Advertisement

119 ಗ್ರಾಪಂಗಳಿಗೆ ಹಣಾಹಣಿ

03:14 PM Dec 01, 2020 | Suhan S |

ಯಾದಗಿರಿ: ರಾಜ್ಯ ಚುನಾವಣಾ ಆಯೋಗ ಗ್ರಾಪಂ ಚುನಾವಣೆಗೆ ದಿನಾಂಕ ಘೋಷಿಸಿದ್ದು, ಡಿ.22ರಂದು ಒಂದನೇ ಹಂತ ಮತ್ತು ಡಿ.27ರಂದು ಎರಡನೇ ಹಂತದಲ್ಲಿ ಚುನಾಯಣೆ ನಿಗದಿಯಾಗಿದೆ.

Advertisement

ಜಿಲ್ಲೆಯ 119 ಗ್ರಾಪಂಗಳಿಗೆ 2 ಹಂತದಲ್ಲಿ ಚುನಾವಣೆ ನಡೆಯಲಿದೆ. ಮೊದಲ ಹಂತದಲ್ಲಿ ಶಹಾಪುರ ತಾಲೂಕಿನ 24, ಸುರುಪುರನ 21 ಹಾಗೂ ಹುಣಸಗಿ ವ್ಯಾಪ್ತಿಯ 18 ಸೇರಿ ಒಟ್ಟು 63 ಗ್ರಾಪಂಗಳಿಗೆ ಮತ್ತು ಯಾದಗಿರಿಯ 22, ಗುರುಮಠಕಲ್‌ ವ್ಯಾಪ್ತಿಯ 17 ಹಾಗೂ ವಡಗೇರಾದ 17 ಸೇರಿ ಒಟ್ಟು 56 ಗ್ರಾಪಂಗಳಿಗೆ ಎರಡನೇ ಹಂತದಲ್ಲಿ ಚುನಾವಣೆ ನಡೆಯಲಿದೆ. ಜಿಲ್ಲಾಧಿ ಕಾರಿಗಳು ಮೊದಲ ಹಂತದ ಚುನಾವಣೆ ಡಿ.7ರಂದು, 2ನೇ ಹಂತಕ್ಕೆ ಡಿ.11ರಂದು ಅಧಿಸೂಚನೆ ಹೊರಡಿಸಲಿದ್ದಾರೆ.

ಮೊದಲ ಹಂತಕ್ಕೆ ನಾಮಪತ್ರ ಸಲ್ಲಿಕೆಗೆ ಡಿ.11 ಕೊನೆಯ ದಿನವಾಗಿದ್ದು, ಎರಡನೇ ಹಂತದ ನಾಮಪತ್ರಕ್ಕೆ ಡಿ.16 ಕೊನೆಯ ದಿನವಾಗಿದೆ. ಡಿ.12ರಂದು ಮೊದಲ ಹಂತ ಮತ್ತು ಡಿ.17ರಂದು ಎರಡನೇ ಹಂತದ ನಾಮಪತ್ರಗಳ ಪರಿಶೀಲನೆ ಜರುಗಲಿದೆ. ಡಿ.14 ಮತ್ತು ಡಿ.19 ಹಂತವಾಗಿ ಉಮೇದುವಾರಿಕೆ ಹಿಂತೆಗೆದುಕೊಳ್ಳುವ ದಿನವಾಗಿದೆ. ಮೊದಲ ಹಂತಕ್ಕೆ ಡಿ.22ರಂದು ಬೆಳಿಗ್ಗೆ 7ರಿಂದ ಸಂಜೆ 5ರ ವರೆಗೆ ಮತ್ತು ಎರಡನೇ ಹಂತಕ್ಕೆ ಡಿ.27ರಂದು ಮತದಾನ ನಡೆಯಲಿದೆ.

ಮರು ಮತದಾನ ಇದ್ದಲ್ಲಿ ಡಿ.24ರಂದು ಮೊದಲ ಹಂತ ಮತ್ತು ಡಿ.29ರಂದು ಎರಡನೇ ಹಂತದ ಮರು ಮತದಾನಕ್ಕೆ ದಿನ ನಿಗದಿಗೊಳಿಸಲಾಗಿದೆ. ಡಿ.30ರಂದು ಮೊದಲ ಹಂತದ ಮತ ಎಣಿಕೆ (ತಾಲೂಕು ಕೇಂದ್ರಗಳಲ್ಲಿ) ಎರಡನೇ ಹಂತದ ಎಣಿಕೆ ಡಿ.31ರಂದು ಜರುಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next