Advertisement

ಖಾಸಗಿ ಬಸ್‌ಗಳಿಗೂ ಜಿಪಿಎಸ್‌ ಕಡ್ಡಾಯ

11:34 AM Dec 28, 2018 | |

ಬೆಂಗಳೂರು: ಖಾಸಗಿ ಬಸ್‌ಗಳ ಮೇಲೆ ನಿಗಾ ವಹಿಸುವ ಉದ್ದೇಶದಿಂದ ಆ ವಾಹನಗಳಿಗೂ ಜಿಪಿಎಸ್‌ ಅಳವಡಿಕೆ ಕಡ್ಡಾಯಗೊಳಿಸುವ ಬಗ್ಗೆ ಚಿಂತಿಸಲಾಗಿದೆ ಎಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ತಿಳಿಸಿದರು.

Advertisement

ವಿಧಾನಸೌಧದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆನ್‌ಲೈನ್‌ನಲ್ಲಿ ಟಿಕೆಟ್‌ ಬುಕ್ಕಿಂಗ್‌ ಮಾಡಿಕೊಂಡು ಪ್ರಯಾಣಿಕರನ್ನು ಕರೆದೊಯ್ಯುವುದು ನಿಯಮಬಾಹಿರವಾಗಿದ್ದು, ಪರ್ಮಿಟ್‌ ರದ್ದತಿಗೂ ಅವಕಾಶವಿದೆ. ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಜರುಗಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.

“ಒಪ್ಪಂದ’ದ‌ಡಿ (ಕಾಂಟ್ರಾಕ್ಟ್ ಕ್ಯಾರೇಜ್‌) ಖಾಸಗಿ ಬಸ್‌ನಲ್ಲಿ ನಿರ್ದಿಷ್ಟ ಸ್ಥಳದಿಂದ ಮತ್ತೂಂದು ನಿರ್ದಿಷ್ಟ ಸ್ಥಳಕ್ಕೆ ಪ್ರಯಾಣಿಕರನ್ನು ಕರೆದೊಯ್ಯಬಹುದಾಗಿದ್ದು, ಆನ್‌ಲೈನ್‌ನಲ್ಲಿ ಟಿಕೆಟ್‌ ಹಂಚಿಕೆ ಮಾಡಿ ಪ್ರಯಾಣಿಕರನ್ನು ಕರೆದೊಯ್ಯವುದು ನಿಯಮದ ಸ್ಪಷ್ಟ ಉಲ್ಲಂಘನೆಯಾಗಿದೆ. ಹಾಗಾಗಿ ಈ ಬಗ್ಗೆ ಪರಿಶೀಲನೆ ನಡೆಸುವಂತೆ ಸೂಚಿಸಲಾಗಿದೆ.

ಖಾಸಗಿ ಬಸ್‌ಗಳಿಗೂ ಜಿಪಿಎಸ್‌ ಅಳವಡಿಕೆ ಕಡ್ಡಾಯಗೊಳಿಸಲು ಮಂಡಳಿ ಸಭೆಯಲ್ಲಿ ಚಿಂತಿಸಲಾಗಿದೆ. ಇದರಿಂದ ಖಾಸಗಿ ಬಸ್‌ಗಳ ಮೇಲೆ ನಿಗಾ ವಹಿಸಲು, ಪ್ರಯಾಣಿಕರ ಹೆಸರಿನಲ್ಲಿ ಸರಕು ಸಾಗಣೆ, ಇತರೆ ನಿಯಮ ಉಲ್ಲಂಘನೆ ಬಗ್ಗೆ ಕೇಂದ್ರ ಭಾಗದಿಂದಲೇ ಪರಿಶೀಲಿಸುವ ವ್ಯವಸ್ಥೆ ತರುವ ಬಗ್ಗೆಯೂ ಚರ್ಚಿಸಲಾಗಿದೆ ಎಂದು ಮಾಹಿತಿ ನೀಡಿದರು.

ಪ್ರಾದೇಶಿಕ ಸಾರಿಗೆ ಇಲಾಖೆಯಲ್ಲಿ (ಆರ್‌ಟಿಒ) ಹಲವು ವರ್ಷಗಳಿಂದ ನೇಮಕಾತಿ ನಡೆದಿಲ್ಲ. ಹೀಗಾಗಿ ಒಬ್ಬ ಅಧಿಕಾರಿಯೇ ಮೂರ್‍ನಾಲ್ಕು ಕಚೇರಿಗಳನ್ನು ನಿರ್ವಹಿಸುವಂತಾಗಿದೆ. ಪ್ರಥಮ ದರ್ಜೆ ಸಹಾಯಕರು, ಸೂಪರಿಂಟೆಂಡೆಂಟ್‌ಗಳು ಆರ್‌ಟಿಒ ಅಧಿಕಾರಿಗಳ ಜವಾಬ್ದಾರಿ ನಿರ್ವಹಿಸುವ ಸ್ಥಿತಿ ಇದೆ. ಸುಮಾರು 270 ಹುದ್ದೆ ಖಾಲಿ ಇವೆ.

Advertisement

ಈಗಾಗಲೇ ಕರ್ನಾಟಕ ಲೋಕಸೇವಾ ಆಯೊಗವು 139 ಹುದ್ದೆ ನೇಮಕಕ್ಕೆ ಸಂಬಂಧಪಟ್ಟಂತೆ 15 ದಿನದಲ್ಲಿ ಪಟ್ಟಿ ಬಿಡುಗಡೆ ಮಾಡಲಿದೆ. ಉಳಿದ ಹುದ್ದೆ ಭರ್ತಿಗೂ ಕ್ರಮ ವಹಿಸಲಾಗುವುದು ಎಂದು ಹೇಳಿದರು. ಗಡಿಭಾಗಗಳಲ್ಲಿ ಆರ್‌ಟಿಒ ಅಧಿಕಾರಿಗಳ ಕಾರ್ಯ ನಿರ್ವಹಣೆ ಬಗ್ಗೆ ದೂರುಗಳು ಬರುತ್ತಿವೆ. ಹಾಗಾಗಿ ಚೆಕ್‌ಪೋಸ್ಟ್‌ಗಳಲ್ಲಿ ಸೂಕ್ತ ತಪಾಸಣಾ ಹಾಗೂ ಭದ್ರತಾ ವ್ಯವಸ್ಥೆ, ಸಿಸಿಟಿವಿ ಕ್ಯಾಮೆರಾ ಅಳವಡಿಸಿ ಕೇಂದ್ರ ಕಚೇರಿಯಿಂದಲೇ ಎಲ್ಲದರ ಮೇಲ್ವಿಚಾರಣೆ ನಡೆಸುವ ವ್ಯವಸ್ಥೆ ಕಲ್ಪಿಸಬೇಕಿದೆ.

ಆರ್‌ಟಿಒ ಇಲಾಖೆ ಬಗ್ಗೆ ಮೊದಲಿನಿಂದಲೂ ದೂರುಗಳಿದೆ. ಇಲಾಖೆಯನ್ನು ಭದ್ರಪಡಿಸಲು ಒತ್ತು ನೀಡಲಾಗುವುದು. ರಾಜ್ಯದಲ್ಲಿ 1.30 ಲಕ್ಷ ಉದ್ಯೋಗಿಗಳು ಅದರಲ್ಲೂ ಬಹುಪಾಲು ಕನ್ನಡಿಗರಿಗೆ ಉದ್ಯೋಗ ನೀಡಿರುವ ಸಾರಿಗೆ ಇಲಾಖೆಯು ಭದ್ರವಾಗಿ ಉಳಿಯಬೇಕಿದ್ದು, ಆ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಸಾರಿಗೆ ಇಲಾಖೆಯಲ್ಲಿ ಚಾಲಕರು, ನಿರ್ವಾಹಕರು, ಮೆಕಾನಿಕ್‌ಗಳು, ಸಹಾಯಕರು ಸೇರಿ 25,000 ಹುದ್ದೆ ಭರ್ತಿಯಾಗಿದೆ. ಒಂದು ವರ್ಷ ಗ್ಯಾರೇಜ್‌ನಲ್ಲಿ ಕಾರ್ಯ ನಿರ್ವಹಿಸಿದ ಅನುಭವವಿರುವವರನ್ನು ಆಯ್ಕೆ ಮಾಡಬೇಕೆಂದು ಕೇಂದ್ರ ಮೋಟಾರು ವಾಹನ ಕಾಯ್ದೆಯಲ್ಲಿದೆ. ಆದರೆ ಆ ರೀತಿಯ ಅನುಭವ ಪಡೆದವರ ಲಭ್ಯತೆ ಕಡಿಮೆಯಿದೆ. ಹಾಗಾಗಿ ಒಂದು ವರ್ಷ ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಡಿಪೋಗಳಲ್ಲಿ ಪ್ರೊಬೆಷನರಿಯಾಗಿ ಕಾರ್ಯ ನಿರ್ವಹಿಸಿ ನಂತರ ಪರೀಕ್ಷೆ ಪಾಸಾದವರನ್ನು ನೇಮಕ ಮಾಡಿಕೊಳ್ಳುವ ವ್ಯವಸ್ಥೆ ತರಲಾಗುತ್ತಿದೆ ಎಂದು ತಿಳಿಸಿದರು.

24 ವೋಲ್ವೋ ಬಸ್‌ ಖರೀದಿ: ದೂರದ ಪ್ರದೇಶಗಳಿಗೆ ಹಳೆಯ ಬಸ್‌ಗಳನ್ನು ಬಳಸಲಾಗುತ್ತಿದ್ದು, ಖಾಸಗಿ ಸಂಸ್ಥೆಗಳು ಸ್ಲಿàಪರ್‌ ಬಸ್‌ಗಳನ್ನು ನಿಯೋಜಿಸಿವೆ. ಆ ಹಿನ್ನೆಲೆಯಲ್ಲಿ ನಿಗಮಗಳ ವತಿಯಿಂದಲೂ ದೂರದ ಪ್ರಯಾಣಗಳಿಗೆ ಸ್ಲಿàಪರ್‌ ಬಸ್‌ಗಳನ್ನು ನಿಯೋಜಿಸಲಾಗುವುದು. ರಜಾ ದಿನಗಳಲ್ಲೂ ಹೆಚ್ಚುವರಿ ಹೈಟೆಕ್‌ ಬಸ್‌ಗಳನ್ನು ಪ್ರಯಾಣಿಕರ ಅನುಕೂಲಕ್ಕೆ ನಿಯೋಜಿಸಲಾಗುವುದು. ಹೊಸದಾಗಿ 24 ವೋಲ್ವೋ ಬಸ್‌ ಖರೀದಿಸಲಾಗುತ್ತಿದ್ದು, ವಾಯವ್ಯ ಸಾರಿಗೆ ನಿಗಮ 313 ಬಸ್‌ ಖರೀದಿಗೆ ಮಂಡಳಿ ಸಭೆ ಅನುಮೋದನೆ ನೀಡಿದೆ ಎಂದು ಹೇಳಿದರು.

ವಿನಾಯ್ತಿ ಮನವಿಗೆ ಸ್ಪಂದನೆ ಇಲ್ಲ: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಿರ್ಮಿಸಿರುವ ಮಾರ್ಗಗಳಲ್ಲಿ ಸಂಚರಿಸುವ ಸಾರಿಗೆ ನಿಗಮಗಳ ಬಸ್‌ಗಳಿಗೆ ಟೋಲ್‌ ವಿನಾಯ್ತಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದರೂ ಸ್ಪಂದನೆ ಸಿಕ್ಕಿಲ್ಲ. ಹಾಗಾಗಿ ಟೋಲ್‌ ಶುಲ್ಕವನ್ನು ಅನಿವಾರ್ಯವಾಗಿ ಪ್ರಯಾಣಿಕರಿಗೆ ವಿಧಿಸಬೇಕಾಗುತ್ತದೆ ಎಂದು ಪ್ರತಿಕ್ರಿಯಿಸಿದರು.

ಪ್ರತ್ಯೇಕ ಕಾನೂನು: 15 ವರ್ಷ ಮೀರಿದ ಸಾರ್ವಜನಿಕ ಸಾರಿಗೆ ವಾಹನಗಳನ್ನು ಗುಜರಿಗೆ ಹಾಕುವ ಚಿಂತನೆಗೆ ಕೇಂದ್ರದ ಮೋಟಾರು ಸಾರಿಗೆ ಕಾಯ್ದೆಯಲ್ಲಿ ಅವಕಾಶವಿಲ್ಲ. ಹಾಗಾಗಿ ಸಾರ್ವಜನಿಕ ಆಕ್ಷೇಪಣೆಗಳನ್ನು ಸ್ವೀಕರಿಸಿ ಪ್ರತ್ಯೇಕ ಕಾನೂನು ತರಲು ಚಿಂತಿಸಲಾಗಿದೆ ಎಂದು ಸಚಿವ ಡಿ.ಸಿ. ತಮ್ಮಣ್ಣ ಮಾಹಿತಿ ನೀಡಿದರು.

ರಾಜ್ಯದಲ್ಲಿ 15 ವರ್ಷ ಮೀರಿದ 21,096 ಸಾರ್ವಜನಿಕ ಸಾರಿಗೆ ವಾಹನಗಳಿದ್ದು, ಇದು ಒಟ್ಟಾರೆ ಖಾಸಗಿ ಸಾರಿಗೆ ವಾಹನಗಳ ಪೈಕಿ ಶೇ.20ರಷ್ಟಾಗಲಿದೆ. 10 ವರ್ಷ ಮೀರಿದ ಸಾರಿಗೆ ನಿಗಮಗಳ ಬಸ್‌ಗಳನ್ನು ಗುಜರಿಗೆ ಹಾಕಲಾಗುತ್ತಿದೆ. ಆದರೆ ಖಾಸಗಿ ವಾಹನಗಳಿಗೆ ಈ ರೀತಿಯ ನಿರ್ಬಂಧವಿಲ್ಲ. ಇದು ಪ್ರಯಾಣಿಕರಿಗೆ ಅಸುರಕ್ಷತೆಯಾಗಿ ಪರಿಣಮಿಸಿರುವ ಬಗ್ಗೆ “ಉದಯವಾಣಿ’ ಇತ್ತೀಚೆಗೆ ಸರಣಿ ಲೇಖನಗಳನ್ನು ಪ್ರಕಟಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next