Advertisement

ಮೊದಲ ಹಂತಕ್ಕೆ 4699 ಉಮೇದುವಾರಿಕೆ

03:36 PM Dec 13, 2020 | Suhan S |

ಕೊಪ್ಪಳ: ಜಿಲ್ಲೆಯಲ್ಲಿ 73 ಗ್ರಾಪಂಗಳ 1321 ಸದಸ್ಯ ಸ್ಥಾನಗಳಿಗೆ ಘೋಷಣೆಯಾಗಿರುವ ಮೊದಲ ಹಂತದ ಚುನಾವಣೆಗೆ ನಾಮಪತ್ರ ಸಲ್ಲಿಸುವ ಅವಧಿ  ಡಿ. 11ರಂದು ಮುಗಿದಿದ್ದು, ಒಟ್ಟಾರೆ 4699 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.

Advertisement

ಹಳ್ಳಿಯ ಚುನಾವಣಾ ರಣಕಣ ರಂಗೇರಿದ್ದು, ಅಭ್ಯರ್ಥಿಗಳು ಖುಷಿ ಖುಷಿಯಿಂದಲೇ ಪ್ರಚಾರಕ್ಕಿಳಿದಿದ್ದಾರೆ. ಜಿಲ್ಲೆಯ ಯಾವ ಹಳ್ಳಿಯಲ್ಲೂ ಕೇಳಿದರೂ ಬರಿ ಚುನಾವಣಾ ವಿಷಯವೇ ಚರ್ಚೆಯಾಗುತ್ತಿದೆ. ಯಾರು ನಾಮಪತ್ರ ಕೊಟ್ಟರು, ಯಾರು ಅಭ್ಯರ್ಥಿಯಾದರು. ಯಾರು ಯಾವ ಪಕ್ಷದ ಬೆಂಬಲಿತ ಅಭ್ಯರ್ಥಿ ಎನ್ನುವುದೇ ಹೆಚ್ಚಾಗಿ ಚರ್ಚೆಯಾಗುತ್ತಿವೆ. ವಿಶೇಷವೆಂಬಂತೆ ಜಿಲ್ಲೆಯಲ್ಲಿ ಮೊದಲ ಹಂತದ ಚುನಾವಣೆಯಲ್ಲಿ ನಾಮಪತ್ರ ಸಲ್ಲಿಸುವ ಅವಧಿ ಶುಕ್ರವಾರವೇ ಅಂತಿಮವಾಗಿದ್ದರಿಂದ ಅಭ್ಯರ್ಥಿಗಳು ನಾ ಮುಂದು ತಾ ಮುಂದೆಂದು ಪ್ರತಿಷ್ಠೆಯನ್ನೇ ಪಣಕ್ಕಿಟ್ಟು ನಾಮಪತ್ರ ಸಲ್ಲಿಸಿದ್ದಾರೆ.

1321 ಸ್ಥಾನಕ್ಕೆ 4699 ನಾಮಪತ್ರಗಳು: ಜಿಲ್ಲೆಯಲ್ಲಿ ಮೊದಲ ಹಂತದ 73 ಗ್ರಾಪಂಗಳ 1321 ಸದಸ್ಯ ಸ್ಥಾನಗಳಿಗೆ ಜಿಲ್ಲೆಯಲ್ಲಿ 4699 ಆಕಾಂಕ್ಷಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಈ ಪೈಕಿ ಕೊಪ್ಪಳ ತಾಲೂಕಿನ 38 ಗ್ರಾಪಂಗಳ 736 ಸದಸ್ಯ ಸ್ಥಾನಕ್ಕೆ 2880 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರೆ, ಯಲಬುರ್ಗಾ ತಾಲೂಕಿನ 20 ಗ್ರಾಪಂಗಳ 345 ಸದಸ್ಯ ಸ್ಥಾನಗಳಿಗೆ 1086 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಇನ್ನೂ ಕುಕನೂರು 15 ಗ್ರಾಪಂಗಳ 240 ಸದಸ್ಯ ಸ್ಥಾನಕ್ಕೆ 733 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಒಟ್ಟಾರೆ 1321 ಗ್ರಾಪಂ ಸದಸ್ಯ ಸ್ಥಾನಕ್ಕೆ 4699 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.

ಕೊಪ್ಪಳದಲ್ಲೇ ಹೆಚ್ಚು ನಾಮಪತ್ರ: ಕೊಪ್ಪಳ ತಾಲೂಕಿನಲ್ಲಿಯೇ ಅತಿ ಹೆಚ್ಚು ನಾಮಪತ್ರ ಸಲ್ಲಿಸಿಕೆಯಾಗಿರುವುದು ಗಮನಾರ್ಹ ಸಂಗತಿ.ಬಿಜೆಪಿ ಬೆಂಬಲಿತ, ಕಾಂಗ್ರೆಸ್‌ ಬೆಂಬಲಿತ, ಜೆಡಿಎಸ್‌ ಬೆಂಬಲಿತ ಎನ್ನುವಂತೆ ನಾಮಪತ್ರ ಸಲ್ಲಿಕೆಯಾಗಿದ್ದರೆ, ಇದರ ಹೊರತಾಗಿಯೂ ಬೆಂಬಲಿತರಲ್ಲಿ ಅವಕಾಶ ಸಿಗದೇ ಇದ್ದವರು ಬಂಡಾಯದ ಬಾವುಟ ಹಾರಿಸಿ ಸ್ವ ಪ್ರತಿಷ್ಠೆಯಿಂದಲೇ ನಾಮಪತ್ರ ಸಲ್ಲಿಸಿ ಪ್ರಚಾರ ಕಾರ್ಯಕ್ಕೆ ಇಳಿದಿದ್ದಾರೆ.

ಆದರೆ ಇನ್ನೂ ಚುನಾವಣಾ ಅಧಿಕಾರಿಗಳು ಅಭ್ಯರ್ಥಿಗಳು ಕೊಟ್ಟಿರುವ ನಾಮಪತ್ರಗಳನ್ನು ಪರಿಶೀಲನೆ ಮಾಡುತ್ತಿದ್ದು, ಅವುಗಳು ಕ್ರಮಬದ್ಧವಾಗಿ ಇವೆಯೋ? ಇಲ್ಲವೋ ಎನ್ನುವ ಕುರಿತು ಗಮನಿಸುತ್ತಿದ್ದಾರೆ. ಒಂದು ವೇಳೆಕ್ರಮಬದ್ಧವಾಗಿ ಇಲ್ಲದಿದ್ದರೆ ನಾಮಪತ್ರಗಳೇ ತಿರಸ್ಕೃತವಾಗಲಿವೆ.

Advertisement

ಸದ್ದಿಲ್ಲದೇ ಪ್ರಚಾರ: ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುತ್ತಿದ್ದಂತೆ ಸದ್ದಿಲ್ಲದೇ ಪ್ರಚಾರ ಕಾರ್ಯಕ್ಕೆ ಇಳಿದು ನಮಗೆ ಮತ ನೀಡಿ… ನಮಗೆ ಮತ ನೀಡಿ.. ಎಂದು ತಮ್ಮ ವಾರ್ಡ್‌ ಮತದಾರರ ಮನವೊಲಿಸುತ್ತಿದ್ದಾರೆ. ಇನ್ನು ಕೆಲವರು ನಾಮಪತ್ರ ದೃಢವಾದ ಬಳಿಕವೇ ಪ್ರಚಾರಕ್ಕೆ ಇಳಿಯುವ ಯೋಚನೆಯಲ್ಲಿದ್ದಾರೆ.ಇದಲ್ಲದೇ ಈ ಬಾರಿ ಗ್ರಾಪಂ ಚುನಾವಣಾ ಪ್ರಚಾರಕ್ಕೆ ಸಾಮಾಜಿಕ ಜಾಲತಾಣದ ಮೂಲಕವೂ ಪ್ರಚಾರ ನಡೆಯುತ್ತಿದ್ದು, ತಮ್ಮದೇ ವಿಚಾರಗಳನ್ನು ಪ್ರಸ್ತಾಪಿಸಿ ವಾರ್ಡ್‌ ಸಮಸ್ಯೆ ಪರಿಹಾರ ಮಾಡುವೆ ನನಗೆ ಮತ ನೀಡಿ ಎಂದೆನ್ನುತ್ತಿದ್ದಾರೆ

Advertisement

Udayavani is now on Telegram. Click here to join our channel and stay updated with the latest news.

Next