Advertisement

ಉತ್ತರ ವಶಕ್ಕೆ ಗೌಡರ ಕಾರ್ಯತಂತ್ರ

11:27 AM Mar 28, 2019 | pallavi |
ಬೆಂಗಳೂರು: ಈ ಬಾರಿಯ ಲೋಕಸಭೆ ಚುನಾವಣೆ ತುಂಬಾ ಮಹತ್ವದ್ದಾಗಿದ್ದು, ಬೆಂಗಳೂರು ಉತ್ತರ, ದಕ್ಷಿಣ, ಕೇಂದ್ರ ಕ್ಷೇತ್ರಗಳಲ್ಲಿ ಜೆಡಿಎಸ್‌ನ ಎಲ್ಲ ಶಾಸಕರು, ಮುಖಂಡರು, ಕಾರ್ಯಕರ್ತರು ಕಾಂಗ್ರೆಸ್‌ ಪರವಾಗಿ ಮನಃಪೂರ್ವಕವಾಗಿ ಕೆಲಸ ಮಾಡಬೇಕು ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ತಿಳಿಸಿದ್ದಾರೆ.
ಪಕ್ಷದ ಕಚೇರಿಯಲ್ಲಿ ಬುಧವಾರ ಬೆಂಗಳೂರು ಉತ್ತರ ಕ್ಷೇತ್ರದ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಕೂಟದ ಅಭ್ಯರ್ಥಿ ಕೃಷ್ಣ ಬೈರೇಗೌಡರ ಗೆಲುವಿಗೆ ಕಾರ್ಯತಂತ್ರ ರೂಪಿಸಲು ನಡೆದ ಸಭೆಯಲ್ಲಿ ಮಾತನಾಡಿದ ಅವರು, ನಮ್ಮಲ್ಲಿ ಯಾವುದೇ
ವ್ಯತ್ಯಾಸಗಳಿಲ್ಲ. ಕೆಳ ಮಟ್ಟದಲ್ಲೂ ಸಂದೇಶ ರವಾನಿಸಬೇಕಾಗಿದೆ. ದೇಶವ್ಯಾಪಿ ಮೋದಿ ವಿರೋಧಿ ಗಾಳಿ ಬೀಸುತ್ತಿದೆ. ಮತ್ತೂಮ್ಮೆ ಬಿಜೆಪಿ ಅಧಿಕಾರಕ್ಕೆ ಬರದಂತೆ ನೋಡಿಕೊಳ್ಳುವುದೇ ನಮ್ಮ ಗುರಿ ಎಂದು ತಿಳಿಸಿದರು.
ಸೀಟು ಹೊಂದಾಣಿಕೆಯಡಿ ಜೆಡಿಎಸ್‌ಗೆ ಬಂದಿದ್ದರೂ ಬೆಂಗಳೂರು ಉತ್ತರ ಕ್ಷೇತ್ರವನ್ನು ಕಾಂಗ್ರೆಸ್‌ಗೆ ಬಿಟ್ಟುಕೊಡಲಾಗಿದೆ. ಕೃಷ್ಣ ಬೈರೇಗೌಡರು ಸಮರ್ಥ ಹಾಗೂ ಸೂಕ್ತ ಅಭ್ಯರ್ಥಿ. ಇವರನ್ನು ನಾವು ಗೆಲ್ಲಿಸುವ ಜತೆಗೆ ದಕ್ಷಿಣ, ಕೇಂದ್ರ ಕ್ಷೇತ್ರಗಳಲ್ಲೂ ಕಾಂಗ್ರೆಸ್‌ ಅಭ್ಯರ್ಥಿಗಳ ಪರವಾಗಿ ಕೆಲಸ ಮಾಡಬೇಕು ಎಂದು ಹೇಳಿದರು.
ಬೆಂಗಳೂರು ಉತ್ತರ ಕ್ಷೇತ್ರದ ವ್ಯಾಪ್ತಿಗೆ ಬರುವ ಎಂಟು ವಿಧಾನಸಭೆ ಕ್ಷೇತ್ರಗಳ ಪೈಕಿ ಐದರಲ್ಲಿ ಕಾಂಗ್ರೆಸ್‌, ಎರಡು ಕ್ಷೇತ್ರಗಳಲ್ಲಿ ಜೆಡಿಎಸ್‌ ಶಾಸಕರಿದ್ದು ಕ್ಷೇತ್ರ ಗೆಲ್ಲಲು ಹೆಚ್ಚಿನ ಅವಕಾಶವಿದೆ. ನಾವು ಒಟ್ಟಾಗಿ ಕೆಲಸ ಮಾಡಬೇಕು ಎಂದು
ತಿಳಿಸಿದರು.
ಈ ವೇಳೆ ಮಾತನಾಡಿದ ಸಚಿವ ಕೃಷ್ಣ ಬೈರೇಗೌಡ, ಜೆಡಿಎಸ್‌ ಶಾಸಕರು ಹಾಗೂ ಮುಖಂಡರ ಬೆಂಬಲ-ಸಹಕಾರ ಕೋರಿದರು. ಪರಸ್ಪರ ಹೊಂದಾಣಿಕೆಯಿಂದ ಕೆಲಸ ಮಾಡಿ ರಾಜ್ಯದಿಂದ ಹೆಚ್ಚು ಸೀಟು ಗೆಲ್ಲುವಂತೆ ನೋಡಿಕೊಂಡು
ರಾಹುಲ್‌ಗಾಂಧಿ ಹಾಗೂ ದೇವೇಗೌಡರಿಗೆ ರಾಷ್ಟ್ರಮಟ್ಟದಲ್ಲಿ ಶಕ್ತಿ ತುಂಬೋಣ ಎಂದು ಹೇಳಿದರು.
ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ದೇವೇಗೌಡರೇ ಸ್ಪರ್ಧಿಸಬೇಕು ಎಂಬುದು ನಮ್ಮ ಅಭಿಲಾಷೆಯಾಗಿತ್ತು. ಹಲವಾರು ಬಾರಿ ನಾವು ಮನವಿ ಕೂಡ ಮಾಡಿದ್ದೆವು. ಆದರೆ, ಅಂತಿಮವಾಗಿ ಕ್ಷೇತ್ರವನ್ನು ಕಾಂಗ್ರೆಸ್‌ಗೆ ಬಿಟ್ಟುಕೊಟ್ಟಿದ್ದಾರೆ. ನಮಗೆ ಈ ಚುನಾವಣೆ ಪ್ರಮುಖವಾಗಿದ್ದು, ಎಲ್ಲರೂ ಒಟ್ಟಾಗಿ ಕೆಲಸ ಮಾಡೋಣ ಎಂದು ತಿಳಿಸಿದರು. ಜೆಡಿಎಸ್‌ ಶಾಸಕರಾದ ಗೋಪಾಲಯ್ಯ, ಮಂಜುನಾಥ್‌, ಪರಿಷತ್‌ ಸದಸ್ಯರಾದ ಟಿ.ಎ.ಶರವಣ, ಜಿಲ್ಲಾ ಜೆಡಿಎಸ್‌ ಅಧ್ಯಕ್ಷ ಪ್ರಕಾಶ್‌
ಭಾಗವಹಿಸಿದ್ದರು.
ಕೃಷ್ಣ ಬೈರೇಗೌಡ ಸರಣಿ ಸಭೆ
ಬೆಂಗಳೂರು: ಕ್ಷೇತ್ರ ಹೊಂದಾಣಿಕೆ ನಂತರದ ಬೆಳವಣಿಗೆ, ಬದಲಾವಣೆಗಳಿಂದಾಗಿ ಕೊನೇ ಕ್ಷಣದಲ್ಲಿ ಬೆಂಗಳೂರು ಉತ್ತರ ಕ್ಷೇತ್ರದ ಅಭ್ಯರ್ಥಿ ಯಾಗಿರುವ ಕೃಷ್ಣ ಬೈರೇಗೌಡ, ಕ್ಷೇತ್ರದ ವ್ಯಾಪ್ತಿಯ ಶಾಸಕರು ಹಾಗೂ ಪಕ್ಷದ ನಾಯಕರೊಂದಿಗೆ ಬುಧವಾರ ನಿರಂತರ ಸಭೆ ನಡೆಸಿದರು.
ಬೆಳಗ್ಗೆ ಕೆಪಿಸಿಸಿ ಕಚೇರಿಯಲ್ಲಿ ದಿನೇಶ್‌ ಗುಂಡೂರಾವ್‌ ನೇತೃತ್ವದಲ್ಲಿ ಕ್ಷೇತ್ರ ವ್ಯಾಪ್ತಿಯ ಮುಖಂಡರು ಹಾಗೂ ಪಕ್ಷದ ನಾಯಕರ ಸಭೆ ಕರೆದು ಚರ್ಚೆ ನಡೆಸಿದರು. ಈ ಬಾರಿ ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಮೈತ್ರಿ ಪಕ್ಷಕ್ಕೆ ಗೆಲ್ಲುವ ಅವಕಾಶವಿದ್ದು, ಎರಡೂ ಪಕ್ಷಗಳ ಶಾಸಕರು ಹಾಗೂ ಕಾರ್ಯಕರ್ತರು ಒಗ್ಗಟ್ಟು ಪ್ರದರ್ಶನ ಮಾಡಿದರೆ, ಕ್ಷೇತ್ರದಲ್ಲಿ
ಜಯ ಪಡೆಯಬಹುದು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಸಭೆಯಲ್ಲಿ ಹೇಳಿದ್ದಾರೆ.
ಅಲ್ಲದೇ ಎರಡೂ ಪಕ್ಷಗಳ ಮುಖಂಡರು ಹಾಗೂ ಪದಾಧಿಕಾರಿಗಳ ಜತೆ ಗುರುವಾರ ಜಂಟಿ ಸಭೆ ನಡೆಸಲು ನಿರ್ಧರಿಸಲಾಗಿದ್ದು, ಈ ಬಾರಿ ಶತಾಯಗತಾಯ ಗೆಲ್ಲಲೇಬೇಕೆಂದು ಕೃಷ್ಣಬೈರೇಗೌಡ ಪ್ರಯತ್ನ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಸಂಜೆ ಜೆಡಿಎಸ್‌ ಕಚೇರಿಯಲ್ಲಿ ನಡೆದ ಸಭೆಯಲ್ಲಿಯೂ ಪಾಲ್ಗೊಂಡ ಕೃಷ್ಣ ಬೈರೇಗೌಡ, ಬೆಂಗಳೂರು ಉತ್ತರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಜಂಟಿಯಾಗಿ ಕಾರ್ಯತಂತ್ರ ಹೆಣೆಯುವ ಬಗ್ಗೆ ಚರ್ಚೆ ನಡೆಸಿದರು. ಈ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಮ್ಮ ಕಾರ್ಯಕರ್ತರು ಉತ್ಸಾಹದಲ್ಲಿದ್ದಾರೆ.  ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಜನರಲ್ಲಿ ಮೈತ್ರಿ ಸರ್ಕಾರದ ಬಗ್ಗೆ ಒಲವಿದೆ. ಅದನ್ನು ಮತವಾಗಿ ಪರಿವರ್ತನೆ ಮಾಡುವ ಕೆಲಸವನ್ನು
ಕಾರ್ಯಕರ್ತರು ಮಾಡಬೇಕು. ನಾಳೆ ಅಥವಾ ನಾಡಿದ್ದು ಜಂಟಿ ಕಾರ್ಯಕರ್ತರ ಸಭೆ ನಡೆಸಲಿದ್ದೇವೆ. ಆ ನಂತರ ವಿಧಾನಸಭಾವಾರು ಪ್ರಚಾರ ಮಾಡುವುದಾಗಿ ಹೇಳಿದರು.
Advertisement

Udayavani is now on Telegram. Click here to join our channel and stay updated with the latest news.

Next