ವಾಡಿ: ಹಳಕರ್ಟಿ ಗ್ರಾಪಂ ಬಿಲ್ ಕಲೆಕ್ಟರ್ ಸೇರಿದಂತೆ ನಾಲ್ವರು ಸಿಬ್ಬಂದಿ ಅಮಾನತ್ ತೀರ್ಮಾನ ಕೈಗೊಂಡಿದ್ದನ್ನು ಖಂಡಿಸಿ ಸಿಐಟಿಯುಗೆ ಸಂಯೋಜಿತವಾಗಿರುವ ಕರ್ನಾಟಕ ರಾಜ್ಯ ಗ್ರಾಪಂ ನೌಕರರ ಸಂಘ ಪ್ರತಿಭಟನೆ ನಡೆಸಿತು.
ಸೋಮವಾರ ಬೆಳಗ್ಗೆ ಹಳಕರ್ಟಿ ಗ್ರಾಪಂ ಎದುರು ಜಮಾಯಿಸಿದ್ದ ಗ್ರಾಪಂ ನೌಕರರ ಸಂಘ ಹಾಗೂ ಸಿಐಟಿಯು ಕಾರ್ಯಕರ್ತರು ಪಂಚಾಯಿತಿ ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಹಳಕರ್ಟಿ ಗ್ರಾಪಂ ಆಡಳಿತ ಸರ್ವಾಧಿಕಾರಿ ತೀರ್ಮಾನ ಕೈಗೊಂಡು ಸಿಬ್ಬಂದಿ ಮೇಲೆ ವಜಾ ಅಸ್ತ್ರ ಬಳಕೆ ಮಾಡಿರುವುದು ನಿಯಮ ಬಾಹಿರವಾಗಿದೆ. ಯಾವುದೇ ತಪ್ಪು ಘಟನೆ ನಡೆದಿದೆ ಎಂದಾದರೇ ಸಮಂಜಸವಾದ ವಿಚಾರಣೆ ನಡೆಸಬೇಕು. ಸಿಬ್ಬಂದಿಯನ್ನು ವಿಚಾರಣೆಗೊಳಪಡಿಸಿ ಸತ್ಯ ಅರಿತುಕೊಳ್ಳುವ ಪ್ರಯತ್ನ ಮಾಡಬೇಕು. ಆದರೆ ಹಳಕರ್ಟಿ ಆಡಳಿತ ಬಿಲ್ ಕಲೆಕ್ಟರ್‌ನನ್ನು ಏಕಾಏಕಿ ಸೇವೆಯಿಂದ ವಜಾ ಮಾಡಿದೆ. ಅಲ್ಲದೇ ಇನ್ನೂ ಮೂವರು ಸಿಬ್ಬಂದಿಗಳನ್ನು ಆರು ತಿಂಗಳು ಸೇವೆಯಿಂದ ಅಮಾನತು ಮಾಡಿದ್ದಾರೆ. ಇದು ಸರಿಯಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಬಿಲ್ ಕಲೆಕ್ಟರ್ ವಜಾ ವಾಪಸ್ ಪಡೆಯಬೇಕು. ಇತರ ಸಿಬ್ಬಂದಿ ವಿರುದ್ಧ ಪ್ರಯೋಗಿಸಲಾದ ಅಮಾನತು ನಿರ್ಧಾರ ಹಿಂಪಡೆಯಬೇಕು. ಗ್ರಾಪಂ ನೌಕರರಿಗೆ ಕಾರ್ಮಿಕ ಇಲಾಖೆ ನಿಗದಿಪಡಿಸಿದ ವೇತನ ಪಾವತಿಸಬೇಕು. ಇಎಫ್‌ಎಂಎಸ್ ಅಳವಡಿಸಿದ ಸಿಬ್ಬಂದಿಗೆ ವೇತನ ಪಾವತಿ ಮಾಡಬೇಕು. ತೆರಿಗೆ ವಸೂಲಾತಿಯಲ್ಲಿ ಶೇ.40ರಷ್ಟು ಸಿಬ್ಬಂದಿ ವೇತನಕ್ಕೆ ಮೀಸಲಿಡಬೇಕು. 15ನೇ ಹಣಕಾಸಿನಲ್ಲಿ ಶೇ.20ರಷ್ಟು ಸಿಬ್ಬಂದಿ ವೇತನ ಪಾವತಿಸಬೇಕು. ಸೇವಾ ಪುಸ್ತಕ ನಿರ್ವಹಿಸಬೇಕು. ಸಿಬ್ಬಂದಿಗೆ ಸಮವಸ್ತ್ರ ವಿತರಿಸಬೇಕು ಎಂದು ಆಗ್ರಹಿಸಿದರು.
ಸಿಐಟಿಯು ತಾಲೂಕು ಅಧ್ಯಕ್ಷೆ ಶೇಖಮ್ಮ ಕುರಿ, ಕರ್ನಾಟಕ ಪ್ರಾಂತ ರೈತ ಸಂಘದ ಚಿತ್ತಾಪುರ ತಾಲೂಕು ಅಧ್ಯಕ್ಷ ಸಾಯಬಣ್ಣ ಗುಡುಬಾ, ಕೆಪಿಆರ್‌ಎಸ್ ಶಹಾಬಾದ ತಾಲೂಕು ಅಧ್ಯಕ್ಷ ರಾಯಪ್ಪ ಹುರಮುಂಜಿ, ಮುಖಂಡರಾದ ಮಲ್ಲಣ್ಣ ಸಿ.ಹೊನಗುಂಟಾ, ಚಂದ್ರಶೇಖರ ದೇವರಮನಿ, ಸಿದ್ರಾಮಯ್ಯ ಸ್ವಾಮಿ, ಶಿವಪುತ್ರ ಹಿಟ್ಟಿನ್ ಹಾಗೂ ಗ್ರಾಪಂ ನೌಕರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಸ್ಥಳಕ್ಕಾಗಮಿಸಿದ ತಾಪಂ ಸಹಾಯಕ ನಿರ್ದೇಶಕರು ಮನವಿ ಪತ್ರ ಸ್ವೀಕರಿಸಿದರು.