯ ಪ್ರೀತಿಯ ಮಡಿಲಲ್ಲಿ ಬೆಳೆದ ಮಕ್ಕಳು, ಅಜ್ಜಿಯ ಒಂಟಿತನದ ವ್ಯಾಕುಲತೆಯನ್ನು ತಮಗರಿವಿಲ್ಲದೆ ಓಡಿಸಿರುತ್ತಾರೆ. ಊಟ, ಆಟ, ಪಾಠಕ್ಕೆ ಅಜ್ಜಿಯ ಜಾದೂ ಮೊಮ್ಮಕ್ಕಳ ಮೇಲೆ ಬಹುಪರಿಣಾಮ ಬೀರಿರುತ್ತದೆ ಎಂದರೂ ತಪ್ಪಿಲ್ಲ. ಅಜ್ಜಿಯ ಅತಿಯಾದ ಮುದ್ದಿಗೆ, ಶುದ್ಧ ತರಲೆಯಾದ ಮೊಮ್ಮಗ “ಅಜ್ಜಿ ಸಾಕಿದ ಮೊಮ್ಮಗ ಬೊಜ್ಜಕ್ಕೂ ಅನರ್ಹ’ ಎಂಬ ಗಾದೆಯನ್ನು ಹುಟ್ಟು ಹಾಕಿದ ಅನ್ನುವುದು ಅಷ್ಟೇ ಸತ್ಯ !

ಅಜ್ಜಿಮನೆ ದಾರಿಯಲ್ಲಿ
ಅಂಕುಡೊಂಕು ರಸ್ತೆಯಲ್ಲಿ , ಗುಡ್ಡ ದಿಬ್ಬಗಳ ಮೇಲೆ ಬಳುಕುತ್ತ ಬಾಗುತ್ತ ಒಂಚೂರು ಬಸವಳಿಯದೆ ತೆರಳುವ ಬಸ್‌ ಯಾನ ಅವಿಸ್ಮರಣೀಯ. ಅಲ್ಲಲ್ಲಿ ಸಿಗುವ ದೇವಾಲಯಗಳು, ಅದರ ದ್ವಾರಗಳು, ಮೈಲಿಗಲ್ಲುಗಳು ಬಸ್ಸಿಗೆ ಅಭಿಮುಖವಾಗಿ ಬೀಸೋ ಗಾಳಿಯೊಡನೆ ಮಾತನಾಡುತ್ತಿರುವಂತೆ ಭಾಸವಾಗುತ್ತಿತ್ತು. ವಿಟ್ಲ ಸ್ಟಾಪ್‌ ತಲುಪಿದಾಗ ಬಸ್ಸಿನ ಒಳಗಿದ್ದವರಿಗೆ ಲಾಲಿ, ಬಾದಾಮ್‌ ಎಂಬ ಕೂಗು. ಬಿಸಿಲಿನ ಬೇಗೆ ತಂಪೆರೆಯಲು ಶೀತಲ ಐಸ್‌ ಸ್ಟಿಕ್ಸ್‌ ! ಇನ್ನೊಬ್ಬರು ನೇರ ಬಸೊÕಳಗೆ ಬಂದು ಕಸ್ತೂರಿ ಮಾತ್ರೆ, ಚಿಹ್ನೆಯ ಗುಳಿಗೆ ಮಾರಾಟ ಮಾಡುತ್ತಿದ್ದರು. ಬಸ್‌ ಸದಾ ರಶ್‌ ಇರೋ ಕಾರಣ ನಮ್ಮಂಥ ಚಿಳ್ಳೆ-ಪಿಳ್ಳೆಗಳಿಗೆ ಡ್ರೈವರ್‌ ಅಣ್ಣನ ಹತ್ತಿರದ ಗೇರ್‌ಬಾಕ್ಸ್‌ ಹತ್ತಿರ ಕೂರುವ ಭಾಗ್ಯ. ಆಗಾಗ್ಗೆ ಬಿಸಿ ಅನುಭವ ಕೊಡುತ್ತಿದ್ದರೂ ಏಳುವಂತಿಲ್ಲ ಹಾಗೂ ಹೇಳುವಂತಿಲ್ಲ ! 

ಹೊರಗಡೆ ನೋಡಿದಾಗ ಭೂಮಿತಾಯಿಯ ಸಸ್ಯಾಸ್ಮಿತೆ ! ಭೀಮ ಗಾತ್ರದ ಬಸ್‌ ಆಳಕ್ಕಿಳಿದು, ಏರಿದಾಗ ನಮ್ಮ ಸ್ಟಾಪ್‌ ಬಂತೆಂದು ಅರ್ಥವಾಗುತ್ತಿತ್ತು. ಮಣ್ಣಿಂದ ನಿರ್ಮಿಸಿದ, ತಂಪಾದ ಅನುಭೂತಿ ಕೊಡುವ ಅಜ್ಜಿಮನೆಯೊಳಗೆ ಧಾವಿಸಿ, ಉರಿಬಿಸಿಲಿಗೆ, ಬಾಡಿದ್ದ ನಮಗೆ ಹುಮ್ಮಸ್ಸು ಕೊಡೋದು ನಿಂಬೆಹಣ್ಣಿನ ಶರಬತ್ತು. ಅದೂ ಅದನ್ನ ಒಂದು ಪಾತ್ರೆಯಿಂದ ಇನ್ನೊಂದು ಪಾತ್ರೆಗೆ ಸುರಿಯುತ್ತ,  “ನೀವು ಯಾವ ಬಸ್ಸಲ್ಲಿ ಬಂದಿದ್ದು? ರಶ್‌ ಇತ್ತಾ? ಇವನೇನು ಸಣಕಲಾಗಿದ್ದಾನೆ?’ ಎಂದೆಲ್ಲ ಹೇಳಿ ಶರಬತ್‌ ಕೈಗಿಡುವಾಗ ಅದಕ್ಕೊಂದು ವಿಶಿಷ್ಟ ರುಚಿ ಬಂದಿರುತ್ತದೆ.

Advertisement

ನಮ್ದೇ ಹಾವಳಿ
ಇನ್ನೇನು, ಅಜ್ಜಿಮನೆಗೆ ಬಂದಾಯ್ತಲ್ಲ ನಮ್ಮದೇ ಜಗತ್ತು ಇದು ಎನ್ನುವ ಭಾವನೆ. ಮನೆಯವರನ್ನು ಸತಾಯಿಸೋದಂತೂ ಇದ್ದದ್ದೇ, ಆದರೆ, ಅದಕ್ಕಾಗಿ ಸಿಗುತ್ತಿದ್ದ ಬೆತ್ತದ ಏಟುಗಳೂ ಲೆಕ್ಕವಿಲ್ಲ. ಹೊಡೆಯುತ್ತಿರುವರೆಂದು ಜೋರಾಗಿ ಅಲವತ್ತುಕೊಂಡರೂ ಪ್ರಯೋಜನ ಇಲ್ಲ, ಕಾರಣ ನೆರೆಹೊರೆಯಲ್ಲಿ ವಾಸ್ತವ್ಯ ಹೊಂದಿದವರಿಲ್ಲ. ಬೆಳಗ್ಗೆ ಪಕ್ಕದ ಗುಡ್ಡಕ್ಕೆ ಸವಾರಿ. ಅಲ್ಲಿದ್ದ ಕರಂಡೆಕಾಯಿ, ಮುಳ್ಳುಕಾಯಿ, ಪುನರ್ಪುಳಿ, ಪುಚ್ಚೆಕಾಯಿ, ಅಬುಕ, ನೇರಳೆ ಹೀಗೆ ಕಾಡುಹಣ್ಣುಗಳ ಆಪೋಷಣಕ್ಕೆ ನಮ್ಮ (ವಾ)ನರ ಸೈನ್ಯ ದಾಂಗುಡಿ ಇಡುತ್ತಿತ್ತು. ಗೇರು ಬೀಜ ಸಿಕ್ಕಿದರೆ ಸ್ವಲ್ಪ ಸುಟ್ಟು ತಿಂದರೆ ಉಳಿದಿದ್ದು ದುಗ್ಗಣ್ಣನ ಅಂಗಡಿಯ ದುಗ್ಗಾಣಿಗೆ ಸೀಮಿತ! ಇನ್ನು ಹುಣಿಸೆ ಸಿಕ್ಕಿದರೆ ಅದನ್ನು ತಿಂದು ಬೀಜ ಸುಟ್ಟು ಪುಳಿಕಟ್ಟೆ ಅಂತ ಹೆಸರಿಟ್ಟು ಕಟ…-ಚಟ್‌  ಜಗಿಯುವಾಗ ಹಲ್ಲಿಲ್ಲದ ಅಜ್ಜಿಗೆ ಎಲ್ಲಿಲ್ಲದ ಮತ್ಸರ ! ಹಿಂದಿನ ದಿನ ಸತ್ಯನಾರಾಯಣ ಪೂಜೆಗೆ ಹೋಗಿ ನೋಡಿದ್ದರಿಂದ ಅದೇ ಅಮಲಿನಲ್ಲಿ  ಮರುದಿನ ಮನೆಯಲ್ಲಿ ನಮ್ಮ ಪೂಜೆ. ಕೂರುವ ಸ್ಟೂಲ್‌ ಅನ್ನ ಬೋರಲಾಗಿ ಇಟ್ಟು ಅಲ್ಲೊಂದು ದೇವರ ಚಿತ್ರ ಇಟ್ಟು, ತೀರ್ಥಕ್ಕೆ ಕಲ್ಲುಸಕ್ಕರೆ ಹಾಕಿ ಕೊಡುತ್ತಿದ್ದುದು ಇನ್ನೂ ಅಚ್ಚಳಿಯದ ನೆನಪು. ಇನ್ನು ಹೊರಗಡೆ ಒಲೆ ಹಾಕಿ, ಸ್ವಲ್ಪ ತೆಂಗಿನಗರಿ, ಕಟ್ಟಿಗೆ ಹಾಕಿ ಉರಿಸಿ ಅಡುಗೆ ಮಾಡಿ, ಅದಕ್ಕೆ ಕೈಗೆ ಸಿಕ್ಕಿದ  ಸೊಪ್ಪುಸದೆ ಬೆರೆಸಿ, ವೃಥಾ ವ್ಯರ್ಥ ಮಾಡಿ, ಬೈಗುಳ ತಿಂದರೂ ಆಟಕ್ಕಂತೂ ವಿರಾಮ ಇಲ್ಲ ! 

 “ಮಧ್ಯಾಹ್ನ ಬಿಸಿಲಿಗೆ ಹೊರಹೋಗ್ಬೇಡ್ರೋ, ಏನಾದ್ರೂ ಗಾಳಿ-ಗೀಳಿ ಸೋಕಿದ್ರೆ ಕಷ್ಟ ‘ ಅನ್ನುವ ಮಾತು ಒಂದೆರಡು ದಿನಕ್ಕಷ್ಟೆ ವೇದವಾಕ್ಯವಾಗಿರುತ್ತಿತ್ತು. ಮನೆಯ ಹಿತ್ತಿಲಲ್ಲಿ ಕಟ್ಟಿದ ಉಯ್ನಾಲೆಯಲ್ಲಿ ಜೋರಾಗಿ ಜೀಕಾಡುವಾಗಲೂ ಅಷ್ಟೆ. ಬಾಲ್ಯ ಅತಿಮಧುರ ಎನ್ನುವ ಪರಿಕಲ್ಪನೆ ಮೂಡಿರಲಿಕ್ಕಿಲ್ಲ. ಇನ್ನು ಊರಿನಲ್ಲಿ ಏನಾದರೂ ಕಾರ್ಯಕ್ರಮ ಇದ್ದರಂತೂ ಈ ಮಕ್ಕಳ ಸೈನ್ಯ, ಊಟಕ್ಕೆ ಹಾಜರ್‌. ನಮಗೆ ಇದ್ದ ಅತಿದೊಡ್ಡ ಸ್ವಾತಂತ್ರ್ಯ ಎಂದರೆ ಬೀಡಿಬ್ರಾಂಚ್‌ಗೆ ಬೀಡಿ ಒಯ್ಯುವ ಕಾಯಕದಲ್ಲಿ ಸಿಗುತ್ತಿದ್ದ ಮಜೂರಿಯಲ್ಲಿ ಸ್ವಲ್ಪ ಕಮಿಶನ್‌ ರೀತಿಯಲ್ಲಿ ನಮ್ಮ ಜೇಬಿಗೆ ಇಳಿಯುತ್ತಿತ್ತು. ಅಜ್ಜಿಮನೆಯಿಂದ ತೆರಳುವಾಗ ಅಳುವಿನ ಜತೆ, ಅಜ್ಜಿ ತಲೆ ನೇವರಿಸಿ ತಮ್ಮ ಕೈಯ ಗಂಟಲ್ಲಿದ್ದ ನಾಲ್ಕು ಚಿಲ್ಲರೆ ಕಾಸು ಕೈಗಿತ್ತಾಗ ನಮಗಾಗೋ ಭಾವಪರವಶತೆಗೆ ಎಣೆಯಿಲ್ಲ. 

 4ಜಿ ದುನಿಯಾದಲ್ಲಿ ಅಜ್ಜಿ
ಈಗ ಅಜ್ಜಿಮನೆ ಎನ್ನುವ ವಿಚಾರ ಸ್ವಲ್ಪ ಮಟ್ಟಿಗೆ outdated. ಅಜ್ಜಿºಮನೆಯಲ್ಲಿ ಅಜ್ಜಿ ಇಲ್ಲದಿದ್ದರೂ ಪರವಾಗಿಲ್ಲ , 4ಜಿ ನೆಟ್‌ವರ್ಕ್‌ ಇರಲೇಬೇಕು ಎನ್ನುವ ಠರಾವು ಈಗಿನ ಜನಾಂಗದ್ದು. ಅಜ್ಜಿಮನೆಯಲ್ಲಿ ವರ್ಷಕೊಮ್ಮೆ ನಡೆಯುವ ಯಾವುದೇ ಸಮಾರಂಭಕ್ಕೆ ತೆರಳುವುದೂ ಒಂದು  ಹೊರೆಯಂತೆ ಕಾಣಿಸುತ್ತಿರುವುದು ವಿಷಾದನೀಯ. ಅದಲ್ಲದೆ ತಂದೆ- ತಾಯಿ ಕೂಡ ಯಾಂತ್ರಿಕ ಬದುಕಿನಲ್ಲಿ ಮುದುಡಿ, ಮಕ್ಕಳನ್ನೂ ಅದೇ ವಾತಾವರಣದಲ್ಲಿ  ಬೆಳೆಸಿದಾಗ ಅವರಲ್ಲು ಜಡತ್ವ ಅಂಟಿಕೊಂಡಿರುತ್ತದೆ. ಆಧುನಿಕತೆಯ ಕಾಲದ ಅಲೆಯಲ್ಲಿ ಅಜ್ಜಿಯ ಪ್ರೀತಿ ತುಂಬಿದ ಮಾತುಗಳ ಸಂಚಿ ಸದ್ದಿಲ್ಲದೆ ಕೊಚ್ಚಿಹೋಗುತ್ತಿರುವುದು ಖೇದ ಸಂಗತಿ. ಯೋಚಿಸಬೇಕಾದ್ದು ಬಹಳಷ್ಟಿದೆ ಅಲ್ವಾ?

ಸುಭಾಶ್‌ ಮಂಚಿ ನಿಕಟಪೂರ್ವ ವಿದ್ಯಾರ್ಥಿ ವಿ. ವಿ. ಕಾಲೇಜು, ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next