ಪುತ್ತೂರು : ಆರ್ಯಾಪು ಹಾಗೂ ನಿಡ್ಪಳ್ಳಿ ಗ್ರಾ.ಪಂ.ತಲಾ ಒಂದು ಸ್ಥಾನಕ್ಕೆ ನಡೆದ ಚುನಾವಣೆಯ ಫಲಿತಾಂಶ ಬುಧವಾರ ಪ್ರಕಟಗೊಂಡಿದ್ದು ಆರ್ಯಾಪುನಲ್ಲಿ ಪುತ್ತಿಲ ಪರಿವಾರ ಹಾಗೂ ನಿಡ್ಪಳ್ಳಿಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ.
ನಿಡ್ಪಳ್ಳಿ ಗ್ರಾ.ಪಂನ ನಿಡ್ಪಳ್ಳಿ ವಾರ್ಡ್ 2ರ ಸಾಮಾನ್ಯ ಮೀಸಲಾತಿಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಎನ್. ಸತೀಶ್ ಶೆಟ್ಟಿ (235) ಅವರು ಪುತ್ತಿಲ ಪರಿವಾರದ ಅಭ್ಯರ್ಥಿ ಜಗನ್ನಾಥ ರೈ (208)ವಿರುದ್ಧ ಗೆಲುವು ಸಾಧಿಸಿದರು. ಬಿಜೆಪಿ ಬೆಂಬಲಿತ ಅಭ್ಯರ್ಥಿ ಚಂದ್ರಶೇಖರ ಪ್ರಭು(85) ಮೂರನೇ ಸ್ಥಾನ ಪಡೆದಿದ್ದಾರೆ.
ಆರ್ಯಾಪು ಗ್ರಾ.ಪಂನ ಆರ್ಯಾಪು ವಾರ್ಡ್-2ರ ಹಿಂದುಳಿದ ವರ್ಗ ಎ ಮೀಸಲಾತಿಯಲ್ಲಿ ಪುತ್ತಿಲ ಪರಿವಾರ ಬೆಂಬಲಿತ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸುಬ್ರಹ್ಮಣ್ಯ ಬಲ್ಯಾಯ ದೊಡ್ಡಡ್ಕ(499) ಅವರು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಪುರುಷೋತ್ತಮ ಪ್ರಭು(353) ವಿರುದ್ಧ ಗೆಲುವು ದಾಖಲಿಸಿದರು. ಬಿಜೆಪಿ ಬೆಂಬಲಿತ ಅಭ್ಯರ್ಥಿ ಜಗದೀಶ್ ಭಂಡಾರಿ(140) ಮೂರನೇ ಸ್ಥಾನ ಪಡೆದರು.
ಎರಡು ಸ್ಥಾನ ಕಳೆದುಕೊಂಡ ಬಿಜೆಪಿ:
ಎರಡುವರೆ ವರ್ಷದ ಹಿಂದೆ ನಡೆದ ಚುನಾವಣೆಯಲ್ಲಿ ಈ ಎರಡು ವಾರ್ಡ್ ಗಳಲ್ಲಿ ಗೆಲುವು ದಾಖಲಿಸಿದ್ದ ಬಿಜೆಪಿ ಉಪ ಚುನಾವಣೆಯಲ್ಲಿ ಎರಡು ಸ್ಥಾನಗಳನ್ನು ಕಳೆದುಕೊಂಡಿತು. ಮೂರನೇ ಸ್ಥಾನ ಪಡೆಯುವಲ್ಲಿ ಮಾತ್ರ ಶಕ್ತವಾಯಿತು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸಿಡಿದೆದ್ದು ಬ್ಯಾಟ್ ಚಿಹ್ನೆಯೊಂದಿಗೆ ಕಣಕ್ಕಿಳಿದು ರಾಜ್ಯದಲ್ಲೇ ಗುರುತಿಸಿಕೊಂಡ ಹಿಂದೂ ಮುಖಂಡ ಅರುಣ್ ಪುತ್ತಿಲ ಅವರ ಬೆಂಬಲಿಗರು ಗ್ರಾ.ಪಂ.ಉಪಚುನಾವಣೆಯಲ್ಲಿ ಸ್ಪರ್ಧಿಸುವ ಮೂಲಕ ಕಣ ರಂಗೇರಿತ್ತು.