ಸಿಂಧನೂರು: ಮಾರುಕಟ್ಟೆಯಲ್ಲಿ ಹೆಸರುವಾಸಿ ಯಾಗಿರುವ ಉತ್ಪನ್ನದ ಹೆಸರು, ಆರೋಗ್ಯ ಕ್ಷೇತ್ರದಲ್ಲಿ ಗಮನ ಸೆಳೆಯುವ ವಸ್ತುಗಳು ಕೂಡ ಚುನಾವಣೆ ಚಿಹ್ನೆಗಳಾಗಿ ಕಣದಲ್ಲಿ ಗಮನ ಸೆಳೆಯಲಾರಂಭಿಸಿವೆ. ರಾಜಕೀಯ ಪಕ್ಷಗಳ ಗುರುತನ್ನು ಹೊರತುಪಡಿಸಿ ಹಳ್ಳಿಮಟ್ಟದಲ್ಲಿ ನಡೆಯುತ್ತಿರುವ ಗ್ರಾಪಂ ಚುನಾವಣೆಗಳಲ್ಲಿ ಅಭ್ಯರ್ಥಿಗಳ ಪಾಲಿಗೆ ಮತದಾರರನ್ನು ಸೆಳೆಯಲು ಚಿಹ್ನೆಗಳೇ ಪ್ರಮುಖ್ಯವಾಗಿವೆ.
ಅವರು ಪಡೆದ ಚಿಹ್ನೆಗಳು ಮನೆ-ಮನೆಗೂ ತಿಳಿಸುವುದರಿಂದ ಅಭ್ಯರ್ಥಿ ಹೆಸರನ್ನು ಇಂತಹ ಚಿಹ್ನೆಯ ವ್ಯಕ್ತಿ ಎಂದೇ ಗುರುತಿಸುವ ಮಟ್ಟಿಗೆ ಪ್ರಖ್ಯಾತಿ ಪಡೆಯುತ್ತಿವೆ. ಕೆಲವು ಬಾರಿ ಗೆದ್ದ ಮೇಲೆ ಅವರ ಅಡ್ಡಹೆಸರಾಗಿ ಚಿಹ್ನೆಗಳು ಸೇರಿಕೊಳ್ಳುತ್ತಿರುವುದರಿಂದ ಅಭ್ಯರ್ಥಿಗಳಿಗಿಂತ ಹೆಚ್ಚಾಗಿ ಚಿಹ್ನೆಗಳು ಸದ್ದು ಮಾಡಲಾರಂಭಿಸಿವೆ. ಪಿಯರ್ಗೆ ವೋಟು ಹಾಕಿ!: ಬೂತಲದಿನ್ನಿ ಗ್ರಾಪಂ ವ್ಯಾಪ್ತಿಯ ಒಂದನೇ ವಾರ್ಡ್‌ನ ಅಭ್ಯರ್ಥಿ ಮಲ್ಲಿಕಾರ್ಜುನ ಅವರು ತಮ್ಮ ಚಿಹ್ನೆಯಾಗಿ ಪಿಯರ್ ಆಯ್ಕೆ ಮಾಡಿಕೊಂಡಿದ್ದಾರೆ.
ತಮ್ಮ ಗುರುತಿನ ಮೂಲಕವೇ ಪ್ರಚಾರ ಮಾಡುತ್ತಿರುವುದರಿಂದ ಊರಲ್ಲಿ ಈ ಹಣ್ಣಿನ ಹೆಸರು ತುಸು ಆಕರ್ಷಣೆ ಸೃಷ್ಟಿಸಿದೆ. ಕಲ್ಲೂರಿನಲ್ಲಿ ಒಬ್ಬ ಅಭ್ಯರ್ಥಿ ಸಿರಿಂಜ್ (ಚುಚ್ಚುಮದ್ದು) ಗುರುತಿನ ಮೂಲಕವೇ ಪ್ರಚಾರ ನಡೆಸಿದ್ದು, ತಮ್ಮ ಚಿಹ್ನೆಯ ಸಂಕೇತವಾಗಿ ಅವರು ಗ್ರಾಮದ ಆರೋಗ್ಯ ಸುಧಾರಿಸುವ ಭರವಸೆ ನೀಡುತ್ತಿದ್ದಾರೆ. ಮಲ್ಲಾಪುರದ ಮಹಿಳೆ ರೂಮ್‌ಕೂಲರ್ ಚಿಹ್ನೆಯನ್ನು ಆಯ್ಕೆ ಮಾಡಿಕೊಂಡು ಎಲ್ಲರ ಕಷ್ಟಗಳನ್ನು ನಿವಾರಿಸಿ ಮನೆಗಳನ್ನು ತಂಪಾಗಿಡುವೆ ಎನ್ನುವ ಅಭಯ ನೀಡುತ್ತಿದ್ದಾರೆ.
ಯಮನಪ್ಪ ಮಲ್ಲಾಪುರ ಎಂಬುವವರು “ಬಾಣಲೆ’ ಎಂಬ ಚಿಹ್ನೆ ಆಯ್ದುಕೊಂಡು ನಾನಾಗಲೇ ಬೆಂಕಿಯಿಂದ ಬಾಣಲೆಗೆ ಬಿದ್ದಂತಾಗಿದ್ದು, ನನ್ನನ್ನು ಕಾಪಾಡಿ ಎಂಬ ಸಂದೇಶ ರವಾನಿಸುವಂತಿದೆ. ನನ್ನ ಕೊರಳಿಗೆ ಜಯದ ಮಾಲೆಯಾಗಿ ಮುತ್ತಿನ ಹಾರವನ್ನೇ ಹಾಕಬೇಕು ಎಂದು ಅದನ್ನೇ ಚಿಹ್ನೆಯಗಿ ದುರುಗಪ್ಪ ಎನ್ನುವ ಅಭ್ಯರ್ಥಿ ಆಯ್ಕೆ ಮಾಡಿಕೊಂಡಿದ್ದಾರೆ.
ಪೆಟ್ರೋಲ್ ಪಂಪ್, ಕಪ್-ಸಾಸರ್, ಟಿವಿ ರಿಮೋಟ್, ತಕ್ಕಡಿ, ಟ್ರ್ಯಾಕ್ಟರ್ ಸೇರಿದಂತೆ ಹಲವು ಚಿಹ್ನೆಗಳು ಪ್ರಚಾರ ಸಮಯದಲ್ಲಿ ಸದ್ದು ಮಾಡುತ್ತಿವೆ. ಪಕ್ಷಾತೀತವಾಗಿ ನಡೆಯುವ ಈ ಚುನಾವಣೆಯಲ್ಲಿ ಚಿಹ್ನೆಗಳ ಪಾತ್ರ ಸಾಮಾನ್ಯವೇನಲ್ಲ. ಅವು ಬರೀ ಚುನಾವಣೆಗೆ ಸೀಮಿತವಾಗುವುದಿಲ್ಲ. ಗೆದ್ದ ಮೇಲೆ ಆಯಾ ಅಭ್ಯರ್ಥಿಯೊಂದಿಗೂ ಈ ಚಿಹ್ನೆಗಳು ಸೇರ್ಪಡೆಯಾಗುವುದು ನಡೆದು ಬಂದಿದೆ.
ಗೋಮರ್ಸಿ ಗ್ರಾಮದಲ್ಲಿ ಕರಿಯಪ್ಪ ಎನ್ನುವವರು ನಿಚ್ಚಣಿಕೆ ಚಿಹ್ನೆಯೊಂದಿಗೆ ಕಳೆದಚುನಾವಣೆಯಲ್ಲಿ ಗೆದ್ದರೆ, ಅವರ ಹೆಸರು ಕರಿಯಪ್ಪ ನಿಚ್ಚಣಿಕೆಯಾಗಿ ಮಾರ್ಪಟ್ಟಿದೆ. ನೇಗಿಲು ಹನುಮಂತಪ್ಪ, ಕೂರಿಗೆ ಮಲ್ಲಪ್ಪ ಎನ್ನುವುದು ಸೇರಿದಂತೆ ಹಲವು ಚಿಹ್ನೆಗಳು ಇಂದಿಗೂ ಚರ್ಚೆಯಲ್ಲಿವೆ. ಅಭ್ಯರ್ಥಿಯೊಬ್ಬರು ಒಮ್ಮೆ ಚುನಾವಣೆಗೆ ಸ್ಪ ರ್ಧಿಸಿ ಮಾಜಿಯಾದ ಮೇಲೂ ಅವರೊಂದಿಗೆ ಚಿಹ್ನೆಗಳು “ಹಾಲಿ’ ಎಂಬಂತೆ ಜತೆಯಲ್ಲೇ ಉಳಿಯುತ್ತಿರುವುದು ವಿಶೇಷ.
ಈ ಹಿಂದೆ ಗ್ರಾಪಂ ಚುನಾವಣೆಗೆ ಸ್ಪರ್ಧಿಸಿದಾಗ ನನಗೆ ನಿಚ್ಚಣಿಕೆ ಗುರುತು ಸಿಕ್ಕಿತ್ತು. ಅದನ್ನೇ ಪ್ರೀತಿಯಿಂದ ನನ್ನ ಹೆಸರಿನೊಂದಿಗೆ ಸೇರಿಸಿದ್ದರಿಂದ ಈಗಲೂ ನನ್ನನ್ನು ಹಾಗೆಯೇ ಗುರುತಿಸುತ್ತಾರೆ.
ಕರಿಯಪ್ಪ ನಿಚ್ಚಣಿಕೆ, ಗೋಮರ್ಸಿ
ಯಮನಪ್ಪ ಪವಾರ