ಚಿಕ್ಕಬಳ್ಳಾಪುರ: ತಾಯಿ ಗರ್ಭಾವಸ್ಥೆಯಲ್ಲಿ ಇರುವಾಗಲೇ ಮಗುವನ್ನು ಪೌಷ್ಟಿಕತೆಯಿಂದ ಕಾಪಾಡಿಕೊಳ್ಳಲು ಸಿರಿಧಾನ್ಯಗಳಿಂದ ಮಾಡಿದ ಪದಾರ್ಥಗಳ ಸೇವನೆ ಅಗತ್ಯವಾಗಿದ್ದು, ಇದರಿಂದ ಸಮಾಜಕ್ಕೆ ಕಂಟಕವಾಗಿರುವ ಅಪೌಷ್ಟಿಕತೆ, ರಕ್ತಹೀನತೆ ಸಮಸ್ಯೆಯಿಂದ ದೂರವಾಗಿ ಮನುಷ್ಯನ ಆರೋಗ್ಯ ಸದೃಢಗೊಳ್ಳುತ್ತದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಎಚ್.ದೇವರಾಜ್ ತಿಳಿಸಿದರು.
ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಕೃಷಿ ಇಲಾಖೆ ಸಂಯುಕ್ತಾಶ್ರಯದಲ್ಲಿ ನಡೆದ ರಾಷ್ಟ್ರೀಯ ಪೋಷಣ್ ಮಾಸ-2019ರ ಪ್ರಯುಕ್ತ ಆಯೋಜಿಸಿದ್ದ ಸಿರಿಧಾನ್ಯಗಳ ಮೇಳ ಉದ್ಘಾಟಿಸಿ ಅವರು ಮಾತನಾಡಿದರು.
ಫಾಸ್ಟ್‌ಫುಡ್ ಆಹಾರ ಹೆಚ್ಚು ಸೇವನೆ: ರೋಗಗ್ರಸ್ಥ ಸಮಾಜದಿಂದ ಬೆಳವಣಿಗೆ ಕುಂಠಿತವಾಗುತ್ತದೆ. ಹೀಗಾಗಿ ಕುಂಠಿತ ಬೆಳವಣಿಗೆಯನ್ನು ಹೋಗಲಾಡಿಸಬೇಕಾದರೆ ಪೌಷ್ಟಿಕತೆಯನ್ನು ಹೆಚ್ಚಿಸಲು ಎಲ್ಲರೂ ಎಚ್ಚೆತ್ತುಕೊಳ್ಳಬೇಕು. ಆದರೆ ಆಧುನಿಕ ಸಮಾಜದಲ್ಲಿ ದೇಶಿಯರಿಂದ ಪರಿಚಿತವಾಗಿರುವ ಬೇಕರಿ ತಿಂಡಿಗಳು, ಫಿಜ್ಜಾ ಬರ್ಗರ್ ಅಂತಹ ಫಾಸ್ಟ್‌ಫುಡ್ ಪದಾರ್ಥಗಳನ್ನು ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೂ ಹೆಚ್ಚು ಸೇವಿಸುತ್ತಾರೆ ಎಂದರು.
ಸಿರಿಧಾನ್ಯ ಮಹತ್ವ ತಿಳಿಯಿರಿ: ಜಿಪಂ ಸಿಇಒ ಬಿ.ಫೌಜಿಯಾ ತರನ್ನುಮ್ ಮಾತನಾಡಿ, ಜಿಲ್ಲೆಯಲ್ಲೇ ಮೊದಲ ಪೋಷಣ್ ಪುನರ್ವಸತಿ ಕೇಂದ್ರವು ಜಿಲ್ಲಾಸ್ಪತ್ರೆಯಲ್ಲಿ ಸ್ಥಾಪಿಸಿ ಅಪೌಷ್ಟಿಕತೆಯಿಂದ ಬಳಲುವ ತಾಯಿ ಮತ್ತು ಮಗುವನ್ನು ಆರೈಕೆ ಮಾಡುತ್ತಿದೆ. ಪಾಶ್ಚಿಮಾತ್ಯರಿಂದ ಬಂದ ಬೇಕರಿ ತಿಂಡಿಗಳಿಂದ ದೂರವಾಗಿ ಸಾಂಪ್ರಾದಾಯಿಕ ಸಿರಿಧಾನ್ಯಗಳ ಮಹತ್ವವನ್ನು ಎಲ್ಲಾ ತಾಯಂದಿರು ಅರಿಯಬೇಕೆಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಜಿ.ಕೆ. ಲಕ್ಷೀದೇವಮ್ಮ ಮಾತನಾಡಿ, ಕೇಂದ್ರ ಸರ್ಕಾರ ರಾಷ್ಟ್ರೀಯ ಪೋಷಣ್ ಅಭಿಯಾನದಿಂದ ಮೊದಲ ಮೂರು ತಿಂಗಳ ಗರ್ಭಿಣಿಯ ಹಂತದಿಂದ ತಾಯಿ ಹಾಗೂ ಮಗುವನ್ನು 1000 ದಿವಸಗಳ ಕಾಲ ಯಾವ ರೀತಿ ಆರೈಕೆ ಮಾಡಬೇಕು, ರಕ್ತಹೀನತೆ, ಸ್ವಚ್ಛತೆ, ನೈರ್ಮಲ್ಯ ವಿಷಯಗಳ ಬಗ್ಗೆ ಸೆಪ್ಟೆಂಬರ್ ತಿಂಗಳಾಂತ್ಯವು ಜಿಲ್ಲೆಯಲ್ಲಿ ಗ್ರಾಮ ಮಟ್ಟದಿಂದ ನಗರ ಮಟ್ಟದವರೆಗೂ ಪ್ರತಿಯೊಬ್ಬ ಜನಸಾಮಾನ್ಯರಿಗೂ ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಎಂದು ತಿಳಿಸಿದರು.
ಈ ಕಾರ್ಯಕ್ರಮಕ್ಕೆ ವಿವಿಧ ಇಲಾಖೆಯ ಅಧಿಕಾರಿಗಳು, ಅಂಗನವಾಡಿ, ಆಶಾ ಕಾರ್ಯಕರ್ತೆಯರು ಸಹಕರಿಸಿ ಜನರಲ್ಲಿ ಅರಿವು ಮೂಡಿಸಲು ಮುಂದಾಗಿ ಅಭಿಯಾನವನ್ನು ಯಶಸ್ವಿಗೊಳಿಸಿದ್ದಾರೆ ಎಂದರು. ಕಾರ್ಯಕ್ರಮದಲ್ಲಿ ವಕೀಲರ ಸಂಘದ ಅಧ್ಯಕ್ಷ ಕೆ. ಹೆಚ್. ತಮ್ಮೇಗೌಡ, ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ವಿನೋದ್ ಕುಮಾರ್, ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಎಲ್.ರೂಪ, ಉಪ ಕೃಷಿ ನಿರ್ದೇಶಕಿ ಕೆ.ಅನುರೂಪ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಹುಸೇನ್, ರಾಜೇಂದ್ರ ಪ್ರಸಾದ್, ಗೋಪಾಲ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.