Advertisement

ಅತಿಥಿ ಶಿಕ್ಷಕರಿಗೂ ಸರ್ಕಾರದಿಂದ ತರಬೇತಿ

10:31 AM Dec 22, 2019 | Lakshmi GovindaRaj |

ಬೆಂಗಳೂರು: ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ಗುಣಮಟ್ಟ ಸುಧಾರಣೆಯ ಜತೆಗೆ ಬೋಧನಾ ಕ್ರಮದಲ್ಲಿ ಆಮೂಲಾಗ್ರ ಬದಲಾವಣೆ ನಿಟ್ಟಿನಲ್ಲಿ ಸರ್ಕಾರಿ ಶಾಲೆಗಳಲ್ಲಿ ಕೆಲಸ ಮಾಡುತ್ತಿರುವ ಅತಿಥಿ ಶಿಕ್ಷಕರಿಗೆ ತರಬೇತಿ ನೀಡಲು ಸರ್ಕಾರ ನಿರ್ಧರಿಸಿದೆ. ಪ್ರಸಕ್ತ ಸಾಲಿನಿಂದಲೇ ಅತಿಥಿ ಶಿಕ್ಷಕರಿಗೆ ತರಬೇತಿ ನೀಡಲು ಮುಂದಾಗಿದ್ದು, ಈ ಸಂಬಂಧ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವರಾದ ಎಸ್‌.ಸುರೇಶ್‌ ಕುಮಾರ್‌ ಅವರು ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ನೀಡಿದ್ದಾರೆ ಎಂದು ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು “ಉದಯವಾಣಿ’ಗೆ ಖಚಿತಪಡಿಸಿದ್ದಾರೆ.

Advertisement

ರಾಜ್ಯದಲ್ಲಿ ಸುಮಾರು 48 ಸಾವಿರ ಸರ್ಕಾರಿ ಶಾಲೆಗಳಿವೆ. ಇದರಲ್ಲಿ ಸುಮಾರು 4 ಸಾವಿರದಷ್ಟು ಪ್ರೌಢಶಾಲೆಯೂ ಸೇರಿಕೊಂಡಿದೆ. ಪ್ರಾಥಮಿಕ ಶಾಲೆಗೆ 3,00,473 ಶಿಕ್ಷಕರ ಹುದ್ದೆ ಮಂಜೂರಾಗಿದೆ. ಅದರಲ್ಲಿ 2,62,698 ಹುದ್ದೆಗಳು ಮಾತ್ರ ಭರ್ತಿಯಾಗಿವೆ. ಉಳಿದ ಸುಮಾರು 30 ಸಾವಿರ ಹುದ್ದೆ ಖಾಲಿಯಿದೆ.( ಹೊಸದಾಗಿ ನೇಮಕಗೊಂಡಿರುವ ಪದವೀಧರ ಶಿಕ್ಷಕರು ಹೊರತುಪಡಿಸಿ) ಹಾಗೆಯೇ ಪ್ರೌಢಶಾಲೆಗೆ 95,714 ಹುದ್ದೆಗಳು ಮಂಜೂರಾಗಿದ್ದು, 86,804 ಭರ್ತಿ ಮಾಡಿಕೊಳ್ಳಲಾಗಿದೆ. ಸುಮಾರು 8ರಿಂದ 9 ಸಾವಿರ ಹುದ್ದೆ ಖಾಲಿಯಿದೆ.

ಪ್ರಾಥಮಿಕ ಶಾಲೆಗಳಲ್ಲಿ ಸುಮಾರು 15ರಿಂದ 16 ಸಾವಿರ ಅತಿಥಿ ಶಿಕ್ಷಕರು ಸೇವೆ ಸಲ್ಲಿಸುತ್ತಿದ್ದಾರೆ. ಪ್ರೌಢಶಾಲೆಯಲ್ಲಿ 3453 ಅತಿಥಿ ಶಿಕ್ಷಕರು ಸೇವೆ ಸಲ್ಲಿಸುತ್ತಿದ್ದಾರೆ. ಒಟ್ಟಾರೆಯಾಗಿ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಸುಮಾರು 20 ಸಾವಿರ ಅತಿಥಿ ಶಿಕ್ಷಕರು ಸೇವೆ ಸಲ್ಲಿಸುತ್ತಿದ್ದಾರೆ. ಈ ಎಲ್ಲ ಶಿಕ್ಷಕರಿಗೂ ಆಯಾ ಜಿಲ್ಲಾ ವ್ಯಾಪ್ತಿಯಲ್ಲೇ ತರಬೇತಿ ನೀಡಲು ನಿರ್ಧರಿಸಲಾಗಿದೆ. ಕಾಯಂ ಶಿಕ್ಷಕರಿಗೆ ಪ್ರತಿ ವರ್ಷ ತಂಡಗಳಲ್ಲಿ ರಾಜ್ಯ ಶಿಕ್ಷಣ, ಸಂಶೋಧನೆ ಮತ್ತು ತರಬೇತಿ ಇಲಾಖೆ(ಡಿಎಸ್‌ಇಆರ್‌ಟಿ) ವತಿಯಿಂದ ವೃತ್ತಿ ಬುನಾದಿ ತರಬೇತಿ ನೀಡಿ, ಅವರನ್ನು ಟ್ರೈನ್ಡ್ ಶಿಕ್ಷಕರನ್ನಾಗಿ ಮಾಡಲಾಗುತ್ತದೆ.

ಸದ್ಯ ಇರುವ 3.5 ಲಕ್ಷ ಶಿಕ್ಷಕರಲ್ಲಿ ಬಹುತೇಕರು ತರಬೇತಿ ಹೊಂದಿದ ಶಿಕ್ಷಕರೇ ಆಗಿದ್ದಾರೆ. ತರಬೇತಿ ಹೊಂದದೇ ಇರುವ ಕಾಯಂ ಶಿಕ್ಷಕರಿಗೂ ಸರ್ಕಾರದಿಂದ ತರಬೇತಿ ನೀಡುವ ವ್ಯವಸ್ಥೆ ಮೊದಲಿನಿಂದಲೂ ಜಾರಿಯಲ್ಲಿದೆ. ಆದರೆ, ಅತಿಥಿ ಶಿಕ್ಷಕರಿಗೆ ತರಬೇತಿ ನೀಡುವ ವ್ಯವಸ್ಥೆ ಇರಲಿಲ್ಲ. ಕಾರಣ ಅತಿಥಿ ಶಿಕ್ಷಕರ ಹುದ್ದೆಗೆ ಕಾಯಂ ಶಿಕ್ಷಕರು ನೇಮಕಗೊಂಡಲ್ಲಿ ಅಥವಾ ವರ್ಗಾವಣೆಯಾಗಿ ಬಂದಲ್ಲಿ ಅತಿಥಿ ಶಿಕ್ಷಕ ಆ ದಿನದಿಂದಲೇ ಹುದ್ದೆ ಬಿಟ್ಟುಕೊಡಬೇಕಾಗುತ್ತದೆ. ಹೀಗಾಗಿ ಅತಿಥಿ ಶಿಕ್ಷಕರಿಗೆ ತರಬೇತಿ ನೀಡುವ ಬಗ್ಗೆ ಸರ್ಕಾರ ಈವರೆಗೂ ಯೋಜನೆ ತಂದಿರಲಿಲ್ಲ.

ಈಗ ಅತಿಥಿ ಶಿಕ್ಷಕರಿಗೂ ತರಬೇತಿ ನೀಡಲು ಶಿಕ್ಷಣ ಸಚಿವರೇ ಖುದ್ದು ನಿರ್ದೇಶನ ನೀಡಿದ್ದಾರೆ. ಶಾಲಾ ಮುಖ್ಯೋಪಾಧ್ಯಾಯರ ಹಂತದಲ್ಲಿ ಎಲ್ಲ ಮಾನದಂಡಗಳಿಗೆ ಅನುಗುಣವಾಗಿ ಅತಿಥಿ ಉಪನ್ಯಾಸಕರ ನೇಮಕಾತಿ ನಡೆಯುತ್ತದೆ. ಕಾಯಂ ಶಿಕ್ಷಕರ ನೇಮಕಾತಿ ವಿಳಂಬವಾಗುತ್ತಿರುವುದರಿಂದ ಅನೇಕ ವರ್ಷದಿಂದ ಸರ್ಕಾರಿ ಶಾಲೆಗೆ ಅತಿಥಿ ಶಿಕ್ಷಕರ ಸೇವೆಯೂ ಅಷ್ಟೇ ಅಗತ್ಯವಾಗಿದೆ. ಹೀಗಾಗಿ ಅತಿಥಿ ಶಿಕ್ಷಕರನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಮತ್ತು ಬೋಧನಾ ಮಟ್ಟದ ಸುಧಾರಣೆಗಾಗಿ ಜಿಲ್ಲಾ ಹಂತದಲ್ಲಿ ತರಬೇತಿ ನೀಡಲಾಗುತ್ತದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

Advertisement

ಇನ್ನು ಮುಂದೆ ಅತಿಥಿ ಶಿಕ್ಷಕರ ನೇಮಕಾತಿಯನ್ನು ವಿಳಂಬ ಮಾಡುವುದಿಲ್ಲ. ಶೈಕ್ಷಣಿಕ ವರ್ಷದ ಆರಂಭದಿಂದಲೇ ಅತಿಥಿ ಶಿಕ್ಷಕರ ನೇಮಕಾತಿ ಮಾಡಿಕೊಳ್ಳುತ್ತೇವೆ. ಹಾಗೆಯೇ ಪ್ರಸಕ್ತ ಸಾಲಿನಿಂದಲೇ ಡಿಎಸ್‌ಇಆರ್‌ಟಿ ಮೂಲಕ ಅತಿಥಿ ಶಿಕ್ಷಕರಿಗೆ ಜಿಲ್ಲಾ ಮಟ್ಟದಲ್ಲಿ ತರಬೇತಿ ನೀಡಲಿದ್ದೇವೆ.
-ಎಸ್‌.ಸುರೇಶ್‌ ಕುಮಾರ್‌, ಶಿಕ್ಷಣ ಸಚಿವ

ಅತಿಥಿ ಶಿಕ್ಷಕರಿಗೆ ತರಬೇತಿ ನೀಡುವ ಸಂಬಂಧ ಸಚಿವರು ಸೂಚನೆ ನೀಡಿದ್ದಾರೆ. ಹೀಗಾಗಿ ಡಿಎಸ್‌ಇಆರ್‌ಟಿಗೆ ಇದರ ಸಿದ್ಧತೆಗೆ ಕ್ರಮ ವಹಿಸಲು ನಿರ್ದೇಶಿಸಲಾಗಿದೆ. ತರಬೇತಿ ಹೇಗಿರಬೇಕು ಮತ್ತು ಎಷ್ಟು ದಿನ ನೀಡಬೇಕು ಎಂಬುದು ಡಿಎಸ್‌ಇಆರ್‌ಟಿ ನಿರ್ಧರಿಸಲಿದೆ.
-ಡಾ.ಕೆ.ಜಿ.ಜಗದೀಶ್‌, ಶಿಕ್ಷಣ ಇಲಾಖೆ ಆಯುಕ್ತ

* ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next