Advertisement

Bangarapet: ಗ್ರಾಪಂಗಳಲ್ಲಿ ಇಲ್ಲ ಅಧಿಕಾರಿ-ಸಿಬ್ಬಂದಿ; ಸಮಸ್ಯೆ

06:30 PM Oct 10, 2024 | Team Udayavani |

ಬಂಗಾರಪೇಟೆ: ಕಳೆದ 1 ವಾರದಿಂದ ಗ್ರಾಪಂಗಳಲ್ಲಿ ಅಧಿಕಾರಿ ಸಿಬ್ಬಂದಿ ಗೈರಾಗಿರುವ ಕಾರಣ ಗ್ರಾಪಂ ಕಚೇರಿಗಳು ಅನಾಥವಾಗಿದ್ದು, ಸಾರ್ವಜನಿಕರ ಕೆಲಸಗಳು ಸಂಪೂರ್ಣ ಸ್ಥಗಿತಗೊಂಡಿವೆ.

Advertisement

ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯ ಪಿಡಿಒಗಳು ಸೇರಿದಂತೆ ಎಲ್ಲಾ ವೃಂದ ನೌಕರರ ಸಂಘಗಳ ಒಕ್ಕೂಟದಿಂದ ಹಲವು ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ನಾಲ್ಕು ದಿನಗಳಿಂದ ಕೆಲಸ ಕಾರ್ಯಗಳನ್ನು ಸ್ಥಗಿತಗೊಳಿಸಿ ಪ್ರತಿಭಟನೆ ಮಾಡು ತ್ತಿದ್ದು, ಸಾರ್ವಜನಿಕವಾಗಿ ಸಮಸ್ಯೆ ಸೃಷ್ಟಿಯಾಗಿದೆ. ರಾಜ್ಯದ ಎಲ್ಲ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳ ಹುದ್ದೆಗಳನ್ನು ಬಿ ಗುಂಪಿನ ಹುದ್ದೆಗಳಾಗಿ ಉನ್ನತೀಕರಿಸ ಬೇಕು, ವೇತನ ಶ್ರೇಣಿ ನಿಗದಿ ಮಾಡಬೇಕು, ಮುಂ ಬಡ್ತಿ ವಂಚಿತರಿಗೆ ಕಾಲಮಿತಿಯೊಳಗೆ ಮುಂಬಡ್ತಿ ನೀಡ ಬೇಕು ಎಂಬುದು ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ನೌಕರರು ಪ್ರತಿಭಟನೆಯಲ್ಲಿ ತೊಡಗಿದ್ದಾರೆ.

ಸ್ಥಗಿತಗೊಂಡ ಗ್ರಾಪಂ ಆಡಳಿತ ಯಂತ್ರ: ತಾಲೂಕಿ ನಲ್ಲಿ ಒಟ್ಟು 21 ಗ್ರಾಪಂಗಳಿದ್ದು, ಇವುಗಳು ಕಾರ್ಯ ನಿರ್ವಹಿಸುವ ಬಾಪೂಜಿ ಸೇವಾ ಕೇಂದ್ರದಲ್ಲಿ ಗ್ರಾಮೀಣ ಭಾಗದ ಜನರಿಗೆ ಆಧಾರ್‌ ತಿದ್ದುಪಡಿ, ಪಹಣಿ, ಜಾತಿ ಪ್ರಮಾಣಪತ್ರ, ಬೆಳೆ ದೃಢೀಕರಣ, ಮಾಸಾಶನ, ವಿಧವಾ ವೇತನ, ಸಂಧ್ಯಾ ಸುರಕ್ಷಾ, ಜನನ ಹಾಗೂ ಮರಣ ಪ್ರಮಾಣಪತ್ರ ಸೇರಿದಂತೆ ವಿವಿಧ ಇಲಾಖೆಗಳ 100 ಸೇವೆಗಳು ನೌಕರರ ಪ್ರತಿಭಟನೆಯಿಂದಾಗಿ ಸ್ಥಗಿತಗೊಂಡಿವೆ. ಸರ್ಕಾರದ ಸುಮಾರು ಶೇ. 60 ಯೋಜನೆಗಳ ಸೇವೆಗಳನ್ನು ಸೇವಾ ಕೇಂದ್ರಗಳ ಮೂಲಕ ಜನರಿಗೆ ನೀಡಲಾಗುತ್ತಿದೆ. ಈ ಹಿಂದೆ ಕಂದಾಯ ಇಲಾಖೆ ಗ್ರಾಮ ಆಡಳಿತಾಧಿಕಾರಿಗಳು ಹಲವು ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಸರ್ಕಾರದ ಗಮನ ಸೆಳೆಯಲು ಪ್ರತಿಭಟಿಸಿದ್ದರು.

ಈಗ ಪ್ರತಿಭಟನೆಯಲ್ಲಿ ಗ್ರಾಪಂ ಅಭಿವೃದ್ಧಿ ಅಧಿಕಾರಿ ಗಳು, ಕಾರ್ಯದರ್ಶಿಗಳು, ಕರ ವಸೂಲಿಗಾರರು, ಗುಮಾಸ್ತರು, ಡಾಟಾ ಎಂಟ್ರಿ ಅಪರೇಟರ್‌ಗಳು, ನೀರಗಂಟಿಗಳು, ಜವಾನರು, ಸ್ವಚ್ಛತಾ ಕೆಲಸಗಾರರು, ದ್ವಿತೀಯ ದರ್ಜೆ ಸಹಾಯಕರು ಮುಷ್ಕರದಲ್ಲಿ ಭಾಗವಹಿಸಿರುವುದರಿಂದ ಗ್ರಾಪಂಗಳ ಸೇವೆಗಳು ಸ್ತಬ್ದವಾಗಿದೆ. ಗ್ರಾಪಂ ಕಚೇರಿಗಳು ಬಿಕೋ ಎನ್ನುತ್ತಿವೆ. ಗ್ರಾಪಂ ಸಿಬ್ಬಂದಿ ಪ್ರತಿಭಟನೆಗೆ ಹೋಗಿರುವುದರಿಂದ ಕೆಲವು ಗ್ರಾಪಂಗಳಿಗೆ ಬೀಗ ಜಡಿದಿದ್ದರೆ ಹಲವು ಪಂಚಾಯಿತಿಗಳು ಬೀಗ ತೆರೆದಿದೆಯಾದರೂ ಯಾವುದೇ ಸೇವಾ ಸೌಲಭ್ಯ ದೊರಕುತ್ತಿಲ್ಲ.

ಸಾರ್ವಜನಿಕರು ತಮ್ಮ ಕೆಲಸ ಕಾರ್ಯಗಳಿಗೆ ಕಚೇರಿಗಳಿಗೆ ಬಂದು ಬರಿ ಕೈಯಲ್ಲಿ ವಾಪಸಾಗುತ್ತಿದ್ದಾರೆ. ಕಳೆದೊಂದು ವಾರದಿಂದ ಗ್ರಾಪಂಗಳ ಆಡಳಿತ ಬಹುತೇಕ ಸ್ಥಗಿತಗೊಂಡಿದ್ದು, ಜನರು ತಮ್ಮ ಕೆಲಸಗಳಿಗಾಗಿ ಕಚೇರಿಗಳತ್ತ ಅಲೆಯುವಂತಾಗಿದೆ.

Advertisement

ಮುಷ್ಕರ ಮುಂದುವರಿದರೆ ಗ್ರಾಮ ಆಡಳಿತ ವ್ಯವಸ್ಥೆ ಸಂಪೂರ್ಣ ಕುಸಿಯಲಿದೆ. ಆದ್ದರಿಂದ ಜರೂರಾಗಿ ಸಮಸ್ಯೆಗಳನ್ನು ಪರಿಹರಿಸಬೇಕು. ಸರ್ಕಾರವು ಇವರ ಸಮಸ್ಯೆಗಳನ್ನು ಬಗೆಹರಿಸಲು ಮಾತುಕತೆ ನಡೆಸಬೇಕು. ಇಲ್ಲದಿದ್ದರೆ ಸಮಸ್ಯೆ ಹೆಚ್ಚಲ್ಲಿದೆ. ●ಆದಿನಾರಾಯಣ ಕುಟ್ಟಿ, ಕಾಮಸಮುದ್ರ ಗ್ರಾಪಂ ಅಧ್ಯಕ್ಷ

ವರ್ಷವಿಡೀ ಗ್ರಾಮೀಣ ಪ್ರದೇಶದಲ್ಲಿ ಮೂಲ ಸೌಲಭ್ಯಗಳನ್ನು ಕಲ್ಪಿಸಲು ದುಡಿಯುತ್ತಿದ್ದೇವೆ. ಆದರೆ, ಸರ್ಕಾರ ಗ್ರಾಪಂ ಅಧಿಕಾರಿ-ಸಿಬ್ಬಂದಿಗೆ ಕಾಡುತ್ತಿರುವ ಸಮಸ್ಯೆ ನಿವಾರಿಸುವಲ್ಲಿ ಪೂರ್ಣ ವಿಫ‌ಲವಾಗಿದೆ. ಸರ್ಕಾರಗಳ ಚಕ್ರ ನಡೆಯಬೇಕಾದರೆ ಗ್ರಾಪಂಗಳ ಕಾರ್ಯಸೇವೆ ಹೆಚ್ಚು ಮಹತ್ವವನ್ನು ಪಡೆದಿದ್ದರೂ ಗ್ರಾಪಂ ನೌಕರರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಬೆಂಗಳೂರಿನ ಫ್ರೀಢಂ ಪಾರ್ಕಿನಲ್ಲಿ ಒಂದು ವಾರದಿಂದ ಪ್ರತಿಭಟನೆ ನಡೆಸಿದರೂ ಸರ್ಕಾರವಾಗಲೀ, ಇಲಾಖೆ ಸಚಿವರು ಸ್ಪಂದಿಸಿಲ್ಲ. ●ಕೆ.ಎಂ.ವೇಣು, ತಾಲೂಕು ಗ್ರಾಪಂಗಳ ಪಿಡಿಒ ಸಂಘದ ಅಧ್ಯಕ್ಷ

ಹಲವು ವರ್ಷಗಳಿಂದಲೂ ಗ್ರಾಪಂಗಳ ಅಧಿಕಾರಿ-ಸಿಬ್ಬಂದಿಗಳು ತಮ್ಮ ಸಮಸ್ಯೆಗಳನ್ನು ಬಗೆಹರಿಸುವಂತೆ ಒತ್ತಾಯಿಸಿ ವರ್ಷಕ್ಕೊಮ್ಮೆ ಪ್ರತಿಭಟಿಸುತ್ತಿದ್ದರು. ಪ್ರಸ್ತುತ ರಾಜ್ಯಾಧ್ಯಂತ 1 ವಾರದಿಂದ ಗ್ರಾಪಂ ಅಧಿಕಾರಿಗಳು, ಸಿಬ್ಬಂದಿ ತಮ್ಮ ಕರ್ತವ್ಯಕ್ಕೆ ಹಾಜರಾಗದೇ ಬೆಂಗಳೂರಿನಲ್ಲಿ ಹೋರಾಟಕ್ಕಿಳಿದ ಕಾರಣ ಸಮಸ್ಯೆ ಸೃಷ್ಟಿಯಾಗಿದೆ. ಆದಷ್ಟು ಬೇಗ ರಾಜ್ಯ ಸರ್ಕಾರ ಹಾಗೂ ಸಚಿವರು ಭೇಟಿಯಾಗಿ ಸಮಸ್ಯೆಗಳನ್ನು ಬಗೆಹರಿಸಬೇಕಾಗಿದೆ. ●ಎಚ್‌.ರವಿಕುಮಾರ್‌, ಬಂಗಾರಪೇಟೆ ತಾಪಂ ಇಒ

ಎಂ.ಸಿ.ಮಂಜುನಾಥ್‌

Advertisement

Udayavani is now on Telegram. Click here to join our channel and stay updated with the latest news.

Next