Advertisement
ಕೋಟ: ಬ್ರಹ್ಮಾವರ ತಾ| ವ್ಯಾಪ್ತಿಯ ಕೋಟ ಹೋಬಳಿಯ ಹಲವು ಗ್ರಾಮಗಳಲ್ಲಿ ಮೆಲ್ಲಗೆ ಚುನಾವಣೆಯ ಕಾವು ಏರತೊಡಗಿದೆ. ನಾಮಪತ್ರ ಸಲ್ಲಿಕೆ ಮಾಡಿದವರು ಹಲವು ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. ತಂತ್ರ-ಪ್ರತಿತಂತ್ರ, ರಾಜಿ ಸೂತ್ರದ ಸರ್ಕಸ್‌ಗೆ ಸಿದ್ಧರಾಗುತ್ತಿದ್ದಾರೆ. ಐರೋಡಿ, ಪಾಂಡೇಶ್ವರ, ಕೋಡಿ, ಕೋಟ, ಕೋಟತಟ್ಟು, ವಡ್ಡರ್ಸೆ, ಶಿರಿಯಾರ, ಯಡ್ತಾಡಿ, ಬಿಲ್ಲಾಡಿ, ಆವರ್ಸೆ ಗ್ರಾ.ಪಂ. ಕ್ಷೇತ್ರಗಳಿಗೆ ಉದಯವಾಣಿ ತಂಡ ಭೇಟಿ ನೀಡಿದಾಗ, ಎಂದಿನಂತೆ ಕಂಡು ಬಂದಿದ್ದು ಸೂತ್ರ ಗೊಂಬೆಗಳ ಹಿಂದಿನ ಸೂತ್ರಧಾರರೇ. ಅಂದರೆ ರಾಜಕೀಯ ಪಕ್ಷಗಳ ನೆರಳುಗಳು.
Related Articles
ಕೋಟ ಗ್ರಾ.ಪಂ. 25 ಸದಸ್ಯರೊಂದಿಗೆ ಅತೀ ಹೆಚ್ಚು ಸದಸ್ಯ ಬಲವನ್ನು ಹೊಂದಿದೆ. ಕಳೆದ ಬಾರಿ ಇಲ್ಲಿ ಕಾಂಗ್ರೆಸ್ ಬೆಂಬಲಿತ 15, ಬಿಜೆಪಿಯ 10 ಸದಸ್ಯರು ಆಯ್ಕೆಯಾಗಿದ್ದರು. ಕಾಂಗ್ರೆಸ್‌ನಿಂದ ವನಿತಾ ಶ್ರೀಧರ್ ಆಚಾರ್ಯ ಅಧ್ಯಕ್ಷರಾದರು. ಅವರೀಗ ಬಿಜೆಪಿ ಬುಟ್ಟಿಯಲ್ಲಿದ್ದಾರೆ. ಹಾಗಾಗಿ ಫಲಿತಾಂಶ ಏನೆಂಬುದು ಗೊತ್ತಿಲ್ಲ. ಜನರೇ ಕೂಡಿ ಗುಣಿಸಿ ಲೆಕ್ಕ ಹೇಳಬೇಕು.
Advertisement
ಬಿಲ್ಲಾಡಿ : ಗೆದ್ದವರೇ ದೊಡ್ಡವರು !12 ಸದಸ್ಯ ಬಲದ ಬಿಲ್ಲಾಡಿ ಗ್ರಾ.ಪಂ.ನಲ್ಲಿ ಕಳೆದ ಬಾರಿ ಬಿಜೆಪಿ ಬೆಂಬಲಿತರು 9, ಕಾಂಗ್ರೆಸ್ ಬೆಂಬಲಿತರು 3 ಸ್ಥಾನಗಳಲ್ಲಿ ಗೆದ್ದಿದ್ದರು. ಆರಂಭದಲ್ಲಿ ಅಧ್ಯಕ್ಷರಾಗಿದ್ದ ನವೀನ್‌ಚಂದ್ರ ಶೆಟ್ಟಿಯವರನ್ನು ಅವಿಶ್ವಾಸದ ಮೂಲಕ ಕೆಳಗಿಳಿಸಿ ಪೃಥ್ವಿರಾಜ್ ಶೆಟ್ಟಿ ಅಧ್ಯಕ್ಷರಾದರು. ಕಾಂಗ್ರೆಸ್‌ನಲ್ಲಿದ್ದ ಮೂರು ಮಂದಿ ಜಯಪ್ರಕಾಶ್ ಹೆಗ್ಡೆಯವರನ್ನು ಬೆಂಬಲಿಸಿ ಬಿಜೆಪಿ ಸೇರಿದರು. ಆದ ಕಾರಣ ಈ ಬಾರಿ ಎರಡೂ ಪಕ್ಷಗಳ ಬೆಂಬಲಿತರ ಮಧ್ಯೆ ತುಸು ಜೋರಾಗಿಯೇ ಸ್ಪರ್ಧೆ ಏರ್ಪಟ್ಟಿದೆ. ಆವರ್ಸೆ : ಸ್ಪರ್ಧೆ ನೋಡುವುದೇ ಲೇಸು
16 ಸದಸ್ಯ ಬಲದ ಆವರ್ಸೆ ಗ್ರಾ.ಪಂ.ನಲ್ಲಿ ಕಳೆದ ಬಾರಿ ಬಿಜೆಪಿ ಬೆಂಬಲಿತ 6, ಕಾಂಗ್ರೆಸ್‌ನ 10 ಮಂದಿ ಗೆಲುವು ಸಾಧಿಸಿದ್ದರು. ಪರಸ್ಪರ ಹೊಂದಾಣಿಕೆಯೊಂದಿಗೆ ಬಿಜೆಪಿ, ಕಾಂಗ್ರೆಸ್ ಬೆಂಬಲಿತರು ಅಧ್ಯಕ್ಷರಾಗಿ ಆಡಳಿತ ನಡೆಸಿದ್ದರು. ಈ ಬಾರಿಯೂ ಇಲ್ಲಿ ನೇರ ಹಣಾಹಣಿ ಖಚಿತ ಎನ್ನುವಂತಿದೆ. ಐರೋಡಿ : ಹೊಸ ಮುಖಗಳ ಪರಿಚಯ ?
16 ಮಂದಿ ಸದಸ್ಯರ ಬಲದ ಐರೋಡಿ ಗ್ರಾ.ಪಂ.ನಲ್ಲಿ ಕಳೆದ ಬಾರಿ ಬಿಜೆಪಿ 8, ಕಾಂಗ್ರೆಸ್ 8 ಸ್ಥಾನಗಳನ್ನು ಗಳಿಸಿತ್ತು. ಬಿಜೆಪಿ ಬೆಂಬಲಿತ ಸದಸ್ಯರೋರ್ವರ ಸಹಕಾರ ಪಡೆದು ಕಾಂಗ್ರೆಸ್‌ನ ಮೋಸೆಸ್ ರೋಡಿಗ್ರಸ್ ಅಧ್ಯಕ್ಷರಾದರು. ಕಾಂಗ್ರೆಸ್ ಬೆಂಬಲಿತ ಅನೇಕರು ಪುನಃ ಸ್ಪರ್ಧೆಯಲ್ಲಿದ್ದಾರೆ. ಆದರೆ ಬಾಳುದ್ರು 2ವಾರ್ಡ್‌ನಲ್ಲಿ ಕಳೆದ ಬಾರಿ ಸದಸ್ಯರಾಗಿದ್ದ ಬಿಜೆಪಿ ಬೆಂಬಲಿತ 6ಮಂದಿಗೆ ಅವಕಾಶ ಸಿಗುವ ಸಂಗತಿಯೇ ಚರ್ಚೆಯಲ್ಲಿದೆ. ಹೊಸ ಮುಖಗಳು ಬಂದರೂ ಅಚ್ಚರಿಯಿಲ್ಲ. ಹಾಗೇನಾದರೂ ಆಗಿ ಬಂಡಾಯದ ಹೊಗೆ ಎದ್ದರೆ ಯಾರು ತಟಸ್ಥರೋ ದೇವರೇ ಬಲ್ಲ. ಯಡ್ತಾಡಿ : ಸ್ಪರ್ಧೆ ಲೆಕ್ಕಾಚಾರವೇ ಜೋರು
ಯಡ್ತಾಡಿ ಗ್ರಾ.ಪಂ.ನ 16 ಸ್ಥಾನಗಳನ್ನೂ ಕಳೆದ ಬಾರಿ ಬಿಜೆಪಿ ಬೆಂಬಲಿಗರು ಗೆದ್ದಿದ್ದರು. ಅಧ್ಯಕ್ಷರಾಗಿ ಪ್ರಕಾಶ್ ಶೆಟ್ಟಿ ಕಾರ್ಯ ನಿರ್ವಹಿಸಿದ್ದರು. ಈ ಬಾರಿ ಕಾಂಗ್ರೆಸ್ ಬಿಜೆಪಿಗೆ ಸರಿಯಾದ ಸ್ಪರ್ಧೆ ನೀಡಲು ತನ್ನ ಬೆಂಬಲಿತರನ್ನು ಸಜ್ಜುಗೊಳಿಸಿದೆ. ಫಲಿತಾಂಶ ಕುತೂಹಲ ಇದ್ದದ್ದೇ. ಜತೆಗೆ ಸ್ಪರ್ಧೆಯ ಲೆಕ್ಕಾಚಾರವೂ ಜೋರಿದೆ. ಶಿರಿಯಾರ : ರಾಜಿ ಕಥೆ?
ಶಿರಿಯಾರ ಗ್ರಾ.ಪಂ.ನ 13 ಸ್ಥಾನಗಳಲ್ಲಿ ಕಳೆದ ಬಾರಿ ಕಾಂಗ್ರೆಸ್ ಬೆಂಬಲಿತ ಮೂರು, ಬಿಜೆಪಿ ಬೆಂಬಲಿತರು 10 ಸ್ಥಾನಗಳಲ್ಲಿ ಜಯ ಗಳಿಸಿ ಜ್ಯೋತಿ ಅಧ್ಯಕ್ಷೆಯಾಗಿದ್ದರು. ಅನಂತರ ಅವರನ್ನು ಅವಿಶ್ವಾಸದ ಮೂಲಕ ಕೆಳಗಿಳಿಸಿ ವಿಶಾಲ ಅವರನ್ನು ಪಟ್ಟಕ್ಕೇರಿಸಲಾಗಿತ್ತು. ಈ ಬಾರಿ ಇಲ್ಲಿನ ಕೆಲವು ವಾರ್ಡ್ ಗಳಲ್ಲಿ ಅವಿರೋಧ ಆಯ್ಕೆಯ ಬಗ್ಗೆ ಕೇಳಿಬಂದರೂ ಕೊನೆಯ ಕ್ಷಣದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನಾಮಪತ್ರ
ಸಲ್ಲಿಕೆಯಾಗಿದೆ. ವಡ್ಡರ್ಸೆ : ಸ್ಪರ್ಧೆಯ ವರಸೆ
17 ಸದಸ್ಯ ಬಲದ ವಡ್ಡರ್ಸೆ ಗ್ರಾ.ಪಂ.ನಲ್ಲಿ ಕಳೆದ ಬಾರಿ 13 ಮಂದಿ ಬಿಜೆಪಿ ಬೆಂಬಲಿತ ಹಾಗೂ 4 ಕಾಂಗ್ರೆಸ್ ಬೆಂಬಲಿತ ಸದಸ್ಯರು ಆಯ್ಕೆಯಾಗಿದ್ದರು. ಅನಂತರ ಬಹುತೇಕರ ಸವಾರಿ ಬಿಜೆಪಿ ಕಡೆ ನಡೆಯಿತು. ಅದೇ ಕಾರಣದಿಂದ ಈ ಬಾರಿ ಕುತೂಹಲ ಹೆಚ್ಚಿದೆ. ಪಾಂಡೇಶ್ವರ : ಮತದಾರ ಯಾರ ಪರ?
13 ಮಂದಿ ಸಂಖ್ಯಾಬಲದ ಪಾಂಡೇಶ್ವರ ಗ್ರಾ.ಪಂ.ನಲ್ಲಿ ಕಳೆದ ಬಾರಿ ಕಾಂಗ್ರೆಸ್ ಬೆಂಬಲಿತರು 3, ಬಿಜೆಪಿ 10 ಸ್ಥಾನಗಳಲ್ಲಿ ಜಯ ಗಳಿಸಿದ್ದರು. ಈ ಬಾರಿ ಕೂಡ ನೇರ ಹಣಾಹಣಿ ಇದ್ದೇ ಇದೆ. ಫಲಿತಾಂಶ ಪುನರಾವರ್ತನೆಯಾಗುತ್ತೋ ಹೊಸ ಲೆಕ್ಕವನ್ನು ಮತದಾರರು ಬರೆಯುತ್ತಾರೋ ಕಾದು ನೋಡಬೇಕು. ಸ್ಥಳೀಯ ಸಮಸ್ಯೆಗಳು
ಕುಡಿಯುವ ನೀರಿನ ಸಮಸ್ಯೆ ಈ ಗ್ರಾಮಗಳಲ್ಲಿ ಸಾಮಾನ್ಯ. ಹಕ್ಕುಪತ್ರದ ಸಮಸ್ಯೆಯೇನೂ ಕಡಿಮೆ ಇಲ್ಲ. ಹೊಳೆಗಳಲ್ಲಿ ಹೂಳುತುಂಬಿ ನೆರೆ ಹಾವಳಿ ಉಂಟಾಗಿ ಪ್ರತಿ ವರ್ಷ ಕೃಷಿ ಬೆಳೆ ಹಾನಿಯಾಗುತ್ತಿರುವುದು ಮತ್ತೂಂದು ಸಮಸ್ಯೆ. ರಾಷ್ಟ್ರೀಯ ಹೆದ್ದಾರಿ ವ್ಯಾಪ್ತಿಯನ್ನು ಹೊಂದಿರುವ ಈ ಪಂಚಾಯತ್‌ಗಳಲ್ಲಿ ಕಸದ ಸಮಸ್ಯೆ ಹೊಸತು. ಬಿಜೆಪಿಯೊಳಗೇ ಪ್ರತಿಸ್ಪರ್ಧಿಗಳು
ಕಾಂಗ್ರೆಸ್ ಪಕ್ಷಕ್ಕೆ ಕೆಲವು ಪಂಚಾಯತ್‌ಗಳಲ್ಲಿ ಸೂಕ್ತ ಅಭ್ಯರ್ಥಿಗಳನ್ನು ಹುಡುಕುವ ಪರಿಸ್ಥಿತಿ ಇದ್ದರೆ, ಬಿಜೆಪಿಯಲ್ಲಿ ವಿರುದ್ಧವಾದ ಸ್ಥಿತಿ. ಕೋಟತಟ್ಟು, ವಡ್ಡರ್ಸೆ, ಕೋಟ, ಯಡ್ತಾಡಿ ಮುಂತಾದೆಡೆ ಬಿಜೆಪಿ ಬೆಂಬಲಿತರಿಗೆ ಆ ಪಕ್ಷದವರೇ ಪ್ರತಿಸ್ಪರ್ಧಿ ಎಂಬಂತಾಗಿದೆ. ರಾಜಿ ಸೂತ್ರದ ಮೇಲೆ ಎಲ್ಲ ಅವಲಂಬಿತವಾಗಿದೆ. ಕೋಡಿ: ಚುನಾವಣೆ ಬಹಿಷ್ಕಾರ
ಹಕ್ಕುಪತ್ರ, ಜೆಟ್ಟಿ ಸಮಸ್ಯೆ, ಜನಪ್ರತಿನಿಧಿಗಳ ಅಸಹಕಾರ ಮುಂತಾದ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಕೋಡಿ ಗ್ರಾ.ಪಂ.ನಲ್ಲಿ ಚುನಾವಣೆ ಬಹಿಷ್ಕಾರಕ್ಕೆ ಕರೆ ನೀಡಿದ್ದು ಮೂರು ನಾಮಪತ್ರ ಸಲ್ಲಿಕೆಯಾಗಿದೆ.