Advertisement

ಸರ್ಕಾರಿ ಶಾಲಾ  95 ಶಿಕ್ಷಕರಿಗೆ ಪದವಿ ಶಿಕ್ಷಣ ಭಾಗ್ಯ  

03:45 AM Jun 26, 2017 | Team Udayavani |

ಬೆಂಗಳೂರು: ಸರ್ಕಾರಿ ಶಾಲೆಯಲ್ಲಿ ಇಂಗ್ಲಿಷ್‌ ಹಾಗೂ ವಿಜ್ಞಾನ ಶಿಕ್ಷಕರ ಬಲವರ್ಧನೆಗಾಗಿ ಸಾರ್ವಜನಿಕ ಶಿಕ್ಷಣ ಇಲಾಖೆಯು ಅರ್ಹ 95 ಶಿಕ್ಷಕರಿಗೆ ವೇತನ ಸಹಿತ ಪದವಿ ಶಿಕ್ಷಣ ನೀಡಲು ಮುಂದಾಗಿದೆ.

Advertisement

ಆದರೆ, ಈ ಭಾಗ್ಯ ಎಲ್ಲಾ ಶಿಕ್ಷಕರಿಗಿಲ್ಲ. ದ್ವಿತೀಯ ಪಿಯುನಲ್ಲಿ ವಿಜ್ಞಾನ ಓದಿದವರಿಗೆ ಮತ್ತು ಆಂಗ್ಲ ಮಾಧ್ಯಮ ಅಥವಾ ಆಂಗ್ಲ ಪ್ರಥಮ ಭಾಷೆಯಾಗಿ ಅಭ್ಯಾಸ ಮಾಡಿದ ಅಥವಾ ಇಂಗ್ಲಿಷ್‌ನಲ್ಲಿ ಶೇ.60ಕ್ಕಿಂತ ಅಧಿಕ ಅಂಕ ಪಡೆದ ಅಭ್ಯರ್ಥಿಗಳಿಗೆ ಮಾತ್ರ ಪದವಿ ಪೂರೈಸುವ ಅವಕಾಶ ಕಲ್ಪಿಸಿದೆ. ದ್ವಿತೀಯ ಪಿಯು ನಂತರ ಡಿ.ಇಡಿ ಕೋರ್ಸ್‌ ಮುಗಿಸಿ ನೇರವಾಗಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ನೇಮಕಗೊಂಡಿರುವ ಅಭ್ಯರ್ಥಿಗಳಿಗೆ ಸರ್ಕಾರವೇ ವೇತನ ಸಹಿತವಾಗಿ ಪದವಿ ಕೋರ್ಸ್‌ಗೆ ಅವಕಾಶ ನೀಡುತ್ತಿದೆ.

ಬಿ.ಎಸ್ಸಿ ಮತ್ತು ಇಂಗ್ಲಿಷ್‌ ಐಚ್ಛಿಕ ವಿಷಯವಾಗಿ ಬಿ.ಎ. ಮಾಡುವವರಿಗೆ ಮಾತ್ರ ಇದರ ಅನುಕೂಲ ನೀಡಿದೆ. ದ್ವಿತೀಯ ಪಿಯುನಲ್ಲಿ ವಿಜ್ಞಾನ ವಿಭಾಗದಲ್ಲಿ ಓದಿದವರು ನೇರವಾಗಿ ಬಿ.ಎಸ್ಸಿ ಮಾಡಬಹುದು. ಆದರೆ, ಬಿ.ಎ. ಪದವಿ ಮಾಡಲು ಇಚ್ಛಿಸುವ ಶಿಕ್ಷಕರ ಇತಿಹಾಸ, ರಾಜ್ಯಶಾಸ್ತ್ರ, ಅರ್ಥಶಾಸ್ತ್ರ, ಭೂಗೋಳ ಶಾಸ್ತ್ರ ಮೊದಲಾದ ಐಚ್ಛಿಕ ಸಂಯೋಜಿತ ವಿಷಯದ ಜತೆಗೆ ಇಂಗ್ಲಿಷ್‌ ಕಡ್ಡಾಯವಾಗಿ ತೆಗೆದುಕೊಳ್ಳಬೇಕು. ಅಂದರೆ, ಮೂರು ಐಚ್ಛಿಕ ವಿಷಯದಲ್ಲಿ ಒಂದು ಇಂಗ್ಲಿಷ್‌ ಆಗಿರಬೇಕು.

ಹತ್ತು ವರ್ಷ ಸೇವೆ ಕಡ್ಡಾಯ:
ಸರ್ಕಾರದ ಹಣದಲ್ಲಿ ಪದವಿ ಪೂರೈಸಿದ ನಂತರ ಕನಿಷ್ಠ 10 ವರ್ಷ ಕಡ್ಡಾಯವಾಗಿ ಶಿಕ್ಷಣ ಇಲಾಖೆಯಲ್ಲಿ ಸೇವೆ ಸಲ್ಲಿಸುವ ಬಗ್ಗೆ 10 ರೂ. ಮೌಲ್ಯದ ಬಾಂಡ್‌ ಪೇಪರ್‌ನಲ್ಲಿ ಸಹಿ ಸಮೇತವಾಗಿ ಶಿಕ್ಷಕರು ಬರೆದುಕೊಡಬೇಕು. ನಿಗದಿತ ಅವಧಿಯಲ್ಲಿ ಪದವಿ ಪೂರೈಸದೇ ಇದ್ದಲ್ಲಿ ಒಂದು ವರ್ಷ ಹೆಚ್ಚುವರಿಯಾಗಿ ನೌಕರರ ರಜೆಯಲ್ಲಿ ತೆಗೆದುಕೊಳ್ಳುವ ಅವಕಾಶ ಇದೆ. ಹಾಗೆಯೇ ಬಿ.ಎಸ್ಸಿ ಅಥವಾ ಬಿ.ಎ. ಇನ್‌ ಇಂಗ್ಲಿಷ್‌ ವಿಷಯದಲ್ಲಿ ಪದವಿ ಪೂರೈಸುವ ಬಗ್ಗೆಯೂ 20 ರೂ. ಬಾಂಡ್‌ ಪೇಪರ್‌ನಲ್ಲಿ ಸಹಿ ಮಾಡಿ ಸರ್ಕಾರಕ್ಕೆ ನೀಡಬೇಕು.

ಭವಿಷ್ಯದ ಲೆಕ್ಕಾಚಾರ:
ಸರ್ಕಾರಿ ಶಾಲೆಯಲ್ಲಿ ಈಗಾಗಲೇ ಆಂಗ್ಲ ಮಾಧ್ಯಮ ಆರಂಭವಾಗಿದೆ. ಹಾಗೆಯೇ ಪ್ರೌಢಶಾಲೆಯಲ್ಲಿ ವಿಜ್ಞಾನ ಮತ್ತು ಇಂಗ್ಲಿಷ್‌ ಶಿಕ್ಷಕರ ಕೊರತೆಯಿದೆ. ವಿಜ್ಞಾನ ಹಾಗೂ ಇಂಗ್ಲಿಷ್‌ ಶಿಕ್ಷಕರನ್ನೇ ಮುಖ್ಯವಾಗಿಟ್ಟುಕೊಂಡು ಪದವಿ ಶಾಲಾ ಶಿಕ್ಷಕರಿಗೆ ಪದವಿ ಭಾಗ್ಯ ಕರುಣಿಸಲಾಗುತ್ತಿದೆ. ಇಂಗ್ಲಿಷ್‌ ಐಚ್ಛಿಕ ವಿಷಯವಾಗಿ ತೆಗೆದುಕೊಂಡು ಪದವಿ ಪೂರೈಸಿದ ಶಿಕ್ಷಕರನ್ನು ಮತ್ತು ಬಿ.ಎಸ್ಸಿ ಪೂರೈಸಿದ ಶಿಕ್ಷಕರನ್ನು ಪ್ರೌಢಶಾಲೆಗೆ ಅಥವಾ ಹಿರಿಯ ಪ್ರಾಥಮಿಕ ಶಾಲೆಗೆ ನಿಯುಕ್ತಿ ಮಾಡಿ, ಇಂಗ್ಲಿಷ್‌ ಹಾಗೂ ವಿಜ್ಞಾನ ಶಿಕ್ಷಕರ ಕೊರತೆ ನೀಗಿಸುವ ಉದ್ದೇಶ ಇದರ ಹಿಂದಿದೆ.

Advertisement

ಪದವಿ ಭಾಗ್ಯ ಪಡೆದ ಶಿಕ್ಷಕರು
ಬಾಗಲಕೋಟೆ ಜಿಲ್ಲೆಯಲ್ಲಿ 3 ಬಿಎ, 2 ಬಿಎಸ್ಸಿ, ರಾಯಚೂರಿನಲ್ಲಿ 9 ಬಿಎ, 3 ಬಿಎಸ್ಸಿ, ಬೆಂ.ಉತ್ತರದಲ್ಲಿ 1 ಬಿಎಸ್ಸಿ, ಶಿವಮೊಗ್ಗದಲ್ಲಿ ತಲಾ ಒಂದೊಂದು ಬಿಎ.,ಬಿಎಸ್ಸಿ, ಚಿತ್ರದುರ್ಗದಲ್ಲಿ ಎರಡು ಬಿಎ, ದಾವಣಗೆರೆಯಲ್ಲಿ 4 ಬಿಎ, ಮಧುಗಿರಿಯಲ್ಲಿ 8 ಬಿಎ, 1 ಬಿಎಸ್ಸಿ, ದಕ್ಷಿಣ ಕನ್ನಡದಲ್ಲಿ ತಲಾ ಎರಡು ಬಿಎ,ಬಿಎಸ್ಸಿ, ರಾಮನಗರದಲ್ಲಿ 3 ಬಿಎ, ಬಳ್ಳಾರಿಯಲ್ಲಿ 1 ಬಿಎ, ಕಲಬುರಗಿಯಲ್ಲಿ 3 ಬಿಎ, 1ಬಿಎಸ್ಸಿ, ಗದಗದಲ್ಲಿ 1 ಬಿಎಸ್ಸಿ, ಶಿರಸಿಯಲ್ಲಿ ತಲಾ ಒಂದೊಂದು ಬಿಎ,ಬಿಎಸ್ಸಿ, ಹಾಸನದಲ್ಲಿ 3 ಬಿಎಸ್ಸಿ, ಕೊಪ್ಪಳದಲ್ಲಿ 1 ಬಿಎ, ಬೀದರ್‌ನಲ್ಲಿ 4 ಬಿಎಸ್ಸಿ, 2 ಬಿಎ, ಮೈಸೂರಿನಲ್ಲಿ ತಲಾ 2 ಬಿಎ, ಬಿಎಸ್ಸಿ, ಹಾವೇರಿಯಲ್ಲಿ 10 ಬಿಎ, ಹಾಗೂ 1 ಬಿಎಸ್ಸಿ, ಉತ್ತರ ಕನ್ನಡದಲ್ಲಿ 1 ಬಿಎಸ್ಸಿ, ಬೆಂ.ದಕ್ಷಿಣದಲ್ಲಿ 2 ಬಿಎ, ವಿಜಯಪುರದಲ್ಲಿ ತಲಾ 3 ಬಿಎ, ಬಿಎಸ್ಸಿ, ಬೆಳಗಾವಿಯಲ್ಲಿ ತಲಾ 2 ಬಿಎ, ಬಿಎಸ್ಸಿ, ಚಿಕ್ಕಮಗಳೂರಿನಲ್ಲಿ 4 ಬಿಎ, 2 ಬಿಎಸ್ಸಿ ಮತ್ತು ಯಾದಗಿರಿಯಲ್ಲಿ ಒಂದು ಬಿಎಸ್ಸಿ ಸೇರಿ ರಾಜ್ಯದ 34 ಜಿಲ್ಲೆಯಲ್ಲಿ 63 ಶಿಕ್ಷಕರಿಗೆ ಬಿಎ ಮತ್ತು 32 ಶಿಕ್ಷಕರಿಗೆ ಬಿಎಸ್ಸಿ ಕೋರ್ಸ್‌ ಅವಕಾಶ ನೀಡಲಾಗಿದೆ.

ಅರ್ಹ ಶಿಕ್ಷಕರಿಗೆ ಪದವಿ ಶಿಕ್ಷಣಕ್ಕೆ ವೇತನ ಸಹಿತವಾಗಿ ಅವಕಾಶ ಮಾಡಿಕೊಡುತ್ತಿದ್ದೇವೆ. ಜತೆಗೆ 10 ವರ್ಷ ಕಡ್ಡಾಯ ಸೇವೆಯ ಬಾಂಡ್‌ ಕೂಡ ಶಿಕ್ಷಕರಿಂದ ಪಡೆದಿದ್ದೇವೆ. ಪದವಿ ಕೋರ್ಸ್‌ಗೆ ಶಿಕ್ಷಕರ ಆಯ್ಕೆ ಬಿಇಒ ಹಾಗೂ ಡಿಡಿಪಿಐಗಳಿಗೆ ನೀಡಲಾಗಿದೆ.
– ಬಿ.ಕೆ.ಬಸವರಾಜು, ನಿರ್ದೇಶಕ, ಪ್ರಾಥಮಿಕ ಶಿಕ್ಷಣ

Advertisement

Udayavani is now on Telegram. Click here to join our channel and stay updated with the latest news.

Next