Advertisement

ಮಕ್ಕಳ ಹಕ್ಕುಗಳ ರಕ್ಷಣೆಗೆ ಗ್ರಾಮಸಭೆಗಳು ಸನ್ನದ್ಧ

11:48 AM Nov 11, 2021 | Team Udayavani |

ಕೋವಿಡ್‌ ಕಾರಣದಿಂದ ಸದ್ಯ ಗುಂಪು ಸೇರುವುದು ಆರೋಗ್ಯಕರವಲ್ಲ ಎಂಬುದನ್ನು ಗಮನಿಸಿ ಇಲಾಖೆಯು ಮಕ್ಕಳ ಕೋರಿಕೆ ಪತ್ರವನ್ನು ಮುದ್ರಿಸಿ ಶಾಲೆ ಮತ್ತು ಅಂಗನವಾಡಿ ಹಾಗೂ ಇನ್ನಿತರ ಪ್ರದೇಶಗಳಲ್ಲಿ ಮಕ್ಕಳಿಗೆ ದೊರೆಯುವಂತೆ ಮಾಡಲಿದೆ. ಮಕ್ಕಳು ತಮ್ಮ ಯಾವುದೇ ಪ್ರಶ್ನೆ, ಕೋರಿಕೆ, ದೂರು, ಸಮಸ್ಯೆಗಳಿದ್ದಲ್ಲಿ ಅದರಲ್ಲಿ ಬರೆದು ಪಂಚಾಯತ್‌ಗೆ ಸಲ್ಲಿಸಬಹು ದಾಗಿದೆ. ಗ್ರಾಮ ಪಂಚಾಯತ್‌ ವ್ಯಾಪ್ತಿಯ ಅಂಗನವಾಡಿ, ಶಾಲೆ, ಹಾಲಿನ ಡೇರಿ, ಬ್ಯಾಂಕ್‌, ಅಂಚೆ ಕಚೇರಿ ಹಾಗೂ ಇನ್ನಿತರ ಸ್ಥಳಗಳಲ್ಲಿ ಮಕ್ಕಳ ಧ್ವನಿ ಬಾಕ್ಸ್‌ ಗಳನ್ನು ಇಡುವ ವ್ಯವಸ್ಥೆ ಮಾಡಿದ್ದು, ಅಲ್ಲೂ ಮಕ್ಕಳು ಅಹವಾಲುಗಳನ್ನು ಸಲ್ಲಿಸಬಹುದಾಗಿದೆ.

Advertisement

ಈ ದೇಶದ ಪ್ರತಿಯೊಂದು ಮಗುವಿನ ಹಿತ ಕಾಯುವ ನಿಟ್ಟಿನಲ್ಲಿ ನಮ್ಮ ಸಂವಿಧಾನ ಮಕ್ಕಳಿಗೆ ವಿಶೇಷ ಹಕ್ಕುಗಳನ್ನು ಕೊಟ್ಟಿದೆ. ಆ ಎಲ್ಲ ಹಕ್ಕುಗಳನ್ನು ಬದುಕುವ ಹಕ್ಕು, ವಿಕಾಸ ಹೊಂದುವ ಹಕ್ಕು, ರಕ್ಷಣೆ ಹೊಂದುವ ಹಕ್ಕು ಹಾಗೂ ಭಾಗವಹಿಸುವಿಕೆಯ ಹಕ್ಕು ಎಂಬುದಾಗಿ ವರ್ಗೀಕರಿಸಬಹುದು. ಈ ಎಲ್ಲ ಹಕ್ಕುಗಳ ರಕ್ಷಣೆ ಮಾಡುವುದು ಹಾಗೂ ಆ ಹಕ್ಕುಗಳನ್ನು ಹೊಂದಲು ಅಗತ್ಯವಾದ ವಾತಾವರಣವನ್ನು ರೂಪಿಸುವುದು ಸರಕಾರ ಮತ್ತು ಸಮಾಜದ ಜವಾಬ್ದಾರಿ.

ಅದರಲ್ಲೂ ವಿಶೇಷವಾಗಿ ಮಕ್ಕಳು ತಮ್ಮ ಅನಿಸಿಕೆ, ಅಭಿಪ್ರಾಯಗಳನ್ನು, ಕುಂದುಕೊರತೆಗಳನ್ನು ಹಂಚಿ ಕೊಳ್ಳಲು ಹಾಗೂ ತಮ್ಮ ಕುರಿತಾದ ತೀರ್ಮಾನ ತೆಗೆದು ಕೊಳ್ಳುವಾಗ ಅದರಲ್ಲಿ ಭಾಗಿಯಾಗಲು ವೇದಿಕೆ ಸೃಷ್ಟಿಸು ವುದು ಬಹಳ ಮುಖ್ಯ. ಹೀಗೆ ಆಡಳಿತ ಮತ್ತು ಪ್ರಜಾ ಪ್ರಭುತ್ವ ವ್ಯವಸ್ಥೆಯಲ್ಲಿ ಮಕ್ಕಳನ್ನು ಭಾಗಿಯಾಗಿಸಿ ಕೊಳ್ಳು ವುದರಿಂದ ಅವರ ಭಾಗವಹಿಸುವ ಹಕ್ಕನ್ನು ಪೂರೈಸಿದಂತಾಗುತ್ತದೆ. ಈ ಹಕ್ಕು ಪೂರೈಕೆಯಾದರೆ ಮಕ್ಕಳಿಗೆ ಉಳಿದ ತಮ್ಮ ಹಕ್ಕುಗಳನ್ನು ಪಡೆಯಲು ಮತ್ತಷ್ಟು ಸಾಧ್ಯತೆಗಳು ತೆರೆದುಕೊಳ್ಳುತ್ತವೆ.

ಈ ನಿಟ್ಟಿನಲ್ಲಿ ಕರ್ನಾಟಕ ಸರಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯ ಮುಖಾಂತರ 2006ರಿಂದ ರಾಜ್ಯದ ಎಲ್ಲ ಗ್ರಾಮ ಪಂಚಾಯತ್‌ಗಳು ಪ್ರತಿ ವರ್ಷ ನವೆಂಬರ್‌ ತಿಂಗಳಲ್ಲಿ ಕಡ್ಡಾ ಯವಾಗಿ ಮಕ್ಕಳ ಹಕ್ಕುಗಳ ಗ್ರಾಮ ಸಭೆ ನಡೆಸುವಂತೆ ಕ್ರಮಕೈಗೊಂಡಿದೆ. ದೇಶದಲ್ಲೇ ಮೊದಲ ಬಾರಿಗೆ ತರಲಾದ ಈ ವಿನೂತನ ಕ್ರಮವು ಗ್ರಾಮೀಣ ಮಕ್ಕಳ ಹಕ್ಕುಗಳ ರಕ್ಷಣೆಯಲ್ಲಿ ಮಹತ್ವದ ಮೈಲಿಗಲ್ಲಾಗಿದೆ.

ಕೋವಿಡ್‌ ಕರಾಳ ಛಾಯೆಯ ನಡುವೆಯೇ ಈ ವರ್ಷ ಕೂಡ ಮಕ್ಕಳ ಹಕ್ಕುಗಳ ಗ್ರಾಮ ಸಭೆಗಳನ್ನು ನಡೆಸಲು ಇಲಾಖೆ ಸಕಲ ಸಿದ್ಧತೆ ಮಾಡಿಕೊಂಡಿದೆ. ಕಳೆದ ಎರಡು ವರ್ಷಗಳಿಂದ ಮುಚ್ಚಿದ್ದ ಶಾಲೆಗಳು ಈಗ ಪ್ರಾರಂಭವಾಗಿವೆ. ಈ ಎರಡು ವರ್ಷಗಳ ಕೊರೊನಾ ಹಾವಳಿಯಲ್ಲಿ ಮಕ್ಕಳು ಅನುಭವಿಸಿದ ಸಮಸ್ಯೆ-ಸವಾಲುಗಳನ್ನು ಮಕ್ಕಳ ಹಕ್ಕುಗಳ ಗ್ರಾಮಸಭೆಗಳ ಮೂಲಕ ಆಲಿಸಲು ರಾಜ್ಯದ ಎಲ್ಲ ಗ್ರಾಮ ಪಂಚಾಯತ್‌ಗಳು ಸನ್ನದ್ಧವಾಗಿವೆ. ಈ ಸಂಬಂಧ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯು ನವೆಂಬರ್‌ 14ರಿಂದ 30ನೇ ತಾರೀಖೀನ ಒಳಗೆ ಮಕ್ಕಳ ಗ್ರಾಮಸಭೆಗಳನ್ನು ನಡೆಸಲು ಸುತ್ತೋಲೆ ಹೊರಡಿಸಿದೆ. ಸದರಿ ಸುತ್ತೋಲೆಯಲ್ಲಿ ಮಕ್ಕಳ ಹಕ್ಕುಗಳ ಗ್ರಾಮಸಭೆಗಳನ್ನು ನಡೆಸಬೇಕಾದ ವಿಧಾನಗಳ ಬಗ್ಗೆ ವಿವರಿಸಲಾಗಿದೆ.

Advertisement

ಮಕ್ಕಳ ಹಕ್ಕುಗಳ ಗ್ರಾಮ ಸಭೆಯ ಸುತ್ತೋಲೆಯ ಮುಖ್ಯಾಂಶಗಳು
ಗ್ರಾಮ ಪಂಚಾಯತ್‌ನ ಮಟ್ಟದಲ್ಲಿ ನಡೆಯುವ ಮಕ್ಕಳ ಎಲ್ಲ ಕಾರ್ಯ ಚಟುವಟಿಕೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಲು ಮತ್ತು ಮೇಲಿcಚಾರಣೆ ನಡೆಸಲು ಹಾಗೂ ಮಕ್ಕಳ ದನಿಗಳನ್ನು ಆಲಿಸಲು ಪ್ರತೀ ಗ್ರಾಮ ಪಂಚಾಯತ್‌ ತಮ್ಮ ಶಿಕ್ಷಣ ಕಾರ್ಯ ಪಡೆಯಲ್ಲಿನ ಒಬ್ಬ ವ್ಯಕ್ತಿಯನ್ನು ಬಾಲಮಿತ್ರ ಎಂದು ಘೋಷಿಸಬೇಕಿದೆ. ಮಕ್ಕಳು ಮತ್ತು ಮಕ್ಕಳ ಪರವಾದ ವಯಸ್ಕರು ಆಯಾ ಪಂಚಾಯತ್‌ ವ್ಯಾಪ್ತಿಯಲ್ಲಿ ಮಕ್ಕಳಿಗಿರುವ ಯಾವುದೇ ಸಮಸ್ಯೆಯನ್ನು ಗುರುತಿಸಿ ಬಾಲಮಿತ್ರರ ಗಮನಕ್ಕೆ ತರಬಹುದಾಗಿದೆ. ಅವರನ್ನು ನೇರವಾಗಿ ಭೇಟಿ ಮಾಡಬಹುದು, ಕರೆ ಮಾಡಿ ಮಾತನಾಡಬಹುದು ಅಥವಾ ವಾಟ್ಸ್‌ಆ್ಯಪ್‌ ಮೂಲಕವೂ ತಮ್ಮ ಕೋರಿಕೆಗಳನ್ನು ಸಲ್ಲಿಸಬಹುದಾದ ಅವಕಾಶವನ್ನು ಇಲಾಖೆ ಮಾಡಿಕೊಟ್ಟಿದೆ.

ಕೋವಿಡ್‌ ಕಾರಣದಿಂದ ಸದ್ಯ ಗುಂಪು ಸೇರುವುದು ಆರೋಗ್ಯಕರವಲ್ಲ ಎಂಬುದನ್ನು ಗಮನಿಸಿ ಇಲಾಖೆಯು ಮಕ್ಕಳ ಕೋರಿಕೆ ಪತ್ರವನ್ನು ಮುದ್ರಿಸಿ ಶಾಲೆ ಮತ್ತು ಅಂಗನವಾಡಿ ಹಾಗೂ ಇನ್ನಿತರ ಪ್ರದೇಶಗಳಲ್ಲಿ ಮಕ್ಕಳಿಗೆ ದೊರೆಯುವಂತೆ ಮಾಡಲಿದೆ. ಮಕ್ಕಳು ತಮ್ಮ ಯಾವುದೇ ಪ್ರಶ್ನೆ, ಕೋರಿಕೆ, ದೂರು, ಸಮಸ್ಯೆಗಳಿದ್ದಲ್ಲಿ ಅದರಲ್ಲಿ ಬರೆದು ಪಂಚಾಯತ್‌ಗೆ ಸಲ್ಲಿಸಬಹು ದಾಗಿದೆ. ಗ್ರಾಮ ಪಂಚಾಯತ್‌ ವ್ಯಾಪ್ತಿಯ ಅಂಗನವಾಡಿ, ಶಾಲೆ, ಹಾಲಿನ ಡೇರಿ, ಬ್ಯಾಂಕ್‌, ಅಂಚೆ ಕಚೇರಿ ಹಾಗೂ ಇನ್ನಿತರ ಸ್ಥಳಗಳಲ್ಲಿ ಮಕ್ಕಳ ಧ್ವನಿ ಬಾಕ್ಸ್‌ಗಳನ್ನು ಇಡುವ ವ್ಯವಸ್ಥೆ ಮಾಡಿದ್ದು, ಅಲ್ಲೂ ಮಕ್ಕಳು ಅಹವಾಲುಗಳನ್ನು ಸಲ್ಲಿಸಬಹುದಾಗಿದೆ.

ಇದನ್ನೂ ಓದಿ:ಸಕಲೇಶಪುರ : ಬೈಕ್ ಗಳ ನಡುವೆ ಡಿಕ್ಕಿ, ನಾಲ್ವರಿಗೆ ಗಾಯ, ಇಬ್ಬರ ಪರಿಸ್ಥಿತಿ ಗಂಭೀರ

ಈ ಬಾಕ್ಸ್‌ನಲ್ಲಿ ಮಕ್ಕಳ ಕೋರಿಕೆ ಪತ್ರಗಳನ್ನು ಹಾಕಬಹುದು ಇಲ್ಲವೇ ಸಾಮಾನ್ಯ ಕಾಗದದ ಮೇಲೂ ತಮ್ಮ ಸಮಸ್ಯೆಗಳನ್ನು ಬರೆದು ಹಾಕಬಹುದಾಗಿದೆ. ಬಾಲಮಿತ್ರರು ಪ್ರತೀ ಐದಿನೈದು ದಿನಗಳಿಗೊಮ್ಮೆ ಮಕ್ಕಳದನಿ ಬಾಕ್ಸ್‌ನಲ್ಲಿ ಹಾಕಿರುವ ಆಹವಾಲುಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಿದ್ದಾರೆ. ಇಷ್ಟು ವರ್ಷ ಪಂಚಾಯತ್‌ ವ್ಯಾಪ್ತಿಯಲ್ಲಿ ಒಂದು ಮಕ್ಕಳ ಹಕ್ಕುಗಳ ಗ್ರಾಮ ಸಭೆ ಮಾತ್ರ ನಡೆಯುತ್ತಿತ್ತು. ಈ ವರ್ಷ ಅದನ್ನು ಮೊದಲು ವಾರ್ಡ್‌ ಮಟ್ಟದ್ಲಲ್ಲಿ ನಡೆಸಿ ಆನಂತರ ಪ್ರತೀ ವಾರ್ಡ್‌ ನಿಂದ ಎರಡೆರಡು ಮಕ್ಕಳನ್ನು ಆಯ್ಕೆ ಮಾಡಿ ಅವರನ್ನು ಒಳಗೊಂಡ ಗ್ರಾಮ ಪಂಚಾಯತ್‌ ಮಟ್ಟದ ಮಕ್ಕಳ ಹಕ್ಕುಗಳ ಗ್ರಾಮ ಸಭೆ ನಡೆಸಲು ಉದ್ದೇ ಶಿಸಲಾಗಿದೆ. ಇದರಲ್ಲಿ ಕೋವಿಡ್‌ ಮಾರ್ಗಸೂಚಿಯನ್ನು ಅಳವಡಿಸಿಕೊಂಡು ಮಕ್ಕಳ ರಕ್ಷಣೆಗೆ ಅಗತ್ಯವಾದ ಕ್ರಮಗಳನ್ನು ಪಾಲಿಸಿಕೊಂಡು ಸಭೆ ನಡೆಸುವಂತೆ ಇಲಾಖೆ ಆದೇಶಿಸಿದೆ.

ಪಂಚಾಯತ್‌ನವರು ಕೇವಲ ಮಕ್ಕಳ ಸಭೆ ನಡೆಸುತ್ತಾರೆ ಅಷ್ಟೇ, ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎಂಬ ಅರೋಪ ಕೇಳಿ ಬರುತ್ತಿತ್ತು. ಇಲಾಖೆ ಇದನ್ನು ಗಂಭೀರವಾಗಿ ಪರಿ ಗಣಿಸಿ ಹಿಂದಿನ ವರ್ಷ ನಡೆಸಿದ ಸಭೆಯ ಅನುಪಾಲನ ವರದಿಯನ್ನು ಇಲಾಖೆಗೆ ಸಲ್ಲಿಸಲು ಮತ್ತು ಈ ವರ್ಷದ ಗ್ರಾಮಸಭೆಯ ಅನಂತರ ಮಕ್ಕಳ ಸವಾಲುಗಳನ್ನು ಬಗೆಹರಿಸಿ ಪ್ರಗತಿ ವರದಿಯನ್ನು ಪಂಚತಂತ್ರದಲ್ಲಿ ಅಳವಡಿಸುವಂತೆ ಆದೇಶ ಹೊರಡಿಸಿದೆಯಲ್ಲದೆ ನಿಗದಿತ ನಮೂನೆಯನ್ನೂ ಕೂಡ ನೀಡಿದೆ.

ಒಟ್ಟಾರೆಯಾಗಿ ಈ ಮೇಲಿನ ಎಲ್ಲ ವಿಧಾನಗಳ ಮೂಲಕ ಪಂಚಾಯತ್‌ ವ್ಯಾಪ್ತಿಯ ಎಲ್ಲ ಮಕ್ಕಳ ಸಮಸ್ಯೆ ಸವಾಲುಗಳನ್ನು ಆಲಿಸುವ ಮತ್ತು ಅದಕ್ಕೆ ಸಕಾರಾತ್ಮಕವಾಗಿ ಪ್ರತಿಸ್ಪಂದಿಸುವ ಕೆಲಸವನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಮಾಡಲಿದೆ.
ಈ ಪ್ರಕ್ರಿಯೆಯು ಮಕ್ಕಳಿಗೆ ತಮ್ಮ ಹಕ್ಕುಗಳನ್ನು ಪಡೆದುಕೊಳ್ಳಲು ಸಹಾಯ ಮಾಡುವುದಲ್ಲದೇ ಪ್ರಜಾಪ್ರಭುತ್ವ ಮತ್ತು ಆಡಳಿತ ಪ್ರಕ್ರಿಯೆಯಲ್ಲಿ ನೇರವಾಗಿ ಭಾಗಿಯಾಗುವ ಅವಕಾಶ ಕಲ್ಪಿಸಿಕೊಡುತ್ತದೆ. ಈ ಅನುಭವ ಅವರನ್ನು ಭವಿಷ್ಯದಲ್ಲಿ ಕ್ರಿಯಾಶೀಲ ಹಾಗೂ ಜವಾಬ್ದಾರಿಯುತ ನಾಗರಿಕರಾಗುವಂತೆ ರೂಪಿಸುತ್ತದೆ. ಇಲಾಖೆಯ ಈ ಮಹದುದ್ದೇಶ ಈಡೇರಬೇಕೆಂದಲ್ಲಿ ತಳಮಟ್ಟದ ಅಧಿ ಕಾರಿಗಳು, ಸಾರ್ವಜನಿಕರು, ಮಕ್ಕಳಿಗೆ ಸಂಬಂಧಿಸಿದ ವಿವಿಧ ಇಲಾಖೆಯ ಸಿಬ್ಬಂಗಳು, ಸ್ಥಳೀಯ ಸಂಘ ಸಂಸ್ಥೆಗಳು ಹಾಗೂ ಮಕ್ಕಳು ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕಿದೆ. ಬನ್ನಿ ನಮ್ಮ ನಮ್ಮ ಗ್ರಾಮ ಪಂಚಾಯತ್‌ಗಳಲ್ಲಿ ಯಶಸ್ವಿ ಮಕ್ಕಳ ಹಕ್ಕುಗಳ ಗ್ರಾಮ ಸಭೆ ನಡೆಸಲು ಕೈಜೋಡಿಸೋಣ, ಆ ಮೂಲಕ ಮಕ್ಕಳ ಬದುಕಿನಲ್ಲಿ ಹೊಸ ಚೈತನ್ಯ ಮೂಡಿಸೋಣ.

– ತಿಪ್ಪೇಸ್ವಾಮಿ ಕೆ.ಟಿ., ತುಮಕೂರು

Advertisement

Udayavani is now on Telegram. Click here to join our channel and stay updated with the latest news.

Next