Advertisement

ಹೋಮ್ ಕ್ವಾರೆಂಟೈನ್ ಆಗಿರುವವರ ಮೇಲೆ ನಿಗಾವಹಿಸಲು ಬೆಳ್ತಂಗಡಿಯಲ್ಲಿ GPS ಆಧಾರಿತ ಹೊಸ ಆ್ಯಪ್

09:12 AM Mar 30, 2020 | Hari Prasad |

ಬೆಳ್ತಂಗಡಿ: ಕೋವಿಡ್ 19 ಮಹಾಮಾರಿ ಹಬ್ಬದಂತೆ ತಡೆಯಲು ಕೇಂದ್ರ, ರಾಜ್ಯ ಸರಕಾರಗಳು ಮತ್ತು ಆಯಾಯ ಜಿಲ್ಲಾಡಳಿತ, ಆರೋಗ್ಯ ಇಲಾಖೆಗಳು ಅದೆಷ್ಟೇ ಶ್ರಮ ವಹಿಸಿದರೂ ಈ ಮಹಾಮಾರಿ ನಮ್ಮ ರಾಜ್ಯದಲ್ಲಿ ಮಾತ್ರವಲ್ಲದೇ ದೇಶದೆಲ್ಲೆಡೆ ಹಬ್ಬುತ್ತಲೇ ಇದೆ.

Advertisement

ಕೋವಿಡ್ 19 ಸೋಂಕು ಸಮುದಾಯದಲ್ಲಿ ಹಬ್ಬಲು ಒಂದು ಪ್ರಮುಖ ಕಾರಣ ಹೋಂ ಕ್ವಾರೆಂಟೈನ್ ಆಗಿರುವ ವ್ಯಕ್ತಿಗಳ ಬೇಜವಾಬ್ದಾರಿ ವರ್ತನೆ. ಇವರ ಮೇಲೆ ಆರೋಗ್ಯ ಇಲಾಖೆ, ಜಿಲ್ಲಾಡಳಿತ, ಪೊಲೀಸ್ ಇಲಾಖೆ ಹಾಗೂ ಆಶಾ ಕಾರ್ಯಕರ್ತೆಯರು ಅದೆಷ್ಟು ನಿಗಾ ವಹಿಸಿದರೂ ಕೆಲವರು ಇದೆಲ್ಲವನ್ನೂ ಬೇಧಿಸಿ ಜನಸಾಮಾನ್ಯರ ನಡುವೆ ಬೆರೆಯುವುದರಿಂದ ಭವಿಷ್ಯದಲ್ಲಿ ಈ ಸೋಂಕು ಸಾಮುದಾಯಿಕವಾಗಿ ಹಬ್ಬುವಲ್ಲಿ ಇವರು ಪ್ರಮುಖ ಕಾರಣರಾಗುತ್ತಾರೆ.

ಇದಕ್ಕೊಂದು ಪರಿಣಾಮಕಾರಿ ಪರಿಹಾರವನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಬೆಳ್ತಂಗಡಿ ಶಾಸಕರಾಗಿರುವ ಹರೀಶ್ ಪೂಂಜಾ ಅವರು ದಿಟ್ಟ ಹೆಜ್ಜೆಯನ್ನಿರಿಸಿದ್ದು, ದೇಶದಲ್ಲೇ ಪ್ರಥಮ ಎನ್ನಬಹುದಾಗಿರುವ ಈ ಪ್ರಯತ್ನದ ಪೂರ್ವ ಸಿದ್ಧತೆಗಳೆಲ್ಲಾ ಮುಗಿದಿದೆ.

ಕಾರ್ಯಾಚರಣೆ ಹೇಗೆ?
ಐ ಸರ್ಚ್ ಎಂಬ ಸಂಸ್ಥೆಯ ನೆರವಿನಿಂದ ಅಬಿವೃದ್ಧಿಪಡಿಸಲಾಗಿರುವ Covid 19 BLT DATABASE ಎಂಬ ಹೆಸರಿನ ಈ ಆ್ಯಪ್ ಹೋಮ್ ಕ್ವಾರೆಂಟೈನ್ ನಲ್ಲಿರುವ ವ್ಯಕ್ತಿಗಳ ಚಲನವಲನದ ಮೇಲೆ ಜಿಲ್ಲಾಡಳಿತ ಹಾಗೂ ಆರೋಗ್ಯ ಅಧಿಕಾರಿಗಳಿಗೆ ನಿಗಾ ಇಡಲು ಸಾಧ್ಯವಾಗಿಸುತ್ತದೆ. ಜಿಪಿಎಸ್ ಆ‍ಧಾರದಲ್ಲಿ ಈ ಮೊಬೈಲ್ ಅಪ್ಲಿಕೇಶನ್ ಕಾರ್ಯಾಚರಿಸಲಿದೆ. ಮತ್ತು ಜಿಪಿಎಸ್ ಆಧಾರಿತ ಈ ಅ್ಯಪ್ ಮೂಲಕ ವಾರ್ ರೂಂನಲ್ಲಿ ಕುಳಿತು ಹೋಂ ಕ್ವಾರೆಂಟೈನ್ ಆಗಿರುವವರ ಚಲನವಲನಗಳ ಪೂರ್ತಿ ಮಾಹಿತಿಯನ್ನು ಅವರ ಭಾವಚಿತ್ರ ಸಹಿತ ಪಡೆಯಲು ಸಾಧ್ಯವಾಗಲಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಮೂಲಕ ಈ ಮಾರಣಾಂತಿಕ ಸೋಂಕು ಇನ್ನಷ್ಟು ಜನರಿಗೆ ಹರಡುವುದನ್ನು ತಪ್ಪಿಸಲು ಸಾಧ್ಯವಾಗಲಿದೆ ಎಂಬ ಆಶಾ ಭಾವನೆ ಶಾಸಕ ಹರೀಶ್ ಪೂಂಜಾ ಅವರದ್ದಾಗಿದೆ.

ಈ ಎಲ್ಲಾ ಮಾಹಿತಿಯನ್ನು ಶಾಸಕ ಹರೀಶ್ ಪೂಂಜಾ ಅವರು ತಮ್ಮ ಫೇಸ್ಬುಕ್ ಪುಟದಲ್ಲಿ ಇಂದು ಹಂಚಿಕೊಂಡಿದ್ದಾರೆ. ಈ ಹೊಸ ಆ್ಯಪ್ ಕಾರ್ಯಾಚರಣೆ ಪ್ರಾರಂಭಿಸಿದ ಬಳಿಕ ಇದರ ಪರಿಣಾಮಕಾರಿತ್ವದ ಕುರಿತಾಗಿ ತಿಳಿದುಬರಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next