Advertisement

ಕುಸುಮ್‌ ಯೋಜನೆಗೆ ಸಿದ್ಧತೆ

04:40 AM Jun 06, 2018 | Karthik A |

ಹೊಸದಿಲ್ಲಿ: ರೈತರಿಗೆ ನೀರೆತ್ತುವ ಸೌರ ಪಂಪ್‌ ಗಳನ್ನು ಒದಗಿಸಲು 1.4 ಲಕ್ಷ ಕೋಟಿ ರೂ. ವೆಚ್ಚದಲ್ಲಿ ಕುಸುಮ್‌ ಎಂಬ ಯೋಜನೆಯನ್ನು ಜುಲೈಯಿಂದ ಕೇಂದ್ರ ಸರಕಾರ ಆರಂಭಿಸಲಿದೆ. ಕಿಸಾನ್‌ ಊರ್ಜಾ ಸುರಕ್ಷತಾ ಏವಂ ಉತ್ಥಾನ್‌ ಮಹಾಭಿಯಾನ್‌ (ಕುಸುಮ್‌) ಹೆಸರಿನ ಈ ಯೋಜನೆಯ ಅಡಿಯಲ್ಲಿ ರೈತರಿಗೆ ಸೌರ ಪಂಪ್‌ ಗಳನ್ನು ಒದಗಿಸಲಾಗುತ್ತದೆ ಎಂದು ವಿದ್ಯುತ್‌ ಹಾಗೂ ನವ ಮತ್ತು ನವೀಕರಿಸಬಹುದಾದ ಇಂಧನ ಖಾತೆ ಸಹಾಯಕ ಸಚಿವ ಆರ್‌.ಕೆ.ಸಿಂಗ್‌ ಹೇಳಿದ್ದಾರೆ.

Advertisement

ಸದ್ಯದ ಯೋಜನೆ ಗುರಿ: ಈ ಯೋಜನೆ ಅಡಿಯಲ್ಲಿ ಸರಕಾರವು 27.5 ಲಕ್ಷ ಸೌರ ನೀರೆತ್ತುವ ಪಂಪ್‌ ಗಳನ್ನು ಸ್ಥಾಪಿಸಲು ಯೋಜಿಸಿದೆ. ಈ ಪೈಕಿ 17.50 ಲಕ್ಷ ಸ್ವತಂತ್ರ ಸೌರ ಪಂಪ್‌ ಗಳು, 10 ಲಕ್ಷ ಗ್ರಿಡ್‌ ಸಂಪರ್ಕಿತ ಪಂಪ್‌ ಗಳನ್ನು ಸ್ಥಾಪಿಸಲಾಗುತ್ತದೆ. 0.5 ರಿಂದ 2 ಮೆ.ವ್ಯಾವರೆಗಿನ ಸಾಮರ್ಥ್ಯದ ಘಟಕ ಗಳನ್ನು ಸ್ಥಾಪಿಸಲು ರೈತರಿಗೆ ನೆರವಾಗುತ್ತದೆ. ಅಲ್ಲದೆ 50 ಸಾವಿರ ಗ್ರಿಡ್‌ ಸಂಪರ್ಕಿತ ಕೊಳವೆ ಬಾವಿಗಳು ಮತ್ತು ಏತ ನೀರಾವರಿ ಯೋಜನೆಗಳನ್ನು ಅನಾವರಣಗೊಳಿಸಲೂ ಅನುವುಮಾಡುತ್ತದೆ. ಇನ್ನೊಂದೆಡೆ ಜಲ ವಿದ್ಯುತ್‌ ನೀತಿಯನ್ನು ಜಾರಿಗೊಳಿಸಲೂ ಸರಕಾರ ನಿರ್ಧರಿಸಿದೆ ಎಂದು ಆರ್‌.ಕೆ.ಸಿಂಗ್‌ ಹೇಳಿದ್ದಾರೆ. ದೇಶದಲ್ಲಿ 16 ಸಾವಿರ ಕೋಟಿ ರೂ. ವೆಚ್ಚದ ಜಲ ವಿದ್ಯುತ್‌ ಯೋಜನೆಯನ್ನು ಜಾರಿಗೊಳಿಸಲಾಗುತ್ತದೆ ಎಂದೂ ಅವರು ಹೇಳಿದ್ದಾರೆ.

4 ವರ್ಷಗಳಲ್ಲಿ 1 ಲಕ್ಷ ಮೆ.ವ್ಯಾ. ವಿದ್ಯುತ್‌: ಕಳೆದ 48 ವರ್ಷಗಳಿಗೆ ಹೋಲಿಸಿದರೆ ಕಳೆದ ನಾಲ್ಕು ವರ್ಷಗಳಲ್ಲಿ ವಿದ್ಯುತ್‌ ಉತ್ಪಾದನೆ ಸಾಮರ್ಥ್ಯವನ್ನು  4.8 ಪಟ್ಟು ಹೆಚ್ಚಳ ಮಾಡಲಾಗಿದೆ. ಕಳೆದ 48 ತಿಂಗಳುಗಳಲ್ಲಿ ವಿದ್ಯುತ್‌ ಉತ್ಪಾದನೆ ಸಾಮರ್ಥ್ಯ ವಾರ್ಷಿಕ 24 ಸಾವಿರ ಮೆ.ವ್ಯಾ ಆಗಿದೆ. 2014ರ ವರೆಗೆ ಇದು 4800 ಮೆ.ವ್ಯಾ ಆಗಿತ್ತು ಎಂದು ಆರ್‌.ಕೆ.ಸಿಂಗ್‌ ಹೇಳಿದ್ದಾರೆ.

ಪ್ರಕೃತಿ ಜತೆ ಜೀವನ ನಮ್ಮ ಕ್ರಮ
ಪ್ರಕೃತಿಯೊಂದಿಗೆ ಜೀವಿಸುವುದೇ ಭಾರತೀಯ ಜೀವನ ಸಂಸ್ಕೃತಿಯ ಪ್ರತೀಕ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ವಿಶ್ವ ಪರಿಸರ ದಿನ ಪ್ರಯುಕ್ತ ಮಂಗಳವಾರ ಹೊಸದಿಲ್ಲಿಯ ವಿಜ್ಞಾನ ಭವನದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಅಭಿವೃದ್ಧಿ ಎನ್ನುವುದು ಪ್ರಕೃತಿಯನ್ನು ಕಡೆಗಣಿಸಿ ನಡೆಯಬಾರದು. ಅದು ಪರಿಸರ ಸಹ್ಯವಾಗಿರಬೇಕು ಎಂದು ಹೇಳಿದ್ದಾರೆ. ಪ್ಲಾಸ್ಟಿಕ್‌ ಎನ್ನುವುದು ಮಾನವೀಯತೆಗೆ ಸವಾಲಾಗಿ ಪರಿಣಮಿಸಿದೆ. ಅದು ಈಗ ನಮ್ಮ ಆಹಾರ ವ್ಯವಸ್ಥೆಯ ಮೇಲೂ ಪ್ರತಿಕೂಲ ಪರಿಣಾಮ ಬೀರಲಾರಂಭಿಸಿದೆ. ಇತರ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಹೋಲಿಕೆ ಮಾಡಿದರೆ ಭಾರತದಲ್ಲಿ ಪ್ಲಾಸ್ಟಿಕ್‌ ಬಳಕೆ ಹೆಚ್ಚು ಎಂದು ಪ್ರಧಾನಿ ಹೇಳಿದ್ದಾರೆ.

ಭ್ರಷ್ಟಾಚಾರ ನಿಗ್ರಹಕ್ಕೆ ಕ್ರಮ
ಗೃಹ ನಿರ್ಮಾಣ ಕ್ಷೇತ್ರದಲ್ಲಿ ಭ್ರಷ್ಟಾಚಾರ ಹಾಗೂ ಮಧ್ಯವರ್ತಿಗಳ ಸಮಸ್ಯೆ ನಿವಾರಿಸಲು ಸರ್ಕಾರ ಯತ್ನಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಹೇಳಿದ್ದಾರೆ. ಪ್ರಧಾನ ಮಂತ್ರಿ ಆವಾಸ ಯೋಜನೆಯ ಫ‌ಲಾನುಭವಿಗಳೊಂದಿಗೆ ವೀಡಿಯೋ ಕಾನ್ಫರೆನ್ಸ್‌ ಮೂಲಕ ಮಾತನಾಡಿದ ಮೋದಿ, ಭ್ರಷ್ಟಾಚಾರ, ಮಧ್ಯವರ್ತಿಗಳ ಸಮಸ್ಯೆಯನ್ನು ನಿವಾರಿಸಿದರೆ, ಸುಲಭವಾಗಿ ತಮ್ಮ ಮನೆಗಳನ್ನು ಕಟ್ಟಿಕೊಳ್ಳುವ ಕನಸು ನನಸಾಗಿಸಿಕೊಳ್ಳಬಹುದು ಎಂದಿದ್ದಾರೆ. ಮಹಿಳೆಯರು,  ಹಿಂದುಳಿದವರು, ಅಲ್ಪಸಂಖ್ಯಾಕ‌ ಸಮುದಾಯದವರಿಗೆ ನಿವೇಶನ ಸೌಲಭ್ಯ ಸಿಗಬೇಕಿದೆ. PMY ಯೋಜನೆ ದೇಶದ ಜನರ ಘನತೆಯೊಂದಿಗೆ ಸಂಬಂಧ ಹೊಂದಿದೆ ಎಂದು ಮೋದಿ ಹೇಳಿದ್ದಾರೆ.

Advertisement

4 ವರ್ಷಗಳಲ್ಲಿ ನಿವಾಸ ಯೋಜನೆಗಳನ್ನು ತ್ವರಿತಗತಿಯಲ್ಲಿ ಜಾರಿಗೊಳಿಸಿದೆ. 2022ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಲಭ್ಯವಾಗಿ 75 ವರ್ಷ ಪೂರೈಸಲಿದ್ದು, ಈ ವೇಳಗೆ ಪ್ರತಿಯೊಬ್ಬನೂ ಸೂರು ಹೊಂದಿರಬೇಕು ಎಂದು ಯೋಜನೆ ರೂಪಿಸಿದೆ. ಈವರೆಗೆ ನಗರದಲ್ಲಿ 47 ಲಕ್ಷ ಮನೆಗಳನ್ನು ಮಂಜೂರು ಮಾಡಲಾಗಿದ್ದು, ಹಿಂದಿನ ಸರಕಾರ 10 ವರ್ಷಗಳಲ್ಲಿ ನೀಡಿದ ಮಂಜೂರಾತಿಗಿಂತ ನಾಲ್ಕು ಪಟ್ಟು ಹೆಚ್ಚಿನದಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. 

ಏನಿದು ಕುಸುಮ್‌ ಯೋಜನೆ?
– ಗ್ರಾಮೀಣ ಭಾಗಗಳಲ್ಲಿ 2 ಮೆ.ವ್ಯಾ ಸಾಮರ್ಥ್ಯದ ಗ್ರಿಡ್‌ ಸಂಪರ್ಕಿತ ಸೌರ ವಿದ್ಯುತ್‌ ಘಟಕಗಳ ಸ್ಥಾಪನೆ
– ವಿದ್ಯುತ್‌ ಗ್ರಿಡ್‌ ಗೆ ಸಂಪರ್ಕವಿಲ್ಲದ ರೈತರ ನೀರಾವರಿ ಅಗತ್ಯವನ್ನು ಪೂರೈಸಲು ಆಫ್ – ಗ್ರಿಡ್‌ ಸೌರ ವಿದ್ಯುತ್‌ ನೀರೆತ್ತುವ ಪಂಪ್‌ ಗಳ ಸ್ಥಾಪನೆ
– ಈಗಾಗಲೇ ಗ್ರಿಡ್‌ಗೆ ಸಂಪರ್ಕಿಸಿದ ಕೃಷಿ ಪಂಪ್‌ ಗಳಿಗೆ ಸೌರ ವಿದ್ಯುತ್‌ ಒದಗಿಸುವುದು ಮತ್ತು ಹೆಚ್ಚುವರಿ ಸೌರ ವಿದ್ಯುತ್ತನ್ನು ವಿದ್ಯುತ್‌ ವಿತರಣಾ ಕಂಪೆನಿಗಳಿಗೆ ಮಾರಲು ಅವಕಾಶ ಕಲ್ಪಿಸಿ ರೈತರ ಆದಾಯ ಹೆಚ್ಚಿಸುವುದು
– ಕೊಳವೆ ಬಾವಿಗಳ ಪಂಪ್‌ ಗಳಿಗೆ ಮತ್ತು ಸರಕಾರದ ಏತ ನೀರಾವರಿ ಯೋಜನೆಗಳಿಗೆ ಸೌರ ವಿದ್ಯುತ್‌ ಸಂಪರ್ಕ

Advertisement

Udayavani is now on Telegram. Click here to join our channel and stay updated with the latest news.

Next