Advertisement

Gram Panchayat: (ಆ)ರಾಮ ರಾಜ್ಯ ಯಾರಿಗೆ ?

11:00 PM Sep 03, 2023 | Team Udayavani |

ಆಡಳಿತದ ಪರಮೋಚ್ಚ ಗುರಿಯು ಅದು ಪ್ರತಿನಿಧಿಸುವ ಜನರ ಜೀವನವನ್ನು ಹಸನು ಗೊಳಿಸುವುದು. ಇದಕ್ಕಾಗಿ ರಾಜ್ಯ ಮತ್ತು ಕೇಂದ್ರ ಸರಕಾರಗಳು ಅವಿರತ ಶ್ರಮಪಡುತ್ತಿವೆ ಎನ್ನಲಾಗುತ್ತಿದ್ದರೂ ಸ್ಥಳೀಯವಾಗಿ ಇದನ್ನು ಆಗಗೊಳಿಸುವ ಹೊಣೆ ಗ್ರಾಮ ಪಂಚಾಯತ್‌ನದು. 1992ರ 73ನೇ ಸಂವಿಧಾನ ತಿದ್ದು ಪಡಿಯು ಗ್ರಾಮ ಪಂಚಾಯತ್‌, ತಾಲೂಕು ಪಂಚಾಯತ್‌ ಹಾಗೂ ಜಿಲ್ಲಾ ಪಂಚಾಯತ್‌ ಎಂಬ ಮೂರು ಹಂತದ ವ್ಯವಸ್ಥೆಗೆ ಅವಕಾಶ ಮಾಡಿಕೊಟ್ಟಿತು. ಇದು 1993ರ ಎಪ್ರಿಲ್‌ 24ರಂದು ರಾಷ್ಟ್ರಾದ್ಯಂತ ಅನುಷ್ಠಾನಕ್ಕೆ ಬಂದಿತು. ಹೀಗೆ ಜಾರಿಗೆ ಬಂದ ಸ್ಥಳೀಯ ಆಡಳಿತ ಹೇಗಿರಬೇಕು ಅಂದರೆ ಇದಕ್ಕೆ ಸಿಗುವ ಸಿದ್ಧ ಉತ್ತರ ರಾಮರಾಜ್ಯ ದಂತಿರಬೇಕು ಎಂದು. ಸಂದರ್ಭ ಸಿಕ್ಕಾಗಲೆಲ್ಲ ನಮ್ಮ ನಾಯಕರು, ಗಾಂಧೀಜಿಯವರು ಇದೇ ಕನಸನ್ನು ಕಂಡಿದ್ದರು ಎಂದು ಹೇಳುವುದನ್ನು ಮರೆಯುವುದಿಲ್ಲ.

Advertisement

ಏನಿದು ರಾಮರಾಜ್ಯ? ರಾಮಾಯಣದ ಅಯೋಧ್ಯಾಕಾಂಡದಲ್ಲಿ ಸಿಗುವ ಮಾಹಿತಿಯಂತೆ ವನವಾಸದಲ್ಲಿದ್ದ ಶ್ರಿರಾಮನು ತನ್ನ ಬಳಿ ಬಂದ ಭರತನಿಗೆ ತಾನು ಹಿಂದೆ ಅಯೋಧ್ಯೆಯಲ್ಲಿದ್ದಾಗಿನ ಅನು ಭವದ ಆಧಾರದಲ್ಲಿ ರಾಜ್ಯಾಡಳಿತ ಹೇಗಿರಬೇಕೆಂದು ಹೇಳಿದನಂತೆ. ಅದರಲ್ಲಿ ದೂರದೃಷ್ಟಿಯ ಹಲವು ವಿಚಾರಗಳನ್ನು ಹೇಳಿದ್ದರೂ ಒಟ್ಟು ಆಡಳಿತದಲ್ಲಿ ಭ್ರಷ್ಟಾಚಾರವು ನುಸುಳದಂತಿರಬೇಕು. ರಾಜ್ಯದ, ಪ್ರಜೆ ಗಳ ಯೋಗಕ್ಷೇಮದ ವಿಚಾರದಲ್ಲಿ ಸಂಪೂರ್ಣ ಕಳಕಳಿ ಹೊಂದಿ ರಬೇಕು. ಕಾರ್ಯಧ್ಯಕ್ಷರೂ, ಮೇಧಾವಿಗಳೂ, ಸತ್ಯಾಸತ್ಯ ವಿಮರ್ಶನ ಶಕ್ತಿಯುಳ್ಳ, ಆಡಳಿತಕ್ಕೆ ಶ್ರೇಯಸ್ಸನ್ನು ತಂದುಕೊಡುವ ವಾಂಛೆಯುಳ್ಳ ಕರ್ಮಚಾರಿಗಳು ಇರಬೇಕು. ಮೊದಲಾದವು ಸಾರ್ವಕಾಲಿಕ ಮೌಲ್ಯವುಳ್ಳ ಸಂಗತಿಗಳಾಗಿವೆ. ಮತ್ತೆ ಮಹಾಭಾರತ ಕಾಲದಲ್ಲಿ ವಿದುರನೀತಿ, ಶುಕ್ರನೀತಿ, ಕಾಮಂದಕ ನೀತಿಸಾರ, ಮೌರ್ಯರ ಕಾಲದಲ್ಲಿ ಕೌಟಿಲ್ಯನ ಅರ್ಥಶಾಸ್ತ್ರ, ಸ್ಮತಿಗ್ರಂಥಗಳು ಅಲ್ಲದೇ ಇದೀಗ ನಮ್ಮ ಸಂವಿಧಾನ, ಅದರಲ್ಲಿಯ ತಿದ್ದುಪಡಿಗಳು ಮೊದಲಾದವು ಕಾಲಕಾಲಕ್ಕೆ ಸರಿಹೊಂದುವ ಸ್ಥಳೀಯ ಆಡಳಿತಸೂತ್ರದ ವಿಧಿ ವಿಧಾನಗಳನ್ನು ತಿಳಿಸುತ್ತಲೇ ಬಂದಿವೆ.

ತಳಮಟ್ಟದ ಆಡಳಿತದಲ್ಲಿ ಜನಸಾಮಾನ್ಯರ ಹಿತದೃಷ್ಟಿ ಬಹಳ ಮುಖ್ಯವಾಗಿದೆ ಎಂದು ಹೇಳಲಾಗುತ್ತಿದೆ. ಇದಕ್ಕಾಗಿ ಸರಕಾರ ಹೊಸಹೊಸ ಯೋಜನೆಗಳನ್ನು, ಆಡಳಿತ ವ್ಯವಸ್ಥೆಯ ಸುಧಾರಣೆಗಾಗಿ ಪ್ರಯೋಗಗಳನ್ನು ನಡೆಸುತ್ತಲೇ ಬಂದಿದ್ದು ಇವು ಜನಸಾಮಾನ್ಯರಲ್ಲಿ ಉತ್ಸಾಹವನ್ನು ಮೂಡಿಸಿವೆ. ಕಂಪ್ಯೂಟರ್‌, ಮೊಬೈಲ್‌ ಮೊದಲಾದ ವೈಜ್ಞಾನಿಕ ಸಾಧನಗಳು, ಪತ್ರಿಕೆಗಳೇ ಮೊದಲಾದ ದೃಶ್ಯ ಮಾಧ್ಯಮಗಳು ಈ ಎಲ್ಲ ಅನುಕೂಲತೆಗಳ ಮಾಹಿತಿಗಳನ್ನು ಜನರಿಗೆ ತಲುಪಿಸುತ್ತಿವೆ. ಇದರ ಜತೆಗೆ 2005ರಲ್ಲಿ ಬಂದ ಮಾಹಿತಿ ಹಕ್ಕು ಕಾಯಿದೆ ವಿವಿಧ ಹಂತಗಳಲ್ಲಿ ಜಾರಿಯಲ್ಲಿದೆ. 2011ರಲ್ಲಿ “ಕರ್ನಾಟಕ ನಾಗರಿಕ ಸೇವೆಗಳ ಖಾತರಿ ಅಧಿನಿಯಮ-2011’ನ್ನು ರಾಜ್ಯ ವಿಧಾನಸಭೆಯು ಅಂಗೀಕರಿಸಿದೆ. ಸಾರ್ವಜನಿಕರಿಗೆ ಸರಕಾರಿ ಅಧಿಕಾರಿಗಳ ಹೊಣೆಗಾರಿಕೆಯನ್ನು ಖಾತರಿಪಡಿಸುವ ಮೂಲಕ ಸುಧಾರಿತ ಸೇವೆಯನ್ನು ನೀಡುವುದು ಈ ಅಧಿನಿಯಮದ ಗುರಿ ಯಾಗಿದೆ. ಇದು ಆಡಳಿತದಲ್ಲಿ ಪಾರದರ್ಶಕತೆ ಮತ್ತು ದಕ್ಷತೆಯನ್ನು ತರುವುದಲ್ಲದೇ ದೊಡ್ಡ ಪ್ರಮಾಣದಲ್ಲಿ ಸಾರ್ವಜನಿಕ ಕುಂದುಕೊರತೆ ಹಾಗೂ ಭ್ರಷ್ಟತೆಯನ್ನು ಕಡಿಮೆ ಮಾಡುವುದಾಗಿ ನಿರೀಕ್ಷಿಸಲಾಗಿದೆ.

“ಇಂದು… ನಾಳೆ… ಇನ್ನಿಲ್ಲ, ಹೇಳಿದ ಸಮಯಕ್ಕೆ ತಪ್ಪೊಲ್ಲ’ ಎಂಬ ಧ್ಯೇಯವಾಕ್ಯದೊಂದಿಗೆ ಈ “ಸಕಾಲ ಯೋಜನೆ’ಯು ಜಾರಿಗೆ ಬಂದಿದೆ. ಸೇವೆಗಳನ್ನು ಪಡೆಯಲು ಅನವಶ್ಯಕ ವಿಳಂಬವಾದಲ್ಲಿ, ಅನಗತ್ಯ ತೊಂದರೆಯನ್ನು ಎದುರಿಸಬೇಕಾದ ಸಾರ್ವಜನಿಕರಿಗೆ ಸಂಬಂಧಿತ ಸರಕಾರಿ ವರ್ಗದವರು ಪರಿಹಾರ ಧನವನ್ನು ಕೊಡಬೇಕಾಗಿ ಬರುವುದು ಈ ಕಾನೂನಿನ ವೈಶಿಷ್ಟé. ಇದರ ಪ್ರಕಾರ ಸೇವೆ ಪಡೆಯಲು ಜನರು ಅನಗತ್ಯ ವಿಳಂಬ ಎದುರಿಸಿದರೆ ತೊಂದರೆಯನ್ನು ಪರಿಗಣಿಸಿ ಅವರು ಪರಿಹಾರವನ್ನು ಪಡೆಯಲು ಆರ್ಹರು. ಈ ಪರಿಹಾರವನ್ನು ತಪ್ಪಿತಸ್ಥ ಸರಕಾರಿ ಅಧಿಕಾರಿ/ನೌಕರ ತನ್ನ ವೇತನದಿಂದ ಭರಿಸಬೇಕಾಗುತ್ತದೆ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆಗೆ ಸಂಬಂಧಿಸಿದ ಸೇವೆಗಳನ್ನು ನೀಡುವಲ್ಲಿ ಪಂಚಾಯತ್‌ ಅಭಿವೃದ್ಧಿ ಅಧಿಕಾರಿ ಈ ಕಾಯ್ದೆಯಡಿಯಲ್ಲಿ ಬಹುಮುಖ್ಯ ಪಾತ್ರಧಾರಿ. ಕಾಯ್ದೆ ಅನುಷ್ಠಾನ ಮತ್ತು ಸೇವೆ ಒದಗಿಸಲು ಅವರನ್ನು ‘ಹೆಸರಿಸಲಾದ ಅಧಿಕಾರಿ – ಡೆಸಿಗ್ನೇಟೆಡ್‌ ಆಫೀಸರ್‌ ಎಂದು ನೇಮಕ ಮಾಡಲಾಗಿದೆ. ಹಿಂದೆ ಎಸೆಸೆಲ್ಸಿ ಪರೀಕ್ಷೆಯಷ್ಟೇ ಪಾಸು ಮಾಡಿರುತ್ತಿದ್ದ ಕಾರ್ಯದರ್ಶಿಯವರ ಹಿರಿತನದಲ್ಲಿ ಪಂಚಾಯತ್‌ ಆಡಳಿತ ನಡೆಯುತ್ತಿದ್ದು ಅದು ಅತೃಪ್ತಿಕರವೆಂಬ ಭಾವನೆಯಿತ್ತು. ಆದರೆ ಈಗ ಹಾಗಿಲ್ಲ. ಉನ್ನತೋನ್ನತ ವಿದ್ಯಾರ್ಹತೆ ಪಡೆದವರೂ ಇಂದು ಪಿಡಿಒಗಳಾಗಿ ಬಂದು ಅಧಿಕಾರದ ಗದ್ದುಗೆ ಹಿಡಿದಿದ್ದಾರೆ. ಈ ಹುದ್ದೆಯು ಉಪತಹಶೀಲ್ದಾರ್‌ ದರ್ಜೆ ಯದ್ದಾಗಿರುತ್ತದೆ. ಹೀಗಿದ್ದೂ ಕೆಲವು ಪಂಚಾಯತ್‌ಗಳಲ್ಲಿ ಪರಿಸ್ಥಿತಿ ಸುಧಾರಿಸಿಲ್ಲ. ಜನರ ಅಹವಾಲನ್ನು ತಾಳ್ಮೆಯಿಂದ ಕೇಳುವ, ಅರ್ಜಿ ಗಳನ್ನು ಓದಿ ಪರಾಮರ್ಶಿಸುವ ಮನಃಸ್ಥಿತಿ ಕೆಲವರಿಗಿಲ್ಲ. ಇದು ತಮ್ಮ ಕರ್ತವ್ಯದ ಅವಿಭಾಜ್ಯ ಅಂಗ ಎಂಬ ಕನಿಷ್ಠ ಅರಿವನ್ನು ಅವರು ಹೊಂ ದಿಲ್ಲ. ವಸ್ತುನಿಷ್ಟ ಬೇಡಿಕೆಗಳನ್ನು ತಾತ್ಸಾರ ದೃಷ್ಟಿಯಿಂದ ನೋಡು ವುದು, ಲಿಖೀತ ದಾಖಲೆಯನ್ನು ತಪ್ಪಾಗಿ ಅರ್ಥೈಸುವುದು, ತಮ್ಮಲ್ಲಿ ಬೇಡಿಕೆ ಹೊತ್ತು ಬರುವ ಸಾಮಾಜಿಕರ ವಿನಯವಂತಿಕೆಯನ್ನು ದೌರ್ಬಲ್ಯವಾಗಿ ಪರಿಗಣಿಸುವುದು, ನಿಧಾನದ್ರೋಹವೇ ಮೊದ ಲಾದ ನಕಾರಾತ್ಮಕ ಪ್ರಯೋಗಗಳನ್ನು ಕಾಣುತ್ತೇವೆ.

Advertisement

ಪಿಡಿಒಗಳು ಜನರ ವಿಶ್ವಾಸವನ್ನು ಕಳೆದುಕೊಳ್ಳುತ್ತಿರುವ ವಿಚಾರ ಗಳು ರಾಜ್ಯ ಸರಕಾರದ ಚುಕ್ಕಾಣಿ ಹಿಡಿದವರ ಗಮನಕ್ಕೆ ಬರುತ್ತಿ ಲ್ಲವೇ? ಖಂಡಿತಾ ಬರುತ್ತಿದೆಯೆಂಬ ಅಂಶ ಇತ್ತೀಚೆಗೆ ಪದೇಪದೆ ಸಾಬೀತಾಗುತ್ತಿದೆ. ನಿಕಟಪೂರ್ವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇದೇ ಮೇ ತಿಂಗಳಲ್ಲಿ ವಿಧಾನಸೌಧದಲ್ಲಿ ಕರೆದಿದ್ದ ಎಲ್ಲ ಜಿ. ಪಂ. ಸಿಇಒಗಳ ಸಭೆಯಲ್ಲಿ ಅವರು “ನೀವು ಹೋಗುವುದಿಲ್ಲ ಅವರು ಹೆದರುವುದಿಲ್ಲ’ ಎಂಬ ಪರಿಸ್ಥಿತಿ ಕೆಳ ಹಂತದಲ್ಲಿದೆ. ವ್ಯವಸ್ಥೆ ಮೇಲಿನ ಜನರ ವಿಶ್ವಾಸವನ್ನು ಇದೀಗ ಪುನಃ ಸ್ಥಾಪಿಸುವ ಅಗತ್ಯವಿದೆ. ಅಧಿಕಾರಿಗಳ ಸುತ್ತ ಜನ ಓಡಾಡಬಾರದು. ಕೆಳಹಂತದ ಅಧಿಕಾರಿಗಳ ಮೇಲೆ ನೀವು ನಿಯಂತ್ರಣ ಸಾಧಿಸಬೇಕು. ಪಿಡಿಒಗಳನ್ನು ಹದ್ದುಬಸ್ತಿನಲ್ಲಿಡಬೇಕು… ಇತ್ಯಾದಿಯಾಗಿ ಹೇಳಿದ್ದಾಗಿ ಎಲ್ಲ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಇದನ್ನು ಅಧಿಕಾರಿಯೊಬ್ಬರ ಗಮನಕ್ಕೆ ತಂದಾಗ ‘ಅವರಿಗೆ ಬಿಡಿ, ಬ್ರಹ್ಮನಿಗೂ ಕಷ್ಟಸಾಧ್ಯದ ಮಾತಿದು’ ಎಂದಿದ್ದರು.

ಚುನಾವಣೆಯಾಗಿ ಹೊಸ ಸರಕಾರ ಅಸ್ತಿತ್ವಕ್ಕೆ ಬಂದು ಪ್ರಭಾವೀ, ಉತ್ಸಾಹಿ ರಾಜಕಾರಣಿ ಪ್ರಿಯಾಂಕ್‌ ಖರ್ಗೆ ಅವರು ಗ್ರಾಮೀ ಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಖಾತೆಯನ್ನು ವಹಿಸಿಕೊಂಡ ಬಳಿಕ ಅವರು ರಾಜ್ಯದ ಎಲ್ಲ ಜಿ. ಪಂ. ಸಿಇಒಗಳಿಗೆ – “ಪಂಚಾಯತ್‌ ಮಟ್ಟದಲ್ಲಿ ಪಿಡಿಒಗಳ ಆಟಾಟೋಪ ನಿಯಂತ್ರಿಸುವುದು ಮತ್ತು ಗ್ರಾಮಮಟ್ಟದಲ್ಲಿ ಜನಸ್ನೇಹಿ ಆಡಳಿತ ಕೊಡುವ ನಿಟ್ಟಿನಲ್ಲಿ ತೊಡಕು ನಿವಾರಣೆಗೆ ಹೆಚ್ಚಿನ ಗಮನ ಕೊಡಬೇಕೆಂದು’ ಸೂಚನೆ ನೀಡಿದ್ದರು. ಇದರಂತೆ ಸಿಇಒಗಳು ಗ್ರಾಮಮಟ್ಟದಲ್ಲಿ ವೈಯಕ್ತಿಕ ಪರಿಶೀಲನೆ ನಡೆಸಬೇಕು ಮತ್ತು ಕಂಟಕವಾಗಿರುವ ಭ್ರಷ್ಟ ಪಿಡಿಒಗಳು ಹಾಗೂ ಅಧಿಕಾರಿಗಳ ವಿರುದ್ಧ ಕ್ರಮ ಜರಗಿಸಬೇಕಾದ ಕ್ರಮಗಳ ಕುರಿತು ಎಚ್ಚರಿಸಿದ್ದರು. ಆದರೆ ಪಿಡಿಒಗಳ ಒತ್ತಡ ಮತ್ತು ಪ್ರಭಾವದಿಂದ ರಕ್ಷಣೆ ಕೋರಿ ಸ್ವತಃ ಸಚಿವ ಪ್ರಿಯಾಂಕ್‌ ಖರ್ಗೆಯವರು ಇತ್ತೀಚೆಗೆ ಸಭಾಪತಿಗಳ ಮೊರೆಹೋದುದನ್ನು ಕೇಳಿ ನಗಬೇಕೊ, ಆಳಬೇಕೋ ಅರ್ಥವಾಗಲಿಲ್ಲ. ಇದು ಆನೆ ಬಾಲವನ್ನು ಅಲ್ಲಾಡಿಸುವ ಬದಲು ಬಾಲವೇ ಆನೆಯನ್ನು ಅಲ್ಲಾಡಿಸುವಂತಾಯಿತು. ಹೀಗಾಗಿ ನಾಗರಿಕರಿಗೆ ಮೂಡುವ ಸಾಮಾನ್ಯ ಪ್ರಶ್ನೆ (ಆ)ರಾಮ ರಾಜ್ಯ ಯಾರಿಗೆ?

 

Advertisement

Udayavani is now on Telegram. Click here to join our channel and stay updated with the latest news.

Next