ಹೊಸದಿಲ್ಲಿ: ದೇಶದಲ್ಲಿ ಹವಾಮಾನ ಮುನ್ಸೂಚನೆಯನ್ನು ಇನ್ನಷ್ಟು ಕರಾರುವಾಕ್ಕಾಗಿ ತಿಳಿದುಕೊಳ್ಳಲು ಕೇಂದ್ರ ಸರಕಾರ ಇನ್ನೂ ಎರಡು ಸೂಪರ್ ಕಂಪ್ಯೂಟರ್ ಖರೀದಿಸಲು ನಿರ್ಧರಿಸಿದೆ.
ಇದು ಪ್ರಸ್ತುತ ಇರುವ ಸೂಪರ್ ಕಂಪ್ಯೂಟರ್‌ಗಳ ಸಾಮರ್ಥ್ಯಕ್ಕಿಂತ ಎಂಟು ಪಟ್ಟು ಹೆಚ್ಚು ಸಾಮರ್ಥ್ಯ ಹೊಂದಿರಲಿವೆ. ಅದಕ್ಕಾಗಿ 1, 500 ಕೋಟಿ ರೂ. ವೆಚ್ಚವಾಗಲಿದೆ ಎಂದು ಭೂವಿಜ್ಞಾನ ಖಾತೆ ಕಾರ್ಯದರ್ಶಿ ಎಂ. ರಾಜೀವನ್ ರವಿವಾರ ಮಾಹಿತಿ ನೀಡಿದ್ದಾರೆ.
ಸದ್ಯ ಸಚಿವಾಲಯ 2 ಸೂಪರ್ ಕಂಪ್ಯೂಟರ್‌ಗಳನ್ನು ಹೊಂದಿದೆ. ಈ ಪೈಕಿ ಒಂದು ನೋಯ್ಡಾ ದಲ್ಲಿರುವ ರಾಷ್ಟ್ರೀಯ ಮಧ್ಯಮ ಪ್ರಮಾಣದ ಹವಾಮಾನ ಮುನ್ಸೂಚನ ಕೇಂದ್ರ (ಎನ್‌ಸಿಎಂಆರ್‌ಡಬ್ಲೂéಎಫ್), ಮತ್ತೂಂದು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟ್ರಾಪಿಕಲ್ ಮೆಟಿರಿಯಾಲಜಿಯಲ್ಲಿದೆ. ಕೇಂದ್ರ ಭೂವಿಜ್ಞಾನ ಖಾತೆ ಸಚಿವ ಡಾ| ಹರ್ಷವರ್ಧನ್ ಅವರಿಗೆ ಖರೀದಿ ವಿಚಾರ ವಿವರಿಸಲಾಗಿದೆ ಎಂದು ರಾಜೀವನ್ ತಿಳಿಸಿದ್ದಾರೆ.
ಈ ಉದ್ದೇಶಕ್ಕಾಗಿ ತಜ್ಞರ ಸಮಿತಿ ರಚನೆ ಮಾಡಲಾಗಿದೆ. ಪ್ರತಿಯೊಂದು ಕಂಪ್ಯೂಟರ್ 40 ಪೆಟಾಫ್ಲಾಪ್‌ಗ್ಳ ಸಾಮರ್ಥ್ಯ ಹೊಂದಿದೆ. ಪ್ರತಿ ಜಿಲ್ಲೆಯ ಮತ್ತು ಬ್ಲಾಕ್‌ನ 5 ಕಿ.ಮೀ. ವ್ಯಾಪ್ತಿಯ ಹವಾಮಾನ ಮುನ್ಸೂಚನೆ ತಿಳಿದುಕೊಳ್ಳಲು ಉನ್ನತ ದರ್ಜೆಯ ಕಂಪ್ಯೂಟರ್ ಬೇಕಾಗುತ್ತದೆ. ಸದ್ಯ ಉಪಗ್ರಹ 12 ಕಿ.ಮೀ.ಗಳಷ್ಟು ರೆಸೊಲ್ಯೂಷನ್ ಹೊಂದಿರುವ ಛಾಯಾಚಿತ್ರಗಳನ್ನು ನೀಡುತ್ತಿದೆ ಎಂದು ರಾಜೀವನ್ ತಿಳಿಸಿದ್ದಾರೆ. ಈ ಸೂಪರ್ ಕಂಪ್ಯೂಟರ್‌ಗಳನ್ನು ಹವಾಮಾನಕ್ಕೆ ಸಂಬಂಧಿಸಿದ ಮಾಹಿತಿಗಳ ಸಂಗ್ರಹಣೆ ಮತ್ತು ವಿವಿಧ ರೀತಿಯ ಹವಾಮಾನ ಮಾದರಿಗಳನ್ನು ಅವಲಂಬಿಸಿ ಮುನ್ಸೂಚನೆ ನೀಡಲು ಬಳಸಲಾಗುತ್ತದೆ.