ಉಡುಪಿ: ಸರಕಾರಿ ಪದವಿ ಕಾಲೇಜುಗಳ ಸಹಾಯಕ ಪ್ರಾಧ್ಯಾಪಕರ ನೇಮಕಕ್ಕೆ ಬೆಂಗಳೂರಿನಲ್ಲಿ ಕೌನ್ಸೆಲಿಂಗ್ ನಡೆಯುತ್ತಿದೆ. ಆ.7ರಿಂದ ಆರಂಭಗೊಂಡಿರುವ ಕೌನ್ಸೆಲಿಂಗ್, ಆ.17ರ ವರೆಗೆ ನಡೆಯಲಿದೆ. ಒಟ್ಟು 2,034 ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದ್ದು, ಇದರಲ್ಲಿ ಸುಮಾರು 1,500 ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ಬಂದಿದ್ದರೂ ಸ್ಥಳ ನಿಯುಕ್ತಿ ಆಗಿರಲಿಲ್ಲ. ಈಗ ಇದಕ್ಕಾಗಿಯೇ ಕೌನ್ಸೆಲಿಂಗ್ ನಡೆಯುತ್ತಿದೆ. ಆದರೆ, ಅತಿ ಹೆಚ್ಚು ಅಂಕ ಗಳಿಸಿದ ಅಭ್ಯರ್ಥಿಗಳಿಗೆ ಕಡ್ಡಾಯ ಗ್ರಾಮೀಣ ಸೇವೆ, ಕಡಿಮೆ ಅಂಕ ಗಳಿಸಿದವರಿಗೆ ನಗರ ಸೇವೆ ಎಂಬಂತಾಗಿದೆ.
ಮೊದಲು ಬ್ಯಾಕ್‌ಲಾಗ್ ಹುದ್ದೆಗಳಿಗೆ ಕೌನ್ಸೆಲಿಂಗ್ ನಡೆದು, ಬಳಿಕ ಹೈದರಾಬಾದ್ ಕರ್ನಾಟಕದ ಜಿಲ್ಲೆಯ ಕಾಲೇಜುಗಳಿಗೆ ಭರ್ತಿಗೊಳಿಸಲಾಗುತ್ತಿದೆ. ಸಾಮಾನ್ಯ ಹುದ್ದೆಗಳಿಗೆ ಬರುವಾಗ 3 ವಲಯಗಳನ್ನು ಗುರುತಿಸ ಲಾಗಿದೆ. ಇದರಲ್ಲಿ “ಸಿ’ ಗ್ರಾಮೀಣ, “ಬಿ’ ಅರೆಪಟ್ಟಣ, “ಎ’ ನಗರ ಪ್ರದೇಶವೆಂದು ವಿಂಗಡಿಸಲಾಗಿದೆ. ಜಿಲ್ಲಾ ಕೇಂದ್ರಗಳ ನಗರವನ್ನು “ಎ’, ತಾಲೂಕು ಕೇಂದ್ರಗಳ ನಗರವನ್ನು “ಬಿ’, ಉಳಿದಂತೆ “ಸಿ’ ಎಂದು ಅರ್ಥೈಸಲಾಗಿದೆ. ಅತಿ ಹೆಚ್ಚು ರ್‍ಯಾಂಕ್ ಬಂದವರಿಗೆ ಮೊದಲು ಕೌನ್ಸೆಲಿಂಗ್ ನಡೆಯುತ್ತದೆ. ಇವರಿಗೆ ಮೊದಲು ಆಯ್ಕೆ ಮಾಡಲು ಕೊಡುವುದು “ಸಿ’, ಅಂದರೆ ಗ್ರಾಮೀಣ ಪ್ರದೇಶದ ಕಾಲೇಜುಗಳು.
ವಿಷಯವಾರು ಅಭ್ಯರ್ಥಿಗಳ ನೇಮಕ ಗ್ರಾಮೀಣ ಪ್ರದೇಶಕ್ಕೆ ಆದ ಬಳಿಕ “ಬಿ’, ಅರೆಪಟ್ಟಣದ ಕಾಲೇಜುಗಳ ಹುದ್ದೆಗಳನ್ನು ಭರ್ತಿಗೊಳಿಸಲಾಗುತ್ತದೆ. ಕೊನೆಯಲ್ಲಿ ಬರುವುದು “ಎ’, ನಗರ ಪ್ರದೇಶದ ಕಾಲೇಜುಗಳಿಗೆ ನೇಮಕ. ಇದರಿಂದಾಗಿ ಹೆಚ್ಚು ಅಂಕ ಗಳಿಸಿದವರು ಕಡ್ಡಾಯವಾಗಿ ಗ್ರಾಮೀಣ ಪ್ರದೇಶಕ್ಕೆ ತೆರಳಬೇಕು. ಕಡಿಮೆ ಅಂಕ ಗಳಿಸಿದವರು ಆರಾಮವಾಗಿ ನಗರದಲ್ಲಿರುತ್ತಾರೆ. ಬೆಂಗಳೂರು, ಮೈಸೂರಿನಲ್ಲಿ ಡಿಯರ್
ನೆಸ್ ಅಲೋವೆನ್ಸ್ (ತುಟ್ಟಿಭತ್ಯೆ) ಶೇ.30 ಇದ್ದರೆ ಗ್ರಾಮೀಣ ಭಾಗದಲ್ಲಿ ಕಡಿಮೆ ಇದೆ. ಇದರಂತೆ ಕಡಿಮೆ ಅಂಕ ಗಳಿಸಿದವರು ಹೆಚ್ಚಿನ ಸೌಲಭ್ಯವನ್ನು, ಹೆಚ್ಚು ಅಂಕ ಗಳಿಸಿದವರು ಕಡಿಮೆ ಸೌಲಭ್ಯ ಪಡೆಯುತ್ತಾರೆ.