ಜೈಪುರ: ವಾಯುಪಡೆಯ ಯುದ್ಧವಿಮಾನಗಳು ಇನ್ನು ಗಡಿಯ ಹೆದ್ದಾರಿಗಳಲ್ಲೂ ಲ್ಯಾಂಡಿಂಗ್ ಆಗಲಿವೆ! ಹೌದು. ದೇಶದ ಪಶ್ಚಿಮ ಗಡಿಯಾದ ರಾಜಸ್ಥಾನದ ಬಾರ್ಮರ್‌ನಲ್ಲಿ ತುರ್ತು ಲ್ಯಾಂಡಿಂಗ್‌ನ “ಹೈವೇ ಏರ್‌ಸ್ಟ್ರಿಪ್’ ನಿರ್ಮಾಣಗೊಂಡಿದೆ. ರಕ್ಷಣ ಸಚಿವ ರಾಜನಾಥ್ ಸಿಂಗ್ ಮತ್ತು ಸಾರಿಗೆ ಸಚಿವ ನಿತಿನ್ ಗಡ್ಕರಿ ಈ ವಾರದಲ್ಲಿ “ಅಣಕು ತುರ್ತು ಲ್ಯಾಂಡಿಂಗ್’ ನಡೆಸುವ ಮೂಲಕ ರಾಷ್ಟ್ರಾರ್ಪಣೆಗೊಳಿಸಲಿದ್ದಾರೆ. ಬಾರ್ಮರ್‌ನ ರಾಷ್ಟ್ರೀಯ ಹೆದ್ದಾರಿಯು 3.5 ಕಿ.ಮೀ. ದೂರದ ಏರ್‌ಸ್ಟ್ರಿಪ್ ಹೊಂದಿರಲಿದೆ.
ಏನಿದು ಹೈವೇ ಏರ್‌ಸ್ಟ್ರಿಪ್?:
ಭಾರತೀಯ ವಾಯುಪಡೆಯ ಫೈಟರ್ ಜೆಟ್ಸ್ ಮತ್ತು ಇತರೆ ಏರ್‌ಕ್ರಾಫ್ಟ್ಗಳನ್ನು ತುರ್ತು ಸಂದರ್ಭಗಳಲ್ಲಿ ರಾಷ್ಟ್ರೀಯ ಹೆದ್ದಾರಿಯ ಏರ್‌ಸ್ಟ್ರಿಪ್‌ನಲ್ಲಿ ಇಳಿಸಲಾಗುತ್ತದೆ. ಇಂಥ ಸಂದರ್ಭದಲ್ಲಿ ವಾಹನ ಸಂಚಾರ ತಡೆದು, ಐಎಎಫ್ನ ಯುದ್ಧವಿಮಾನಗಳ ಲ್ಯಾಂಡಿಂಗ್‌ಗೆ ರಾಷ್ಟ್ರೀಯ ರಸ್ತೆ ಅಭಿವೃದ್ಧಿ ಪ್ರಾಧಿಕಾರ (ಎನ್‌ಎಚ್‌ಎಐ) ಅನುವು ಮಾಡಿಕೊಡಲಿದೆ. 2017ರಲ್ಲಿ ಐಎಎಫ್ ಮೊದಲ ಬಾರಿಗೆ ಲಕ್ನೋ- ಆಗ್ರಾ ಎಕ್ಸ್‌ಪ್ರಸ್‌ವೇನಲ್ಲಿ ಇಂಥ ಸಾಧ್ಯತೆ ಬಗ್ಗೆ ಅಣಕು ಪ್ರದರ್ಶನ ನಡೆಸಿಕೊಟ್ಟಿತ್ತು.
ಎಲ್ಲೆಲ್ಲಿ ಏರ್‌ಸ್ಟ್ರಿಪ್? :
- ದೇಶದ ಆಯಕಟ್ಟಿನ 12 ರಾಷ್ಟ್ರೀಯ ಹೆದ್ದಾರಿಗಳಲ್ಲಿ ಇಂಥ ಏರ್‌ಸ್ಟ್ರಿಪ್‌ಗಳ ನಿರ್ಮಾಣ.
- ಆಂಧ್ರಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಪಶ್ಚಿಮ ಬಂಗಾಲಗಳಲ್ಲಿ ತಲಾ ಒಂದೊಂದರಂತೆ ಹೈವೇ ಏರ್‌ಸ್ಟ್ರಿಪ್‌ಗಳು ನಿರ್ಮಾಣ ಹಂತದಲ್ಲಿವೆ.
- ಅಂತಾರಾಷ್ಟ್ರೀಯ ಗಡಿ ಹಂಚಿಕೊಂಡಂಥ ಜಮ್ಮು ಮತ್ತು ಕಾಶ್ಮೀರ, ಪಂಜಾಬ್, ಗುಜರಾತ್, ಪ. ಬಂಗಾಲದಂಥ ರಾಜ್ಯಗಳಲ್ಲಿ ಏರ್‌ಸ್ಟ್ರಿಪ್‌ಗಳು ತಲೆಯೆತ್ತಲಿವೆ.