ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಇನ್ನೊಂದು ವರ್ಷದಲ್ಲಿ ದೇಶಾದ್ಯಂತ ಟೋಲ್ ಮುಕ್ತ ಮಾಡುವುದಾಗಿ ಘೋಷಿಸಿದ್ದಾರೆ. ಇದಕ್ಕೆ ಬದಲಾಗಿ ಜಿಪಿಎಸ್ ಆಧರಿತವಾಗಿ ಟೋಲ್ ಸಂಗ್ರಹ ಮಾಡುವುದಾಗಿ ತಿಳಿಸಿದ್ದಾರೆ. ಸದ್ಯ ದೇಶದಲ್ಲಿ ಪ್ರತಿಶತ 93ರಷ್ಟು ವಾಹನಗಳಲ್ಲಿ ಫಾಸ್ಟಾಗ್ ಅಳವಡಿಕೆ ಮಾಡಲಾಗಿದ್ದು, ಇದನ್ನು ಬಳಸಿಕೊಂಡೇ ದೇಶಾದ್ಯಂತ ವಾಹನಗಳ ಸಂಚಾರವಾಗುತ್ತಿದೆ. ಹಾಗಾದರೆ, ಕೇಂದ್ರ ಸರಕಾರ ಹೊಸದಾಗಿ ಜಾರಿಗೆ ತರಲು ಮುಂದಾಗಿರುವ ವ್ಯವಸ್ಥೆ ಏನು, ಎತ್ತ ಎಂಬುದರ ಮೇಲೊಂದು ನೋಟ ಇಲ್ಲಿದೆ.
ಸದ್ಯ ಇರುವ ವ್ಯವಸ್ಥೆ ಏನು?: ಪ್ರಸ್ತುತ ದೇಶದ ಎಲ್ಲ ಟೋಲ್‌ಗಳೂ ನಗದು ರಹಿತವಾಗಿ ಕೆಲಸ ಮಾಡು ತ್ತಿವೆ. ಅಂದರೆ, ಶೇ. 93 ರಷ್ಟು ವಾಹನಗಳು ಫಾಸ್ಟಾಗ್ ಅಳವಡಿಸಿಕೊಂಡ ಕಾರಣದಿಂದಾಗಿ, ಟೋಲ್‌ಗಳಲ್ಲಿ ನಗದು ಸಂಗ್ರಹ ಮಾಡುತ್ತಿಲ್ಲ. ಫಾಸ್ಟಾಗ್ ವ್ಯವಸ್ಥೆಯಲ್ಲಿ ಸ್ಕ್ಯಾನರ್ ಮೂಲಕ ಟೋಲ್‌ಗಳಲ್ಲಿ ವಾಹನ ಚಾಲಕರ ಅಕೌಂಟ್‌ನಿಂದ ನೇರವಾಗಿ ಹಣ ಕಡಿತವಾಗುತ್ತಿದೆ.
ಬೇರೆ ಎಲ್ಲಿ ಬಳಕೆ ಇದೆ?: ಸದ್ಯ ಈ ಇಟಿಸಿ ವ್ಯವಸ್ಥೆಯನ್ನು ಹಲವಾರು ದೇಶಗಳಲ್ಲಿ ಬಳಸಲಾಗುತ್ತಿದೆ. ದಕ್ಷಿಣ ಕೊರಿಯಾದ ಕೊರಿಯಾ ಎಕ್ಸ್‌ಪ್ರಸ್‌ವೇ ಕಾರ್ಪೊರೇಶನ್, ತನ್ನ ಹೆದ್ದಾರಿ ಮತ್ತು ಇತರೆ ರಸ್ತೆಗಳಲ್ಲಿ ಈ ಇಟಿಸಿ ಮೂಲಕವೇ ಸ್ವಯಂ ಚಾಲಿತವಾಗಿ ಟೋಲ್ ಶುಲ್ಕವನ್ನು ಕಡಿತ ಮಾಡಿಕೊಳ್ಳುತ್ತದೆ. ಜಪಾನ್‌ನಲ್ಲಿ ಈ ಇಟಿಸಿ ವ್ಯವಸ್ಥೆಯನ್ನು 2001ರಲ್ಲೇ ಜಾರಿಗೆ ತರಲಾಗಿದೆ. ಆದರೆ, ಈ ಇಟಿಸಿ ವ್ಯವಸ್ಥೆಯನ್ನು ಮೊದಲು ಜಾರಿಗೆ ತಂದಿದ್ದು ನಾರ್ವೆ ದೇಶ. ಇಲ್ಲಿ 1986ರಿಂದಲೇ ಮಾನವ ರಹಿತ ಟೋಲ್ ಸಂಗ್ರಹ ವ್ಯವಸ್ಥೆ ಜಾರಿಯಲ್ಲಿದೆ.
ಭಾರತದಲ್ಲಿ ಹೇಗೆ ಅಳವಡಿಕೆ?
ಭಾರತದ ಪೂರ್ಣ ಹೆದ್ದಾರಿ ನೆಟ್‌ವರ್ಕ್ ಅನ್ನು ಜಿಯೋಫೆನ್ಸ್ ತಂತ್ರಜ್ಞಾನಕ್ಕೆ ಅಳವಡಿಸಬೇಕು. ಆಗ ಜಿಪಿಎಸ್ ಆಧರಿತ ಇಟಿಸಿ ವ್ಯವಸ್ಥೆ ಜಾರಿಗೆ ತರಬಹುದು. ಇದಕ್ಕಾಗಿ ಸ್ವದೇಶಿ ನಾವಿಕ್ ಜಿಪಿಎಸ್ ವ್ಯವಸ್ಥೆಯನ್ನು ಬಳಸಿಕೊಳ್ಳುವ ಸಾಧ್ಯತೆ ಇದೆ.
ಹೊಸ ವ್ಯವಸ್ಥೆ ಏನಿದು?
ಮುಂದೆ ಫ್ರೀ ಫ್ಲೋ ಸ್ಯಾಟಲೈಟ್ ಬೇಸ್ಡ್ ಇಟಿಸಿ ಸಿಸ್ಟಂ ಎಂಬ ವ್ಯವಸ್ಥೆ ಬರಲಿದೆ. ಇದರಲ್ಲಿ ಜನರ ಕಾರಿನಲ್ಲಿ ಅಳವಡಿಸಲಾಗುವ ಜಿಪಿಎಸ್ ಮತ್ತು ಜಿಪಿಆರ್‌ಎಸ್ ಅನ್ನು ಬಳಸಿಕೊಂಡು ಕಾರು ಎಲ್ಲಿದೆ ಎಂಬುದನ್ನು ಟ್ರ್ಯಾಕ್ ಮಾಡಲಾಗುತ್ತದೆ. ಇದರಲ್ಲಿ ನೀವು ಒಂದು ಪ್ರದೇಶದಿಂದ ಮತ್ತೂಂದು ಪ್ರದೇಶಕ್ಕೆ ಹೋದ ತತ್‌ಕ್ಷಣವೇ ನಿಮ್ಮ ಫಾಸ್ಟಾಗ್ ಖಾತೆಯಿಂದ ಟೋಲ್ ಹಣ ಕಡಿತವಾಗುತ್ತದೆ.