ಹೊಸದಿಲ್ಲಿ: ಔಷಧೀಯ ಸಸ್ಯಗಳನ್ನು ಬೆಳೆಯುವಂತೆ ಉತ್ತೇಜನ ನೀಡಲು ಮತ್ತು ಅದಕ್ಕೆ ಸಂಬಂಧಿಸಿದ ಸಂಶೋಧನೆಗೆ ವೇಗ ನೀಡಲು, ಪೇಟೆಂಟ್ ಅರ್ಜಿ ಪ್ರಕ್ರಿಯೆ ಮತ್ತು ಸಂಶೋಧನ ಫಲಿತಾಂಶಗಳ ವಿನಿಮಯಕ್ಕೆ ಒತ್ತು ನೀಡುವ ಮಸೂದೆಯನ್ನು ಗುರುವಾರ ಲೋಕಸಭೆಯಲ್ಲಿ ಮಂಡಿಸಲಾಗಿದೆ.
ವಿಪಕ್ಷಗಳ ಗದ್ದಲದ ನಡುವೆಯೇ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವ ಭೂಪೇಂದ್ರ ಯಾದವ್ ಅವರು ಜೀವವೈವಿಧ್ಯ ತಿದ್ದುಪಡಿ ಮಸೂದೆ, 2021 ಅನ್ನು ಮಂಡಿಸಿದ್ದಾರೆ.
ಭಾರತೀಯ ಪುರಾತನ ಔಷಧ ವ್ಯವಸ್ಥೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡುವುದು ಮತ್ತು ಔಷಧೀಯ ಸಸ್ಯಗಳನ್ನು ಬೆಳೆಯುವಂತೆ ಪ್ರೋತ್ಸಾಹಿಸುವುದು ಈ ಮಸೂದೆಯ ಉದ್ದೇಶವಾಗಿದೆ ಎಂದು ಸಚಿವರು ಹೇಳಿದ್ದಾರೆ. ಇದೇ ವೇಳೆ, ವಿದೇಶಿ ಉಪಗ್ರಹಗಳ ವಾಣಿಜ್ಯಿಕ ಉಡಾವಣೆಯಿಂದ ಭಾರತವು 2019-21ರ ಅವಧಿಯಲ್ಲಿ ಅಂದಾಜು 353 ಕೋಟಿ ರೂ.ಗಳನ್ನು ಗಳಿಸಿದೆ ಎಂದು ರಾಜ್ಯಸಭೆಗೆ ಸಚಿವ ಜಿತೇಂದ್ರ ಸಿಂಗ್ ಮಾಹಿತಿ ನೀಡಿದ್ದಾರೆ.
ಸದನದಲ್ಲಿ ಲಖೀಂಪುರ ಸದ್ದು :
ಸಂಸತ್‌ನ ಎರಡೂ ಸದನಗಳಲ್ಲಿ ಗುರುವಾರವೂ ಲಖೀಂಪುರ ಪ್ರಕರಣಕ್ಕೆ ಸಂಬಂಧಿಸಿದ ಎಸ್‌ಐಟಿ ವರದಿಯೇ ಸದ್ದು ಮಾಡಿದ್ದು, ವಿಪಕ್ಷಗಳು ಕೋಲಾಹಲ ಎಬ್ಬಿಸಿವೆ. ಕೇಂದ್ರ ಸಚಿವ ಅಜಯ್ ಮಿಶ್ರಾರನ್ನು “ಕ್ರಿಮಿನಲ್’ ಎಂದು ಕರೆದಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಅವರನ್ನು ಸಂಪುಟದಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ. ಕಲಾಪದ ಆರಂಭದಿಂದಲೇ ವಿಪಕ್ಷಗಳ ಗದ್ದಲ ತೀವ್ರಗೊಂಡ ಹಿನ್ನೆಲೆಯಲ್ಲಿ ಎರಡೂ ಸದನಗಳ ಕಲಾಪವನ್ನು ದಿನದ ಮಟ್ಟಿಗೆ ಮುಂದೂಡಲಾಯಿತು.