ಸುವರ್ಣ ವಿಧಾನಸೌಧ: ವಕ್ಫ್ ಆಸ್ತಿ ಬಗ್ಗೆ ಸರ್ಕಾರದ ನಿಲುವು ದ್ವಂದ್ವಮಯವಾಗಿದೆ. ಒಮ್ಮೆ ಮಾಣಿಪ್ಪಾಡಿ ವರದಿ ಒಪ್ಪಲ್ಲ ಎಂದು ಹೇಳುತ್ತಾರೆ. ಇನ್ನೊಂದೆಡೆ ಹಾಗೆ ಹೀಗೆ ಎಂದು ಸಮಜಾಯಿಷಿ ನೀಡುತ್ತಾರೆ ಎಂದು ವಿಧಾನ ಪರಿಷತ್ತಿನ ಸದಸ್ಯ ಬಿಜೆಪಿಯ ಸಿ.ಟಿ. ರವಿ ಹೇಳಿದ್ದಾರೆ.
ಬೆಳಗಾವಿ ಸುವರ್ಣಸೌಧದ ಆವರಣದಲ್ಲಿ ಸುದ್ದಿಗಾರರ ಜತೆ ಮಾತನಾಡಿ, ಮಾಣಿಪ್ಪಾಡಿ ಅವರಿಗೆ ಆಮಿಷವೊಡ್ಡಿದ ಪ್ರಕರಣವನ್ನು ಸಿಬಿಐಗೆ ಒಪ್ಪಿಸುವುದು ಸಿಎಂ ಕೈಯಲ್ಲಿದೆ. ಕ್ಯಾಬಿನೆಟ್ ಒಪ್ಪಿಗೆ ಪಡೆದು ಪ್ರಕರಣವನ್ನು ಸಿಬಿಐಗೆ ಒಪ್ಪಿಸುವುದಕ್ಕೆ ಕೇಂದ್ರಕ್ಕೆ ಪತ್ರ ಬರೆಯಲಿ. ಬದ್ಧತೆ ಇದ್ದಿದ್ದರೆ ಸಂಪುಟ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದರು.
ವಕ್ಫ್ ಆಸ್ತಿ ಪ್ರಕರಣದಲ್ಲಿ ಬಿಜೆಪಿ ಮೇಲೆ ಅರೋಪ ಬಂದಿಲ್ಲ. ಬಿಜೆಪಿ ನಾಯಕರ ಹೆಸರಿಲ್ಲ. ಕಾಂಗ್ರೆಸ್‌ನ ಘಟಾನುಘಟಿ ನಾಯಕರ ಹೆಸರು ಉಲ್ಲೇಖವಾಗಿದೆ. ಯಾರು ಅಸ್ತಿ ಹೊಡೆದಿದ್ದಾರೋ ಅವರು ಆಮಿಷ ಒಡ್ಡುತ್ತಿದ್ದಾರೆ ಎಂದರು.
ಮಾಣಿಪ್ಪಾಡಿ ಅವರು ಭಾನುವಾರ ನೀಡಿರುವ ಮಾಹಿತಿ ಮಾತ್ರ ನನ್ನ ಗಮನಕ್ಕಿದೆ. ಅವರು ಕಾಂಗ್ರೆಸ್ ಅಮಿಷವೊಡ್ಡಿದೆ ಎಂದಿದ್ದಾರೆ ಎಂದು ತಿಳಿಸಿದರು.
ಅನ್ವರ್ ಮಾಣಿಪ್ಪಾಡಿ 3-4 ನಿಲುವು ತೆಗೆದುಕೊಂಡಿದ್ದಾರೆ. ಮೊದಲು ಬಿಜೆಪಿ ಮೇಲೆ ಆರೋಪ ಮಾಡಿದ್ದರು. ಈಗ ಬೇರೆ ರೀತಿ ಮಾತನಾಡಿದ್ದಾರೆ. ಅನ್ವರ್‌ಮಾಣಿಪ್ಪಾಡಿ ವರದಿಯನ್ನು ಗಂಭೀರವಾಗಿ ತೆಗೆದು ಕೊಳ್ಳಬೇಕೋ ಬೇಡವೋ ಎಂದು ಯೋಚನೆ ಮಾಡುತ್ತಿದ್ದೇವೆ. ಪ್ರಕರಣದ ತನಿಖೆಯನ್ನು ಸರ್ಕಾರ ಮಾಡಬೇಕೋ, ಸಿಬಿಐ ಮಾಡಬೇಕೋ ಗೊತ್ತಿಲ್ಲ. ಈ ಮಟ್ಟದಲ್ಲಿ ಸರ್ಕಾರ ಚಿಂತನೆ ನಡೆಸಿದೆ.
– ಎಚ್. ಕೆ. ಪಾಟೀಲ್, ಕಾನೂನು ಸಚಿವ
ಮಾಣಿಪ್ಪಾಡಿ 150 ಕೋಟಿ ಆಫರ್ ಅಂತ ಹೇಳಿರುವುದು ಪಬ್ಲಿಕ್ ಡೊಮೈನ್‌ನಲ್ಲೂ ಇದೆ. ಆ ವಿಡಿಯೋ ನಾವ್ಯಾರು ಪೋಸ್ಟ್ ಮಾಡಿದ್ದಲ್ಲ. ಬಿಜೆಪಿಯವರು ಅವರಿಗೆ ಧಮ್ಕಿ ಹಾಕಿರಬಹುದು. ಅದಕ್ಕೆ ಅವರು ಉಲ್ಟಾ ಹೇಳಿರಬಹುದು. ತನಿಖೆ ಕೊಡುವ ಬಗ್ಗೆ ಚರ್ಚೆ ಮಾಡ್ತೇವೆ. ತಪ್ಪು ಹೊರಬರುತ್ತೆ
-ಡಾ. ಜಿ. ಪರಮೇಶ್ವರ್, ಗೃಹ ಸಚಿವ