Advertisement

ಪದವೀಧರ ಶಿಕ್ಷಕರ ನೇಮಕ: 75% ಹುದ್ದೆ ಖಾಲಿ

06:10 AM Jun 23, 2018 | Team Udayavani |

ಬೆಂಗಳೂರು: ರಾಜ್ಯದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಖಾಲಿಯಿರುವ ಹತ್ತು ಸಾವಿರ ಪದವೀಧರ ಶಿಕ್ಷಕರ ಹುದ್ದೆಗೆ ಅರ್ಹತಾ ಪಟ್ಟಿಯಲ್ಲಿರುವ ಎಲ್ಲ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಂಡರೂ, ಶೇ.75ಕ್ಕಿಂತಲೂ ಹೆಚ್ಚು ಹುದ್ದೆ ಖಾಲಿ ಉಳಿಯಲಿದೆ.

Advertisement

ಏಕೆಂದರೆ, ರಾಜ್ಯದ 35 ಶೈಕ್ಷಣಿಕ ಜಿಲ್ಲೆಗಳಲ್ಲಿ ಲಭ್ಯವಿರುವ 10 ಸಾವಿರ ಪದವೀಧರ ಶಿಕ್ಷಕರ ಹುದ್ದೆಗೆ ನಡೆಸಿದ ಸ್ಪರ್ಧಾತ್ಮಕ ಪರೀಕ್ಷೆಗೆ 50,633 ಅಭ್ಯರ್ಥಿಗಳು ಹಾಜರಾದರೂ ಅದರಲ್ಲಿ ನೇಮಕಾತಿಗೆ ಅರ್ಹತೆ ಪಡೆದವರು 2,264 ಮಾತ್ರ. ಇದೀಗ ನೇಮಕಾತಿಗಾಗಿ 1:2 ಅನುಪಾತದಲ್ಲಿ ಸಂದರ್ಶನಕ್ಕೆ ಕರೆದಿರುವುದರಿಂದ ಅಂತಿಮವಾಗಿ 1,332 ಅಭ್ಯರ್ಥಿಗಳು ಮಾತ್ರ ನೇಮಕಗೊಳ್ಳಲಿದ್ದಾರೆ. ಹೀಗಾಗಿ,ಶೇ.75ಕ್ಕಿಂತ ಹೆಚ್ಚು ಹುದ್ದೆ ಖಾಲಿ ಉಳಿಯಲಿದ್ದು, ಮತ್ತೂಮ್ಮೆ ಸ್ಪರ್ಧಾತ್ಮಕ ಪರೀಕ್ಷೆ ನಡೆಸಬೇಕಿದೆ.

ಸರ್ಕಾರಿ ಶಾಲೆಯ 6ರಿಂದ 8ನೇ ತರಗತಿಯಲ್ಲಿ ಲಭ್ಯವಿರುವ ಹತ್ತು ಸಾವಿರ ಹುದ್ದೆಗೆ 1:2ರಅನುಪಾತದಲ್ಲಿ (ಒಂದು ಹುದ್ದೆಗೆ ಎರಡು ಅಭ್ಯರ್ಥಿ) ಜಿಲ್ಲಾವಾರು ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಲಾಗಿದೆ.

ಜೂನ್‌ 23ರಿಂದ 30ರವರೆಗೆ ಆಯ್ಕೆಯಾದ ಅಭ್ಯರ್ಥಿಗಳ ಅಂಕಪಟ್ಟಿ, ಮೂಲದಾಖಲೆ ಪರಿಶೀಲನೆ ನಡೆಯಲಿದೆ. ಜುಲೈ 13ರಂದು 1:1 ಅನುಪಾತದ ತಾತ್ಕಾಲಿಕ ಪಟ್ಟಿ ಪ್ರಕಟಿಸಲಾಗುತ್ತದೆ. ಜುಲೈ 29ರಿಂದ ನೇಮಕಾತಿ
ಕೌನ್ಸೆಲಿಂಗ್‌ ನಡೆಯಲಿದೆ.

ಜಿಲ್ಲಾವಾರು ಮಾಹಿತಿ: ಬೆಂಗಳೂರು ಉತ್ತರ ಜಿಲ್ಲೆಯಲ್ಲಿ 101 ಹುದ್ದೆಗಳಿಗೆ 57, ಬೆಂಗಳೂರು ದಕ್ಷಿಣ- 146 ಹುದ್ದೆಗೆ 57ಅಭ್ಯರ್ಥಿಗಳು, ಬೆಂಗಳೂರು ಗ್ರಾಮಾಂತರ-74 ಹುದ್ದೆಗೆ 9 ಅಭ್ಯರ್ಥಿಗಳು, ಚಿತ್ರದುರ್ಗ- 224 ಹುದ್ದೆಗೆ 162 ಅಭ್ಯರ್ಥಿಗಳು, ಕೋಲಾರ – 106 ಹುದ್ದೆಗೆ 30 ಅಭ್ಯರ್ಥಿಗಳು, ಶಿವಮೊಗ್ಗ- 147 ಹುದ್ದೆಗೆ 90 ಅಭ್ಯರ್ಥಿಗಳು, ತುಮಕೂರು- 70 ಹುದ್ದೆಗೆ 23 ಅಭ್ಯರ್ಥಿಗಳು, ಚಿಕ್ಕಬಳ್ಳಾಪುರ- 165 ಹುದ್ದೆಗೆ 65 ಅಭ್ಯರ್ಥಿಗಳು, ಮಧುಗಿರಿ- 140 ಹುದ್ದೆಗೆ 60 ಅಭ್ಯರ್ಥಿಗಳು, ಉಡುಪಿ- 60 ಹುದ್ದೆಗೆ 44 ಅಭ್ಯರ್ಥಿಗಳು, ಮೈಸೂರು- 226 ಹುದ್ದೆಗೆ 88 ಅಭ್ಯರ್ಥಿಗಳು, ದಕ್ಷಿಣ ಕನ್ನಡ- 197 ಹುದ್ದೆಗೆ 92 ಅಭ್ಯರ್ಥಿಗಳು ಹಾಗೂ ಉತ್ತರ ಕನ್ನಡ ಮತ್ತು ಶಿರಸಿ- 282 ಹುದ್ದೆಗೆ 108 ಅಭ್ಯರ್ಥಿಗಳು ಮಾತ್ರ ಆಯ್ಕೆಯಾಗಿದ್ದಾರೆ.

Advertisement

ಆದರೆ, ಶಿಕ್ಷಕರ ಹುದ್ದೆಗೆ ನಡೆದ ಸಂಯುಕ್ತ ಸ್ಪರ್ಧಾತ್ಮಕ ಪರೀಕ್ಷೆಯ ಕೀ ಉತ್ತರದಲ್ಲಿ ಬಹು ಆಯ್ಕೆಯ ಪ್ರಶ್ನೆಗಳ ಉತ್ತರವನ್ನು ಮಾತ್ರ ಪ್ರಕಟಿಸಿದ್ದು, ಥಿಯರಿ ಪ್ರಶ್ನೆಗಳ ಉತ್ತರವನ್ನು ಪ್ರಕಟಿಸಿಲ್ಲ. ಅಭ್ಯರ್ಥಿಗಳು ಎಷ್ಟು ಅಂಕ ಪಡೆದಿದ್ದಾರೆ ಎಂಬುದನ್ನು ಬಹಿರಂಗ ಮಾಡಿಲ್ಲ. ಕಟ್‌ ಆಫ್ ಅಂಕದ ಬಗ್ಗೆಯೂ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಸ್ಪಷ್ಟತೆ ಇಲ್ಲ ಎಂದು ಪರೀಕ್ಷೆ ಬರೆದಿದ್ದ ಅಭ್ಯರ್ಥಿಗಳು ಇಲಾಖೆಯ ವಿರುದಟಛಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಧಿಕಾರಿಗಳ ಚರ್ಚೆ ಪದವೀಧರ ಶಿಕ್ಷಕರ ಹುದ್ದೆಗೆ ಕೌನ್ಸೆಲಿಂಗ್‌ಗೆ ಅರ್ಹತೆ ಪಡೆದಿರುವ ಅಭ್ಯರ್ಥಿಗಳ ಪಟ್ಟಿಯಲ್ಲಿ ಇರುವ ಸಂಖ್ಯೆಗೂ, ಖಾಲಿ ಹುದ್ದೆಗೂ ಅಜಗಜಾಂತರ ವ್ಯತ್ಯಾಸ ಇರುವುದರಿಂದ ಇನ್ನೊಮ್ಮೆ ಪರೀಕ್ಷೆ ನಡೆಸಬೇಕೆ ಅಥವಾ ಈಗಾಗಲೇ ನಡೆಸಿರುವ ಸ್ಪರ್ಧಾತ್ಮಕ ಪರೀಕ್ಷೆಯ ಅಭ್ಯರ್ಥಿಗಳನ್ನೇ ಎರಡನೇ ಹಂತದಲ್ಲಿ ಪರಿಗಣಿಸಬಹುದೇ ಎಂಬುದರ ಬಗ್ಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಹಾಗೂ ನಿರ್ದೇಶಕರು ಶುಕ್ರವಾರ ಸಭೆ ನಡೆಸಿದರಾದರೂ ಯಾವುದೇ ತೀರ್ಮಾನ ಕೈಗೊಳ್ಳಲು ಸಾಧ್ಯವಾಗಿಲ್ಲ.

ಮೊದಲ ಹಂತದಲ್ಲಿ ಆಯ್ಕೆ ಪ್ರಕ್ರಿಯೆ ಮುಗಿದ ತಕ್ಷಣವೇ ಎರಡನೇ ಹಂತದ ನೇಮಕಾತಿಗೆ ಅವಕಾಶ ನೀಡುವಂತೆ ಮುಖ್ಯಮಂತ್ರಿ ಹಾಗೂ ಪ್ರಾಥಮಿಕ ಶಿಕ್ಷಣ ಸಚಿವರಿಗೆ ಪತ್ರ ಬರೆಯಲಿದ್ದೇವೆ. ಎರಡನೇ ಹಂತಕ್ಕೆ ಅಭ್ಯರ್ಥಿಗಳ
ಆಯ್ಕೆಗೆ ಮಾನದಂಡ ಏನು ಎಂಬುದು ಇನ್ನೂ ತೀರ್ಮಾನವಾಗಿಲ್ಲ.
– ಶಾಲಿನಿ ರಜನೀಶ್‌, ಪ್ರಧಾನ ಕಾರ್ಯದರ್ಶಿ, ಸಾರ್ವಜನಿಕ ಶಿಕ್ಷಣ ಇಲಾಖೆ

– ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next