Advertisement

ಮುಳುಗಡೆ ಜಮೀನಿಗೆ ಜಿಪಿಎಸ್‌ ಸರ್ವೇ; ಕ್ರಸ್ಟ್‌ಗೇಟ್‌ ಅಳವಡಿಕೆಗೆ ಚಿಂತನೆ

06:20 PM Sep 13, 2022 | Team Udayavani |

ಚಿತ್ರದುರ್ಗ: ವಾಣಿವಿಲಾಸ ಸಾಗರ ಜಲಾಶಯದ ಹಿನ್ನೀರು ಭಾಗದ ರೈತರು ಹಾಗೂ ಡ್ಯಾಂನ ಹಿತದೃಷ್ಟಿ ಕಾಪಾಡುವ ಉದ್ದೇಶದಿಂದ ಸೋಮವಾರ ವಿವಿ ಸಾಗರ ಜಲಾಶಯದ ಮೇಲ್ಭಾಗದಲ್ಲಿರುವ ಅತಿಥಿಗೃಹದಲ್ಲಿ ಮಹತ್ವದ ಸಭೆ ನಡೆಯಿತು.

Advertisement

ಭದ್ರಾ ಮೇಲ್ದಂಡೆ ಮುಖ್ಯ ಇಂಜಿನಿಯರ್‌ ಎಂ. ರವಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಉಪವಿಭಾಗಾಧಿಕಾರಿ, ಭೂಸ್ವಾಧೀನಾಧಿಕಾರಿ, ತಹಶೀಲ್ದಾರ್‌ಗಳು, ಅರಣ್ಯ ಇಲಾಖೆ ಅ ಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಗಳ ಅ ಧಿಕಾರಿಗಳು ಭಾಗವಹಿಸಿದ್ದರು. ಹಿನ್ನೀರಿನಿಂದ ಮುಳುಗಡೆಯಾಗಿರುವ ಹೊಸದುರ್ಗ ತಾಲೂಕಿನ ಜಮೀನುಗಳನ್ನು ಕಂದಾಯ, ತೋಟಗಾರಿಕೆ, ಕೃಷಿ ಇಲಾಖೆಗಳಿಂದ ಜಂಟಿಯಾಗಿ ಜಿಪಿಎಸ್‌ ಮೂಲಕ ಸರ್ವೇ ನಡೆಸಿ ಸೆ. 30ರ ವೇಳೆಗೆ ವರದಿ ಸಲ್ಲಿಸಲು ತೀರ್ಮಾನಿಸಲಾಯಿತು.

ಎಲ್ಲಾ ಕಡೆಗಳಲ್ಲಿ ನೀರು ನಿಂತಿರುವುದರಿಂದ ಡ್ರೋನ್‌ ಅಥವಾ ಜಿಪಿಎಸ್‌ ಮೂಲಕ ಸರ್ವೇ ನಡೆಸಬೇಕು. ಇದಕ್ಕಾಗಿ ಸಾಕಷ್ಟು ಸಿಬ್ಬಂದಿಗಳು ಬೇಕಾಗುತ್ತಾರೆ ಎಂದು ಸರ್ವೇ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಭದ್ರಾ ಮೇಲ್ದಂಡೆ ಯೋಜನೆಯ ಮುಖ್ಯ ಇಂಜಿನಿಯರ್‌ ಎಂ.ರವಿ, ಈಗಾಗಲೇ ಜಲಾಶಯಕ್ಕಾಗಿ ಭೂ ಸ್ವಾಧೀನ ಆಗಿರುವ ಭೂಮಿಯನ್ನು ಹೊರತುಪಡಿಸಿ ಉಳಿದಂತೆ ಸಮಸ್ಯೆಯಾಗಿರುವ ರೈತರ ಜಮೀನು ಸರ್ವೇ ನಡೆಸಿ ಪರಿಹಾರಕ್ಕಾಗಿ ಸರ್ಕಾರಕ್ಕೆ ಕಳುಹಿಸಬೇಕು ಎಂದರು.

ಹೊಸದುರ್ಗ ತಹಶೀಲ್ದಾರ್‌ ಮಲ್ಲಿಕಾರ್ಜುನ್‌ ಮಾತನಾಡಿ, ಸುಮಾರು1600 ಎಕರೆ ಕೃಷಿ ಭೂಮಿ ಮುಳುಗಡೆಯಾಗಿರಬಹುದು ಎಂದು ಅಂದಾಜಿಸಲಾಗಿದೆ. ನಿರಂತರವಾಗಿ ಮಳೆಯಾದ ಕಾರಣ ಏಕಾಏಕಿ ನೀರು ಏರಿಕೆಯಾಗಿದೆ. ನೀರು ಕೋಡಿ ಮೂಲಕ ಹೊರ ಹೋಗುವವರೆಗೆ ಜಮಾವಣೆ ಆಗುತ್ತಲೇ ಇತ್ತು. ಈಗ ಮಳೆ ಸ್ವಲ್ಪ ಕಡಿಮೆಯಾಗಿದೆ. ಹೊಸದುರ್ಗ ತಾಲೂಕಿನ ಮಾಡದಕೆರೆ, ಮತ್ತೋಡು ಹಾಗೂ ಕಸಬಾ ಹೋಬಳಿ ವ್ಯಾಪ್ತಿಯಲ್ಲಿ 25 ಕಂದಾಯ ಗ್ರಾಮಗಳಲ್ಲಿ ನೀರಿನಿಂದ ಸಮಸ್ಯೆ ಆಗಿದೆ ಎಂದು ಮಾಹಿತಿ ನೀಡಿದರು.

ಕ್ರಸ್ಟ್‌ಗೇಟ್‌ ಅಳವಡಿಕೆಗೆ ಚಿಂತನೆ: ವಾಣಿವಿಲಾಸ ಸಾಗರ ಜಲಾಶಯ ಭರ್ತಿಯಾದ ನಂತರ ನೀರಿನ ಹರಿವು, ಆಗುವ ಸಮಸ್ಯೆಗಳು ಒಂದೊಂದಾಗಿ ಅರಿವಿಗೆ ಬರುತ್ತಿವೆ. ಈಗಾಗಲೇ ಡ್ಯಾಂನ ಹಿತದೃಷ್ಟಿಯಿಂದ ಡ್ಯಾಂ ಸೇಫ್ಟಿ ತಂಡ ಭೇಟಿ ನೀಡಿ ಪರಿಶೀಲಿಸಿದೆ. ಡ್ಯಾಂ ಸುರಕ್ಷತೆ ಬಗ್ಗೆ ಯಾವ ಅನುಮಾನವೂ ಇಲ್ಲ, ಸುರಕ್ಷಿತವಾಗಿದೆ. ಈ ಕುರಿತು ಒಂದು ವಾರದಲ್ಲಿ ಈ ತಂಡ ವರದಿ ನೀಡಲಿದೆ. ಇದರೊಟ್ಟಿಗೆ ತಜ್ಞರಿಂದ ಮಾಹಿತಿ ಪಡೆದುಕೊಂಡು ಈ ವರ್ಷ ಜಲಾಶಯಕ್ಕೆ ಕ್ರಸ್ಟ್‌ಗೇಟ್‌ ಅಳವಡಿಕೆ ಮಾಡಲು ಚಿಂತನೆ ನಡೆಸಲಾಗಿದೆ.

Advertisement

ಎಫ್‌ಆರ್‌ ಎಲ್‌ ಲೆವೆಲ್‌ ನೋಡಿಕೊಂಡು ನೀರು ನಿರ್ವಹಣೆ ಮಾಡಲಾಗುತ್ತದೆ. ಗೇಟ್‌ ಅಳವಡಿಸಿದರೆ ನೀರು ನಿಲ್ಲುವ ಬೌಂಡರಿ ಸರಿಯಾಗಿ ಗೊತ್ತಾಗುತ್ತದೆ ಎಂದು ಸಭೆಯಲ್ಲಿ ಭದ್ರಾ ಮೇಲ್ದಂಡೆ ಮುಖ್ಯ ಇಂಜಿನಿಯರ್‌ ಎಂ. ರವಿ ಮಾಹಿತಿ ನೀಡಿದರು. ರಾಜ್ಯದ ಯಾವೆಲ್ಲಾ ಜಲಾಶಯಗಳಲ್ಲಿ ಎಂತಹ ವ್ಯವಸ್ಥೆ ಇದೆ ಎನ್ನುವುದನ್ನು ಗಮನದಲ್ಲಿಟ್ಟುಕೊಂಡು ಜಲಾಶಯ ಗರಿಷ್ಠ ಮಟ್ಟ ತಲುಪುವ ಮೊದಲೇ ನೀರನ್ನು ಹೊರಬಿಡುವ ಬಗ್ಗೆ ಅಧ್ಯಯನ ನಡೆಸಲಾಗುವುದು ಎಂದರು.
ಸಭೆಯಲ್ಲಿ ವಿಶೇಷ ಭೂಸ್ವಾಧೀನಾಕಾರಿ ಹರಿಶಿಲ್ಪ, ಉಪವಿಭಾಗಾಧಿಕಾರಿ ಚಂದ್ರಯ್ಯ, ಡಿಡಿಎಲ್‌ಆರ್‌ ಬಿ. ರಾಮಾಂಜನೇಯ, ಅಧಿಕಾರಿಗಳಾದ ಆರ್‌. ಚಂದ್ರಮೌಳಿ, ಮೋಹನ್‌ಕುಮಾರ್‌, ನವೀನ್‌, ಟಿ. ರಾಜಣ್ಣ ಮತ್ತಿತರರು ಭಾಗವಹಿಸಿದ್ದರು.

ಕೃಷಿ ಭೂಮಿ ಸ್ವಾಧೀನ ಇಲ್ಲ
ಹೊಸದುರ್ಗ ಶಾಸಕರು ಕೃಷಿ ಭೂಮಿ ಸ್ವಾಧೀನ ಮಾಡಿಕೊಂಡು ಪರಿಹಾರ ನೀಡುವ ಪ್ರಸ್ತಾಪ ಮುಂದಿಟ್ಟಿದ್ದಾರೆ. ಆದರೆ ಈಗ ಆ ಪ್ರಶ್ನೆ ಬರುವುದಿಲ್ಲ. ಕ್ರಸ್ಟ್‌ಗೇಟ್‌ ಅಳವಡಿಸುವುದರಿಂದ ಎಲ್ಲ ಸಮಸ್ಯೆಗಳು ಬಗೆಹರಿಯುತ್ತವೆ. ಆನಂತರ ನೋಡಿಕೊಂಡು ಮುಂದುವರೆಯಲಾಗುತ್ತದೆ. ಸದ್ಯಕ್ಕೆ ಈ ವರ್ಷ ಕೋಡಿ ಬಿದ್ದು ನೀರು ಹರಿದಿರುವುದರಿಂದ ಮುಳುಗಡೆ ಆಗಿರುವ ರೈತರಿಗೆ ಪರಿಹಾರ ನೀಡಲು ಸರ್ವೇ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು.

ಜಲಾಶಯದ ಗರಿಷ್ಠ ಮಟ್ಟದವರೆಗೆ ನೀರು ನಿಂತರೂ ರೈತರ ಜಮೀನುಗಳಿಗೆ ಸಮಸ್ಯೆ ಆಗುವುದಿಲ್ಲ. ಗರಿಷ್ಠ ಮಟ್ಟದ ಮೇಲ್ಪಟ್ಟು ನೀರು ನಿಂತು ಆಗುವ ಸಮಸ್ಯೆಗಳಿಗೆ ಸರ್ಕಾರ ನಿಯಮಾನುಸಾರ ತೀರ್ಮಾನ ತೆಗೆದುಕೊಳ್ಳಲಿದೆ.
ಎಂ. ರವಿ, ಭದ್ರಾ ಮೇಲ್ದಂಡೆ
ಯೋಜನೆ ಮುಖ್ಯ ಇಂಜಿನಿಯರ್‌

ತಿಪ್ಪೇಸ್ವಾಮಿ ನಾಕೀಕೆರೆ

 

Advertisement

Udayavani is now on Telegram. Click here to join our channel and stay updated with the latest news.

Next