Advertisement

Government ಕರುನಾಡಿಗೆ ಮರಳಲು: ಕಾಯುತ್ತಿವೆ ದಾಖಲೆಗಳು

01:21 AM Nov 27, 2023 | Team Udayavani |

ಧಾರವಾಡ: ಕರುನಾಡಿನ ಐತಿಹಾಸಿಕ ಮಹತ್ವವನ್ನು ಒಳಗೊಂಡ ನೂರಾರು ದಾಖಲೆಗಳು, ಕಡತಗಳು ಹೊರ ರಾಜ್ಯಗಳಲ್ಲಿ ಕೊಳೆಯುತ್ತಿವೆ!

Advertisement

ಹೌದು, ರಾಜ್ಯದ ಸಾಂಸ್ಕೃತಿಕ, ರಾಜಕೀಯ ಮಹತ್ವದ ಪುರಾವೆಗಳು ಹೊರ ರಾಜ್ಯಗಳಲ್ಲಿದ್ದು, ಅವುಗಳನ್ನು ಮರಳಿ ರಾಜ್ಯಕ್ಕೆ ತರಲಾಗದ ದುಃಸ್ಥಿತಿ ಯಲ್ಲಿ ಸರಕಾರವಿದೆ. ಇದರಿಂದಾಗಿ ಕನ್ನಡ ಸಂಸ್ಕೃತಿ ಅಧ್ಯಯನಕ್ಕೆ ಮಾಹಿತಿಗಳು ಸಿಗುತ್ತಿಲ್ಲ, ಅಪೂರ್ಣ ದಾಖಲೆಗಳಿಂದಾಗಿ ಸಂಶೋಧನೆಗಳಿಗೂ ಅಡ್ಡಿ ಯಾಗುತ್ತಿದೆ. ಒಟ್ಟಿನಲ್ಲಿ ಪತ್ರಾಗಾರ ಇಲಾಖೆ ರಾಜ್ಯ ದಲ್ಲಿ, ರಾಜ್ಯದ ದಾಖಲೆಗಳು ಹೊರ ರಾಜ್ಯದಲ್ಲಿ ಎಂಬಂತಾಗಿದೆ ನಮ್ಮ ಸ್ಥಿತಿ!

ಕಿತ್ತೂರು ಸಂಸ್ಥಾನ ಸೇರಿ 50ಕ್ಕೂ ಹೆಚ್ಚು ದೇಶಗತಿ ಮನೆತನಗಳು, ತುರುಮುರಿ ಸೇರಿ 250ಕ್ಕೂ ಹೆಚ್ಚು ವಾಡೆಗಳು, 50ಕ್ಕೂ ಹೆಚ್ಚು ಕಿಲ್ಲಾಗಳು ಮತ್ತು ಇವುಗಳಲ್ಲಿ ನಡೆದ ಆಳ್ವಿಕೆ ಕುರಿತ ಮಾಹಿತಿ, ಬ್ರಿಟಿಷರ ಪಾರುಪತ್ಯ, ಸಾಂಸ್ಕೃತಿಕ ಪಲ್ಲಟಗಳು, ತಾಮ್ರಪಟಗಳು, ಶಿಲಾಶಾಸನಗಳು- ಹೀಗೆ ಇಡೀ ಐತಿಹಾಸಿಕ ಮಹತ್ವವನ್ನೇ ಒಳಗೊಂಡ ರಾಜ್ಯದ ದಾಖಲೆಗಳು ಇನ್ನೂ ಹೊರ ರಾಜ್ಯಗಳಲ್ಲೇ ಇದ್ದು, ಅವುಗಳನ್ನು ಮರಳಿ ತರುವತ್ತ ಸರಕಾರದ ನಿರ್ಲಕ್ಷ್ಯ ಮುಂದುವರಿದಿದೆ.

ಈ ಕೆಲಸದ ಬಗ್ಗೆ ಸರಕಾರ ಮತ್ತು ಅಧಿಕಾರಿಗಳು ತೋರುತ್ತಿರುವ ನಿರ್ಲಕ್ಷ್ಯಕ್ಕೆ ಕನ್ನಡ ಸಾರಸ್ವತ ಲೋಕ ತೀವ್ರ ಬೇಸರ ವ್ಯಕ್ತಪಡಿಸಿದ್ದು, ಇದು ಹೀಗೇ ಮುಂದುವರಿದರೆ ಹೊರ ರಾಜ್ಯದಲ್ಲಿರುವ ಕನ್ನಡಿ ಗರ ಸ್ವಾಭಿಮಾನದ ಇತಿಹಾಸದ ಪುರಾವೆಗಳೇ ಇಲ್ಲವಾಗುತ್ತವೆ.

ಎಲ್ಲೆಲ್ಲಿವೆ ಕನ್ನಡಿಗರ ದಾಖಲೆಗಳು?
ಕಿತ್ತೂರು ಮತ್ತು ಕಲ್ಯಾಣ ಕರ್ನಾಟಕದ ಭಾಗದ ರೆಕಾರ್ಡ್‌ ರೂಮ್‌ಗಳಲ್ಲಿ 200 ವರ್ಷ ಗಳಿಗೂ ಹಳೆಯ ದಾಖಲೆಗಳಿವೆ. ಆದರೆ ಇದಕ್ಕೂ ಪೂರ್ವದ ಅಂದರೆ 350 ವರ್ಷಗಳಷ್ಟು ಹಳೆಯ ದಾಖಲೆಗಳು ಪುಣೆ, ಮುಂಬಯಿ, ಕೊಲ್ಹಾಪುರ ಹಾಗೂ ಲಂಡನ್‌ನಲ್ಲಿವೆ.

Advertisement

ಬರೀ ದಾಖಲೆಗಳು ಮಾತ್ರ ವಲ್ಲ, ಕೆಲವು ಚಿತ್ರಪಟಗಳು, ಛಾಯಾಚಿತ್ರಗಳು, ದೇಶಗತಿ ಮತ್ತು ವಾಡೆಗಳ ಮಹತ್ವದ ಪರಿಕರಗಳು, ಆಭರಣಗಳ ಸಹಿತ ಅನೇಕ ಚಾರಿತ್ರಿಕ ವಿಚಾರಗಳ ಮೇಲೆ ಬೆಳಕು ಚೆಲ್ಲುವ ವಸ್ತುಗಳು ಅಲ್ಲಿವೆ. ಆದರೆ ಎಲ್ಲದಕ್ಕೂ ಮಹತ್ವವಾದ ದಾಖಲೆ ಪತ್ರಗಳು ಹೊರ ರಾಜ್ಯಗಳಲ್ಲಿದ್ದು, ಅವು ರಾಜ್ಯಕ್ಕೆ ಬರಬೇಕಿವೆ.

ಧೂಳು ಹಿಡಿದ ಸಮಿತಿ ವರದಿ
2018ರಲ್ಲಿ ರಾಜ್ಯ ಸರಕಾರದ ಪರವಾಗಿ ಪತ್ರ ಪಾಲಕಿ ಮಂಜುಳಾ ಎಲಿಗಾರ ಮತ್ತು ಮೋಡಿ ಲಿಪಿ ಇತಿಹಾಸ ತಜ್ಞ ಡಾ| ಸಾವಂತ್‌ ಅವರನ್ನೊಳಗೊಂಡ ಸಮಿತಿ ಪುಣೆ ಪತ್ರಾಗಾರದ ಧಾರವಾಡ ಜಮಾವ್‌ ವಿಭಾಗದಲ್ಲಿನ ದಾಖಲೆಗಳನ್ನು ಪರಿಶೀಲನೆ ನಡೆಸಿತ್ತು. ಈ ವೇಳೆ ಸಾಕಷ್ಟು ಮಹತ್ವದ ದಾಖಲೆಗಳು ಸಿಕ್ಕಿವೆ. ಮೋಡಿ ಲಿಪಿ ಮತ್ತು ಹಳೆ ಇಂಗ್ಲಿಷ್‌ ಭಾಷೆಯ ಪತ್ರ ವ್ಯವಹಾರ, ಒಪ್ಪಂದಗಳು, ಕಿತ್ತೂರು ಯುದ್ಧ, ಯುದ್ಧದ ಅನಂತರ ಬ್ರಿಟಿಷರು ಕೈಗೊಂಡ ನಿರ್ಧಾರಗಳು, ರಾಣಿ ಚೆನ್ನಮ್ಮ ದೇಶದ ಹಿತಕ್ಕಾಗಿ ಅಕ್ಕಪಕ್ಕದ ರಾಜ್ಯಗಳಿಗೆ ಬರೆದ ಪತ್ರಗಳು, ಇನಾಂ ಪತ್ರಗಳ ಸಹಿತ ಕಿತ್ತೂರು ಸಂಸ್ಥಾನದ ಮಹತ್ವದ ದಾಖಲೆಗಳು ಇಲ್ಲಿವೆ. ಅವುಗಳನ್ನು ಪರಿಶೀಲಿಸಿ ಸ್ಕ್ಯಾನ್‌ ಕಾಪಿಯೊಂದಿಗೆ ರಾಜ್ಯಕ್ಕೆ ತರಬೇಕಾದರೆ ಕನಿಷ್ಠ 5 ತಿಂಗಳ ಕಾಲ 15-20 ತಜ್ಞರು ಕೆಲಸ ಮಾಡಬೇಕು. ಅದಕ್ಕಾಗಿ ರಾಜ್ಯ ಬಜೆಟ್‌ನಲ್ಲಿ ಪ್ರತ್ಯೇಕ ಅನುದಾನ ಘೋಷಣೆ ಮಾಡುವುದು ಸೂಕ್ತ ಎಂದು ಸಮಿತಿ ತನ್ನ ವರದಿಯಲ್ಲಿ ರಾಜ್ಯ ಪತ್ರಾಗಾರ ನಿರ್ದೇಶಕರಿಗೆ ಸಲಹೆ ನೀಡಿತ್ತು. ಅದು ಅಲ್ಲಿಗೆ ನಿಂತಿದೆ.

ಅತ್ಯಾಧುನಿಕ ಪತ್ರಾಗಾರ
ಸದ್ಯ ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯದ ಆವರಣದಲ್ಲಿ ನಿರ್ಮಾಣಗೊಂಡಿರುವ ನೂತನ ಪತ್ರಾಗಾರ ಇಲಾಖೆ ಕಚೇರಿಯಲ್ಲಿ ಅತ್ಯಾಧುನಿಕ ಕಟ್ಟಡ ತಲೆ ಎತ್ತಿದೆ. ಇಲ್ಲಿ ಅತ್ಯುತ್ತಮ ರೆಕಾರ್ಡ್‌ ರೂಮ್‌ ಅಂದರೆ ದಾಖಲೆ ಸಂರಕ್ಷಣ ಕೊಠಡಿ ನಿರ್ಮಿಸಲಾಗಿದೆ. ಇಲ್ಲಿ ಬ್ರಿಟಿಷ್‌ ಕಾಲದ ಪತ್ರಗಳು, ಖಾಸಗಿ ದಾಖಲೆಗಳು, ಹಳೆ ಪತ್ರಿಕೆಗಳು, ಪುಸ್ತಕಗಳ ಸಹಿತ ಅಂದಾಜು 25 ಸಾವಿರ ಪುಟಗಳಷ್ಟು ಅತ್ಯುತ್ತಮ ದಾಖಲೆಗಳನ್ನು ಸಂಗ್ರಹಿಸಲಾಗಿದೆ. ಈ ರೆಕಾರ್ಡ್‌ ರೂಮನ್ನು ಇನ್ನಷ್ಟು ಅತ್ಯಾಧುನಿಕ ಸ್ವರೂಪಕ್ಕೆ ಪರಿವರ್ತಿಸಲು ಸಿದ್ಧತೆ ನಡೆದಿದ್ದು, ನಡೆದಾಡುವ ಪುಸ್ತಕ ಕಪಾಟುಗಳನ್ನು (ಮೂವಿಂಗ್‌ ರ್‍ಯಾಂಪ್‌) ನಿರ್ಮಿ ಸುತ್ತಿದೆ. ದಾಖಲೆ ಕೊಠಡಿಗೆ ಅತ್ಯಾಧುನಿಕ ಸ್ಪರ್ಶ ನೀಡಲಾಗುತ್ತಿದೆ. ಇನ್ನು ದಾಖಲೆಗಳು ಬರಬೇಕು ಅಷ್ಟೆ.

ದಾಖಲೆ ಏಕೆ
ಮರಳಿ ತರಬೇಕು?
ಕನ್ನಡಿಗರ ಸ್ವಾಭಿಮಾನ ಪ್ರತೀಕವಾದ ಅನೇಕ ಘಟನಾವಳಿಗಳು ಇವುಗಳಲ್ಲಿ ದಾಖ ಲಾಗಿವೆ. ಅವುಗಳು ನಮ್ಮಲ್ಲಿಯೇ ಇರ ಬೇಕು. ಹೊಸ ತಲೆಮಾರಿಗೆ ಇತಿಹಾಸವನ್ನು ತಿಳಿಸಲು ಇವು ಸಹಾಯಕವಾಗುತ್ತವೆ. ಅಷ್ಟೇ ಅಲ್ಲ, ಸಂಶೋಧನೆಗಳಿಗೆ ಪೂರಕವಾದ ಅಧ್ಯಯನಕ್ಕೆ ಈ ದಾಖಲೆಗಳು ಅತ್ಯಂತ ಅಗತ್ಯ. ಇವುಗಳಿಲ್ಲದ ಕಾರಣ ಈ ಭಾಗದ ಮಹತ್ವದ ಸಂಶೋಧನೆಗಳು ನಡೆಯುತ್ತಿಲ್ಲ.

ಸರಕಾರ ಸಹಕರಿಸಲಿ
ಉತ್ತರ ಕರ್ನಾಟಕ ಭಾಗದ ಸಾವಿರಾರು ದಾಖಲೆಗಳು ಪುಣೆ ಯಲ್ಲಿವೆ. ರಾಜ್ಯ ಸರಕಾರ ತಜ್ಞರ ತಂಡ ರಚಿಸಿ, ಅಗತ್ಯ ಸಹಕಾರ ನೀಡಿದರೆ ನಮ್ಮ, ಮಹಾಪುರುಷರ ಮಹತ್ವದ ದಾಖಲೆಗಳು ನಮ್ಮ ನಾಡಿಗೆ ತರಬಹುದು.
-ಡಾ| ಸಾವಂತ,
ಮೋಡಿ ಲಿಪಿ ತಜ್ಞರು

- ಬಸವರಾಜ್‌ ಹೊಂಗಲ್‌

Advertisement

Udayavani is now on Telegram. Click here to join our channel and stay updated with the latest news.

Next