Advertisement

“ಅವಧಿ ಮುಗಿದರೂ ಕೋವಿಡ್ ಕಾರ್ಯಪಡೆಗೆ ಗ್ರಾಮ ಪಂಚಾಯತ್‌ ಸದಸ್ಯರೇ ಮುಖ್ಯಸ್ಥರು’

11:49 PM Jul 08, 2020 | Sriram |

ಕೋಟ: ಗ್ರಾ.ಪಂ.ಗಳ ಆಡಳಿತಾವಧಿ ಮುಗಿದಿರಬಹುದು, ಆದರೆ ಈಗಾಗಲೇ ರಚನೆಗೊಂಡ ಕೋವಿಡ್‌ ಕಾರ್ಯಪಡೆಗೆ ಅಧ್ಯಕ್ಷ, ಸದಸ್ಯರೇ ಮುಖ್ಯಸ್ಥರಾಗಿ ಮುಂದು ವರಿಯಲಿದ್ದಾರೆ ಎಂದು ಮೀನುಗಾರಿಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

Advertisement

ಅವರು ಜು. 8ರಂದು ಕೋಟದಲ್ಲಿ ನಡೆದ ಕೋಟತಟ್ಟು, ಕೋಟ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಕೋವಿಡ್‌ ಕಾರ್ಯಪಡೆ ಮುಖ್ಯಸ್ಥರು ಹಾಗೂ ಆಶಾ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.

ನಗರ ಪ್ರದೇಶಕ್ಕೂ ಕಾರ್ಯಪಡೆ
ಗ್ರಾಮ ಪಂಚಾಯತ್‌ ಮಾದರಿಯಲ್ಲೇ ಮುಂದಿನ ದಿನಗಳಲ್ಲಿ ನಗರಾಡಳಿತ ಸಂಸ್ಥೆಗಳಲ್ಲೂ ಕೋವಿಡ್‌ ಕಾರ್ಯಪಡೆ ರಚಿಸಿ ಇದರ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲು ಸರಕಾರ ತೀರ್ಮಾನ ಕೈಗೊಂಡಿದೆ ಎಂದವರು ತಿಳಿಸಿದರು.

14ನೇ ಹಣಕಾಸು ನಿಧಿ ಬಳಕೆ ಮಾಡಿಕೊಳ್ಳಿ
ಕಂಟೈನ್ಮೆಂಟ್‌ ಝೋನ್‌ ಎಂದು ಘೋಷಿಸಲ್ಪಟ್ಟ ಮನೆಗಳಿಗೆ ಸ್ಥಳೀಯಾ ಡಳಿತದ ವತಿಯಿಂದ ದಿನಬಳಕೆಯ ಸಾಮಗ್ರಿಗಳನ್ನು ಪೂರೈಕೆ ಮಾಡಬೇಕಾದ ಅನಿವಾರ್ಯ ಹಲವು ಕಡೆಗಳಲ್ಲಿ ಇದ್ದು ಆ ಸಂದರ್ಭದಲ್ಲಿ 14ನೇ ಹಣಕಾಸು ನಿಧಿಯ ಅನುದಾನವನ್ನು ಬಳಕೆ ಮಾಡಿಕೊಳ್ಳಿ ಎಂದು ಸಚಿವರು ಸಲಹೆ ನೀಡಿದರು.

ಸಾಮಾನ್ಯ ಜ್ವರಕ್ಕೆ ಚಿಕಿತ್ಸೆ ನೀಡಿ
ಮಳೆಗಾಲದಲ್ಲಿ ಜ್ವರ, ಕೆಮ್ಮು ಮಾಮೂಲಿಯಾಗಿ ಕಾಣಿಸಿಕೊಳ್ಳುತ್ತದೆ. ಆದರೆ ಇದೀಗ ಕೋವಿಡ್‌ ಸಮಸ್ಯೆ ಇರುವುದರಿಂದ ಸಾಮಾನ್ಯ ಜ್ವರಕ್ಕೆ ಚಿಕಿತ್ಸೆ ಇಲ್ಲದಂತಾಗಿದೆ. ಆದ್ದರಿಂದ ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಸಾಮಾನ್ಯ ಆರೋಗ್ಯ ಸಮಸ್ಯೆಗೆ ಚಿಕಿತ್ಸೆ ನೀಡುವಂತಾಗಬೇಕು ಎನ್ನುವ ಮನವಿ ಕೇಳಿ ಬಂತು.

Advertisement

ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆ, ಪೊಲೀಸರು, ಸ್ಥಳೀಯಾಡಳಿತ ಜತೆಯಾಗಿ ಸಮನ್ವಯದಿಂದ ಕಾರ್ಯನಿರ್ವಹಿಸಿದರೆ ಕೊರೊನಾನಿಂದ ದೂರ ವಿರಲು ಸಾಧ್ಯವಿದೆ. ಜನರಲ್ಲಿ ಧೈರ್ಯ ತುಂಬುವ ಕೆಲಸವಾಗಬೇಕು. ಸೀಲ್‌ಡೌನ್‌, ಕ್ವಾರಂಟೈನ್ ಉಲ್ಲಂಘನೆ ಮಾಡಿದಲ್ಲಿ ಅವರ ವಿರುದ್ಧ ಕಾನೂನು ಕ್ರಮ ತೆಗೆದುಕೊಂಡಲ್ಲಿ ಇತರರಿಗೂ ಪಾಠ ವಾಗುತ್ತದೆ ಎಂದರು.

ಬ್ರಹ್ಮಾವರ ತಹಶೀಲ್ದಾರ್‌ ಕಿರಣ್‌ ಗೋರಯ್ಯ ಮಾತನಾಡಿ, ಪಾಸಿಟಿವ್‌ ಬಂದ ವ್ಯಕ್ತಿಯ ಪ್ರಾಥಮಿಕ ಸಂಪರ್ಕ ಇದ್ದವರಿಗೂ ಕ್ವಾರಂಟೈನ್ ಮತ್ತು ಮನೆ ಹಾಗೂ ಆ ಪರಿಸರವನ್ನು ಸೀಲ್‌ಡೌನ್‌ ಮಾಡಲಾಗುತ್ತಿದೆ. ಇದಕ್ಕೆ ಸಹಕಾರ ಅಗತ್ಯ ಎಂದರು.

ಗ್ರಾಮಸ್ಥರ ಪರವಾಗಿ ಭುಜಂಗ ಗುರಿಕಾರ, ಸಂತೋಷ್‌ ಪ್ರಭು, ದಿನೇಶ್‌ ಗಾಣಿಗ ಕೋಟ ಹಲವು ಮನವಿಗಳನ್ನು ಮುಂದಿಟ್ಟರು.

ಡಿವೈಎಸ್‌ಪಿ ಜಯಶಂಕರ್‌, ಗೀತಾನಂದ ಫೌಂಡೇಶನ್‌ ಪ್ರವರ್ತಕ ಆನಂದ್‌ ಸಿ. ಕುಂದರ್‌, ಬ್ರಹ್ಮಾವರ ವೃತ್ತ ನಿರೀಕ್ಷಕ ಅನಂತ ಪದ್ಮನಾಭ, ಕೋಟ ಠಾಣಾಧಿಕಾರಿ ಸಂತೋಷ್‌, ಕೋಟ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾ ಧಿಕಾರಿ ಡಾ| ವಿಶ್ವನಾಥ, ಕೋಟ, ಕೋಟತಟ್ಟು ಆಡಳಿತಾಧಿಕಾರಿ ಡಾ| ಅರುಣ್‌ ಕುಮಾರ್‌ ಮತ್ತಿತರರು ಉಪಸ್ಥಿತರಿದ್ದರು.

ಸಚಿವರ ಆಪ್ತ ಸಹಾಯಕ ಹರೀಶ್‌ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಪಡಿತರ ರೂಪದಲ್ಲಿ ರೋಗ ನಿರೋಧಕ ಮಾತ್ರೆ ವಿತರಿಸಿ ಕೋವಿಡ್‌ ನಿಯಂತ್ರಿಸಲು ವ್ಯಕ್ತಿಯ ದೇಹದಲ್ಲಿ ರೋಗ ನಿರೋಧಕ ಶಕ್ತಿ ಅತ್ಯಗತ್ಯ.

ಆದರೆ ರೋಗ ನಿರೋಧಕ ಮಾತ್ರೆಗಳು, ಔಷಧಗಳ ಬಗ್ಗೆ ಜನಸಾಮಾನ್ಯರಿಗೆ ಮಾಹಿತಿ ಇರುವುದಿಲ್ಲ. ಆದ್ದರಿಂದ ಪ್ರತಿಯೊಬ್ಬರಿಗೂ ಪಡಿತರ ವಸ್ತುಗಳನ್ನು ವಿತರಿಸುವ ಮಾದರಿಯಲ್ಲೇ ರೋಗನಿರೋಧಕ ಔಷಧ ವಿತರಿಸಲು ಸರಕಾರ ಕ್ರಮ ಕೈಗೊಳ್ಳಬೇಕು ಎಂದು ಕೋಟ ಗ್ರಾ.ಪಂ. ಮಾಜಿ ಸದಸ್ಯ ಚಂದ್ರ ಪೂಜಾರಿ ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next