Advertisement
ಸಂಸ್ಥೆಯ ನೌಕರರ ಮಾನಸಿಕ ಆತ್ಮಸ್ಥೈರ್ಯ ಹೆಚ್ಚಿಸಿ ಆಡಳಿತ ವರ್ಗ ಹಾಗೂ ನೌಕರರ ನಡುವಿನ ಬಾಂಧವ್ಯ ವೃದ್ಧಿಸುವ ನಿಟ್ಟಿನಲ್ಲಿ ಬಾಕಿ ಪ್ರಕರಣಗಳನ್ನು ಇತ್ಯರ್ಥಗೊಳಿಸಲು ನಿರ್ಧರಿಸಲಾಗಿತ್ತು. ಅದರಂತೆ ಹಲವಾರು ವರ್ಷಗಳಿಂದ ವಿವಿಧ ಕಾರಣಗಳಿಂದ ವಿಭಾಗ ಹಾಗೂ ಘಟಕ ಮಟ್ಟದಲ್ಲಿ ಬಾಕಿ ಉಳಿದಿದ್ದ ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿದೆ. ಪ್ರಮುಖವಾಗಿ ಸಂಸ್ಥೆಯ ನೌಕರರಲ್ಲಿ ದೊಡ್ಡ ಪಿಡುಗಾಗಿರುವ ಗೈರು ಹಾಜರಿಯ-3777 ಹಾಗೂ ಶಿಸ್ತು ಪ್ರಕರಣ-2092 ಸೇರಿ ಒಟ್ಟು 5869 ಪ್ರಕರಣಗಳನ್ನು ಒಂದು ಬಾರಿಗೆ ಮಾತ್ರ ಅನ್ವಯವಾಗುವಂತೆ ಬಗೆಹರಿಸಲಾಗಿದೆ. ತರಬೇತಿ, ಪರೀಕ್ಷಾರ್ಥ, ಕಾಯಂ ನೌಕರರಿಗೆ ಈ ಸೌಲಭ್ಯ ದೊರೆತಿದೆ.
Related Articles
Advertisement
ಇತ್ಯರ್ಥಕ್ಕೂ ಕಾಲಮಿತಿ ಗಡುವು:
ಸಾರಿಗೆ ಸಂಸ್ಥೆ ವ್ಯಾಪ್ತಿಯಲ್ಲಿ ಶಿಸ್ತು ಪ್ರಕರಣಗಳನ್ನು ಬಾಕಿ ಉಳಿಸುವುದು, ಉದ್ದೇಶ ಪೂರ್ವಕವಾಗಿ ವಿಳಂಬ ಹಿಂದಿನಿಂದಲೂ ನಡೆದು ಬಂದ ಕೆಟ್ಟ ಸಂಪ್ರದಾಯ. ಪ್ರಕರಣದ ಹೆಸರಲ್ಲಿ ಪರೀಕ್ಷಾರ್ಥ ಹಾಗೂ ತರಬೇತಿ ಮುಂದೂಡುವುದು, ಬಡ್ತಿಗೆ ಕೊಕ್ಕೆ ಹಾಕುವಂತಹ ಇಂತಹ ಕೆಲಸಗಳು ವ್ಯವಸ್ಥಿತವಾಗಿ ನಡೆಯುತ್ತಿದ್ದವು. ಕೆಲವೊಮ್ಮೆ ಸಣ್ಣ ತಪ್ಪಿಗೂ ದೊಡ್ಡ ಬೆಲೆ ತೆರುವಂತಹ ಪರಿಸ್ಥಿತಿ ನೌಕರರು ಹಾಗೂ ಅಧಿಕಾರಿಗಳು ಅನುಭವಿಸುತ್ತಿದ್ದರು. ಇದೀಗ ಈ ಕೆಟ್ಟ ಚಾಳಿಗೆ ತಿಲಾಂಜಲಿ ನೀಡಲು ಪ್ರಕರಣವನ್ನು 6 ತಿಂಗಳೊಳಗೆ ಇತ್ಯರ್ಥಗೊಳಿಸಲು ಕಾಲಮಿತಿ ವಿಧಿಸಲಾಗಿದೆ. ಉಲ್ಲಂಘಿಸಿದರೆ ಸಂಬಂಧಿಸಿದ ಅಧಿಕಾರಿಗಳನ್ನು ತಪ್ಪಿತಸ್ಥರೆಂದು ಪರಿಗಣಿಸಲಾಗುತ್ತದೆ ಎಂದು ವ್ಯವಸ್ಥಾಪಕ ನಿರ್ದೇಶಕ ಎಸ್.ಭರತ ಆದೇಶಿಸಿದ್ದಾರೆ.
ಅಧಿಕಾರಿಗಳಿಗೆ ಏಕಿಲ್ಲ?
ಸಂಸ್ಥೆಯ ನೌಕರರಿಗೆ ನೀಡಿರುವ ಈ ಅವಕಾಶ ಅಧಿಕಾರಿಗಳಿಗೆ ದೊರೆತಿಲ್ಲ. ಅಧಿಕಾರಿಗಳಲ್ಲಿಯೂ ಕೂಡ ನಿರ್ವಹಣೆ, ಮೇಲುಸ್ತುವಾರಿ ವೈಫಲ್ಯದ ಹೆಸರಲ್ಲಿ ಹಲವು ಪ್ರಕರಣಗಳಿವೆ. ಘಟಕ ವ್ಯವಸ್ಥಾಪಕರ ಮೇಲಂತೂ ಅತೀ ಹೆಚ್ಚು. ಸಣ್ಣ ಪ್ರಕರಣ ಇಟ್ಟುಕೊಂಡು ಇಂದಿಗೂ ಕೆಲ ಅಧಿಕಾರಿಗಳಿಗೆ ಬಡ್ತಿ ನೀಡದ ಆರೋಪಗಳು ಕೂಡ ಇವೆ. ನೌಕರರ ಆತ್ಮಸ್ಥೈರ್ಯ ಹೆಚ್ಚಿಸಲು ಕೈಗೊಂಡಿರುವ ಈ ಕಾರ್ಯ ಅತ್ಯುತ್ತಮವಾಗಿದ್ದು, ಇದರಂತೆ ಅಧಿಕಾರಿಗಳ ಮೇಲೆ ಪ್ರಕರಣಗಳ ಅಧಿಕಾರಿಗಳ ಮೇಲಿರುವ ಪ್ರಕರಣಗಳನ್ನು ಇತ್ಯರ್ಥಪಡಿಸಬೇಕು ಎಂಬುವುದು ಅಧಿಕಾರಿಗಳ ಬೇಡಿಕೆಯಾಗಿದೆ.
ನೌಕರರ ಆತ್ಮಸ್ಥೈರ್ಯ ಹೆಚ್ಚಿಸುವ ಕಾರಣಕ್ಕೆ ಏಕಕಾಲಕ್ಕೆ ಸಾವಿರಾರು ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿದೆ. ಯಾವುದೇ ಶಿಸ್ತು ಪ್ರಕರಣಗಳನ್ನು 6 ತಿಂಗಳ ಕಾಲಮಿತಿಯಲ್ಲಿ ಬಗೆಹರಿಸಲು ಕಟ್ಟುನಿಟ್ಟಾಗಿ ಸೂಚನೆ ನೀಡಲಾಗಿದೆ. ಸರ್ಕಾರದಲ್ಲಿ ಪ್ರಕರಣ ಪೂರ್ಣಗೊಳಿಸಲು 9 ತಿಂಗಳಿದ್ದು, ನಮ್ಮಲ್ಲಿ ಆರು ತಿಂಗಳ ಕಾಲಮಿತಿ ಹಾಕಿಕೊಳ್ಳಲಾಗಿದೆ. ಗೈರು ಹಾಜರಿ ಪ್ರಕರಣಗಳನ್ನು ಕೂಡ ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಲು ಸೂಚನೆ ನೀಡಲಾಗುವುದು. -ಎಸ್.ಭರತ, ವ್ಯವಸ್ಥಾಪಕ ನಿರ್ದೇಶಕ, ವಾಕರಸಾ ಸಂಸ್ಥೆ
ಹೇಮರಡ್ಡಿ ಸೈದಾಪುರ