Advertisement

ಕೊರಗರೆಡೆಗೆ ಗ್ರಾ.ಪಂ. ನಡೆ, ವಿವಿಧ ಸ್ಪರ್ಧೆಗಳೆಡೆಗೆ…

04:50 PM Mar 13, 2017 | Team Udayavani |

ಉಡುಪಿ: ಅಸ್ಪೃಶ್ಯತಾ ನಿವಾರಣೆಗೆ ಕೊರಗ ಸಮಾಜದೆಡೆಗೆ ಜಿಲ್ಲಾಡಳಿತದ ನಡೆ ಕಾರ್ಯಕ್ರಮದಡಿ ಜಿ.ಪಂ. ನೀಡಿದ ಸೂಚನೆಯನ್ನು ಅಲೆವೂರು ಗ್ರಾ.ಪಂ. ಅರ್ಥಪೂರ್ಣವಾಗಿ ರವಿವಾರ ಪಾಲಿಸಿತು. 

Advertisement

ಅಲೆವೂರು ಸಿದ್ಧಾರ್ಥನಗರದಲ್ಲಿ ಕೊರಗ ಸಮುದಾಯದವರಿಗೆ ಬೆಳಗ್ಗಿ ನಿಂದ ಮಧ್ಯಾಹ್ನದವರೆಗೆ ಹಗ್ಗಜಗ್ಗಾಟ, ಗುಂಡೆಸೆತ, ತಲೆಮೇಲೆ ಪುಸ್ತಕ ಇಟ್ಟು ನಡೆಯುವುದು, ಓಟ ಇತ್ಯಾದಿ ಕ್ರೀಡಾ ಸ್ಪರ್ಧೆಗಳು ನಡೆದವು. ಮಧ್ಯಾಹ್ನ ನಡೆದ ಸಮಾರೋಪ ಸಮಾರಂಭದಲ್ಲಿ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್‌ ಅವರು ಮಾತನಾಡಿ, ಆರೋಗ್ಯ, ಪೌಷ್ಟಿಕಾಂಶದ ಅರಿವು, ಉದ್ಯೋಗ ಮಾಹಿತಿ, ಕುಡಿಯುವ ನೀರು, ಶುಚಿತ್ವದ ಜಾಗೃತಿ ಮೂಡಿಸಲು ಜಿಲ್ಲಾಡಳಿತ ಕರೆ ನೀಡಿತ್ತು. ಅಲೆವೂರು ಗ್ರಾ.ಪಂ. ಇದನ್ನು ಉತ್ತಮ ರೀತಿಯಲ್ಲಿ ಆಯೋಜಿಸಿದೆ ಎಂದರು. 

ಮಾನವಾಭಿವೃದ್ಧಿ ಸೂಚ್ಯಂಕದಲ್ಲಿ ಉಡುಪಿ ಜಿಲ್ಲೆ ಮುಂದಿದ್ದರೂ ಕೊರಗ ಸಮುದಾಯ ಮಾತ್ರ ಶೋಷಣೆಗೆ ಒಳಗಾಗಿ ಹಿಂದುಳಿದಿದೆ. ಮಾಹಿತಿ ಮತ್ತು ಶಿಕ್ಷಣದ ಜಾಗೃತಿ ಇದ್ದರೆ ಶೋಷಣೆಯಿಂದ ಹೊರಬರಲು ಸಾಧ್ಯ. ಉದ್ಯೋಗ ಖಾತ್ರಿ ಯೋಜನೆಯಡಿ ಉದ್ಯೋಗ ಕಾರ್ಡ್‌ ಮಾಡಿಸಿದರೆ ತಮ್ಮ ಕೆಲಸದ ನಡುವೆ ಬಿಡುವಿನ ಸಮಸಯದಲ್ಲಿಯೂ ವರ್ಷಕ್ಕೆ ಸುಮಾರು 22,000 ರೂ. ವೇತನ ಗಳಿಸಲು ಸಾಧ್ಯವಿದೆ. ಗ್ರಾ.ಪಂ. ಕೆಲಸ ಕೊಡುತ್ತದೆ. ಸೇನೆಗೆ ಸೇರುವವರಿಗೆ ವಿಶೇಷ ತರಬೇತಿಯನ್ನು ಎಪ್ರಿಲ್‌ ತಿಂಗಳಲ್ಲಿ ಯೋಜಿಸಲಾಗಿದೆ. ಆಸಕ್ತರು ಬಿಇಒ ಅವರಲ್ಲಿ ಹೆಸರು ನೋಂದಾಯಿಸಬಹುದು. ದೇಶ ಸೇವೆಗೆ ಇದೊಂದು ಉತ್ತಮ ಅವಕಾಶ ಎಂದು ಜಿಲ್ಲಾಧಿಕಾರಿ ತಿಳಿಸಿದರು. 

ಕಾರ್ಯಕ್ರಮಕ್ಕೆ ವಿಶೇಷ ಆಸಕ್ತಿ ತೋರಿದ ಜಿ.ಪಂ. ಅಧ್ಯಕ್ಷ ದಿನಕರಬಾಬು ಅವರು ಇಂತಹ ಕಾರ್ಯಕ್ರಮಗಳಿಗೆ ಜಿ.ಪಂ.ನಿಂದ ಪೂರ್ಣ ಸಹಕಾರ ನೀಡಲಾಗುವುದು ಎಂದರು. ಜಿ.ಪಂ. ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ, ತಾ.ಪಂ. ಸದಸ್ಯೆ ಬೇಬಿ ರಾಜೇಶ್‌, ನೀಲಾವರ ದೇವಸ್ಥಾನದ ಮಾಜಿ ಆಡಳಿತೆ ಮೊಕ್ತೇಸರ ಬೈಕಾಡಿ ಸುಪ್ರಸಾದ ಶೆಟ್ಟಿ, ಗ್ರಾ.ಪಂ. ಉಪಾಧ್ಯಕ್ಷ ಅಶೋಕಕುಮಾರ್‌, ಸಮಾಜ ಕಲ್ಯಾಣ ಇಲಾಖಾಧಿಕಾರಿ ಸುರೇಶ್‌, ಜಿಲ್ಲಾ ಸಮಾಲೋಚಕ ಪಾಂಡುರಂಗ, ಗ್ರಾಮಕರಣಿಕೆ ಕರಿಯಮ್ಮ, ಕೊರಗ ಸಮಾಜದ ಮುಖಂಡ ರವಿ, ಲಕ್ಷ್ಮೀ ಮೊದಲಾದವರು ಉಪಸ್ಥಿತರಿದ್ದರು. ಗ್ರಾ.ಪಂ. ಪಿಡಿಒ ಬೂದ ಪೂಜಾರಿ ಸ್ವಾಗತಿಸಿ ಅಧ್ಯಕ್ಷ ಶ್ರೀಕಾಂತ ನಾಯಕ್‌ ವಂದಿಸಿದರು. ಸದಸ್ಯರಾದ ಶೇಖರ ಆಚಾರ್ಯ, ಸುಧಾಮ ಕಾರ್ಯಕ್ರಮ ನಿರ್ವಹಿಸಿದರು. ಶಾಸಕ ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಶಾಸಕರಾದ ಕೆ.ರಘುಪತಿ ಭಟ್‌, ಲಾಲಾಜಿ ಮೆಂಡನ್‌ ಮೊದಲಾದವರು ಆಗಮಿಸಿ ಶುಭ ಕೋರಿದರು. 

ಗಣ್ಯರಿಗೆ ತುಕ್ರ-ಸುಂದರಿ ದಂಪತಿ ಆತಿಥ್ಯ
ಅಲೆವೂರು ಸಿದ್ಧಾರ್ಥನಗರದಲ್ಲಿ ಸುಮಾರು 42 ಕೊರಗ ಸಮುದಾಯದವರ ಮನೆಗಳಿದ್ದು ತುಕ್ರ- ಸುಂದರಿ ದಂಪತಿ ಮನೆಯಲ್ಲಿ ಜಿಲ್ಲಾಧಿಕಾರಿ, ಜಿ.ಪಂ. ಅಧ್ಯಕ್ಷ, ಉಪಾಧ್ಯಕ್ಷರು, ಶಾಸಕರು ಮೊದಲಾದ ಗಣ್ಯರಿಗೆ ಉಣಬಡಿಸಲಾಯಿತು. ಮನೆಯಲ್ಲಿ ಜಾಗದ ಕೊರತೆ ಇರುವ ಕಾರಣ ಉಳಿದವರಿಗೆ ಪಕ್ಕದ ಮೈದಾನದಲ್ಲಿ ಊಟದ ವ್ಯವಸ್ಥೆ ಮಾಡಲಾಗಿತ್ತು. ಊಟವನ್ನು ತುಕ್ರರ ಮನೆ ಆವರಣದಲ್ಲಿ ಸಿದ್ಧಪಡಿಸಿ ಕೊರಗ ಸಮುದಾಯದವರೇ ಊಟವನ್ನು ಬಡಿಸಿದರು. 
 

Advertisement
Advertisement

Udayavani is now on Telegram. Click here to join our channel and stay updated with the latest news.

Next