Advertisement

ಹಾಲಿಡೇಸ್‌ನಲ್ಲಿ ಗೌರಿ ಹೋರಾಟ!

06:00 AM Nov 17, 2017 | Team Udayavani |

ಗೌರಿ ಲಂಕೇಶ್‌ ಈಗಿಲ್ಲ. ಆದರೆ, ಅವರು ಕೊನೆಯದ್ದಾಗಿ ನಟಿಸಿದ ಚಿತ್ರದಲ್ಲಿ ಜೀವಂತವಾಗಿದ್ದಾರೆ. ಅಂದಹಾಗೆ, ಅವರ ಸಹೋದರಿ ಕವಿತ ಲಂಕೇಶ್‌ ನಿರ್ದೇಶನದ “ಸಮ್ಮರ್‌ ಹಾಲಿಡೇಸ್‌’ ಎಂಬ ಕನ್ನಡ ಹಾಗು ಇಂಗ್ಲೀಷ್‌ ಭಾಷೆಯಲ್ಲಿ ಏಕಕಾಲಕ್ಕೆ ತಯಾರಾಗಿರುವ ಮಕ್ಕಳ ಚಿತ್ರದಲ್ಲಿ ಗೌರಿ ಲಂಕೇಶ್‌ ಕಾಣಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಗೌರಿಲಂಕೇಶ್‌ ಅವರು ಯೋಗೇಶ್‌ ಮಾಸ್ಟರ್‌ ನಿರ್ದೇಶನದ “ಮರಳಿ ಮನೆಗೆ’ ಚಿತ್ರದಲ್ಲಿ ಪತ್ರಕರ್ತೆ ಹಾಗೂ ಪಬ್ಲಿಷರ್‌ ಆಗಿ ಕಾಣಿಸಿಕೊಂಡಿದ್ದರು. ಕಥೆಗಾರನೊಬ್ಬ ತನ್ನ ಪುಸ್ತಕ ಮುದ್ರಿಸಿಕೊಡಬೇಕೆಂದು ಕೇಳಿಕೊಳ್ಳುವ ದೃಶ್ಯವದು. ಚಿತ್ರದ ಆರಂಭದಲ್ಲೇ ಬರುವ ಆ ಒಂದು ದೃಶ್ಯದಲ್ಲಿ ಗೌರಿ ಲಂಕೇಶ್‌ ನಟಿಸಿದ್ದರು. ಉದ್ದುದ್ದ ಸಂಭಾಷಣೆ ಇದೆ ಅನ್ನುವ ಕಾರಣಕ್ಕೆ, ಗೌರಿ ಲಂಕೇಶ್‌ ಅವರು ತಮ್ಮದೇ ಧಾಟಿಯ ಮಾತುಗಳನ್ನು ಹರಿಬಿಡುವ ಮೂಲಕ ಆ ಚಿತ್ರದಲ್ಲಿ ಅಭಿನಯಿಸಿದ್ದರು.

Advertisement

ಅದಾದ ಬಳಿಕ ಹೆಸರಿಡದ ಒಂದು ಚಿತ್ರದಲ್ಲಿ ನಟಿಸಲು ಗ್ರೀನ್‌ಸಿಗ್ನಲ್‌ ಕೊಟ್ಟಿದ್ದರಾದರೂ, ಆ ಚಿತ್ರ ಸೆಟ್ಟೇರಲಿಲ್ಲ. ಅದಾದ ಬಳಿಕ ಗೌರಿ ಲಂಕೇಶ್‌ ಕೊನೆಯದ್ದಾಗಿ ನಟಿಸಿದ್ದು, ಕವಿತ ಲಂಕೇಶ್‌ ನಿರ್ದೇಶನದ “ಸಮ್ಮರ್‌ ಹಾಲಿಡೇಸ್‌’ ಚಿತ್ರದಲ್ಲಿ.

 ಗೌರಿ ಈ ಚಿತ್ರದಲ್ಲಿ ಹೋರಾಟಗಾರ್ತಿಯಾಗಿಯೇ ಅಭಿನಯಿಸಿದ್ದಾರೆ. ಚಿತ್ರದಲ್ಲಿರುವ ಎರಡು ದೃಶ್ಯಗಳಲ್ಲೂ ಗೌರಿ ಲಂಕೇಶ್‌ ಅವರದು ಡೈಲಾಗ್‌ಗಳಿವೆ. ಒಂದೇ ದಿನದಲ್ಲಿ ಆ ದೃಶ್ಯವನ್ನು ಗೌರಿ ಲಂಕೇಶ್‌ ಅವರ ಕಚೇರಿಯಲ್ಲೇ ಚಿತ್ರೀಕರಿಸಿದ್ದಾರೆ ಕವಿತ ಲಂಕೇಶ್‌. ಸಿನಿಮಾದಲ್ಲಿ ಒಂದು ಸನ್ನಿವೇಶ ಬರುತ್ತೆ. ಅದು ಹೋರಾಟಕ್ಕೆ ಸಂಬಂಧಿಸಿದ್ದು, ಆ ಹಿನ್ನೆಲೆಯಲ್ಲಿ ಸಾಗಿಬರುವ ಕಥೆಯಲ್ಲಿ ಹೋರಾಟಗಾರ್ತಿ ಗೌರಿ ಲಂಕೇಶ್‌ ಅವರನ್ನು ಸಂದರ್ಶಿಸುವ ದೃಶ್ಯವದು. ಅದರಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ವಿಶೇಷವೆಂದರೆ, ಗೌರಿ ಲಂಕೇಶ್‌ ಅವರ ಧ್ವನಿಯೇ ಈ ಚಿತ್ರದಲ್ಲಿದೆ. ಚಿತ್ರಕ್ಕೆ ಸಿಂಕ್‌ ಸೌಂಡ್‌ ಮಾಡಿಸಿದ್ದರಿಂದ ಅವರದೇ ವಾಯ್ಸ ಇಟ್ಟುಕೊಳ್ಳಲಾಗಿದೆ. “ಹೇಳಿಕೊಟ್ಟ ಸಂಭಾಷಣೆಗಳನ್ನು ಕನ್ನಡ ಹಾಗೂ ಇಂಗ್ಲೀಷ್‌ ಭಾಷೆಯಲ್ಲಿ ಯಥಾವತ್ತಾಗಿ ತಪ್ಪದೆ ಹೇಳಿದ್ದಾರೆ’ ಎಂದು ಖುಷಿಯಿಂದ ಹೇಳಿಕೊಳ್ಳುತ್ತಾರೆ ಕವಿತ.

ಇನ್ನು, “ಸಮ್ಮರ್‌ ಹಾಲಿಡೇಸ್‌’ ಚಿತ್ರದಲ್ಲಿ ಮತ್ತೂಂದು ವಿಶೇಷತೆಯೂ ಇದೆ. ಇಲ್ಲಿ ಲಂಕೇಶ್‌ ಕುಟುಂಬವೇ ಕೆಲಸ ಮಾಡಿದೆ. ಲಂಕೇಶ್‌ ಅವರ ಪುತ್ರಿ ಕವಿತ ಲಂಕೇಶ್‌ ನಿರ್ದೇಶನ ಮಾಡಿದರೆ, ಕವಿತಾ ಅವರ ಅಕ್ಕ ಗೌರಿ ಲಂಕೇಶ್‌ ಹೋರಾಟಗಾರ್ತಿಯಾಗಿ ಕಾಣಿಸಿಕೊಂಡಿದ್ದಾರೆ. ಇನ್ನು, ನಿರ್ದೇಶಕಿ ಕವಿತ ಅವರ ಪುತ್ರಿ ಇಶಾ ಹಾಗು ಇಂದ್ರಜಿತ್‌ ಅವರ ಪುತ್ರ ಸಮರ್‌ಜಿತ್‌ ಕೂಡ ನಟಿಸಿದ್ದಾರೆ. ಅಲ್ಲಿಗೆ ಲಂಕೇಶ್‌ ಅವರ ಕೌಟುಂಬಿಕ ಸಿನಿಮಾ ಎನ್ನಲ್ಲಡ್ಡಿಯಿಲ್ಲ. ಈಗಾಗಲೇ ಬಿಡುಗಡೆಗೆ ರೆಡಿಯಾಗಿರುವ ಈ ಚಿತ್ರದ ಟ್ರೇಲರ್‌ ಹಾಗು ಪೋಸ್ಟರ್‌ಗಳನ್ನು ನಿರ್ದೇಶಕರು ಇತ್ತೀಚೆಗೆ ಪತ್ರಕರ್ತರಿಗೆ ತೋರಿಸುವ ಮೂಲಕ ಚಿತ್ರದ ಬಗ್ಗೆ ಮಾಹಿತಿ ಕೊಟ್ಟರು.

“ಇದು ಈಗಿನ ಮಕ್ಕಳ ಮನೋವಿಕಾಸ ಕುರಿತ ಚಿತ್ರ. ಕನ್ನಡ ಮತ್ತು ಇಂಗ್ಲೀಷ್‌ ಭಾಷೆಯಲ್ಲಿ ತಯಾರಾಗಿದೆ. ಮೊದಲ ಸಲ ಇಂಗ್ಲೀಷ್‌ನಲ್ಲಿ ತಯಾರಾಗಿರುವ ಮಕ್ಕಳ ಚಿತ್ರ ಎಂಬುದು ವಿಶೇಷ. ಇಲ್ಲಿ ಕನ್ನಡ ಸಂಸ್ಕೃತಿ, ಆಚಾರ, ವಿಚಾರ, ಟೀನೇಜ್‌ ಹುಡುಗ-ಹುಡುಗಿ ನಡುವಿನ ತಳಮಳ, ತಲ್ಲಣ, ಭಾವನೆಗಳು ಇಲ್ಲಿ ವ್ಯಕ್ತವಾಗಿವೆ. ಇವತ್ತಿನ ಕಾಲಮಾನದಲ್ಲಿ ಮೊಬೈಲ್‌, ಐಪ್ಯಾಡ್‌ ಹೇಗೆಲ್ಲಾ ಪೂರಕ ಎಂಬ ವಿಷಯವನ್ನು ಇಲ್ಲಿ ಹೇಳಲಾಗಿದೆ. ಮಕ್ಕಳು ಸಮ್ಮರ್‌ನಲ್ಲಿ ಟ್ರಕ್ಕಿಂಗ್‌ಗೆ ಹೋದಾಗ ಏನೆಲ್ಲಾ ಆಗುತ್ತೆ ಅನ್ನೋದೇ ಕಥೆ’ ಎನ್ನುತ್ತಾರೆ ಕವಿತ.

Advertisement

ಅಮ್ಮನ ಜತೆ ಚಿತ್ರೀರಣದ ಸೆಟ್‌ಗೆ ಹೋಗುತ್ತಿದ್ದ ಇಶಾಗೆ, ಇಲ್ಲಿ ನಟಿಸುವಾಗ ಯಾವುದೇ ಸಮಸ್ಯೆ ಆಗಲಿಲ್ಲವಂತೆ. “ಅವರಿಲ್ಲಿ 13 ವರ್ಷದ ಜೆಸ್ಸಿ ಎಂಬ ಕ್ರಿಶ್ಚಿಯನ್‌ ಹುಡುಗಿಯಾಗಿ ನಟಿಸಿದ್ದಾರಂತೆ. ಯಾವುದೇ ನಟನೆ ತರಬೇತಿ ಪಡೆದಿಲ್ಲ. ಆದರೆ, ಸೆಟ್‌ನಲ್ಲಿ ಅಮ್ಮ ಹೇಳಿದ್ದನ್ನಷ್ಟೇ ಮಾಡಿದ್ದೇನೆ. ಅವರ ಜತೆ ಕೆಲಸ ಮಾಡಿದ್ದು ಒಳ್ಳೆಯ ಅನುಭವ ಆಗಿದೆ’ ಅನ್ನುತ್ತಾರೆ ಇಶಾ. ಉಳಿದಂತೆ ಇಲ್ಲಿ ಇಂದ್ರಜಿತ್‌ ಲಂಕೇಶ್‌ ಪುತ್ರ ಸಮರ್‌ಜಿತ್‌ ಕೂಡ ನಟಿಸಿದ್ದಾರೆ.

ಅವರೊಂದಿಗೆ , ಸೋನಿಯ, ಅಂಜ್‌ ನಟಿಸಿದ್ದು, ಪ್ರಕಾಶ್‌ರೈ ಇಲ್ಲಿ ಸ್ಟಾರ್‌ ಆಗಿಯೇ ಕಾಣಿಸಿಕೊಂಡಿದ್ದಾರೆ. ಸುಮನ್‌ ನಗರ್‌ಕರ್‌ ಅವರದೂ ಇಲ್ಲೊಂದು ವಿಶೇಷ ಪಾತ್ರವಿದೆಯಂತೆ. ಬಹುತೇಕ ಚಿಕ್ಕಮಗಳೂರು, ಕೊಪ್ಪ ಸುತ್ತಮುತ್ತ ಚಿತ್ರೀಕರಿಸಲಾಗಿದೆ. ಎ.ಸಿ.ಮಹೇಂದರ್‌ ಕ್ಯಾಮೆರಾ ಹಿಡಿದರೆ, ರೋಹಿತ್‌ ಗಾಂಧಿ ಸಂಗೀತವಿದೆ. ಚಿತ್ರದಲ್ಲಿ ಎರಡು ಹಾಡುಗಳಿದ್ದು, ಇಷ್ಟರಲ್ಲೇ ಆಡಿಯೋ ಸಿಡಿ ಬಿಡುಗಡೆ ಮಾಡುವ ಯೋಚನೆ ನಿರ್ದೇಶಕರದ್ದು. ಅವಾರ್ಡ್‌ ಬಗ್ಗೆ ತಲೆಕೆಡಿಸಿಕೊಳ್ಳದ ಕವಿತ, ಒಂದು ರಿವಾರ್ಡ್‌ ಸಿಕ್ಕರೆ ಅದೇ ಖುಷಿ ಎಂಬ ಲೆಕ್ಕಾಚಾರದಲ್ಲಿದ್ದಾರೆ.

– ವಿಜಯ್‌ ಭರಮಸಾಗರ

Advertisement

Udayavani is now on Telegram. Click here to join our channel and stay updated with the latest news.

Next