ಮಂಗಳೂರು/ಉಡುಪಿ : ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ರಾಜ್ಯದ ಗ್ರಾಮ ಪಂಚಾಯತ್‌ಗಳ ನೌಕರರು ಸೋಮವಾರದಿಂದ ಬೆಳಗಾವಿಯ ಸುವರ್ಣ ಸೌಧದ ಮುಂದೆ ಮುಷ್ಕರ, ಪ್ರತಿಭಟನೆ ಆರಂಭಿಸಿರುವ ಹಿನ್ನೆಲೆಯಲ್ಲಿ ದ.ಕ. ಮತ್ತು ಉಡುಪಿ ಜಿಲ್ಲೆಗಳ ಗ್ರಾ.ಪಂ.ಗಳಲ್ಲಿಯೂ ಕೆಲವು ಸಾರ್ವಜನಿಕ ಸೇವೆಗಳಿಗೆ ಭಾಗಶಃ ತೊಡಕಾಯಿತು.
ಬಿಲ್ ಸಂಗ್ರಹ, ಮನೆ ನಿರ್ಮಾಣ ಜಿಪಿಎಸ್, ಪರವಾನಿಗೆ ಮೊದಲಾದ ಸೇವೆಗಳಲ್ಲಿ ವ್ಯತ್ಯಯವಾಗಿದೆ.
“ಸಾರ್ವಜನಿಕ ಸೇವೆಗಳಿಗೆ ತೊಡಕಾಗದಂತೆ ಮುಷ್ಕರದಲ್ಲಿ ಪಾಲ್ಗೊಳ್ಳುವಂತೆ ನೌಕರರಿಗೆ ಮನವಿ ಮಾಡಿದ್ದೆವು. ಅದರಂತೆ ಕೆಲವರು ಸೇವೆಗೆ ಲಭ್ಯರಿದ್ದರು. ಹಾಗಾಗಿ ಹೆಚ್ಚಿನ ಸಮಸ್ಯೆ ಆಗಿಲ್ಲ’ ಎಂದು ಉಭಯ ಜಿ.ಪಂ. ಸಿಇಒಗಳಾದ ಡಾ| ಕುಮಾರ್ ಮತ್ತು ಎಚ್. ಪ್ರಸನ್ನ ತಿಳಿಸಿದ್ದಾರೆ.
ಗ್ರಾ.ಪಂ. ಕಚೇರಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕ್ಲರ್ಕ್/ ಕ್ಲರ್ಕ್ ಕಮ್ ಡಿಇಓ, ಬಿಲ್ ಕಲೆಕ್ಟರ್ ಹಾಗೂ ಡಾಟ ಎಂಟ್ರಿ ಅಪರೇಟರ್‌ಗಳಿಗೆ ಸಿ ದರ್ಜೆ ಸ್ಥಾನಮಾನ ಮತ್ತು ಅಟೆಂಡರ್, ಕ್ಲೀನರ್, ವಾಟರ್‌ಮ್ಯಾನ್/ ಪಂಪುಚಾಲಕ ಇತ್ಯಾದಿ ವೃಂದದವರಿಗೆ ಡಿ ದರ್ಜೆ ಸ್ಥಾನಮಾನ ನೀಡಬೇಕು. ನಗರ ಮತ್ತು ಪಟ್ಟಣ ಪಂಚಾಯತ್‌ನಂತೆ ಸೇವಾ ನಿಯಮಾವಳಿ, ವೇತನ ಶ್ರೇಣಿ ನಿಗದಿಪಡಿಸಬೇಕು. ಪಂಚಾಯತ್ ನೌಕರರಿಗೆ ಅವರ ವಿದ್ಯಾರ್ಹತೆ ಮತ್ತು ವಯೋಮಿತಿಯನ್ನು ಪರಿಗಣಿಸದೇ ಹಾಗೂ ಪಂಚಾಯತ್‌ಗಳಲ್ಲಿ ಹುದ್ದೆಗಳ ಗರಿಷ್ಟ ಮಿತಿಯನ್ನು ನಿಗದಿಪಡಿಸದೇ ಜಿ.ಪಂ.ನಿಂದ ಅನುಮೋದನೆ ನೀಡಬೇಕು ಸೇರಿದಂತೆ ಹತ್ತಾರು ಬೇಡಿಕೆಗಳನ್ನು ವಿಧಿಸಲಾಗಿದೆ.
ಎನ್‌ಪಿಎಸ್ ನೌಕರರ ಮುಷ್ಕರ
ಇದೇ ವೇಳೆ ಅತ್ತ ಕರ್ನಾಟಕ ರಾಜ್ಯ ಸರಕಾರಿ ಎನ್‌ಪಿಎಸ್ ನೌಕರರ ಸಂಘವೂ ನಿಶ್ಚಿತ ಪಿಂಚಣಿಗಾಗಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ “ಮಾಡು ಇಲ್ಲವೆ ಮಡಿ’ ಹೋರಾಟಕ್ಕೆ ಕರೆ ಕೊಟ್ಟಿದ್ದು, ಇದರಲ್ಲಿ ಆರೋಗ್ಯ, ಕಂದಾಯ ಇಲಾಖೆ ಸಿಬಂದಿ, ಪಿಡಿಒಗಳು, ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೇವೆ ನಡೆಸುತ್ತಿರುವ ಹೆಚ್ಚಿನ ಸಿಬಂದಿ ಭಾಗವಹಿಸಿರುವ ಕಾರಣ ಪಂಚಾಯತ್ ಆಡಳಿತ ವ್ಯವಸ್ಥೆಗೆ ತೀವ್ರ ತೊಡಕು ಉಂಟಾಗಿದೆ.