ಬೆಂಗಳೂರು: ಈ ಸಲ ಗೌರಿ ಮತ್ತು ಗಣೇಶ ಹಬ್ಬ ಎರಡು ಒಂದೇ ದಿನ ಆಚರಿಸುವ ಹಿನ್ನೆಲೆ ಸಾರ್ವಜನಿಕರು ಸಡಗರ-ಸಂಭ್ರಮದಿಂದ ವಿವಿಧ ಹೂವು, ಹಣ್ಣು ಹಾಗೂ ಪೂಜಾ ಸಾಮಗ್ರಿಗಳ ಖರೀದಿ ಭರಾಟೆ ಭಾನುವಾರ ಜೋರಾಗಿತ್ತು.
ಕೆ.ಆರ್. ಮಾರುಕಟ್ಟೆ, ಬಸವನಗುಡಿ-ಗಾಂಧಿ ಬಜಾರ್, ಕೆ.ಆರ್. ಪುರಂ, ಮಲ್ಲೇಶ್ವರ, ಜಯನಗರ, ರಾಜಾಜಿನಗರ ಸೇರಿದಂತೆ ನಗರದ ಪ್ರಮುಖ ಮಾರುಕಟ್ಟೆಗಳಲ್ಲಿ ಭಾನುವಾರ ಮುಂಜಾನೆಯಿಂದಲೇ ಹಬ್ಬದ ಅಗತ್ಯ ವಸ್ತುಗಳನ್ನು ಖರೀದಿಸಲು ಜನ ಮಾರುಕಟ್ಟೆಗಳತ್ತ ಮುಖ ಮಾಡಿದ್ದರು. ನಗರದ ಪ್ರಮುಖ ರಸ್ತೆ ಬದಿಗಳಲ್ಲಿ ಒಂದೆಡೆ ಗಣೇಶ ಮೂರ್ತಿಗಳನ್ನು ಹಾಗೂ ಮತ್ತೂಂದೆಡೆಗೆ ತಾತ್ಕಾಲಿಕ ಹೂ-ಹಣ್ಣುಗಳ ಅಂಗಡಿಗಳನ್ನು ಇಟ್ಟು ವ್ಯಾಪಾರ ಮಾಡಲಾಗುತ್ತಿತ್ತು.
ಗೌರಿ ಮೂರ್ತಿ ಹಾಗೂ ತಮ್ಮ ಸಂಪ್ರದಾಯದ ಆಚರಣೆಗೆ ತಕ್ಕಂತಹ ಗಣೇಶ ವಿಗ್ರಹದ ಜತೆಗೆ ಕೈಗೆಟಕುವ ದರದಲ್ಲಿ ಸಿಗುತ್ತಿರುವ ಅಗತ್ಯ ಪೂಜಾ ಸಾಮಗ್ರಿಗಳಾದ ಗರಿಕೆ, ಬಾಳೆ ಕಂದು, ಮಾವಿನ ಎಲೆ, ಬಿಲ್ವಪತ್ರೆ, ಬಾಳೆ, ಬೇಲಾದ ಕಾಯಿ, ಎಕ್ಕೆ ಹೂವಿನ ಮಾಲೆ, ಮಲ್ಲಿಗೆ, ಸೇವಂತಿ ಹೂವು ಮುಂತಾದವುಗಳನ್ನು ಸಂಭ್ರಮದಿಂದ ಖರೀದಿಸುತ್ತಿದ್ದರು.
ವಿವಿಧ ಮಾರುಕಟ್ಟೆಗಳಲ್ಲಿ ವಸ್ತುಗಳ ಬೆಲೆಯು ಏರಿಳಿತ ಕಂಡಿದ್ದು, ಮಲ್ಲೇಶ್ವರದಲ್ಲಿ ಒಂದು ಕಟ್ಟು ಗರಿಕೆ 20 ರೂ., ಸಣ್ಣ ಬಾಳೆ ಕಂದು ಜೋಡಿಗೆ 50 ರೂ. ಆದರೆ ದೊಡ್ಡ ಅಳೆಯ ಬಾಳೆ ಕಂದು 100 ರೂ., ಜೋಡಿ ಅಡಕೆ ಕಾಯಿ 20 ರೂ.ಗೆ ಮಾರಾಟ ಮಾಡಲಾಗುತ್ತಿತ್ತು. ಅದೇ ರೀತಿ ಮಾವಿನ ಎಲೆಯ ಒಂದು ಕಟ್ಟು 20 ರೂ., ಬಿಲ್ವಪತ್ರೆ 20 ರೂ., ಒಂದು ಮಾರು ಚೆಂಡು ಹೂವಿಗೆ 50 ರೂ., 50 ಗ್ರಾಂ ಮಲ್ಲಿಗೆ ಮತ್ತು ಕನಕಾಂಬರ ಹೂವಿಗೆ ತಲಾ 80 ರೂ.ಗೆ ಮಾರಾಟ ಮಾಡುತ್ತಿದ್ದು, ಭಾನುವಾರ ಸೇವೆಂತಿಗೆ ಹೂವಿನ ದರದಲ್ಲಿ ಏರಿಕೆ ಕಂಡಿದ್ದು,250 ಗ್ರಾಂ ಹೂವಿಗೆ 60 ರೂ.ನಂತೆ ಮಾರಾಟ ಮಾಡಲಾಗುತ್ತಿದೆ ಎಂದು ವ್ಯಾಪಾರಿ ಮಂಜುನಾಥ್ ತಿಳಿಸುತ್ತಾರೆ.
ಪ್ರತಿ ವರ್ಷ ಗೌರಿ-ಗಣೇಶ ಹಬ್ಬದಲ್ಲಿ ಹೂವು-ಹಣ್ಣುಗಳ ಬೆಲೆ ಜಾಸ್ತಿ ಇರುತ್ತಿತ್ತು. ಆದರೆ, ಈ ವರ್ಷ ಸ್ವಲ್ಪ ಕಡಿಮೆ ಬೆಲೆಗೆ ಸಿಗುತ್ತಿರುವುದು ಸಮಾಧಾನಕರವಾಗಿದೆ. ಅಲ್ಲದೆ ಗೌರಿ ಮತ್ತು ಗಣೇಶನನ್ನು ಒಂದೇ ದಿನ ಆಚರಿಸುತ್ತಿರುವ ಕಾರಣ, ಎರಡು ಪೂಜೆಗೆ ಬೇಕಾದ ವಸ್ತುಗಳನ್ನು ಖರೀದಿಸಲಾಗುತ್ತಿದೆ.
– ರೇವತಿ, ಗ್ರಾಹಕರು