Advertisement

ಕೋವಿಡ್ ತಡೆಗೆ ಧೂಮತಮಗಾಂವ ಗ್ರಾಪಂ ದಿಟ್ಟಹೆಜ್ಜೆ

07:30 PM May 22, 2021 | Team Udayavani |

ಔರಾದ: ನಾಗಾಲೋಟದಿಂದ ದಿನೇ ದಿನೇ ಹೆಚ್ಚುತ್ತಿರುವ ಕೊರೊನಾ ಸೋಂಕನ್ನು ಕಟ್ಟಿಹಾಕಲು ಸರಕಾರ ಶ್ರಮ ಹಾಕುತ್ತಿದೆ. ಮೊದಲು ಸೇಫ್‌ ಝೋನ್‌ ಎನಿಸಿಕೊಂಡಿದ್ದ ಗ್ರಾಮಗಳಲ್ಲೂ ಸಹ ಈಗ ಕೊರೊನಾ ಎರಡನೇ ಅಲೆ ಜೋರಾಗಿ ಹಬ್ಬುತ್ತಿದೆ. ಈ ಮಹಾಮಾರಿಯಿಂದ ಹಳ್ಳಿಯ ಜನರನ್ನು ರಕ್ಷಿಸಲು, ಕೋವಿಡ್‌ ಓಟಕ್ಕೆ ಬ್ರೇಕ್‌ ಹಾಕಲು ತಾಲೂಕಿನ ಧೂಮತಮಗಾಂವ ಗ್ರಾಮ
ಪಂಚಾಯತ್‌ ಕಟಿಬದ್ಧವಾಗಿದೆ.

Advertisement

ಪಂಚಾಯತ್‌ ಅಭಿವೃದ್ಧಿ ಅಧಿಕಾರಿಗಳು ಹಾಗೂ ಆಡಳಿತ ಮಂಡಳಿ ಸದಸ್ಯೆರಲ್ಲರೂ ಸೇರಿ ವಿನೂತನ ಹಾಗೂ ಮಾದರಿ ಜಾಗೃತಿ ಕಾರ್ಯಕ್ರಮ ಮೂಡಿಸಿ ಗ್ರಾಪಂ ವ್ಯಾಪ್ತಿಯಲ್ಲಿನ ಎಲ್ಲ ಗ್ರಾಮಗಳ ಜನರ ರಕ್ಷಣೆಗೆ ಮುಂದಾಗಿದ್ದಾರೆ. ಬೀದರ ಜಿಲ್ಲೆ ಔರಾದ ತಾಲೂಕಿನ ಧೂಪತಮಗಾಂವ ಗ್ರಾಪಂ ಅಭಿವೃದ್ಧಿ ಅಧಿಕಾರಿ ಶಿವಾನಂದ ಔರಾದ ಹಾಗೂ ಗ್ರಾಪಂ ಅಧ್ಯಕ್ಷ ಶ್ರೀನಿವಾಸ್‌ ಪಂಚಾಯತನ ಎಲ್ಲ ಸದಸ್ಯರು ಹಾಗೂ ಸಿಬ್ಬಂದಿ ‘ಒಗ್ಗಟ್ಟಿನಲ್ಲಿ ಬಲವಿದೆ’ ಎಂಬ ಮಾತಿನಲ್ಲಿ ನಂಬಿಕೆಯಿಟ್ಟು ಕೊರೊನಾ ಹೊಡೆದೋಡಿಸಲು ಹಲವು ಪ್ರಮುಖ ಹೆಜ್ಜೆ ಇಟ್ಟಿದ್ದಾರೆ.

ಜಾಗೃತಿ ಕಾರ್ಯಕ್ರಮ: ಪಂಚಾಯತ ವ್ಯಾಪ್ತಿಯಲ್ಲಿರುವ ಎಲ್ಲ ಗ್ರಾಮಗಳ ಜನರ ಆರೋಗ್ಯ ಹಾಗೂ ಪ್ರಾಣ ರಕ್ಷಣೆಯೇ ತಮ್ಮ ಧ್ಯೇಯ ಎಂದು ಸರ್ಕಾರ ಹಾಗೂ ಬೀದರ ಜಿಲ್ಲಾಡಳಿತದ ಸೂಚನೆಯನ್ನು ಪಂಚಾಯತ್‌ ವ್ಯಾಪ್ತಿಯಲ್ಲಿ ಚಾಚೂ ತಪ್ಪದೆ ಪಾಲನೆಗೆ ತರಲಾಗಿದೆ. ಅಲ್ಲದೆ ಪ್ರತಿ ಹಳ್ಳಿಯಲ್ಲಿ ಕೊರೊನಾ ಜಾಗೃತಿ ಮೂಡಿಸಲು ಮುಂದಾಗಲಾಗಿದೆ. ಕೊರೊನಾ ತಡೆಗೆ ಜಿಲ್ಲಾಡಳಿತದಿಂದ ಮಾದರಿ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ಪಡೆದು ಪಂಚಾಯತ್‌ನಲ್ಲಿ ಸರ್ವ ಸದಸ್ಯರು ಹಾಗೂ ಸಿಬ್ಬಂದಿ ಸೇರಿ ಸಭೆ ನಡೆಸಿ ಜನರಲ್ಲಿ ಜಾಗೃತಿ ಮೂಡಿಸುವ ಕುರಿತು ಕಾರ್ಯಕ್ರಮ ರೂಪಿಸಲಾಗಿದೆ.

ಫ್ರೀ ಆಟೋ ಆ್ಯಂಬುಲೆನ್ಸ್‌ : ಕೊರೊನಾ ಎರಡನೇ ಅಲೆ ಅಬ್ಬರ ಹೆಚ್ಚಾದ ನಂತರ ರಾಜ್ಯ ಸರ್ಕಾರ ಕಠಿಣ ಕರ್ಫ್ಯೂ ಘೋಷಿಸಿದೆ. ವಾಹನ ಸಂಚಾರ ಎಲ್ಲ ನಿರ್ಬಂಧಿಸಲಾಗಿದೆ. ಇದರಿಂದ ಬಡ ರೋಗಿಗಳಿಗೆ ತೊಂದರೆಯಾಗಬಾರದೆಂಬ ಉದ್ದೇಶದಿಂದ ಪಂಚಾಯತ್‌ ಆಟೋ ಆ್ಯಂಬುಲೆನ್ಸ್‌ ಸೇವೆ ಆರಂಭಿಸಿದೆ. ಕರ್ಫ್ಯೂ ಸಂದರ್ಭದಲ್ಲಿ ಪಂಚಾಯತ ವ್ಯಾಪಿಯಲ್ಲಿನ ಹಳ್ಳಿಗಳ ಬಡವರು, ಕೂಲಿ ಕಾರ್ಮಿಕರು, ಬಡತನ ರೇಖೆಗಿಂತ ಕೆಳಗಿರುವ ಕುಟುಂಬದ ಸದಸ್ಯರಿಗೆ ಅನಾರೋಗ್ಯ ಮತ್ತು ಕೊರೊನಾ ಸೋಂಕು ಕಂಡು ಬಂದಲ್ಲಿ ತುರ್ತು ಚಿಕಿತ್ಸೆ ನೀಡಲು ಕರೆದೊಯ್ಯಲು ಸಹಕಾರಿಯಾಗುವಂತೆ ಈ ಆಟೋ ಆ್ಯಂಬುಲೆನ್ಸ್‌ ಸಿದ್ಧಪಡಿಸಲಾಗಿದೆ. ಅನಾರೋಗ್ಯ ಪೀಡಿತರನ್ನು ಆಟೋ ಆ್ಯಂಬುಲೆನ್ಸ್‌ನಲ್ಲಿ ಮೊದಲಿಗೆ ಕೊರೊನಾ ಕೇರ್‌ ಸೆಂಟರ್‌ಗೆ ಕರೆ ತಂದು ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದರೆ ಸಂತಪೂರ ಸಮುದಾಯ ಆರೋಗ್ಯ ಕೇಂದ್ರಕ್ಕೆ ಉಚಿತವಾಗಿ ಕರೆದೊಯ್ದು ಅಲ್ಲಿ ಅವರಿಗೆ ಚಿಕಿತ್ಸೆ ಕೊಡಿಸಲಾಗುತ್ತದೆ. ವಾಹನ ಸಂಚಾರ ಇಲ್ಲದ ಸಂದರ್ಭದಲ್ಲಿ ಪಂಚಾಯತ್‌ ವ್ಯಾಪ್ತಿಯ ಅನಾರೋಗ್ಯ ಪೀಡಿತ ಬಡವರಿಗೆ ಈ ಉಚಿತ ಆಟೋ ಆ್ಯಂಬುಲೆನ್ಸ್‌ ಸಂಜೀವಿನಿಯಾಗಿದೆ.

ಸಹಾಯವಾಣಿ ಕೇಂದ್ರ: ಧೂಪತಮಗಾಂವ ಪಂಚಾಯತ್‌ ಕಚೇರಿಯಲ್ಲೇ ಸಹಾಯವಾಣಿ ಕೇಂದ್ರ ತೆರೆಯಲಾಗಿದೆ. ಗ್ರಾಮದಲ್ಲಿ ಮೂರು ಜನ ಆಶಾ ಕಾರ್ಯಕರ್ತೆಯರು ಹಾಗೂ ಮೂರು ಜನ ಅಂಗನವಾಡಿ ಕಾರ್ಯಕರ್ತೆಯರು ಇದ್ದು ಓರ್ವ ಆಶಾ ಕಾರ್ಯಕರ್ತೆ ಹಾಗೂ ಒಬ್ಬರು ಅಂಗನವಾಡಿ ಕಾರ್ಯಕರ್ತೆ ಮೂರು ಗಂಟೆಯಂತೆ ಪಾಳಿ ಪ್ರಕಾರ ಇಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ರಾತ್ರಿ ವೇಳೆ ಪಂಚಾಯತ ಸಿಬ್ಬಂದಿ ಸಹಾಯವಾಣಿ ಕೇಂದ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಪಂಚಾಯತ ವ್ಯಾಪಿಯಲ್ಲಿನ ಪ್ರತಿಯೊಬ್ಬರಿಗೂ ಸೇವೆ ನೀಡಲು ಕೇಂದ್ರ ದಿನದ 24 ಗಂಟೆ ಕಾರ್ಯನಿರ್ವಹಿಸುತ್ತಿದೆ.

Advertisement

ಕೊರೊನಾ ಜಾಗೃತಿ ರಥ: ಜನರಲ್ಲಿ ಕೊರೊನಾ ಸೋಂಕಿನ ಬಗ್ಗೆ ಜಾಗೃತಿ ಮೂಡಿಸಲು ಪಂಚಾಯತ್‌ನಿಂದ ಜಾಗೃತಿ ರಥ ಸಿದ್ಧಪಡಿಸಲಾಗಿದೆ.  ಧೂಪತಮಗಾಂವ, ಬಾಬಳಿ, ಮಣಿಗಂಪೂರ, ಜಿರ್ಗಾ(ಬಿ) ಸೇರಿದಂತೆ ಎರಡು ತಾಂಡಾಗಳಿವೆ. ಪ್ರತಿನಿತ್ಯ ಪಂಚಾಯತ ವ್ಯಾಪ್ತಿಯಲ್ಲಿ ಬರುವ ಎರಡು ಗ್ರಾಮದಲ್ಲಿ ಈ ರಥ ಸಂಚರಿಸಿ ಕೋವಿಡ್‌ ಬಗ್ಗೆ ಜನ ಜಾಗೃತಿ ಮೂಡಿಸುತ್ತಿದೆ. ಪಂಚಾಯತ ವ್ಯಾಪ್ತಿಯಲ್ಲಿನ ಪ್ರತಿಯೊಂದು ಕುಟುಂಬದ ಸದಸ್ಯರು ಸ್ವತ್ಛತೆ ಕಾಪಾಡಿಕೊಳ್ಳುವ ಬಗ್ಗೆ ಹಾಗೂ ಕೊರೊನಾ ನಿಯಮ ಪಾಲಿಸುವಂತೆ ಸಲಹೆ ನೀಡುವುದರ ಜೊತೆಗೆ ಧ್ವನಿವರ್ಧಕದ ಮೂಲಕ ಅರಿವು ಮೂಡಿಸಲಾಗುತ್ತಿದೆ.

ಅಲ್ಲದೆ ಜನರಿಗೆ ಅಗತ್ಯ ಸಲಹೆ ಸೂಚನೆ ನೀಡಲಾಗುತ್ತಿದೆ. ಪಂಚಾಯತ ಅಭಿವೃದ್ಧಿ ಅಧಿಕಾರಿ ಶಿವಾನಂದ ಔರಾದೆ ಹಾಗೂ ಗ್ರಾಪಂ ಅಧ್ಯಕ್ಷ ಶ್ರೀನಿವಾಸ ಜೋನ್ನೆಕೇರೆ ಉಪಾಧ್ಯಕ್ಷೆ ವಿದ್ಯಾವತಿ ಸೇರಿದಂತೆ ಗ್ರಾಪಂ ಸಿಬ್ಬಂದಿಗಳಾದ ಮಹೇಶ ಪವಾರ್‌, ಪ್ರಕಾಶ ತಾಂಬುಳೆ, ವಿಶ್ವ ನಾಥ ಬಿರಾ  ದಾರ್‌, ಶಿವಾ ನಂದ ಸ್ವಾಮಿ , ಗೋಪಾಲ, ಧನ ರಾಜ್‌ ಅವರು ಪಂಚಾಯತ್‌ ವ್ಯಾಪ್ತಿಯ ಮನೆ ಮನೆಗೂ ತೆರಳಿ ಕೊರೊನಾ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ.

ಮೂರು ನಾಲ್ಕು ದಿನಗಳ ಹಿಂದೆ ತಾಲೂಕಿನ ಕೇಲ ಗ್ರಾಪಂಗಳಿಗೆ ಭೇಟಿ ನೀಡಿ ಅಲ್ಲಿನ ಸೇವೆ ಹಾಗೂ ಸಹಾಯವಾಣಿ ಕೇಂದ್ರಗಳ ವಿಕ್ಷಣೆ ಮಾಡಿದಾಗ ಅಲ್ಲಿನ ವ್ಯವಸ್ಥೆ ನೋಡಿ ತುಂಬಾ ಕೋಪ ಬಂದಿತ್ತು. ಈ ವಿಚಾರವಾಗಿ ಇಒಗೆ ಗರಂ ಆಗಿ ಸಿಬ್ಬಂದಿಗೆ ಒಳ್ಳೆಯ ಕೆಲಸ ಮಾಡುವಂತೆ ಸೂಚನೆ ನೀಡಿದ್ದೆ. ಆದರೆ ಇದೀಗ ನಮ್ಮ ಕ್ಷೇತ್ರದ ಪಂಚಾಯತ ವ್ಯಾಪ್ತಿಯಲ್ಲಿ ಫ್ರೀ ಆಟೋ ಆ್ಯಂಬುಲೇನ್ಸ್‌ ಸೇವೆ ಆರಂಭಿಸಿರುವುದು ಮಾದರಿ ಕಾರ್ಯ. ಈ ಪಂಚಾಯತ ಸಿಬ್ಬಂದಿ ಹಾಗೂ ಅಧ್ಯಕ್ಷರ
ಕೆಲಸ ಮಾದರಿಯಾಗಿದೆ.
ಪ್ರಭು ಚವ್ಹಾಣ-ಜಿಲ್ಲಾ ಉಸ್ತುವಾರಿ ಸಚಿವ

ಇಂಥ ಸಮಯದಲ್ಲಿ ಎಲ್ಲರೂ ತಮ್ಮ ಜವಾಬ್ದಾರಿಯನ್ನು ಅವರೇ ಅರಿತುಕೊಂಡು ಕೆಲಸ ಮಾಡುವ ಮೂಲಕ ಜನರಿಗೆ ಉತ್ತಮ ಸಹಕಾರ ಹಾಗೂ ಸಲಹೆ ನೀಡಲು ಮುಂದಾಗಬೇಕು. ಧೂಪತಮಗಾಂವ ಗ್ರಾಪಂ ಆಡಳಿತ ಮಂಡಳಿ ಸದಸ್ಯರು ಹಾಗೂ ಸಿಬ್ಬಂದಿ ಸೇರಿ ಆರಂಭಿಸಿದ ಫ್ರೀ ಆಟೋ ಅಂಬುಲೆನ್ಸ್‌ ಸೇವೆ ಮಾದರಿಯಾಗಿದೆ. ಈ ಪಂಚಾಯತ್‌ನಂತೆ ಇನ್ನುಳಿದ ಪಂಚಾಯತ್‌ಗಳು ಜನತೆಯ ಸಂಕಷ್ಟ ನೀಗಿಸುವಲ್ಲಿ ಮುಂದಾಗಲಿ.
ಆರ್‌. ರಾಮಚಂದ್ರನ್‌ -ಜಿಲ್ಲಾಧಿಕಾರಿ.

Advertisement

Udayavani is now on Telegram. Click here to join our channel and stay updated with the latest news.

Next