Advertisement

ಗ್ರಾ.ಪಂ. ಚುನಾವಣೆ ಜಾಲತಾಣಗಳಲ್ಲಿ ಪ್ರಚಾರದ ಭರಾಟೆ

12:33 PM Dec 20, 2020 | Suhan S |

ಕುಂದಾಪುರ, ಡಿ. 19:  ಗ್ರಾಮೀಣ ಭಾಗದಲ್ಲಿ ಪಂಚಾಯತ್‌ ಚುನಾವಣೆಯ ಅಬ್ಬರ ಬಿರುಸಾಗಿದ್ದು, ಮೊದಲ ಹಂತದ ಚುನಾವಣೆಗೆ ಇನ್ನೆರಡೇ ದಿನಗಳು ಬಾಕಿ ಉಳಿದಿವೆ. ಬೈಂದೂರು ತಾಲೂಕಿನ 15 ಗ್ರಾ.ಪಂ.ಗಳಿಗೆ ಡಿ. 22ರಂದು ಮತದಾನ ನಡೆಯಲಿದೆ. ಪಂಚಾಯತ್‌ ಚುನಾವಣೆಯಲ್ಲಿ ಪ್ರತಿ ಬಾರಿ ಕಂಡು ಬರುವ ಮನೆ- ಮನೆ ಪ್ರಚಾರಕ್ಕಿಂತಲೂ ಈ ಬಾರಿ ಅಭ್ಯರ್ಥಿಗಳು ಪ್ರಚಾರಕ್ಕಾಗಿ ಸಾಮಾಜಿಕ ಜಾಲತಾಣಗಳ ಮೊರೆ ಹೋಗಿರುವುದು ಕಂಡು ಬರುತ್ತಿದೆ.

Advertisement

ಯುವಕರೇ ಸ್ಪರ್ಧಿಸಿರುವ ಕಡೆಗಳಲ್ಲಿ ಪ್ರಚಾರಕ್ಕಾಗಿ ಫೇಸ್‌ಬುಕ್‌, ವಾಟ್ಸ್‌ ಆ್ಯಪ್‌ ಗ್ರೂಪ್‌, ಟ್ವಿಟರ್‌ನಂತಹ ಸಾಮಾಜಿಕ ಜಾಲತಾಣಗಳ ಮೊರೆ ಹೋಗಿದ್ದಾರೆ. ಅವುಗಳ ಮೂಲಕ ಮತದಾರರ ಮನಸ್ಸು ಗೆಲ್ಲುವ ಪ್ರಯತ್ನ ನಿರಂತರವಾಗಿ ಮಾಡುತ್ತಿದ್ದಾರೆ.

ವಾಟ್ಸ್‌ಆ್ಯಪ್‌ ಮೂಲಕ ಶೇರ್‌ :

“ಈಗ ಬಹುತೇಕ ಎಲ್ಲರ ಬಳಿ ಸ್ಮಾರ್ಟ್‌ಫೋನ್‌ ಇದ್ದೇ ಇದೆ. ಹೆಚ್ಚಿನವರು ಯಾವುದಾದರೊಂದು ಜಾಲತಾಣಗಳನ್ನು ಬಳಸಿಯೇ ಬಳಸುತ್ತಾರೆ. ನಮ್ಮದೇ ಊರಿನ ಕೆಲವು ವಾಟ್ಸ್‌ಆ್ಯಪ್‌ ಗ್ರೂಪ್‌ಗ್ಳಿವೆ. ಅವುಗಳ ಮೂಲಕ ಸುಮಾರು ಜನರನ್ನು ತಲುಪಬಹುದು. ಕರಪತ್ರಗಳನ್ನು ಸಿದ್ಧಪಡಿಸಿ, ಇದರಲ್ಲಿಯೇ ಒಬ್ಬರಿಂದ ಒಬ್ಬರಿಗೆ ರವಾನಿಸಬಹುದು. ಮನೆ- ಮನೆಗೆ ಕರ ಪತ್ರ ಹಂಚುವುದರ ಬದಲು ಇದು ಬಹಳ ಸುಲಭ’ ಎನ್ನುತ್ತಾರೆ ಚುನಾವಣೆಗೆ ಸ್ಪರ್ಧಿಸಿರುವ ಯುವ ಅಭ್ಯರ್ಥಿಯೊಬ್ಬರು.

ಮನೆಮನೆ ಪ್ರಚಾರ ಶುರು :

Advertisement

ಬೈಂದೂರು ತಾಲೂಕಿನ ಎಲ್ಲ ಗ್ರಾಮಗಳಲ್ಲಿ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳು, ಅವರ ಬೆಂಬಲಿಗರು, ಮನೆಯವರು ಕಳೆದೊಂದು ವಾರದಿಂದ ಮನೆ – ಮನೆ ಪ್ರಚಾರ ಶುರು ಮಾಡಿದ್ದಾರೆ. ಕೆಲವೆಡೆಗಳಲ್ಲಿ ಮನೆ- ಮನೆ ಪ್ರಚಾರವು ಜೋರಾಗಿಯೇ ನಡೆಯುತ್ತಿದೆ. ಕಳೆದ ಬಾರಿ ಗೆದ್ದಿದ್ದ ಅಭ್ಯರ್ಥಿಗಳು ತಮ್ಮ ಅಭಿವೃದ್ಧಿ ಕಾರ್ಯವನ್ನು ಮುಂದಿಟ್ಟುಕೊಂಡು ಪ್ರಚಾರಕ್ಕಿಳಿದಿದ್ದರೆ, ಅವರ ಎದುರು ಸ್ಪರ್ಧಿಸಿರುವವರು ಇವರ ವೈಫಲ್ಯಗಳನ್ನು ಬೊಟ್ಟು ಮಾಡಿಕೊಂಡು ಮತ ಬೇಟೆಗೆ ಮುಂದಾಗಿದ್ದಾರೆ.

ಜಾಲತಾಣದಲ್ಲೇ ಪ್ರಣಾಳಿಕೆ :

ತಾವು ಪಂಚಾಯತ್‌ ಚುನಾವಣೆಗೆ ಉಮೇದುವಾರಿಕೆ ಸಲ್ಲಿಸಿದ್ದೇವೆ ಎಂಬುದನ್ನು ಮನವರಿಕೆ ಮಾಡಿಕೊಡುತ್ತಿರುವ ಯುವ ಸಮೂಹವು ಚುನಾವಣೆಯಲ್ಲಿ ಆಯ್ಕೆಯಾದರೆ ಗ್ರಾಮದ ಅಭಿವೃದ್ಧಿಗೆ ಯಾವೆಲ್ಲ ಕ್ರಮ ಕೈಗೊಳ್ಳುತ್ತೇವೆ, ಯಾವ ಯೋಜನೆಗಳನ್ನೆಲ್ಲ ಅನುಷ್ಠಾನಕ್ಕೆ ತರುತ್ತೇವೆ ಈ ರೀತಿಯ ಪ್ರಣಾಳಿಕೆಗಳನ್ನು ಜಾಲತಾಣಗಳಲ್ಲೇ ಹಂಚಿಕೊಳ್ಳುತ್ತಿದ್ದಾರೆ. ಕೆಲವರು ಕರಪತ್ರದ ರೀತಿ ಸಿದ್ಧಪಡಿಸಿ ಹಂಚಿದರೆ, ಮತ್ತೆ ಕೆಲವರು ಕಿರು ವೀಡಿಯೋವೊಂದನ್ನು ತಯಾರಿಸಿ ಅದರ ಮೂಲಕ ತಮ್ಮ ಸಂದೇಶವನ್ನು ಮತದಾರರಿಗೆ ರವಾನಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next