ಸವದತ್ತಿ : ಸುದೀರ್ಘ 20 ವರ್ಷ ಸೈನ್ಯದಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿ ಮರಳಿ ಸ್ವಗ್ರಾಮಕ್ಕೆ ಆಗಮಿಸಿದ ಯೋಧ ತುಕಾರಾಮ್ ಗಿರಿಯಪ್ಪ ಮುರಗೋಡರನ್ನು ತಾಲೂಕಿನ ಹಲಕಿ ಗ್ರಾಮದ ಜನತೆ ಮತ್ತು ಕರ್ನಾಟಕ ಪೊಲೀಸ್ ಮಹಾ ಸಂಘದಿಂದ ಸ್ವಾಗತಿಸಿ ಸನ್ಮಾನಿಸಲಾಯಿತು.
ಸಂಘದ ಆಡಳಿತ ಅಧಿಕಾರಿ ಎಮ್.ಎಚ್ ನದಾಫ್ ಮಾತನಾಡಿ, ಜನ್ಮ ಭೂಮಿಯನ್ನು ಯಾವುದೇ ಪ್ರತಿಫಲ ಬಯಸದೆ ತನ್ನ ಜೀವದ ಹಂಗು ತೊರೆದು ದೇಶವನ್ನು ಕಾಯುವ ಸೈನಿಕ ಎಲ್ಲರಿಗಿಂತ ದೊಡ್ಡವನು. ವೀರಯೋಧ ಮತ್ತು ಅನ್ನದಾತರಿಗೆ ನಾವು ನೀಡುವ ಗೌರವ ಸಮರ್ಪಣೆ ಇಡೀ ಜಗತ್ತಿಗೆ ಮಾದರಿಯಾಗಬೇಕು.
ತಮ್ಮ ಜೀವವನ್ನೇ ಪಣಕ್ಕಿಟ್ಟು ಹೋರಾಡುವ ವೀರರನ್ನು ಪಡೆದ ಭಾರತ ಮಾತೆ ನಿಜಕ್ಕೂ ಧನ್ಯಳು. ನಾಡಿನ ಪ್ರತಿಯೊಂದು ಗ್ರಾಮದಲ್ಲಿ ಈ ತೆರನಾದ ಯೋಧರ ಸ್ವಾಗತ ಸಂಭ್ರಮದಂತಿರಬೇಕು. ಯುವಕರ ಚಿಂತನೆಗಳು ಜಗತ್ತಿನ ಮುಂದೆ ಮಾದರಿಯಾಗಬೇಕು ನಮ್ಮ ದೇಶದ ಶಕ್ತಿ ಇಂದಿನ ಯುವ ಜನಾಂಗ ದೇಶ ಸೇವೆಗೆ ಕಂಕಣ ಬದ್ಧರಾಗಿರಬೇಕು. ನಮ್ಮ ಸಂಸ್ಕೃತಿ ಉಳಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಬೇಕೆಂದರು.
ಯೋಧ ತುಕಾರಾಮ್ ಮಾತನಾಡಿ, ಈ ಸನ್ಮಾನ ಗೌರವಗಳೆಲ್ಲವೂ ತಂದೆ-ತಾಯಿ ಹಾಗೂ ದೇಶ ಸೇವೆ ಮಾಡುತ್ತಿರುವ ಎಲ್ಲ ಸೈನಿಕರಿಗೆ ಅರ್ಪಣೆ. ತಾಲೂಕಿನ ಯುವಕರಿಗೆ ಉಚಿತ ಸೇನಾ ತರಬೇತಿ ಹಾಗೂ ಬಡ ಮಕ್ಕಳ ಶಿಕ್ಷಣ ವೆಚ್ಚ ವನ್ನು ಭರಿಸುವುದಾಗಿ ಪ್ರಮಾಣ ಮಾಡಿದರು.
ಇದನ್ನೂ ಓದಿ : ಕುಳಗೇರಿ ಕ್ರಾಸ್: ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಇಬ್ರಾಹಿಮ್ ಸುತಾರ ಅವರಿಗೆ ನುಡಿ ನಮನ
ಈ ವೇಳೆ ಕರ್ನಾಟಕ ಪೊಲೀಸ್ ಮಹಾ ಸಂಘದ ವಿ. ಶಶಿಧರ್ ನೇತೃತ್ವದ ಕರ್ನಾಟಕ ಪೊಲೀಸ್ ಮಹಾ ಸಂಘದ ಪರವಾಗಿ ನಿವೃತ್ತ ಯೋಧ ತುಕಾರಾಮ್ ಅವರಿಗೆ ಸನ್ಮಾನ ಮಾಡಿ ಗೌರವ ವಂದನೆ ಸಲ್ಲಿಸಿದರು.