ಅಮೀನಗಡ: ಸತತ 17 ವರ್ಷಗಳ ಕಾಲ ದೇಶ ಸೇವೆ ಸಲ್ಲಿಸಿ ನಿವೃತ್ತಿಹೊಂದಿ ಬುಧವಾರ ಸ್ವಗ್ರಾಮಕ್ಕೆ ಮರಳಿದ ವೀರಯೋಧನಿಗೆ ಪಟ್ಟಣದ ನಿವಾಸಿಗಳು ಭವ್ಯ ಸ್ವಾಗತದೊಂದಿಗೆ ಬರಮಾಡಿಕೊಂಡರು.
ಪಟ್ಟಣದ ಸಂತೋಷ ಕತ್ತಿ 2004ರಲ್ಲಿ ಭಾರತೀಯ ಸೇನೆಗೆ ಸೇರಿದ್ದರು. ಜಮ್ಮು,ರಾಜಸ್ಥಾನ ಸೇರಿದಂತೆ ವಿವಿಧಡೆ 17 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಯಾದ ಹಿನ್ನೆಲೆ ಮರಳಿ ಪಟ್ಟಣಕ್ಕೆ ವಾಪಸ ಆಗುತ್ತಿರುವ ಮಾಹಿತಿ ಪಡೆದುಕೊಂಡಿದ್ದ ಪಟ್ಟಣದ ನಾಗರಿಕರು, ವಿವಿಧ ಸಂಘ ಸಂಸ್ಥೆಗಳು, ರಾಜಕೀಯ ಮುಖಂಡರು, ಕಾರ್ಯಕರ್ತರು ನಿವೃತ್ತ ಯೋಧ ಸಂತೋಷ ಕತ್ತಿ ಅವರಿಗೆ ಸನ್ಮಾನಿಸಿ ಗೌರವಿಸಿದರು.
ನಂತರ ಪಟ್ಟಣದ ಎಸ್.ಜಿ. ಮೂಲಿಮನಿ ಕ್ರೀಡಾಂಗಣದಿಂದ ತೆರೆದ ವಾಹನದಲ್ಲಿ ನಿವೃತ್ತ ಯೋಧನನ್ನು ರಾಜ್ಯ ಹೆದ್ದಾರಿ ಸೇರಿದಂತೆ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದ ಗೆಳೆಯರು, ಅಭಿಮಾನಿಗಳು, ವಿವಿಧ ಸಮಾಜದ ಮುಖಂಡರು, ವ್ಯಾಪಾರಸ್ಥರು ರಸ್ತೆಯುದ್ದಕ್ಕೂ ನಿವೃತ್ತ ಯೋಧನ ಮೇಲೆ ಹೂವಿನ ಸುರಿಮಳೆಗೈದು ವಂದೇ ಮಾತರಂ, ಭಾರತ್ ಮಾತಾ ಕೀ ಜೈ, ವೀರ ಯೋಧ ಸಂತೋಷ ಕತ್ತಿಗೆ ಜಯವಾಗಲಿ ಎಂಬ ಜಯ ಘೋಷಣೆ ಕೂಗಿದರು.
ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ಬರ ಮಾಡಿಕೊಂಡ ಯೋಧನಿಗೆ ರಸ್ತೆ ಅಕ್ಕಪಕ್ಕ ನಿಂತ ಜನರು ಯೋಧನ ಸತತ 17 ವರ್ಷಗಳ ಸೇವೆಗೆ ಅಭಿನಂದನೆ ಸಲ್ಲಿಸಿದರು. ನಂತರ ಎಂ.ಪಿ.ಎಸ್.ಶಾಲೆಯಲ್ಲಿ ನಿವೃತ್ತ ಯೋಧ ಸಂತೋಷ ಕತ್ತಿಗೆ ಸನ್ಮಾನ ಮಾಡಿ ಗೌರವಿಸಲಾಯಿತು.
ಇದನ್ನೂ ಓದಿ : ಹಾಸನ-ಬೇಲೂರು ರೈಲು ಮಾರ್ಗಕ್ಕೆ ಕೇಂದ್ರ ಬಜೆಟ್‌ನಲ್ಲಿ ಕೇವಲ ಸಾವಿರ ರೂ.!
ಮೆರವಣಿಗೆಯಲ್ಲಿ ಅಮೀನಗಡ ಜ್ಯೂನಿಯರ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದ ಆರು ತಂಡಗಳ ಆಟಗಾರರು ಮತ್ತು ಕಮೀಟಿಯ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಸೇರಿದಂತೆ ಪಟ್ಟಣದ ನಿವಾಸಿಗಳು ಭಾಗವಹಿಸಿದ್ದರು.