Advertisement

ಗೌಡರ ಪರ ಗೌಡ್ತಿಯರ ಪ್ರಚಾರ..!

01:32 PM Apr 08, 2019 | Team Udayavani |
ಗದಗ: ಈ ಬಾರಿ ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಶತಾಯಗತಾಯವಾಗಿ ಗೆಲುವು ಸಾಧಿಸಲು ರಣತಂತ್ರವನ್ನೇ ಹೆಣೆದಿರುವ ಕಾಂಗ್ರೆಸ್‌ ಜಿಲ್ಲೆಯ ಹಿರಿಯ ನಾಯಕ ಡಿ.ಆರ್‌. ಪಾಟೀಲ ಅವರನ್ನು ಕಣಕ್ಕಿಳಿಸಿದೆ. ಇನ್ನು ಗದಗ ಚುನಾವಣಾ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಡಿ.ಆರ್‌. ಪಾಟೀಲರ ಕುಟುಂಬದ ಮಹಿಳೆಯರು ಪ್ರಚಾರ ಕಣಕ್ಕಿಳಿದಿದ್ದರಿಂದ ಕದನ ಕಣ ಮತ್ತಷ್ಟು ರಂಗು ಪಡೆದಿದೆ.
ಬೇಸಿಗೆಯ ಬಿಸಿಲಿನ ಪ್ರಖರದೊಂದಿಗೆ ಹಾವೇರಿ-ಗದಗ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ಕಣ ಕಾವೇರುತ್ತಿದೆ. ಕಳೆದ ಎರಡು ಬಾರಿ ಲೋಕಸಭೆ ಚುನಾವಣೆಯಲ್ಲಿ ಗೆಲುವು ಕಂಡಿರುವ ಬಿಜೆಪಿಗೆ ಈ ಬಾರಿ ಸೋಲಿನ ರುಚಿ ತೋರಿಸಲು ಕೈ ಪಡೆ ನಿರ್ಧರಿಸಿದೆ. ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಚ್‌.ಕೆ.ಪಾಟೀಲ ಅವರ ಸಹೋದರ ಪುತ್ರ, ಮಾಜಿ ಶಾಸಕ ಡಿ.ಆರ್‌. ಪಾಟೀಲ ಅವರು ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದರಿಂದ ಕಾಂಗ್ರೆಸ್‌ ಹಾಗೂ ಎಚ್ಕೆ ಕುಟುಂಬಕ್ಕೂ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ.
ಪ್ರಚಾರಕ್ಕೆ ಬಂದ ಗೌಡ್ತಿಯರು: 1962ರಲ್ಲಿ ಗದಗ ವಿಧಾನಸಭಾ ಮತಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವ ಮೂಲಕ ಕೆ.ಎಚ್‌. ಪಾಟೀಲರು ಚುನಾವಣಾ ರಾಜಕಾರಣಕ್ಕೆ ಧುಮುಕಿ ಸೋಲು ಕಂಡಿದ್ದರು. ಬಳಿಕ 1967ರಲ್ಲಿ ಪಕ್ಷೇತರರಾಗಿ, 1972ರಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸತತ ಗೆಲುವು ಸಾಧಿಸಿದ್ದರು. ಒಟ್ಟು 7 ಬಾರಿ ಸ್ಪರ್ಧೆಗಳಿದಿದ್ದ ಅವರು, ನಾಲ್ಕು ಬಾರಿ ವಿಧಾನಸಭೆ ಪ್ರವೇಶಿಸಿದ್ದರು. 1992ರಲ್ಲಿ ಕೆ.ಎಚ್‌. ಪಾಟೀಲ ಅವರ ಅಕಾಲಿಕ ನಿಧನದಿಂದ ತೆರವಾದ ಸ್ಥಾನಕ್ಕೆ ನಡೆದ ಉಪ
ಚುನಾವಣಾಯಲ್ಲಿ ಸ್ಪರ್ಧಿಸಿದ್ದ ಕೆ.ಎಚ್‌. ಪಾಟೀಲರ ಸಹೋದರ ಪುತ್ರ ಡಿ.ಆರ್‌. ಪಾಟೀಲ ಮೊದಲ ಪ್ರಯತ್ನದಲ್ಲೇ ಗೆಲುವಿನ ನಗೆ ಬೀರಿದ್ದರು. ಬಳಿಕ ಸತತ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ಅದಕ್ಕೂ ಮುನ್ನ ಡಿ.ಆರ್‌. ಪಾಟೀಲ ಜಿಲ್ಲಾ ಪರಿಷತ್‌ ಸದಸ್ಯರಾಗಿದ್ದರು.
ಅದರಂತೆ ನಾಲ್ಕು ಬಾರಿ ವಿಧಾನಪರಿಷತ್‌ ಸದಸ್ಯರಾಗಿದ್ದ ಎಚ್‌.ಕೆ. ಪಾಟೀಲ ಅವರು 2008ರಲ್ಲಿ ಮೊದಲ ಬಾರಿಗೆ ಗದಗ ವಿಧಾನಸಭೆಗೆ ಸ್ಪರ್ಧಿಸಿ ಸೋತಿದ್ದರು. ಬಳಿಕ 2013 ಮತ್ತು 2018ರ ವಿಧಾನಸಭೆ ಚುಣಾವಣೆಯಲ್ಲಿ ಆಯ್ಕೆಯಾಗಿದ್ದಾರೆ. ಆದರೆ, ಯಾವುದೇ ಚುನಾವಣೆಯಲ್ಲೂ ಹುಲಕೋಟಿ ಗೌಡರ ಕುಟುಂಬಸ್ಥರು ಚುನಾವಣಾ ಪ್ರಚಾರಕ್ಕಿಳಿದಿರಲಿಲ್ಲ. ಇದೇ ಮೊದಲ ಬಾರಿಗೆ ಹುಲಕೋಟಿ ಗೌಡ್ತಿಯರು ಚುನಾವಣಾ ಪ್ರಚಾರ ಕಣಕ್ಕಿಳಿಯುವ ಮೂಲಕ ಪಕ್ಷದ ಕಾರ್ಯಕರ್ತರೂ ಸೇರಿದಂತೆ ಕ್ಷೇತ್ರದ ಮತದಾರರನ್ನೂ ಬೆರಗಾಗಿಸಿದ್ದಾರೆ.
ಕ್ಷೇತ್ರದ ವಿವಿಧೆಡೆ ಮತಯಾಚನೆ: ಕಾಂಗ್ರೆಸ್‌ ಅಭ್ಯರ್ಥಿ ಡಿ.ಆರ್‌. ಪಾಟೀಲ ಹಾಗೂ ಕೆಪಿಸಿಸಿ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಎಚ್‌.ಕೆ. ಪಾಟೀಲ ಈಗಾಗಲೇ ಕ್ಷೇತ್ರದಲ್ಲಿ ಒಂದಿನ ಸುತ್ತಿನ ಪ್ರಚಾರ ಕಾರ್ಯ ಪೂರ್ಣಗೊಳಿಸಿದ್ದಾರೆ. ಡಿ.ಆರ್‌. ಪಾಟೀಲರನ್ನು ಗೆಲ್ಲಿಸಬೇಕು ಎಂದು ಪಣ ತೊಟ್ಟಿರುವ ಪಕ್ಷದ ಕಾರ್ಯರ್ತರೊಂದಿಗೆ ಅವರ ಕುಟುಂಬಸ್ಥರೂ ಕೈಜೋಡಿಸಿದ್ದಾರೆ. ಈಗಾಗಲೇ ಡಿ.ಆರ್‌. ಪಾಟೀಲರ ಪುತ್ರ ಸಚಿನ್‌ ಪಾಟೀಲ, ಸಂತೋಷ ಪಾಟೀಲ ಹಾಗೂ ಸಹೋದರರೂ ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ.
ಅದರೊಂದಿಗೆ ಯುಗಾದಿ ಹಬ್ಬದ ನಿಮಿತ್ತ ಶನಿವಾರ ಸಂಜೆ ಬೆಟಗೇರಿ ಸೆಟ್ಲಮೆಂಟ್‌ ಮಾರುತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವ ಮೂಲಕ ಸೊಸೆಯಂದಿರೂ ಪ್ರಚಾರಕ್ಕೆ ಚಾಲನೆ ನೀಡಿದರು. ಡಿ.ಆರ್‌.ಪಾಟೀಲ ಅವರ ಸಹೋದರಿ ಸುನಂದಾ, ಸೊಸೆಯಂದಿರಾದ ತೃಪ್ತಿ ಸಂತೋಷ ಪಾಟೀಲ, ಲಕ್ಷ್ಮೀ ಅರವಿಂದ ಪಾಟೀಲ, ರಾಜೇಶ್ವರಿ ಪಾಟೀಲ ಸಹೋದರ
ಸಂಬಂಧಿಗಳೊಂದಿಗೆ ಗದಗಿನ ವಾರ್ಡ್‌ ನಂ. 3 ಮತ್ತು 4 ಸೇರಿದಂತೆ ಅವಳಿ ನಗರದ ವಿವಿಧೆಡೆ ಮನೆ ಮನೆ ಭೇಟಿ ನೀಡಿ ಮತಯಾಚಿಸಿದರು. ಈ ವೇಳೆ ಕಾಂಗ್ರೆಸ್‌ ಸಾಧನೆಗಳು ಮತ್ತು ಗದಗ ಕ್ಷೇತ್ರದಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಗಳನ್ನು ಜನರ ಮುಂದಿಟ್ಟು ಮತ ಬೇಡಿದರು.
ಬಹುತೇಕ ತಮ್ಮ ಕುಟುಂಬ ಹಾಗೂ ಖಾಸಗಿ ಕಾರ್ಯಕ್ರಮಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದ ಪಾಟೀಲ ಕುಟುಂಬದ ನಾರಿಮಣಿಯರು, ಇದೀಗ ಚುನಾವಣಾ ಪ್ರಚಾರದ ಮೂಲಕ ಸಾರ್ವಜನಿಕರ ಗಮನ ಸೆಳೆಯುತ್ತಿದ್ದಾರೆ.
ಸರಳ, ಸಜ್ಜನಿಕೆಯ ವ್ಯಕ್ತಿತ್ವ ಹಾಗೂ ಅನುಭವಿ ರಾಜಕಾರಣಿಯಾಗಿರುವ ಡಿ.ಆರ್‌. ಪಾಟೀಲ ಆಯ್ಕೆಯಿಂದ ಕ್ಷೇತ್ರದಲ್ಲಿ ಮತ್ತಷ್ಟು ಅಭಿವೃದ್ಧಿಯಾಗುತ್ತದೆ. ಅವರ ಗೆಲುವಿಗಾಗಿ ನಾವು ಸಾಮಾನ್ಯ ಕಾರ್ಯರ್ತರಂತೆ ದುಡಿಯುತ್ತಿದ್ದೇವೆ. ಮತಯಾಚನೆ ಮಾಡಿದ ಕಡೆಗಳಲ್ಲಿ ಜನರಿಂದ ಉತ್ತಮ ಸ್ಪಂದನೆ ದೊರೆಯುತ್ತಿದ್ದು, ಡಿ.ಆರ್‌.ಪಾಟೀಲ ಅವರ ಗೆಲುವು ನಿಶ್ಚಿತ.
ಲಕ್ಷ್ಮೀ ಪಾಟೀಲ, ಡಿ.ಆರ್‌. ಪಾಟೀಲರ ಸೊಸೆ
„ವೀರೇಂದ್ರ ನಾಗಲದಿನ್ನಿ
Advertisement

Udayavani is now on Telegram. Click here to join our channel and stay updated with the latest news.

Next