Advertisement

ಧಾನ್ಯ ದಾಸ್ತಾನು ಮತ್ತು ಕೀಟಬಾಧೆ ನಿಯಂತ್ರಣ

05:44 PM Oct 20, 2019 | Sriram |

ಧಾನ್ಯಗಳನ್ನು ಸಮರ್ಪಕವಾಗಿ ದಾಸ್ತಾನು ಮಾಡುವುದು ಅತ್ಯಗತ್ಯ. ಇಲ್ಲದಿದ್ದರೆ ಕೀಟಬಾಧೆ ಅಧಿಕವಾಗಿ ಭಾರಿ ನಷ್ಟ ಉಂಟಾಗಬಹುದು. “ಮುಂಜಾಗ್ರತೆ ವಹಿಸಿದ್ದೆವು. ಆದರೂ ಧಾನ್ಯಕ್ಕೆ ಹುಳು ಬಾಧೆ ತಗುಲಿದೆ’ ಈ ಮಾತನ್ನು ರೈತರು ಹೇಳುತ್ತಿರುತ್ತಾರೆ. ಅವರು ಮುಂಜಾಗ್ರತಾ ಕ್ರಮ ಅನುಸರಿಸಿದ್ದರೂ ಯಾವುದೋ ಒಂದು ಹಂತದಲ್ಲಿ ಎಡವುತ್ತಾರೆ. ಸಣ್ಣದೊಂದು ಪ್ರಮಾದದಿಂದಲೂ ಕೀಟಗಳ ಬಾಧೆ ವಿಪರೀತ. ದ್ವಿದಳ ಧಾನ್ಯಗಳ ಸಂಗ್ರಹಣೆಯಲ್ಲಿ ಹೆಚ್ಚು ಜಾಗರೂಕತೆ ಬೇಕು. ಏಕೆಂದರೆ ಚಿಪ್ಪಿನಹುಳು ಬಾಧೆ ತಗುಲುವ ಸಾಧ್ಯತೆ ಹೆಚ್ಚಿರುತ್ತದೆ.

Advertisement

ಚಿಪ್ಪಿನಹುಳುಗಳನ್ನು “ಬ್ರು ಬೆಡ್ಸ್‌’ ಎಂದು ಕರೆಯಲಾಗುತ್ತೆ. ಇವು ಚಿಕ್ಕದಾಗಿದ್ದು ದುಂಡು ಆಕಾರ ಹೊಂದಿರುತ್ತವೆ. ಕಾಯಿ ಅಥವಾ ಕಾಳುಗಳ ಮೇಲೆ ಮೊಟ್ಟೆ ಇಡುತ್ತವೆ. ಅಗಾಧ ಸಂಖ್ಯೆಯ ಮೊಟ್ಟೆಗಳಿಂದ ಹೊರಬರುವ ಹುಳುಗಳು ದ್ವಿದಳ ಧಾನ್ಯಗಳ ಕಾಯಿ ಅಥವಾ ಕಾಳಿನೊಳಗೆ ಸೇರಿಕೊಳ್ಳುತ್ತವೆ. ಧಾನ್ಯವನ್ನು ತಿನ್ನಲು ಪ್ರಾರಂಭಿಸುತ್ತವೆ. ಈ ಹುಳುಗಳು ಕೋಶಾವಸ್ಥೆ ತಲುಪಿ ಪೌಢಾವಸ್ಥೆಯಲ್ಲಿ ಕೀಟಗಳಾಗಿ ಮಾರ್ಪಾಡಾಗುತ್ತವೆ. ಆಗ ಕಾಳುಗಳಿಗೆ ರಂಧ್ರ ಕೊರೆದು ಹೊರಬರುತ್ತವೆ. ಮತ್ತೆ ಇವುಗಳಿಂದ ಮೊಟ್ಟೆ ಇಡುವ ಕ್ರಿಯೆ ನಡೆಯುತ್ತದೆ. ಇದರಿಂದಾಗಿ ಕೀಟಗಳ ಸಂಖ್ಯೆ ದ್ವಿಗುಣಗೊಳ್ಳುತ್ತದೆ.

ದಾಸ್ತಾನು ಮಾಡದಿದ್ದರೂ ತೊಂದರೆ
ದಾಸ್ತಾನು ಹಂತದಲ್ಲಿ ಈ ಕೀಟಗಳ ಹಾವಳಿ ತೀವ್ರವಾಗುತ್ತದೆ. ಸಾಮಾನ್ಯವಾಗಿ ಈ ಕೀಟಗಳು ದ್ವಿದಳ ಧಾನ್ಯಗಳು ಕೊಯಾಗುವ ಮೊದಲೇ ದಾಳಿ ಇಡುತ್ತವೆ. ಇವುಗಳ ಆಕ್ರಮಣಕ್ಕೆ ತುತ್ತಾದ ಧಾನ್ಯಗಳನ್ನು ಸಂಗ್ರಹಿಸುವುದರಿಂದ ಇವುಗಳ ಬೆಳವಣಿಗೆ ನಿರಾತಂಕವಾಗಿ ಸಾಗುತ್ತದೆ. ಇದಕ್ಕೆ ಕಾರಣ, ಕಳೆದ ಬಾರಿ ಉಪಯೋಗಿಸಿದ ಚೀಲಗಳು, ಕಣಜಗಳಲ್ಲಿ ಚಿಪ್ಪುಹುಳುಗಳು ಸುಪ್ತಾವಸ್ಥೆಯಲ್ಲಿರುವುದು. ಇವುಗಳಿರುವ ಚೀಲಗಳನ್ನು ಉಪಯೋಗಿಸಿದಾಗ ಮತ್ತೆ ಕೀಟಬಾಧೆ ಆರಂಭ. ಸಂಗ್ರಹಣೆಯಲ್ಲಿ ಉಂಟಾಗುವ ಇಂಥ ತೊಡಕಿನಿಂದಾಗಿ ರೈತರಿಗೆ ನಷ್ಟ ಉಂಟಾಗುತ್ತದೆ. ಆದ್ದರಿಂದಲೇ ಬಹಳಷ್ಟು ಮಂದಿ ರೈತರು ಧಾನ್ಯ ದಾಸ್ತಾನು ಮಾಡಲು ಹೋಗುವುದಿಲ್ಲ. ಆಯಾ ಸಂದರ್ಭದಲ್ಲಿ ಮಾರುಕಟ್ಟೆ ಬೆಲೆಗೆ ಮಾರಿಬಿಡುತ್ತಾರೆ. ಮಾರುಕಟ್ಟೆಗೆ ಒಮ್ಮೆಲೇ ಧಾನ್ಯ ಹೆಚ್ಚಿನ ಪ್ರಮಾಣದಲ್ಲಿ ಹೋದಾಗ ಬೆಲೆಯೂ ಕಡಿಮೆ ನಿಗದಿ ಪಡಿಸಲಾಗುತ್ತದೆ. ಇದರಿಂದ ನಷ್ಟವಾಗುವುದು ರೈತರಿಗೇ.

ಬಿಸಿಲಿನಿಂದ ಸಹಾಯ
ಇಂಥ ಪರಿಸ್ಥಿತಿ ನಿವಾರಿಸುವುದು ಅಗತ್ಯ. ಇದಕ್ಕಾಗಿ ಸುರಕ್ಷಿತ ಸಂಗ್ರಹಣಾ ವ್ಯವಸ್ಥೆ ಮಾಡಿಕೊಳ್ಳಬೇಕು. ಧಾನ್ಯಗಳನ್ನು ಒಕ್ಕಣೆ ಮಾಡಿದ ತಕ್ಷಣವೇ ಅವುಗಳಲ್ಲಿರುವ ಕೀಟಗಳನ್ನು ನಾಶಗೊಳಿಸಬೇಕು. ಕಟಾವಾದ ತಕ್ಷಣ ಮೂಟೆ ಕಟ್ಟಿ ಇಟ್ಟರೆ ಕೀಟಗಳಿಗೆ ಅವಕಾಶ ಒದಗಿಸಿಕೊಟ್ಟಂತೆ. ಆದ್ದರಿಂದ ಧಾನ್ಯಗಳ ತೇವಾಂಶ ಕಡಿಮೆ ಮಾಡಲು ಬಿಸಿಲಿನಲ್ಲಿ ಒಣಗಿಸಬೇಕು. ಕನಿಷ್ಟ 5ರಿಂದ 6 ದಿನ ಒಣಗಿಸಿದರೆ ಕೀಟಗಳು, ಮೊಟ್ಟೆಗಳು ನಾಶವಾಗುತ್ತವೆ. ಸಿಮೆಂಟ್‌ನಿಂದ ಮಾಡಿದ ಕಣದಲ್ಲಿ ಒಣಗಿಸುವುದು ಸೂಕ್ತ. ಒಣಗಿದ ಹಂತದಲ್ಲಿ ಪ್ರತಿದಿನ ಸಂಜೆ ಧಾನ್ಯಗಳನ್ನು ಗಾಳಿ ಸೇರದಂತೆ ಲೋಹದ ಅಥವಾ ಪ್ಲಾಸ್ಟಿಕ್‌ನ ದೊಡ್ಡ ಬ್ಯಾರೆಲ್‌ಗ‌ಳಲ್ಲಿ ಸಂಗ್ರಹಿಸಬೇಕು.

ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿದ ಧಾನ್ಯಗಳನ್ನು ಮಾತ್ರ ಸಂಗ್ರಹಣೆ ಮಾಡಬೇಕು. ಧಾನ್ಯದ ಮೇಲೆ ಮರಳನ್ನು ತುಂಬಬೇಕು. ನಂತರ ಬ್ಯಾರೆಲ್‌ ಭದ್ರವಾಗಿ ಮುಚ್ಚಬೇಕು. ಈ ರೀತಿ ಮಾಡಿದಾಗ ಕೀಟಗಳು ಮರಳಿನ ಪದರ ಭೇದಿಸಿಕೊಂಡು ಹೋಗಲು ಸಾಧ್ಯವಾಗುವುದಿಲ್ಲ.

Advertisement

– ಕುಮಾರ ರೈತ

Advertisement

Udayavani is now on Telegram. Click here to join our channel and stay updated with the latest news.

Next