Advertisement

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾರ್ಷಿಕೋತ್ಸವ

01:05 PM Aug 13, 2018 | |

ಮಹಾನಗರ: ವಿಶ್ವ ಕೊಂಕಣಿ ಕೇಂದ್ರವು ಕೊಂಕಣಿ ಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ವರ್ಷವಿಡೀ ವಿವಿಧ ಚಟುವಟಿಕೆಗಳನ್ನು ನಡೆಸುತ್ತಿದೆ. ಕೊಂಕಣಿ ಜನರು ದೇವಾಲಯ, ಮಠಗಳಿಗೆ ನೀಡುವಷ್ಟೇ ಮಹತ್ವವನ್ನು ವಿಶ್ವ ಕೊಂಕಣಿ ಕೇಂದ್ರಕ್ಕೂ ನೀಡಬೇಕು. ಮಾತೃ ಭಾಷೆ ಕೊಂಕಣಿ ಉಳಿದರೆ ಸಂಸ್ಕೃತಿಯೂ ಉಳಿಯುವುದು ಎಂದು ವಿಶ್ವ ಕೊಂಕಣಿ ಕೇಂದ್ರದ ಸ್ಥಾಪಕ ಅಧ್ಯಕ್ಷ ಬಸ್ತಿ ವಾಮನ ಶೆಣೈ ಹೇಳಿದರು. ರವಿವಾರ ಇಲ್ಲಿನ ಕದ್ರಿ ರಸ್ತೆಯ ಸುಜೀರ್‌ ಸಿ.ವಿ. ನಾಯಕ್‌ ಹಾಲ್‌ನಲ್ಲಿ ನಡೆದ ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ 80ನೇ ವಾರ್ಷಿಕೋತ್ಸವ ಸಮಾರಂಭವನ್ನು ಅವರು ಉದ್ಘಾಟಿಸಿದರು.

Advertisement

ವಿಶ್ವ ಕೊಂಕಣಿ ಕೇಂದ್ರವು ಉನ್ನತ ಶಿಕ್ಷಣ ಪಡೆಯುವ ಕೊಂಕಣಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡುತ್ತಿದೆ. ಅಲ್ಲಿ ಸಂಶೋಧನ ಚಟುವಟಿಕೆಗಳು ನಡೆಯುತ್ತಿವೆ. ವಿವಿಧ ಕಾರ್ಯಾಗಾರಗಳನ್ನು ನಡೆಸಲಾಗುತ್ತಿದೆ. ಕೊಂಕಣಿ ಜನರು ಇದರ ಪ್ರಯೋಜನ ಪಡೆಯಬೇಕು ಎಂದವರು ಕರೆ ನೀಡಿದರು. ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ಅಧ್ಯಕ್ಷ ಪ್ರೊ| ಡಾ| ಕಸ್ತೂರಿ ಮೋಹನ ಪೈ ಅಧ್ಯಕ್ಷತೆ ವಹಿಸಿದ್ದರು.

ಕೃತಜ್ಞತಾ ಮನೋಭಾವ ಅಗತ್ಯ
ಮುಖ್ಯ ಅತಿಥಿಯಾಗಿದ್ದ ಮಾಜಿ ಶಾಸಕ ಜೆ.ಆರ್‌. ಲೋಬೋ ಅವರು ಮಾತನಾಡಿ, ಮಕ್ಕಳು ನಮ್ಮ ಮುಂದಿನ ಜನಾಂಗ. ಅವರ ಶೈಕ್ಷಣಿಕ ಪ್ರತಿಭೆಯನ್ನು ಗುರುತಿಸಿ ಪುರಸ್ಕರಿಸುವುದು ಉತ್ತಮ ಕೆಲಸ ಎಂದರು. ವಿದ್ಯಾರ್ಥಿವೇತನ ಪಡೆದವರು ಮುಂದೆ ಅದನ್ನು ಮರಳಿಸುವ ಕೃತಜ್ಞತ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಹಾಗೂ ಈ ಮೂಲಕ ವಿದ್ಯಾರ್ಥಿವೇತನ ವಿತರಣೆ ನಿರಂತರವಾಗಿ ಮುಂದುವರಿಯುವಂತೆ ನೋಡಿಕೊಳ್ಳಬೇಕು ಎಂದು ಹೇಳಿದರು. ಇನ್ನೋರ್ವ ಅತಿಥಿ ಮೇಯರ್‌ ಭಾಸ್ಕರ್‌ ಕೆ. ಮಾತನಾಡಿ, ಜಿ.ಎಸ್‌.ಬಿ. ಸಮಾಜದವರು ನಗರಕ್ಕೆ ವಿವಿಧ ಕ್ಷೇತ್ರಗಳ ಮೂಲಕ ಅಪಾರ ಕೊಡುಗೆಗಳನ್ನು ನೀಡಿದ್ದಾರೆ. ಅದಕ್ಕಾಗಿ ಅವರಿಗೆ ಕೃತಜ್ಞತೆ ಸಲ್ಲಿಸಬೇಕಾಗಿದೆ ಎಂದರು.

ಪರಂಪರೆ ಮುಂದುವರಿಯಲಿ
ವಕೀಲ ಪಿ. ರಂಜನ್‌ ರಾವ್‌ ಅವರು, ಜಿಲ್ಲೆಯಲ್ಲಿ ತುಳು, ಕೊಂಕಣಿ, ಕನ್ನಡ, ಬ್ಯಾರಿ ಭಾಷಿಗರಿದ್ದು, ಎಲ್ಲರೂ ಪರಸ್ಪರ ಸೌಹಾರ್ದದಿಂದ ಬಾಳುವೆ ನಡೆಸುತ್ತಿದ್ದಾರೆ. ಈ ಪರಂಪರೆ ಮುಂದುವರಿಯಬೇಕು ಎಂದು ಆಶಿಸಿದರು. ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ಪದಾಧಿಕಾರಿಗಳಾದ ಎಂ. ಸುರೇಂದ್ರ ಆಚಾರ್ಯ, ಜಿ. ಮಾಧವರಾಯ ಪ್ರಭು, ಯು. ಅರವಿಂದ ಆಚಾರ್ಯ, ವೆಂಕಟೇಶ ಎನ್‌. ಬಾಳಿಗಾ, ಬಿ.ಆರ್‌. ಶೆಣೈ, ಡಾ| ಎ. ರಮೇಶ್‌ ಪೈ, ಕೊಂಕಣಿ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಎಂ. ವಿಠಲ ಕುಡ್ವಾ ಅವರು ಉಪಸ್ಥಿತರಿದ್ದರು.

ಕೃತಿ ಬಿಡುಗಡೆ, ಸಮ್ಮಾನ
ಪ್ರೊಫೆಸ ರ್‌ ಡಾ| ಕಸ್ತೂರಿ ಮೋಹನ ಪೈ ಅವರ ‘ನೂರ ಒಂದು ಮೌಕ್ತಿಕಗಳು’ ದೇವನಾಗರಿ ಲಿಪಿ ಕೃತಿ ಮತ್ತು ಮಂದರ್ಕೆ ಮಾಧವ ಪೈ ಅವರ (ಕೊಡಿಯಾಲ ಖಬರ ಪತ್ರಿಕೆಯಲ್ಲಿ ಪ್ರಕಟವಾದ) ಅಂಕಣಗಳ ಬರೆಹ ‘ಕೊಂಕಣಿ ಶಬ್ದ ವಿಹಾರ’ ಕೃತಿಗಳನ್ನು ಈ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು. ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದಲ್ಲಿ 30 ವರ್ಷ ಸೇವೆ ಸಲ್ಲಿಸಿದ ಜಿ. ವಿಶ್ವನಾಥ ಭಟ್ಟ ಅವರನ್ನು ಸಮ್ಮಾನಿಸಲಾಯಿತು. ಶೈಕ್ಷಣಿಕ ಕ್ಷಮತೆಯನ್ನು ಸಾಧಿಸಿದ 80 ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ಸಮ್ಮಾನ, ಶಾಲೆಯಲ್ಲಿ ತೃತೀಯ ಭಾಷೆಯಾಗಿ ಕೊಂಕಣಿ ಕಲಿಯುವ 80 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಣೆ ಹಾಗೂ ಆರ್ಥಿಕವಾಗಿ ಹಿಂದುಳಿದ 180 ಶಾಲಾ ವಿದ್ಯಾರ್ಥಿಗಳಿಗೆ ಪುಸ್ತಕ ಮತ್ತು ಸಮವಸ್ತ್ರ ವಿತರಿಸಲಾಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next