ಉಳ್ಳಾಲ: ಯುವ ಎಂಜಿನಿಯರಿಂಗ್ ಪದವೀಧರರು ಸಮಾಜಕ್ಕೆ ರಚನಾತ್ಮಕವಾದ ಉತ್ತಮ ಕೊಡುಗೆ ನೀಡುವ ಜತೆಗೆ ಪರಿಸರ ಸ್ನೇಹಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಿ ಎಂದು ಮಂಗಳೂರು ವಿವಿ ಉಪಕುಲಪತಿ
ಡಾ| ಪಿ.ಎಸ್. ಎಡಪಡಿತ್ತಾಯ ಅಭಿಪ್ರಾಯ ಪಟ್ಟರು.
ಮಂಗಳೂರು ವಿವಿ ಕ್ಯಾಂಪಸ್‌ನ ಮಂಗಳ ಸಭಾಂಗಣದಲ್ಲಿ ಶನಿವಾರ ನಡೆದ ಬ್ಯಾರೀಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಬಿಐಟಿ)ಯ 7ನೇ ಪದವಿ ಪ್ರದಾನ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ದೂರ ದೃಷ್ಟಿಯುಳ್ಳ ಅಭಿವೃದ್ಧಿ ಚಿಂತಕ ಸಯ್ಯದ್ ಬ್ಯಾರಿ ಅವರ ಬಿಐಟಿ ಉತ್ತಮ ಶಿಸ್ತುಬದ್ಧ ಮತ್ತು ಶೈಕ್ಷಣಿಕ ಮೌಲ್ಯಗಳೊಂದಿಗೆ ಪ್ರತಿಷ್ಠಿತ ಸಂಸ್ಥೆಯಾಗಿ ಬೆಳೆದಿದೆ ಎಂದರು.
ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್‌ನ ಸಲಹಾ ಸಮಿತಿ ನಿರ್ದೇಶಕ ಪ್ರೊ| ಬಿ.ಎನ್. ರಘುನಂದನ್ ಮಾತನಾಡಿ ಯುವ ಎಂಜಿನಿಯರ್‌ಗಳು ನಿರಂತರ ಕಲಿಕೆಯಲ್ಲಿ ತಮ್ಮನ್ನು ತೊಡಗಿಸಿ ಕೊಳ್ಳ ಬೇಕಾದ ಅಗತ್ಯವಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಬ್ಯಾರೀಸ್ ಅಕಾಡೆಮಿ ಆಫ್ ಲರ್ನಿಂಗ್‌ನ ಅಧ್ಯಕ್ಷ ಸೈಯ್ಯದ್ ಮುಹಮ್ಮದ್ ಬ್ಯಾರಿ ಮಾತನಾಡಿ, ಯುವ ಪದವೀಧರರು ಉದ್ಯೋಗವನ್ನು ಅರಸುವ ಬದಲು ತಾವೇ ಉದ್ಯೋಗದಾತರಾಗಿ ಬೆಳೆಯ ಬೇಕು ಮತ್ತು ಉನ್ನತ ಶಿಕ್ಷಣಕ್ಕೂ ಆದ್ಯತೆ ನೀಡಬೇಕು ಎಂದರು. ಅಂತಾರಾಷ್ಟ್ರೀಯ ರೋಟರಿ ಕ್ಲಬ್‌ನ ದಾನಿ ಮತ್ತು ಉದ್ಯಮಿ ರವಿಶಂಕರ್ ದಕೋಜು ಮುಖ್ಯ ಅತಿಥಿಯಾಗಿದ್ದರು.
ವಿವಿಧ ವಿಭಾಗಗಳ ಮುಖ್ಯಸ್ಥರಾದ ಸಿವಿಲ್ ವಿಭಾಗದ ಪ್ರೊ| ಪುರುಷೋತ್ತಮ, ಮೆಕ್ಯಾನಿಕಲ್ ವಿಭಾಗದ ಡಾ| ಬಸವರಾಜ್, ಗಣಿತಶಾಸ್ತ್ರದ ಡಾ| ಅಂಜುಂ ಖಾನ್, ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಶನ್ ವಿಭಾಗದ ಡಾ| ಅಬ್ದುಲ್ಲಾ ಗುಬ್ಬಿ ಉಪಸ್ಥಿತರಿದ್ದರು.
ಬಿಐಟಿ ಪ್ರಾಂಶುಪಾಲ ಮಹಾಬಲೇಶ್ವರಪ್ಪ ಸ್ವಾಗತಿಸಿದರು. ಬಿಐಟಿ ಪಾಲಿಟೆಕ್ನಿಕ್‌ನ ನಿರ್ದೇಶಕ ಡಾ| ಅಜೀಜ್ ಮುಸ್ತಫಾ ನೂತನ ಪದವೀ ಧರ ರಿಗೆ ಪ್ರಮಾಣ ವಚನ ಬೋಧಿಸಿ ದರು. ಕಂಪ್ಯೂಟರ್ ಸೈನ್ಸ್ ಮುಖ್ಯಸ್ಥ ಮುಸ್ತಫಾ ಬಸ್ತಿ ಕೋಡಿ ವಂದಿಸಿದರು. ಉಪನ್ಯಾಸಕಿ ಅಂಕಿತಾ ಬೇಕಲ್ ಕಾರ್ಯಕ್ರಮ ನಿರ್ವಹಿಸಿದರು.