Advertisement
ಕಾಲೇಜು ಆರಂಭಕ್ಕೆ ಸಂಬಂಧಿಸಿದಂತೆ ರಾಜ್ಯ ಸರಕಾರ, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ, ವಿ.ವಿ.ಗಳು ಹಾಗೂ ಕಾಲೇಜು ಆಡಳಿತ ಮಂಡಳಿಗಳು ಎಲ್ಲ ರೀತಿಯ ಸಿದ್ಧತೆಯನ್ನು ಮಾಡಿಕೊಂಡಿವೆ. ತರಗತಿ ಕೊಠಡಿಯ ಬೋಧನೆಯ ಜತೆಗೆ ಆನ್‌ಲೈನ್ ಹಾಗೂ ಆಫ್ಲೈನ್ ಬೋಧನೆಗಳು ನಿರಂತರವಾಗಿರಲಿವೆ. ಸುರಕ್ಷತಾ ಕ್ರಮವಾಗಿ ಕಾಲೇಜು ಆವರಣವನ್ನು ಸ್ಯಾನಿಟೈಸ್ ಮಾಡುವ ಕಾರ್ಯ ಆರಂಭವಾಗಿದೆ.
ವಿದ್ಯಾರ್ಥಿಗಳು ಕಾಲೇಜಿಗೆ ಬರಲೇಬೇಕು ಎಂಬ ಕಡ್ಡಾಯ ನಿಯಮವಿಲ್ಲ. ಹಾಗೆಯೇ ವಿದ್ಯಾರ್ಥಿಗಳು ಕಾಲೇಜಿಗೆ ಕಡ್ಡಾಯವಾಗಿ ಬರಬೇಕು ಎಂದು ಆಡಳಿತ ಮಂಡಳಿಗಳು ಒತ್ತಡ ಹೇರುವಂತಿಲ್ಲ. ಬಹುತೇಕ ವಿಶ್ವವಿದ್ಯಾನಿಲಯಗಳು ನ. 17ರಿಂದ ಪದವಿಯ 5ನೇ ಸೆಮಿಸ್ಟರ್ ಮತ್ತು ಸ್ನಾತಕೋತ್ತರ ಪದವಿಯ 3ನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಮಾತ್ರ ಭೌತಿಕ ತರಗತಿ ನಡೆಸಲಿವೆ. ಉಳಿದಂತೆ ಎಲ್ಲ ವಿದ್ಯಾರ್ಥಿಗಳಿಗೂ ಆನ್‌ಲೈನ್ ಹಾಗೂ ಆಫ್ಲೈನ್ ವ್ಯವಸ್ಥೆಯಲ್ಲೇ ಬೋಧನೆ ಮುಂದುವರಿಯಲಿವೆ. ಪದವಿಯ 5ನೇ ಸೆಮಿಸ್ಟರ್ ಹಾಗೂ ಸ್ನಾತಕೋತ್ತರ ಪದವಿಯ 3ನೇ ಸೆಮಿಸ್ಟರ್ ವಿದ್ಯಾರ್ಥಿಗಳು ಭೌತಿಕ ತರಗತಿಯಲ್ಲಿ ಭಾಗವಹಿಸಲು ಇಚ್ಛಿಸದೇ ಇದ್ದಲ್ಲಿ ಆನ್‌ಲೈನ್ ಬೋಧನಾ ವ್ಯವಸ್ಥೆಯಲ್ಲಿ ಪಾಲ್ಗೊಳ್ಳಬಹುದಾಗಿದೆ. ಸರಕಾರದ ಸೂಚನೆಯಂತೆ ನ. 17ರಿಂದ ತರಗತಿ ಆರಂಭಿಸಲು ವಿಶ್ವವಿದ್ಯಾನಿಲಯ ವ್ಯಾಪ್ತಿಯ ಎಲ್ಲ ಕಾಲೇಜುಗಳಿಗೂ ಸೂಚನೆ ನೀಡಿದ್ದೇವೆ. ಎಸ್‌ಒಪಿ ಅನುಷ್ಠಾನ ಸೇರಿ ಕಾಲೇಜಿನ ಪ್ರವೇಶದ್ವಾರದಲ್ಲಿ ಅನುಸರಿಸಬೇಕಾದ ಕ್ರಮಗಳ ಬಗ್ಗೆಯೂ ಮಾಹಿತಿ ನೀಡಿದ್ದೇವೆ.
-ಡಾ| ಪಿ.ಎಸ್. ಯಡಪಡಿತ್ತಾಯ ಕುಲಪತಿ, ಮಂಗಳೂರು ವಿ.ವಿ.