Advertisement

ಹಾಸನಕ್ಕೆ ಗೌಡರು ವಾಪಸ್‌?

12:30 AM Mar 19, 2019 | |

ಬೆಂಗಳೂರು: ಬದಲಾಗುತ್ತಿರುವ ರಾಜಕೀಯ ವಿದ್ಯಮಾನಗಳ ಹಿನ್ನೆಲೆಯಲ್ಲಿ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಸ್ವ ಕ್ಷೇತ್ರ ಹಾಸನದಿಂದಲೇ ಸ್ಪರ್ಧೆ ಮಾಡುವ ಬಗ್ಗೆ ಚಿಂತನೆ ನಡೆದಿದೆ.

Advertisement

ಒಂದೊಮ್ಮೆ ದೇವೇಗೌಡರು ಹಾಸನದಿಂದ ಸ್ಪರ್ಧೆ ಮಾಡಿದರೆ ಪ್ರಜ್ವಲ್‌ ರೇವಣ್ಣ ಅವರು ತುಮಕೂರು ಅಥವಾ ಬೆಂಗಳೂರು ಉತ್ತರ ಕ್ಷೇತ್ರದಿಂದ ಸ್ಪರ್ಧೆ ಮಾಡುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.

ಹಾಸನದಲ್ಲಿ ಕಾಂಗ್ರೆಸ್‌ನ ಮಾಜಿ ಸಚಿವ ಎ.ಮಂಜು ಅವರು ಬಿಜೆಪಿ ಸೇರ್ಪಡೆಯಾಗಿ ಅಭ್ಯರ್ಥಿಯಾಗುವುದು ಖಚಿತವಾಗಿರುವುದರಿಂದ ಅಲ್ಲಿಂದ ಪ್ರಜ್ವಲ್‌ ಬದಲು ದೇವೇಗೌಡರೇ ಸ್ಪರ್ಧೆ ಮಾಡುವುದು ಸೂಕ್ತ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಸಚಿವ ಎಚ್‌.ಡಿ.ರೇವಣ್ಣ ಅಭಿಪ್ರಾಯಪಟ್ಟಿದ್ದಾರೆ. ಹೀಗಾಗಿ, ಮರು ಚಿಂತನೆ ಆರಂಭವಾಗಿದೆ ಎಂದು ತಿಳಿದು ಬಂದಿದೆ.

ಈ ಮಧ್ಯೆ, ಬೆಂಗಳೂರು ಉತ್ತರ ಕ್ಷೇತ್ರದಿಂದ ನ್ಯಾ.ಗೋಪಾಲಗೌಡ ಅವರ ಹೆಸರು ಪ್ರಸ್ತಾಪವಾಗಿದ್ದು ದೇವೇಗೌಡರು ಹಾಸನದಲ್ಲಿ ಸ್ಪರ್ಧೆ ಮಾಡಿ, ಪ್ರಜ್ವಲ್‌ ತುಮಕೂರಿನಿಂದ ಕಣಕ್ಕಿಳಿದರೆ ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ನ್ಯಾ.ಗೋಪಾಲಗೌಡರು ಸ್ಪರ್ಧೆ ಮಾಡಬಹುದು. ಈಗಾಗಲೇ ದೇವೇಗೌಡರು ಅವರ ಜತೆ ಒಂದು ಸುತ್ತು ಮಾತುಕತೆ ನಡೆಸಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

ಸೋಮವಾರ ದೇವೇಗೌಡರ ಪದ್ಮನಾಭನಗರ ನಿವಾಸಕ್ಕೆ ಹಾಸನ, ತುಮಕೂರು, ಬೆಂಗಳೂರು ಉತ್ತರ, ಮೈಸೂರು ಕ್ಷೇತ್ರಗಳ ನಾಯಕರು ಆಗಮಿಸಿ ಗೌಡರ ಜತೆ ಸಮಾಲೋಚನೆ ನಡೆಸಿದರು. ತುಮಕೂರು ಹಾಗೂ ಬೆಂಗಳೂರು ಉತ್ತರ ಕ್ಷೇತ್ರದ ನಾಯಕರು ನಮ್ಮ ಕ್ಷೇತ್ರದಿಂದಲೇ ಬಂದು ಸ್ಪರ್ಧಿಸಿ ಎಂದು ಒತ್ತಡ ಹಾಕಿದರು. ಆದರೆ, ದೇವೇಗೌಡರು ಕಾರ್ಯಕರ್ತರು ಹಾಗೂ ಮುಖಂಡರ ಅಭಿಪ್ರಾಯ ಆಲಿಸಿದರಾದರೂ ಯಾವುದೇ ತೀರ್ಮಾನ ಹೇಳಲಿಲ್ಲ.

Advertisement

ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿಯವರು ಕಲಬುರಗಿ ಪರಿವರ್ತನಾ ಯಾತ್ರೆ ಹಾಗೂ ಬೆಂಗಳೂರಿನಲ್ಲಿ ನವೋದ್ಯಮಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ನಾಯಕರೆಲ್ಲರೂ ಅಲ್ಲೇ ಇದ್ದ ಕಾರಣ ಸೋಮವಾರ ನಡೆಯಬೇಕಾದ ಕಾಂಗ್ರೆಸ್‌ ನಾಯಕರ ಜತೆಗಿನ ಚರ್ಚೆ ಮುಂದೂಡಲಾಗಿದೆ.

ರಾಜ್ಯದ ಕಾಂಗ್ರೆಸ್‌ ನಾಯಕರ ಜತೆ ಸಮಾಲೋಚನೆ ನಡೆಸಿದ ನಂತರವಷ್ಟೇ ಜೆಡಿಎಸ್‌ನ ಐದು ಕ್ಷೇತ್ರಗಳಿಗೆ ಅಭ್ಯರ್ಥಿಗಳ ಆಯ್ಕೆ ಅಂತಿಮವಾಗಲಿದೆ. ಉಡುಪಿ-ಚಿಕ್ಕಮಗಳೂರು, ಉತ್ತರ ಕನ್ನಡ, ವಿಜಯಪುರ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ನ ನಾಯಕರನ್ನೇ ಜೆಡಿಎಸ್‌ಗೆ ಕರೆತಂದು ಟಿಕೆಟ್‌ ನೀಡುವ ಬಗ್ಗೆಯೂ ಚರ್ಚೆಯಲ್ಲಿದೆ.

ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಮಾಜಿ ಸಚಿವ ಪ್ರಮೋದ್‌ ಮಧ್ವರಾಜ್‌ ಅವರನ್ನು ಸಂಪರ್ಕಿಸಲಾಗಿದೆ. ಅದೇ ರೀತಿ ಉತ್ತರ ಕನ್ನಡ, ವಿಜಯಪುರದಲ್ಲೂ ಕೆಲವು ನಾಯಕರನ್ನು ಸಂಪರ್ಕಿಸಲಾಗಿದೆ ಎಂದು ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next