ಹಾನಗಲ್ಲ: ತಾಲೂಕಿನಲ್ಲಿ ಬಾಕಿ ಇರುವ ಅಭಿವೃದ್ಧಿ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಕಟ್ಟಪ್ಪಣೆ ಮಾಡಿದ ಸಂಸದ ಶಿವಕುಮಾರ ಉದಾಸಿ, ಗುಣಮಟ್ಟದ ವಿಷಯದಲ್ಲಿ ಯಾವುದೇ ರಾಜೀ ಇಲ್ಲ ಎಂದು ಎಚ್ಚರಿಸಿದರು.
ಶುಕ್ರವಾರ ತಾಪಂ ಸಭಾಭವನದಲ್ಲಿ ನಡೆದ ತಾಲೂಕಿನ ಎಲ್ಲ ಗ್ರಾಮ ಪಂಚಾಯತಿಗಳ ಅಭಿವೃದ್ಧಿ ಅಧಿಕಾರಿಗಳು ಹಾಗೂ ಆಡಳಿತಾಧಿಕಾರಿಗಳ ಸಭೆಯಲ್ಲಿ ಮಾತನಾಡಿದರು. ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ಕಾಮಗಾರಿಯಲ್ಲಿ ನಿರ್ಲಕ್ಷ್ಯ ತೋರಿದ ಆಲೂರು, ಆಲದಕಟ್ಟಿ, ಹಾವಣಗಿ, ಕೂಡಲ, ನರೇಗಲ್, ಶೀಗಿಹಳ್ಳಿ, ಸುರಳೇಶ್ವರಗ್ರಾಮ ಪಂಚಾಯತಿಗಳು ಶೇ. 50ಕ್ಕಿಂತ ಕಡಿಮೆ ಪ್ರಗತಿ ತೋರಿಸಿದ್ದು, ಕೂಡಲೇ ತ್ವರಿತ ಕಾಮಗಾರಿ ಮಾಡಿ ಅಭಿವೃದ್ಧಿಗೆ ಹೆಜ್ಜೆ ಹಾಕಬೇಕೆಂದು ಸೂಚಿಸಿದರು.
ಬೇಸಿಗೆ ಎದುರಾಗಿದ್ದು, ಡೊಮ್ಮನಾಳ, ಗುಡ್ಡದ ಮತ್ತಿಗಳ್ಳಿ, ವಳಗೇರಿ, ಮಾಸನಕಟ್ಟಿ, ಗ್ರಾಮಗಳಲ್ಲಿ ಹಿಂದಿನ ವರ್ಷಗಳಲ್ಲಿಆದಂತೆ ಕುಡಿಯುವ ನೀರಿನ ಸಮಸ್ಯೆಗೆ ಈಗಲೇ ಪರಿಹಾರ ಕಂಡುಕೊಳ್ಳಬೇಕು. ಯಾವುದೇ ಗ್ರಾಮದಲ್ಲಿ ಕುಡಿಯುವ ನೀರಿಗೆ ತೊಂದರೆಯಾಗಬಾರದು. ತಾಲೂಕಿನಲ್ಲಿ 16 ಶುದ್ಧಕುಡಿಯುವ ನೀರಿನ ಘಟಕಗಳು ಸ್ಥಗಿತಗೊಂಡಿದ್ದು, ಜಿಪಂ ವಿಶೇಷ ಅನುದಾನ ನೀಡಿದರೂ ದುರಸ್ತಿ ಮಾಡಿಲ್ಲ. ಆಯಾ ಗ್ರಾಪಂ ವ್ಯಾಪ್ತಿಯಲ್ಲಿ ಅಭಿವೃದ್ಧಿ ಅಧಿ ಕಾರಿಗಳು ಕೂಡಲೇ ಸಂಬಂಧಿ ಸಿದವರನ್ನು ಸಂಪರ್ಕಿಸಿ ದುರಸ್ತಿಗೊಳಿಸಬೇಕು ಎಂದು ಸೂಚನೆ ನೀಡಿದರು.
ಹೊಸ ಜಲಜೀವನ್ ಮಿಷನ್ ಯೋಜನೆಯಲ್ಲಿ ತಾಲೂಕಿನ 98 ಗ್ರಾಮಗಳಿಗೆ ಪ್ರತಿ ಮನೆಗೆ ಶುದ್ಧ ಕುಡಿಯುವ ನೀರು ಒದಗಿಸುವ ಯೋಜನೆ ಒಳಗೊಂಡಿವೆ ಎಂದರು. ತಾಲೂಕಿನಲ್ಲಿ ಆಶ್ರಯ ಮನೆ ಯೋಜನೆಯಡಿ 210ಫಲಾನುಭವಿಗಳಿಗೆ ತಾಂತ್ರಿಕ ದೋಷದಿಂದ ಮನೆ ನಿರ್ಮಾಣ ಸ್ಥಗಿತವಾಗಿದೆ. ಕೂಡಲೇ ಇವನ್ನು ಸರಿಪಡಿಸಬೇಕು. ಅಂಬೇಡ್ಕರ್, ಬಸವ ವಸತಿ ಯೋಜನೆಯಡಿ ಮಂಜುರಾದ ಮನೆಗಳ ನಿರ್ಮಾಣಕ್ಕೆ ಪೂರ್ಣ ಸಹಕಾರ ನೀಡುವಂತೆ ಸಲಹೆ ಮಾಡಿದರು.
ಕೋವಿಡ್-19ರ ಪ್ರಕರಣಗಳು ಇಳಿಮುಖವಾಗಿವೆ ಎಂಬ ಕಾರಣಕ್ಕೆ ಅಧಿಕಾರಿಗಳು ನಿರ್ಲಕ್ಷ್ಯ ಧೋರಣೆ ತಾಳಕೂಡದು. ಎದುರಿಗೆ ಹಲವು ಹಬ್ಬಗಳ ಆಚರಣೆ ನಡೆಯುತ್ತಿರುವುದರಿಂದ, ಜನಸಂದಣಿಯಲ್ಲಿ ಹಬ್ಬಗಳು ನಡೆಯುತ್ತಿರುವುದರಿಂದ ಕೋವಿಡ್ ಜಾಗೃತಿ ಗ್ರಾಮ ಪಂಚಾಯತಿಗಳಿಂದ ನಿರಂತರವಾಗಿರಲಿ. ಸ್ವಚ್ಛತಾ ವಿಷಯದಲ್ಲಿ ನಿರ್ಲಕ್ಷ್ಯ ಬೇಡ ಎಂದು ಎಚ್ಚರಿಸಿದರು. ಜಿಪಂ ಸದಸ್ಯ ಮಾಲತೇಶ ಸೊಪ್ಪಿನ, ತಾಪಂ ಇಒ ಸುನೀಲಕುಮಾರ ವೇದಿಕೆಯಲ್ಲಿದ್ದರು.