ಚಿಕ್ಕಬಳ್ಳಾಪುರ: ಬೇಲಿಯೇ ಎದ್ದು ಹೊಲ ಮೇಯ್ದ ಕಥೆ ಇದು. ಲಕ್ಷಾಂತರ ರೂ. ಮೌಲ್ಯದ ಲಾರಿ ಟೈರುಗಳ ಕಳವು ಪ್ರಕರಣದಲ್ಲಿ ಭಾಗಿಯಾಗಿದ್ದ ಇಬ್ಬರು ಆರೋಪಿಗಳನ್ನು ಖಚಿತ ಮಾಹಿತಿ ಆಧರಿಸಿ ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆ ಪಿಎಸ್‌ಐ ಚೇತನ್ ಕುಮಾರ್ ಮಾರ್ಗದರ್ಶನದಲ್ಲಿ ಠಾಣೆ ಅಪರಾಧ ವಿಭಾಗದ ಪೇದೆಗಳಾದ ಹರೀಶ್, ರಮಣಾರೆಡ್ಡಿ ಮತ್ತಿತರ ತಂಡ ಹಲವು ದಿನಗಳ ಹಿಂದೆ ಬಂಧಿಸಿದ್ದು, ತದ ನಂತರ ಪ್ರಕರಣ ದಾಖಲಿಸದೇ ಆರೋಪಿಗಳೊಂದಿಗೆ ಶಾಮೀಲಾಗಿ ಠಾಣೆಯಿಂದ ಬಿಟ್ಟು ಕಳುಹಿಸಿದ್ದಾರೆಂಬ ಗಂಭೀರ ಆರೋಪ ಕೇಳಿ ಬಂದಿದೆ.
ಲಾರಿ ತಂದು ನಿಲ್ಲಿಸಿದ್ದು ಅನುಮಾನ: ಕಳೆದ ಮಾ.23 ರಂದು ಪೇದೆ ಹರೀಶ್ ಕೆಎ-40, ಎ.8858 ಹತ್ತು ಚಕ್ರದ ಲಾರಿಯನ್ನು ನಗರ ಠಾಣೆ ಆವರಣದಲ್ಲಿ ತಂದು ನಿಲ್ಲಿಸಿ ಹೋದಾಗ ಮಾಲೀಕರು ಬಂದು ಲಾರಿ ಬಿಡುವಂತೆ ಕೇಳಿದಾಗ ಈ ಟೈರು ಕಳವು ಪ್ರಕರಣ ಬೆಳಕಿಗೆ ಬಂದಿದೆ. ಇಡೀ ಘಟನೆಯ ಪ್ರಮುಖ ಸೂತ್ರಧಾರಿ ಹರೀಶ್ ಎಂಬಾತನಾಗಿದ್ದು, ಅದಕ್ಕೆ ಮೇಲಾಧಿಕಾರಿಗಳ ಗಮನಕ್ಕೆ ತರದೇ ಗ್ರಾಮಾಂತರ ಠಾಣೆ ಪಿಎಸ್‌ಐ ಚೇತನ್ ಕುಮಾರ್ ಟೈರು ಕಳವು ಆರೋಪಿಗಳನ್ನು ಬಂಧಿಸಿ ಠಾಣೆಗೆ ಕರೆ ತಂದು ಬಳಿಕ ಅವರೊಂದಿಗೆ ಶಾಮೀಲಾಗಿ
ಬಿಡುಗಡೆ ಮಾಡಿದ್ದಾರೆಂಬ ಆರೋಪ ಕೇಳಿ ಬಂದಿದೆ.
ವರದಿ ಕೇಳಿದ ಎಸ್ಪಿ: ಬಂಧಿಸಿದ್ದ ಕಳ್ಳರ ಮೇಲೆ ಯಾವುದೇ ಪ್ರಕರಣ ದಾಖಲಿಸದೇ ಅವರನ್ನು ಠಾಣೆಯಿಂದ ಬಿಡುಗೊಳಿಸಿದ ವಿಷಯದ ಬಗ್ಗೆ ಎಸ್ಪಿ ಜಿ. ಕೆ.ಮಿಥುನ್ ಕುಮಾರ್ ತನಿಖೆಗೆ ಆದೇಶಿಸಿದ್ದಾರೆ.
ತನಿಖೆ: ಈ ಕುರಿತು ಉದಯವಾಣಿ, ಎಸ್ಪಿ ಜಿ.ಕೆ. ಮಿಥುನ್ ಕುಮಾರ್‌ರನ್ನು ಸಂಪರ್ಕಿಸಿದಾಗ ಅವರು, ಈ ಬಗ್ಗೆ ಮಾಹಿತಿ ನನ್ನ ಗಮನಕ್ಕೂ ಬಂದಿದ್ದು, ತನಿಖೆ ನಡೆಸಲಾಗುತ್ತಿದೆ. ತನಿಖೆ ವರದಿ ಬಂದ ಬಳಿಕ ಸಮಗ್ರ ಮಾಹಿತಿ ತಿಳಿಸುವುದಾಗಿ ತಿಳಿಸಿದರು.