ನವದೆಹಲಿ: ಕೊರೊನಾ ಲಸಿಕೆಯ ಮಾಹಿತಿಯನ್ನು ಆನ್‌ಲೈನ್‌ನಲ್ಲೇ ಒದಗಿಸಲು, ಕೋ-ವಿನ್ ಆ್ಯಪ್ ಬಿಡುಗಡೆ ಮಾಡಿದ್ದ ಕೇಂದ್ರ ಸರ್ಕಾರ, ಇದರಲ್ಲಿ ಯಶಸ್ವಿಯಾಗಿತ್ತು. ಇದರಿಂದ ಉತ್ತೇಜಿತವಾಗಿರುವ ಕೇಂದ್ರ, ಈಗ ಮಕ್ಕಳಿಗೂ ಲಸಿಕೆ ಹಾಕಿಸಲು, ರಕ್ತ, ಅಂಗಾಂಗಗಳ ದಾನ ಮಾಡಲೂ ಮೂರು ಪ್ರತ್ಯೇಕ ಆ್ಯಪ್ ಗಳನ್ನು ಸಿದ್ಧಪಡಿಸುತ್ತಿದೆ. ಇನ್ನಾರು ತಿಂಗಳಲ್ಲಿ ಇದು ಸಿದ್ಧವಾಗಲಿದೆ.
ಆದರೆ ಇದರಲ್ಲಿ ಜನ ತಮ್ಮ ಮಾಹಿತಿಯನ್ನು ತುಂಬಲು ಇನ್ನೊಂದಷ್ಟು ಸಮಯ ಬೇಕಾಗುತ್ತದೆ.
ಇಂತಹದ್ದೊಂದು ಮಹತ್ವದ ಮಾಹಿತಿಯನ್ನು ಕೋ-ವಿನ್ ಅಧ್ಯಕ್ಷ, ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ ಸಿಇಒ ಆರ್.ಎಸ್.ಶರ್ಮ ಹೇಳಿದ್ದಾರೆ. ವಿವಾಟೆಕ್-2022 ಕಾರ್ಯಕ್ರಮದ ಹಿನ್ನೆಲೆಯಲ್ಲಿ ಮಾತನಾಡಿದ ಅವರು, ಪೋಷಕರು ತಮ್ಮ ಮಕ್ಕಳ ಜನ್ಮದಿನ, ಲಸಿಕೆ ಪಡೆದುಕೊಳ್ಳಲು ಬಯಸುವ ದಿನಾಂಕಗಳನ್ನೆಲ್ಲ ಆ್ಯಪ್‌ನಲ್ಲಿ ನಮೂದಿಸಿದರೆ, ಯಾವಾಗ, ಎಲ್ಲಿ ಲಸಿಕೆ ಹಾಕಿಸಬಹುದು ಎಂಬುದನ್ನೆಲ್ಲ ತಿಳಿದುಕೊಳ್ಳಬಹುದು ಎಂದಿದ್ದಾರೆ.
ಕೋವಿನ್ ಮಾರ್ಗವನ್ನೇ ಅನುಸರಿಸಿ ಆನ್‌ಲೈನ್‌ನಲ್ಲೇ ರಕ್ತದಾನ, ಅಂಗಾಂಗ ದಾನ ಮಾಡುವ ಮಾಹಿತಿಯನ್ನು ಪಡೆಯಲು ಸರ್ಕಾರ ನಿರ್ಧರಿಸಿದೆ. ಇದರಿಂದ ರೋಗಿಗಳಿಗೆ ತಮ್ಮ ಸನಿಹದಲ್ಲೇ ಇರುವವರಿಂದ ಸೌಲಭ್ಯ ಪಡೆಯಲು ಸಾಧ್ಯವಾಗುತ್ತದೆ ಎಂದಿದ್ದಾರೆ.