ವಾಡಿ: ರಾಜ್ಯದಲ್ಲಿ ಗ್ರಾಮ ಪಂಚಾಯತಿ ಚುನಾವಣೆ ಘೋಷಣೆಯಾಗುತ್ತಿದ್ದಂತೆ ಅಭ್ಯರ್ಥಿಗಳಾಗಲು ಪೈಪೋಟಿ ಶುರುವಾಗಿದ್ದು, ಹಳ್ಳಿ ಕಟ್ಟೆಗಳೆಲ್ಲ ಚುನಾವಣೆ ಕಾವು ಪಡೆದುಕೊಂಡಿವೆ. ಊರ ನಡುವಿನ ಅರಳಿ ಕಟ್ಟೆಗಳಲ್ಲಿ ಸಂಜೆ ಠಿಕಾಣಿ ಹೂಡುವ ಕೃಷಿಕರು ಪ್ರಸ್ತುತ ರಾಜಕಾರಣದ ಚರ್ಚೆಯಲ್ಲಿ ತೊಡಗಿದ್ದಾರೆ.
ಗ್ರಾಮದ ಆಡಳಿತದಲ್ಲಿ ಸದಸ್ಯರಾಗುವ ಹುಮ್ಮಸ್ಸಿನಲ್ಲಿರುವ ಯುವಕರು ಸ್ಪರ್ಧೆಗಿಳಿಯಲು ಈ ಬಾರಿ ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ. ಗ್ರಾಮೀಣ ಜನರು ಕಾಂಗ್ರೆಸ್-ಬಿಜೆಪಿ ಎಂದು ಗುರುತಿಸಿಕೊಂಡಿದ್ದರಿಂದ ಪಕ್ಷ ರಹಿತ ಗ್ರಾಪಂ ಚುನಾವಣೆಯಲ್ಲೂ ಪಕ್ಷ ರಾಜಕಾರಣ ಹಿಂಬಾಗಿಲಿನಿಂದ ತಲೆಹಾಕುತ್ತಿದೆ. ಪಂಚಾಯಿತಿ ಆಡಳಿತಕ್ಕೆ ಅಧಿಪತಿಯಾಗಿ ಗ್ರಾಮಾಭಿವೃದ್ಧಿ ಕನಸು ಹೊತ್ತವರು ಒಂದೆಡೆಯಾದರೆ, ನಮ್ಮದೇ ಪಕ್ಷದ ಬೆಂಬಲಿಗರು ಹೆಚ್ಚು ಗೆಲ್ಲಬೇಕು ಎನ್ನುವ ರಾಷ್ಟ್ರೀಯ ಪಕ್ಷಗಳ ರಾಜಕೀಯ ಲೆಕ್ಕಾಚಾರ ಒಳಗೊಳಗೆ ಗರಿಗೆದರುತ್ತಿದೆ.
ಸ್ವಾತಂತ್ರ್ಯನಂತರ ಹಲವು ಗ್ರಾಮ ಸರ್ಕಾರಗಳನ್ನು ಕಂಡಿದ್ದರೂ, ಗ್ರಾಮಗಳು ಮೂಲಭೂತ ಸೌಕರ್ಯಗಳ ಕೊರತೆಯಿಂದ ಮುಕ್ತಿ ಕಂಡಿಲ್ಲ. ರಾಜ್ಯ ಸರಕಾರದಿಂದ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದರೂ ಜನರ ಬದುಕು ಮಾತ್ರ ಸುಧಾರಣೆ ಕಂಡಿಲ್ಲ. ಬಯಲು ಶೌಚಾಲಯ ಪದ್ಧತಿ ಶತಮಾನಗಳ ಅನಾಗರಿಕ ಆಚರಣೆಯಾಗಿದ್ದು, ಇಂದಿಗೂ ಮುಂದುವರಿದಿದೆ. ಬಚ್ಚಲು ನೀರು ಕೊಳೆಯಾಗಿ ಹದಗೆಟ್ಟ ಇಡೀ ಗ್ರಾಮದ ನೈರ್ಮಲ್ಯ ಶುಚಿತ್ವಕ್ಕಾಗಿ ಹೋರಾಟ ಮಾಡಬೇಕಾದ ಪರಿಸ್ಥಿತಿಯಿದೆ.
ಗ್ರಾಮದಸರಕಾರಿ ಶಾಲೆಗಳ ಅಂಗಳದಲ್ಲಿ ಚರಂಡಿ ನೀರು ಹರಿದರೂ ಕೇಳುವವರು ಇಲ್ಲವಾಗಿದೆ. ಬೀದಿ ದೀಪಗಳು ಕೆಟ್ಟು ಕಗ್ಗತ್ತಲು ಆವರಿಸಿದ್ದರೂ ಬೆಳಕು ಹರಿಸಲು ಅಧಿಕಾರಿಗಳೊಂದಿಗೆ ಕಾದಾಡಬೇಕಾದ ದುಸ್ಥಿತಿ ಜೀವಂತವಿದೆ. ಗುಡಿಸಲು ವಾಸಿಗಳಿಗೆ ಆಶ್ರಯ ಯೋಜನೆಯಡಿ ಸೂರು ಒದಗಿಸಲಾಗದೆ, ಮನೆಗಳು ಉಳ್ಳವರ ಪಾಲಾಗುತ್ತಿವೆ ಎಂಬುದು ಲಾಡ್ಲಾಪುರ, ಹಳಕರ್ಟಿ, ನಾಲವಾರ, ಕುಂಬಾರಹಳ್ಳಿ, ಕುಲಕುಂದಾ, ಸನ್ನತಿ, ಮಳಗ, ರಾವೂರ, ಕಮರವಾಡಿ, ಸೂಲಹಳ್ಳಿ, ಕರದಾಳ, ಅಳ್ಳೊಳ್ಳಿ, ದಂಡಗುಂಡ, ಬೆಳಗೇರಾ, ಕನಗನಹಳ್ಳಿ ಗ್ರಾಮಗಳ ಯುವಕರ ಆರೋಪವಾಗಿದೆ.
ಗೆಳೆಯರ ಗುಂಪಿನಲ್ಲಿ ಬಿರುಕು: ಗ್ರಾ.ಪಂ ಚುನಾವಣೆಗೆ ದಿನಾಂಕ ನಿಗದಿಯಾಗುತ್ತಿದ್ದಂತೆ ಸ್ಪರ್ಧಾ ಆಕಾಂಕ್ಷಿಗಳ ಪಟ್ಟಿ ಬೆಳೆಯುತ್ತಿದೆ. ಒಂದೊಂದು ವಾರ್ಡ್‌ಗಳಲ್ಲಿ ಹತ್ತಾರು ಜನರ ಮಧ್ಯೆ ಹಣಾಹಣಿ ಏರ್ಪಡುವ ಸಾಧ್ಯತೆ ಗೋಚರಿಸುತ್ತಿವೆ. ಕಳೆದ ಗ್ರಾ.ಪಂ ಚುನಾವಣೆಯಲ್ಲಿ ಕಾಂಗ್ರೆಸ್ ಅಥವಾ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾಗಿ ಗೆದ್ದವರು, ವಿಧಾನಸಭೆ ಚುನಾವಣೆ ವೇಳೆ ಬಿಜೆಪಿ ಪಾಳೆಯಕ್ಕೆ ಜಿಗಿದವರಿಗೆ ಈಗ ಕಣದಲ್ಲಿ ಎದುರಾಳಿಗಳು ಹೆಚ್ಚಾಗುತ್ತಿರುವುದು ತಲೆನೋವಾಗಿ ಪರಿಣಮಿಸಿದೆ. ಗೆಳೆಯರ ಗುಂಪಿನಲ್ಲಿ ಬಿರುಕು ಮೂಡುತ್ತಿವೆ. ಕುಟುಂಬ ಸದಸ್ಯರ ಒಗ್ಗಟ್ಟಿನಲ್ಲಿ ವೈಮನಸ್ಸಿನ ಅಲೆ ಮುನ್ನೆಲೆಗೆ ಬಂದಿದೆ. ಹಲವು ಬಿಕ್ಕಟ್ಟುಗಳ ನಡುವೆ ಗ್ರಾಮ ಸಂಘರ್ಷಕ್ಕೆ ವೇದಿಕೆ ಸಿದ್ಧವಾಗುತ್ತಿದೆ. ಹೊಸಬರೊಂದಿಗೆ ಹಳಬರೂ ಸ್ಪರ್ಧೆಗೆ ಮುಂದಾಗಿ ಅಗತ್ಯ ದಾಖಲಾತಿ ಸಿದ್ಧತೆಯಲ್ಲಿ ತೊಡಗಿದ್ದರಿಂದ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಕಣ ಹೊಸ ಹುರುಪು ಪಡೆದುಕೊಳ್ಳುವ ಲಕ್ಷಣಗಳಿವೆ.
–ಮಡಿವಾಳಪ್ಪ ಹೇರೂರ