ಬೆಂಗಳೂರು: ಪಂಚಾಯತ್‌ಗಳ ಆಡಳಿತ, ಯೋಜನೆ ಮತ್ತು ಸೇವೆಗಳನ್ನು ಆನ್‌ಲೈನ್ ಮೂಲಕ ಒದಗಿಸುವ ವ್ಯವಸ್ಥೆಯನ್ನು ಇನ್ನಷ್ಟು ಪರಿಣಾಮಕಾರಿ ಯಾಗಿಸಲು ಪಂಚತಂತ್ರ 2.0 ತಂತ್ರಾಂಶ ಹಾಗೂ ಬಾಪೂಜಿ ಸೇವಾ ಕೇಂದ್ರ ತಂತ್ರಾಂಶ 2.0 ಅಭಿವೃದ್ಧಿಪಡಿಸಲಾಗಿದ್ದು, ರಾಜ್ಯದ ಎಲ್ಲ ಪಂಚಾಯತ್‌ಗಳಲ್ಲಿ ಇದನ್ನು ಕಡ್ಡಾಯ ಗೊಳಿಸಲಾಗಿದೆ.
ಗ್ರಾಮ ಪಂಚಾಯತ್‌ಗಳ ದೈನಂದಿನ ಕಾರ್ಯಗಳ ಮೇಲ್ವಿಚಾರಣೆ, ಸೇವೆಗಳ ವಿಲೇ ವಾರಿಗೆ ಬೇಕಾದ ಯೋಜನೆಗಳ ಅನುಷ್ಠಾನ ಮತ್ತು ತೀರ್ಮಾನಗಳನ್ನು ಕೈಗೊಳ್ಳಲು 2011ರಿಂದ ಬಳಸಲಾಗುತ್ತಿದ್ದ ಪಂಚತಂತ್ರ 1.0 ತಂತ್ರಾಂಶವನ್ನು ಉನ್ನತೀಕರಿಸಿ ಪಂಚತಂತ್ರ 2.0 ಅಭಿವೃದ್ಧಿಪಡಿಸಲಾಗಿದೆ.
ಮೊದಲ ಹಂತದಲ್ಲಿ ಪಂಚತಂತ್ರ 2.0 ತಂತ್ರಾಂಶದ “ತೆರಿಗೆ ಸಂಗ್ರಹಣೆ’ ಮತ್ತು “ನಾಗರಿಕ ಸೇವೆಗಳು’ ಘಟಕ (ಮಾಡ್ಯುಲ್)ಗಳನ್ನು ಅಭಿವೃದ್ಧಿಪಡಿಸಲಾಗಿದ್ದು, ಪಂಚಾಯತ್‌ಗಳ ತೆರಿಗೆ, ದರ ಮತ್ತು ಶುಲ್ಕಗಳನ್ನು ವಿಧಿಸಲು ಇದರಲ್ಲಿ ಅವಕಾಶ ಮಾಡಿಕೊಡಲಾಗಿದೆ. ಅದರಂತೆ ಈ ತಿಂಗಳಿನಿಂದಲೇ ಗ್ರಾ.ಪಂ.ಗಳಲ್ಲಿ ಪಂಚತಂತ್ರ ತಂತ್ರಾಂಶದಲ್ಲೇ ತೆರಿಗೆ, ದರ, ಶುಲ್ಕಗಳನ್ನು ವಿಧಿಸಿ ಸಂಗ್ರಹಿಸಬೇಕಾಗುತ್ತದೆ. ತೆರಿಗೆ ಸಂಗ್ರಹಕ್ಕೆ ಈ ಹಿಂದೆ ಅನುಸರಿಸಲಾಗುತ್ತಿದ್ದ ಮ್ಯಾನುವಲ್ ರಶೀದಿ ಬದಲಿಗೆ ಡಿಜಿಟಿಲ್ ರಶೀದಿ ಕಡ್ಡಾಯಗೊಳಿಸಲಾಗಿದೆ.
ಗ್ರಾ.ಪಂ.ಗಳಲ್ಲಿ ಸಾರ್ವಜನಿಕರು ತೆರಿಗೆ ಪಾವತಿಸಲು ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆಯ ಸೇವೆಗಳಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಬಾಪೂಜಿ ಸೇವಾ ಕೇಂದ್ರ ತಂತ್ರಾಂಶ 2.0 ಹಾಗೂ ಬಾಪೂಜಿ ಸೇವಾ ಕೇಂದ್ರ ಮೊಬೈಲ್ ಆ್ಯಪ್ ಅಭಿವೃದ್ಧಿಪಡಿಸಲಾಗಿದ್ದು, ಇದರ ಮೂಲಕವೇ ಸಾರ್ವಜನಿಕರು ಅರ್ಜಿ ಸಲ್ಲಿಸಬೇಕು.
ಪಂಚತಂತ್ರ 2.0 ಹಾಗೂ ಬಾಪೂಜಿ ಸೇವಾ ಕೇಂದ್ರ ತಂತ್ರಾಂಶದಲ್ಲಿ ಆನ್‌ಲೈನ್ ಮೂಲಕ ಲಭ್ಯವಾಗುವ ಸೇವೆಗಳು
– ಕಟ್ಟಡ ನಿರ್ಮಾಣ ಪರವಾನಿಗೆ
– ನಮೂನೆ 11ಬಿ
– ಸ್ವಾಧೀನಪತ್ರ
– ಹೊಸ ನಲ್ಲಿ ನೀರಿನ ಸಂಪರ್ಕ
– ಕುಡಿಯುವ ನೀರಿನ ನಿರ್ವಹಣೆ
– ಬೀದಿ ದೀಪದ ನಿರ್ವಹಣೆ
– ಗ್ರಾಮ ನೈರ್ಮಲ್ಯದ ನಿರ್ವಹಣೆ
– ವಾಣಿಜ್ಯ, ವ್ಯಾಪಾರ, ವಸತಿಯೇತರ ವ್ಯವಹಾರದ ಪರವಾನಿಗೆ
– ಕೈಗಾರಿಕೆ, ಕೃಷಿ ಆಧಾರಿತ ಉತ್ಪಾದನ ಘಟಕ ಸ್ಥಾಪನೆಗೆ ಅನುಮತಿ.
– ನಿರಾಕ್ಷೇಪಣ ಪತ್ರ
– ರಸ್ತೆ ಅಗೆತ ಅನುಮತಿ
– ಕೌಶಲರಹಿತ ಕಾರ್ಮಿಕರಿಗೆ ಉದ್ಯೋಗ ಒದಗಿಸುವುದು
-ಉದ್ಯೋಗ ಖಾತರಿ ಯೋಜನೆಯಡಿ ಕೌಶಲರಹಿತ ಕಾರ್ಮಿಕರಿಗೆ ಜಾಬ್ ಕಾರ್ಡ್ ವಿತರಣೆ