Advertisement

ಧಾನ್ಯ ಶೇಖರಣೆ- ಸಾಗಣೆ ಉಚಿತ

01:16 AM Jun 07, 2019 | Team Udayavani |

ಬೆಂಗಳೂರು: ರೈತರು ತಾವು ಬೆಳೆದ ಆಹಾರಧಾನ್ಯಗಳನ್ನು ಕನಿಷ್ಠ (ಎಂಎಸ್‌ಪಿ )ಯೋಜನೆಯಡಿ ಉಚಿತವಾಗಿ ಎಂಟು ತಿಂಗಳ ಕಾಲ ಉಗ್ರಾಣದಲ್ಲಿರಿಸಲು ಹಾಗೂ ಕೃಷಿ ಭೂಮಿಯಿಂದ ಗೋದಾಮಿಗೆ ಧಾನ್ಯವನ್ನು ಉಚಿತವಾಗಿ ಸಾಗಿಸುವ ಸೇವೆ ಪ್ರಸಕ್ತ ವರ್ಷದಿಂದಲೇ ಸಿಗಲಿದೆ ಎಂದು ಸಹಕಾರ ಸಚಿವ ಬಂಡೆಪ್ಪ ಖಾಶೆಂಪುರ ಹೇಳಿದರು.

Advertisement

ಕನಿಷ್ಠ ಬೆಂಬಲ ಬೆಲೆ ಸಂಬಂಧಿಸಿದಂತೆ ಸಂಪುಟ ಉಪಸಮಿತಿ ಸಭೆ ಬಳಿಕ ವಿಧಾನಸೌಧದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದ ರೈತರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದೆ ಉತ್ತಮ ಬೆಲೆಗೆ ತಮ್ಮ ಬೆಳೆಗಳನ್ನು ಮಾರಲು ಅನುಕೂಲವಾಗುವಂತೆ ಈ ವ್ಯವಸ್ಥೆ ಕಲ್ಪಿಸಲು ಸಿದ್ಧತೆ ನಡೆಸಲಾಗಿದೆ. ದೇಶದಲ್ಲೇ ಪ್ರಥಮ ಎನಿಸಿದ ಈ ಸೇವೆಯನ್ನು ಮುಂಗಾರು ಆರಂಭವಾಗಿ ಬಿತ್ತನೆಯಾಗುತ್ತಿದ್ದಂತೆ ಈ ಸೌಲಭ್ಯ ಒದಗಿಸಲಾಗುವುದು ಎಂದು ತಿಳಿಸಿದರು.

ರೈತರು ತಾವು ಬೆಳೆದ ಆಹಾರಧಾನ್ಯವನ್ನು ಗೋದಾಮಿನಲ್ಲಿ ದಾಸ್ತಾನು ಮಾಡಲು ಬಯಸಿದರೆ ಸಹಾಯವಾಣಿಗೆ ಕರೆ ಮಾಡಿದರೆ ಸಾಕು. ಕೃಷಿ ಭೂಮಿಗೆ ತೆರಳಿ ಧಾನ್ಯದ ಶ್ರೇಣೀಕರಣ ನಡೆಸಿ ತೂಕ ಮಾಡಿ ಉಚಿತ ಸಾರಿಗೆ ವ್ಯವಸ್ಥೆಯಡಿ ಗೋದಾಮಿಗೆ ಸಾಗಿಸಲಾಗುತ್ತದೆ. ಇದಕ್ಕೆ ಡಿಜಿಟಲ್ ರಸೀದಿಯನ್ನೂ ನೀಡಲಾಗುತ್ತದೆ. ರೈತರು ಎಂಟು ತಿಂಗಳ ಕಾಲ ಉಚಿತವಾಗಿ ಗೋದಾಮಿನಲ್ಲಿ ದಾಸ್ತಾನು ಇರಿಸಬಹುದಾಗಿದೆ. ಒಂದೊಮ್ಮೆ ರೈತರು ಬೆಳೆ ಮೇಲೆ ಅಡಮಾನ ಸಾಲಪಡೆಯ ಬಯಸಿದರೆ ಬಡ್ಡಿ ಮೊತ್ತದಲ್ಲಿ ಶೇ.50ರಷ್ಟನ್ನು ಸರ್ಕಾರ ಭರಿಸಲಿದ್ದು, ಇದಕ್ಕಾಗಿ ಸರ್ಕಾರ 2000 ಕೋಟಿ ರೂ. ಕಾಯ್ದಿರಿಸಿದೆ. ಯಾವುದೇ ದಾಖಲೆ ಪತ್ರ ಕೇಳದೆ ಡಿಜಿಟಲ್ ರಸೀದಿ ಆಧರಿಸಿಯೇ ಸಾಲ ಸೌಲಭ್ಯ ಕಲ್ಪಿಸಲಾಗುವುದು ಎಂದು ಹೇಳಿದರು.

ಕ್ಯಾಬ್‌ ಸೇವೆಯಂತೆ ಕರೆ ಮಾಡಿದರೆ ಸೌಲಭ್ಯ: ಓಲಾ, ಉಬರ್‌ ಕ್ಯಾಬ್‌ ಸೇವೆ ಪಡೆಯುವಂತೆ ರೈತರು ಕರೆ ಮಾಡಿದರೆ ಉಳಿದ ಪ್ರಕ್ರಿಯೆಗಳನ್ನು ಉಚಿತವಾಗಿ ಒದಗಿಸಲಾಗುತ್ತದೆ. ಸೆಪ್ಟೆಂಬರ್‌ ವೇಳೆಗೆ ಕಾಲ್ಸೆಂಟರ್‌ ಸೇವೆ ಆರಂಭಿಸಿ ರೈತರ ಕರೆ ಆಧರಿಸಿ ಸೇವೆ ನೀಡಲಾಗುತ್ತದೆ. ಸಾರಿಗೆ ವ್ಯವಸ್ಥೆಗೆ ಸ್ಥಳೀಯವಾಗಿಯೇ ಲಭ್ಯವಿರುವ ಟ್ರ್ಯಾಕ್ಟರ್‌ಗಳನ್ನು ಬಳಸಿಕೊಳ್ಳುವ ಮೂಲಕ ಆ ವಾಹನಗಳ ಮಾಲೀಕರಿಗೂ ನೆರವಾಗುವ ಚಿಂತನೆಯಿದೆ ಎಂದು ತಿಳಿಸಿದರು.

ರಾಜ್ಯದ ಎಪಿಎಂಸಿ, ಭಾರತೀಯ ಆಹಾರ ನಿಗಮ, ರಾಜ್ಯ ಉಗ್ರಾಣ ನಿಗಮ ಸೇರಿ ರಾಜ್ಯ ಸರ್ಕಾರದ ಅಧೀನದ ಗೋದಾಮುಗಳಲ್ಲಿ ಒಟ್ಟು 37 ಲಕ್ಷ ಟನ್‌ ಆಹಾರಧಾನ್ಯ ಶೇಖರಣಾ ಸಾಮರ್ಥಯವಿದೆ. ಸದ್ಯ ಇದರಲ್ಲಿ ರೈತರು ಶೇ. 25ರಿಂದ ಶೇ.30ರಷ್ಟನ್ನು ಮಾತ್ರ ಸರ್ಕಾರಿ ಗೋದಾಮುಗಳಲ್ಲಿ ದಾಸ್ತಾನು ಮಾಡುತ್ತಿದ್ದಾರೆ. ಜತೆಗೆ ಸ್ಥಳೀಯವಾಗಿ ಲಭ್ಯವಿರುವ ಖಾಸಗಿ ಗೋದಾಮುಗಳಲ್ಲೂ ಪಿಪಿಪಿ ಮಾದರಿ ಯಲ್ಲಿ ಧಾನ್ಯ ಶೇಖರಣೆಗೂ ಸರ್ಕಾರ ಸಿದ್ಧವಿದೆ ಎಂದರು.

Advertisement

ಕಾಲಮಿತಿಯಲ್ಲಿ ಸಾಲ ಮನ್ನಾಗೆ ಕ್ರಮ: ಸಹಕಾರ ಬ್ಯಾಂಕ್‌ಗಳಿಗೆ ಈವರೆಗೆ ರೈತರ 3,600 ಕೋಟಿ ರೂ. ಸಾಲ ಮನ್ನಾ ಮೊತ್ತ ಪಾವತಿಸಲಾಗಿದೆ. ಜು. 10ರೊಳಗೆ 9,000 ಕೋಟಿ ರೂ. ಸಾಲ ಮನ್ನಾ ಮೊತ್ತ ಪಾವತಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಪ್ರತಿಕ್ರಿಯಿಸಿದರು.

ಬಿಜೆಪಿಯು ಬರ ವಿಚಾರದಲ್ಲಿ ರಾಜಕೀಯ ಮಾಡುತ್ತಿದೆ. ಕುಡಿಯುವ ನೀರು ಪೂರೈಕೆ, ನರೇಗಾ ಅಡಿ ಉದ್ಯೋಗ ಸೃಷ್ಟಿ, ಜಾನುವಾರುಗಳಿಗೆ ನೀರು, ಮೇವು ಸೇರಿದಂತೆ ನಾನಾ ಕಾರ್ಯಗಳನ್ನು ಸರ್ಕಾರ ಪರಿಣಾಮಕಾರಿಯಾಗಿ ನಿರ್ವಹಿಸಿದೆ ಎಂದು ತಿಳಿಸಿದರು.

ಕೃಷಿ ಸಚಿವ ಎನ್‌.ಎಚ್.ಶಿವಶಂಕರರೆಡ್ಡಿ, ರಾಜ್ಯದ ಕೆಲವೆಡೆ ಈಗಾಗಲೇ ಮಳೆಯಾಗುತ್ತಿದ್ದು, 5.93 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಮಳೆಯಾಶ್ರಿತ ಪ್ರದೇಶದಲ್ಲಿ 2.74 ಲಕ್ಷ ಹೆಕ್ಟೇರ್‌ ಹಾಗೂ ನೀರಾವರಿ ಪ್ರದೇಶದಲ್ಲಿ 3.18 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ. ಪ್ರಸಕ್ತ ವರ್ಷದಲ್ಲಿ 76.69 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಗುರಿಯಿದ್ದು, ಈ ಪೈಕಿ ಶೇ.8 ರಷ್ಟು ಪ್ರದೇಶದಲ್ಲಿ ಈಗಾಗಲೇ ಬಿತ್ತನೆಯಾಗಿದೆ ಎಂದು ಮಾಹಿತಿ ನೀಡಿದರು. ಸಚಿವ ಎಂ.ಸಿ.ಮನಗೂಳಿ, ಕೃಷಿ ಬೆಲೆ ಆಯೋಗದ ಅಧ್ಯಕ್ಷ ಪ್ರಕಾಶ್‌ ಕಮ್ಮರಡಿ ಉಪಸ್ಥಿತರಿದ್ದರು.

ಪ್ರಾರ್ಥನೆ ಮಾಡಿದರೆ ತಪ್ಪೇನು?
ರಾಜ್ಯದಲ್ಲಿ ಉತ್ತಮ ಮಳೆಗಾಗಿ ಪರ್ಜನ್ಯ ಹೋಮ ನಡೆಸುವಂತೆ ಸರ್ಕಾರ ಸೂಚಿಸಿರುವುದು ಮೌಡ್ಯವಲ್ಲ. ರಾಜ್ಯಕ್ಕೆ ಮಳೆಯಾಗಿ ಉತ್ತಮ ಬೆಳೆಯಾಗಲಿ ಎಂಬ ಆಶಯದೊಂದಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಲು ಹೇಳಲಾಗಿದೆ. ಮಳೆಗಾಗಿ ಪ್ರಾರ್ಥನೆ ಮಾಡಿದರೆ ತಪ್ಪೇನೂ ಇಲ್ಲ ಎಂದು ಸಚಿವ ಬಂಡೆಪ್ಪ ಖಾಶೆಂಪುರ ಸಮರ್ಥಿಸಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next