ಲೋಕೋಪಯೋಗಿ ಇಲಾಖೆ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಆರೋಪಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಪಾರದರ್ಶಕತೆ ಕಾಪಾಡಲು ಈ ಬಾರಿ ಆದ್ಯತೆ ನೀಡಲಾಗಿದ್ದು, ಜಿಪಿಎಸ್ ಮೂಲಕ ಕಾಮಗಾರಿಗಳ ಮೇಲೆ ನಿಗಾ ಇಡಲು ತೀರ್ಮಾನಿಸಲಾಗಿದೆ.
2018-19ನೇ ಸಾಲಿನಲ್ಲಿ ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಗೆ ಒಟ್ಟು 9,271 ಕೋಟಿ ರೂ. ಒದಗಿಸಲಾಗಿದ್ದು, ಇದು ಕಳೆದ ಸಾಲಿಗಿಂತ 712 ಕೋಟಿ ರೂ. ಹೆಚ್ಚು. 2017-18ನೇ ಸಾಲಿನಲ್ಲಿ 8559 ಕೋಟಿ ರೂ. ನೀಡಲಾಗಿತ್ತು.
ರಸ್ತೆ ಕಾಮಗಾರಿಗಳು ಕಾಲಮಿತಿಯಲ್ಲಿ ಪೂರ್ಣ ಗೊಳ್ಳುವಂತೆ ನೋಡಿಕೊಳ್ಳಲು ಕಾಮಗಾರಿಗಳಿಗೆ ಸಂಬಂಧಿಸಿದಂತೆ ಅತ್ಯಾಧುನಿಕ ಉಪಕರಣಗಳಿಂದ ರಸ್ತೆಗಳ ಮಾಹಿತಿ ಸಂಗ್ರಹಿಸಿ ಅವುಗಳ ಸಹಾಯದಿಂದ ವಾರ್ಷಿಕ ಕಾಮಗಾರಿಗಳ ಯೋಜನೆ ತಯಾರಿಸಿ ಆದ್ಯತೆ ಮೇಲೆ ರಸ್ತೆ ಕಾಮಗಾರಿ ನಿರ್ವಹಿಸಲು ಕ್ರಮ ಕೈಗೊಳ್ಳಲಾಗುವುದು. ಇಲಾಖೆಯ ರಸ್ತೆ, ಸೇತುವೆ ಮತು ¤ ಕಟ್ಟಡಗಳ ವಿವರ ಹಾಗೂ ಪ್ರಗತಿಯಲ್ಲಿರುವ ಕಾಮಗಾರಿಗಳ ವಿವರಗಳನ್ನು ಜಿಯೋ ಟ್ಯಾಗ್ ಮಾಡಿ ಜಿಪಿಎಸ್‌ನಲ್ಲಿ ಅಳವಡಿಸುವ ಬಗ್ಗೆ ಪ್ರಸ್ತಾಪಿಸಲಾಗಿದೆ. ಅಲ್ಲದೆ, ರಸ್ತೆ ಅಪಘಾತಗಳನ್ನು ತಡೆಗಟ್ಟಲು ಇಲಾಖೆಯ ವಿವಿಧ ಯೋಜನೆಯಡಿ ರಸ್ತೆ ಸುರಕ್ಷತಾ ಕಾರ್ಯಕ್ರಮಗಳನ್ನು ಕೈಗೊಳ್ಳಲು ನಿರ್ಧರಿಸಲಾಗಿದ್ದು, ಅದಕ್ಕಾಗಿ 150 ಕೋಟಿ ರೂ. ತೆಗೆದಿರಿಸಲಾಗಿದೆ.
ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ ಹಂತ-4ರಲ್ಲಿ (ಕೆಶಿಪ್) 2722 ಕಿ.ಮೀ. ಉದ್ದದ ರಾಜ್ಯ ಹೆದ್ದಾರಿ ರಸ್ತೆಗಳನ್ನು 3480 ಕೋಟಿ ರೂ. ವೆಚ್ಚದಲ್ಲಿ ಕೈಗೆತ್ತಿಕೊಳ್ಳಲು ಉದ್ದೇಶಿಸಿದ್ದು, 2018-19ನೇ ಸಾಲಿನಲ್ಲಿ ವಿವರವಾದ ಯೋಜನಾ ವರದಿ ಸಿದ್ಧಪಡಿಸುವುದು, ಬೆಂಗಳೂರಿನ ಬಹುಮಹಡಿ ಕಟ್ಟಡ (ಎಂ.ಎಸ್.ಬಿಲ್ಡಿಂಗ್) ಬಳಿ 20 ಕೋಟಿ ರೂ. ವೆಚ್ಚದಲ್ಲಿ ಮಲ್ಟಿ ಲೆವೆಲ್ ಕಾರ್ ಪಾರ್ಕಿಂಗ್ ನಿರ್ಮಾಣ ಮಾಡುವುದಾಗಿ ಘೋಷಿಸಲಾಗಿದೆ.
ಕೆಆರ್‌ಡಿಸಿಎಲ್ ವತಿಯಿಂದ ವಿಶ್ವ ಬ್ಯಾಂಕ್ ನೆರವಿನೊಂದಿಗೆ ಕೈಗೊಳ್ಳಲಾಗುತ್ತಿರುವ 300 ಕಿ.ಮೀ. ಉದ್ದದ 5 ರಸ್ತೆಗಳನ್ನು 2018-19ನೇ ಸಾಲಿನಲ್ಲಿ ಪೂರ್ಣಗೊಳಿಸುವುದು, ದೆಹಲಿಯ ಕರ್ನಾಟಕ ಭವನ-1ರ ಮುಂಭಾಗವನ್ನು ಕೆಡವಿ ಮುಂದಿನ 2 ವರ್ಷಗಳಲ್ಲಿ 30 ಕೋಟಿ ರೂ. ವೆಚ್ಚದಲ್ಲಿ ಹೊಸ ಭವನ ನಿರ್ಮಿಸುವ ಬಗ್ಗೆಯೂ ಪ್ರಸ್ತಾಪಿಸಲಾಗಿದೆ.
ಸ್ತ್ರೀಯರಿಗೆ ಡ್ರೆಸ್ಸಿಂಗ್ ರೂಂ
ಲೋಕೋಪಯೋಗಿ ಇಲಾಖೆ ಈ ಬಾರಿ ಮಹಿಳೆಯರ ಬಗ್ಗೆ ಗಮನಹರಿಸಿದೆ. ಎಲ್ಲಾ ಸಾರ್ವಜನಿಕ ಕಟ್ಟಡಗಳಲ್ಲಿ ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯಗಳೊಂದಿಗೆ ಡ್ರೆಸ್ಸಿಂಗ್ ರೂಂಗಳನ್ನು ನಿರ್ಮಿಸಲು ನಿರ್ಧರಿಸಿದ್ದು, ಇದಕ್ಕಾಗಿ ಲೋಕೋಪಯೋಗಿ ಕೋಡ್‌ಗೆ ಅಗತ್ಯ ತಿದ್ದುಪಡಿ ತರುವ ಬಗ್ಗೆ ಹೇಳಲಾಗಿದೆ.